#MeToo: ಮೀಟೂ ಬಗ್ಗೆ ನಿರ್ಮಾಪಕ ಕೆ.ಮಂಜು ಶಾಕಿಂಗ್ ಹೇಳಿಕೆ
ಮಲೆಯಾಳಂ ಚಿತ್ರರಂಗದಲ್ಲಿ ಬಹಿರಂಗವಾಗಿರುವ ಹೇಮಾ ಕಮಟಿ ಮಾದರಿಯಲ್ಲಿ ಕನ್ನಡ ಚಿತ್ರರಂಗಕ್ಕೂ ಒಂದು ಕಮಿಟಿ ಬೇಕು ಎನ್ನುವ ವಿಚಾರ ಭುಗಿಲೆದ್ದಿದೆ. ಈ ಬಗ್ಗೆ ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ಮಾಪಕ ಕೆ.ಮಂಜು ಅವರು ನೀಡಿರುವ ಹೇಳಿಕೆಗಳು ಸದ್ಯ ಚರ್ಚೆಗೆ ಗ್ರಾಸವಾಗಿದೆ. ಮಂಜು ಅವರು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮೀಟೂ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕೆ.ಮಂಜು ಅವರು ಹೇಳಿರುವಂತೆ, ಎಷ್ಟೋ ನಟಿಯರು ಕನ್ನಡ ಚಿತ್ರರಂಗಕ್ಕೆ ಬಂದು ಒಳ್ಳೆಯ ಹೆಸರು, ದುಡ್ಡು ಮಾಡಿಕೊಳ್ಳುತ್ತಾರೆ. ವಯಸ್ಸಾದ ಮೇಲೆ ಮೀಟೂ (metoo) ಎನ್ನುತ್ತಾರೆ. ಅವರಿಗೆ ಆ ರೀತಿ ಆಗಿದ್ದರೆ ಮೊದಲೇ ಯಾಕೆ ಹೇಳಲಿಲ್ಲ? ಎಂದು ಪ್ರಶ್ನಿಸಿದ್ದಾರೆ. ತಮ್ಮ ಮೇಲೆ ಮೀಟೂ ಆದ ಕೂಡಲೇ ನಟಿಯರು ದೂರು ಕೊಡಬೇಕು. ಅದಕ್ಕೆಂದೇ ಕಾನೂನು ಕೂಡ ಇರುತ್ತದೆ. ಸುಮ್ಮನೆ ನೆಪಗಳನ್ನು ಹೇಳಿ, ತಡವಾಗಿ ಮೀಟೂ ಎನ್ನುತ್ತಾರಲ್ಲ, ಅವರ ಮೇಲೆ ಮೊದಲು ಕೇಸ್ ದಾಖಲಿಸಬೇಕು ಎಂದು ಹೇಳಿದ್ದಾರೆ.

ಮೀಟೂ ಅನ್ನೋದು 2018ರಲ್ಲೇ ಬಂದಿತ್ತು. ಆದರೆ, ಆಗ ಅದಕ್ಕಾಗಿ ಸ್ಯಾಂಡಲ್‌ವುಡ್‌ನಲ್ಲಿ ಕಮಿಟಿ ಮಾಡಲಿಲ್ಲ. ಅಂದು ಮೀಟೂ ಎಂಬುದಕ್ಕೆ ಸೂಕ್ತ ಸಾಕ್ಷಿಗಳು ಇಲ್ಲದೆ ಕೇಸ್ ಮುಚ್ಚಿ ಹೋಯಿತು. ನನ್ನ ಪ್ರಕಾರ ಮೀಟೂ ಎಂದರೆ ಯಾರೋ ಒಬ್ಬ ವ್ಯಕ್ತಿ ಒಂದು ಹೆಣ್ಣನ್ನು ತನ್ನ ಕೃತ್ಯಕ್ಕೆ ಬಲವಂತವಾಗಿ ಬಳಸಿಕೊಳ್ಳುವುದು. ಆದರೆ ಇಬ್ಬರೂ ಒಪ್ಪಿಕೊಂಡು ಸಂಪರ್ಕ ಇಟ್ಟುಕೊಂಡರೆ ಅದು ಮೀಟೂ ಅಲ್ಲ ಎಂದು ವ್ಯಾಖ್ಯಾನಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಜಯಂತಿ, ಭಾರತಿ, ಮಾಧವಿ, ಆರತಿ, ಸರಿತಾ ಅವರಂತಹ ಮಹಾನ್ ನಟಿಯರು ನೂರಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆಗೆಲ್ಲ ಮೀಟೂ ಇರಲಿಲ್ಲ. ಇವತ್ತು ಎಲ್ಲ ರೀತಿಯ ಆಯ್ಕೆಗಳು ನಟಿಯರ ಮುಂದೆ ಇವೆ. ಆದರೆ, ಆಗ ಅಷ್ಟೆಲ್ಲ ಸ್ವಾತಂತ್ರ್ಯ ಇರಲಿಲ್ಲ ಎಂದು ನೆನೆದಿದ್ದಾರೆ.
ಒಂದು ವರ್ಷಕ್ಕೆ ನೂರಾರು ಸಿನಿಮಾಗಳನ್ನು ಮಾಡುತ್ತಾರೆ. ಅವೆಲ್ಲವೂ ನಮ್ಮ ಕಂಟ್ರೋಲ್‌ನಲ್ಲಿ ಇರಲ್ಲ. ಒಂದೈದು ಜನ ಸೇರಿಕೊಂಡು, ಒಂದು ಕ್ಯಾಮೆರಾ ಹಿಡ್ಕೊಂಡು ಸಿನಿಮಾ ಮಾಡಲು ಮುಂದಾಗ್ತಾರೆ. ಅವರೇ ಆಡಿಷನ್ ಮಾಡ್ಕೋತಾರೆ. ಆಗ ಅಲ್ಲಿ ಏನೇನೋ ನಡೆದರೆ ಅವರನ್ನೂ ಕನ್ನಡ ಚಿತ್ರರಂಗದವರು ಎಂದು ಪರಿಗಣಿಸಲು ಆಗುತ್ತಾ? ಒಂದು ವೇಳೆ ಅಂತಹವರಿಂದ ನಟಿಯರಿಗೆ ಲೈಂಗಿಕ ದೌರ್ಜನ್ಯ ಆದರೆ ಇಡೀ ಇಂಡಸ್ಟ್ರಿ ಮೇಲೆ ಮೀಟೂ ಗೂಬೆ ಕೂರಿಸಲು ಆಗುತ್ತಾ ಎಂದು ಪ್ರಶ್ನಿಸಿದ್ದಾರೆ.

ಮಲೆಯಾಳಂ ಸಿನಿಮಾರಂಗದಲ್ಲಿ ಸಂಚಲನ ಮೂಡಿಸಿರುವ ಹೇಮಾ ಸಮಿತಿ ವರದಿಯು ಇದೀಗ ಭಾರತೀಯ ಚಿತ್ರರಂಗವನ್ನೇ ಬೆಚ್ಚಿಬೀಳಿಸಿದೆ. ಇದರ ಗಾಳಿ ಸ್ಯಾಂಡಲ್‌ವುಡ್ ಕಡೆಗೂ ಬೀಸಿದ್ದು, ಇಲ್ಲಿಯೂ ಹೇಮಾ ಮಾದರಿಯ ಕಮಿಟಿಯೊಂದನ್ನು ರಚಿಸಬೇಕು ಎನ್ನುವ ಕೂಗು ಎದ್ದಿದೆ. ಈ ಬಗ್ಗೆ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (FIRE) ಸಂಘಟನೆಯು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಕೂಡ ಮಾಡಿದೆ.
ನಟಿ ರಮ್ಯಾ, ನಿರ್ದೇಶಕಿ ಕವಿತಾ ಲಂಕೇಶ್, ನಟ ಸುದೀಪ್, ನಟ ಚೇತನ್, ನಟ ಕಿಶೋರ್, ಮೇಘನಾ, ಪೂಜಾ ಗಾಂಧಿ, ನಿರ್ದೇಶಕ ಸುನಿ, ಲೇಖಕಿ ಉಷಾ, ಶ್ರುತಿ ಹರಿಹರನ್, ಐಂದ್ರಿತಾ ರೈ, ಶಾನ್ವಿ ಶ್ರೀವಾಸ್ತವ, ಆಶಿಕಾ ರಂಗನಾಥ್ ಸೇರಿದಂತೆ 153 ಜನ ಮನವಿ ಪತ್ರದಲ್ಲಿ ಸಹಿ ಹಾಕಿದ್ದಾರೆ.
ಚಿತ್ರರಂಗದಲ್ಲಿ ನಟಿಯರು ಎದುರಿಸುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ಅಧ್ಯಯನಕ್ಕೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸುವಂತೆ ಫೈರ್ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿತ್ತು. ಬಳಿಕ ಚಿತ್ರರಂಗದ ಎಲ್ಲರನ್ನೂ ಒಟ್ಟುಗೂಡಿಸಿ ಸಭೆ ನಡೆಸುವಂತೆ ರಾಜ್ಯ ಮಹಿಳಾ ಆಯೋಗ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸೂಚಿಸಿತ್ತು.
ಈಗಾಗಲೇ ಈ ವಿಚಾರ ಸಂಬಂಧ ವಾಣಿಜ್ಯ ಮಂಡಳಿಯಲ್ಲಿ ಆಂತರಿಕ ಸಭೆ ನಡೆದಿದೆ. ಹಬ್ಬ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳಲ್ಲಿ ನಟ-ನಟಿಯರು ಸದ್ಯ ಬ್ಯುಸಿಯಾಗಿರುವುದರಿಂದ ಸೆ.16ಕ್ಕೆ ವಾಣಿಜ್ಯ ಮಂಡಳಿ ಆವರಣದಲ್ಲಿ ಸಭೆ ನಡೆಸಲಿದ್ದೇವೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹೇಳಿದೆ.
ಇನ್ನು ಈ ಸಭೆಗೆ ಸಿನಿಮಾರಂಗದ ಪ್ರಮುಖರೆಲ್ಲ ಕರೆಯಲಾಗುವುದು. ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು. ನಗರದ ಪ್ರಮುಖ ಪಬ್‌ಗಳಲ್ಲಿ ನಟ-ನಟಿಯರು ಭಾಗಿಯಾಗಿ ಪಾರ್ಟಿ ನಡೆಸುವುದು ಟ್ರೆಂಡ್ ಆಗಿದ್ದು, ಸರ್ಕಾರ ಇದಕ್ಕೆ ಮೊದಲು ಕಡಿವಾಣ ಹಾಕಬೇಕು. ಈ ಬಗ್ಗೆಯೂ ಅಂದಿನ ಸಭೆಯಲ್ಲಿ ಚರ್ಚಿಸುತ್ತೇವೆ. ನಟಿಯರ ಹಿತ ಕಾಪಾಡಲು ವಾಣಿಜ್ಯ ಮಂಡಳಿ ಸದಾ ಬದ್ಧ ಎಂದು ಹೇಳಿದೆ.












Click it and Unblock the Notifications