Aadujeevitham OTT: ಪೃಥ್ವಿರಾಜ್ ಸುಕುಮಾರನ್ ನಟನೆಯ ಮೈನವಿರೇಳಿಸುವ 'ಆಡುಜೀವಿತಂ' ಒಟಿಟಿಗೆ
ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾ ಮೂಲಕ ಕನ್ನಡಿಗರಿಗೆ ಹೆಚ್ಚು ಹತ್ತಿರವಾದ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಅವರ ಮೈನವಿರೇಳಿಸುವ , ಅತ್ಯಂತ ಮೆಚ್ಚುಗೆ ಪಡೆದ ಈ ವರ್ಷದ ಸಿನಿಮಾ 'ಆಡುಜೀವಿತಂ'. ದಿ ಗೋಟ್ ಲೈಫ್ ಎಂದು ಹಲವು ಭಾಷೆಗಳಲ್ಲಿ ಬಿಡುಗೆಯಾದ ಈ ಸಿನಿಮಾ ಮಲೆಯಾಳಂ ಚಿತ್ರರಂಗದಲ್ಲಿ ಈ ವರ್ಷದ ಅತ್ಯುತ್ತಮ ಗಳಿಕೆಯ ಸಿನಿಮವಾಗಿದೆ.
ಬ್ಲೆಸ್ಸಿ ನಿರ್ದೇಶಿಸಿದ ಆಡುಜೀವಿತಂ ಚಿತ್ರವು ತನ್ನ ಥಿಯೇಟ್ರಿಕಲ್ ರನ್‌ನಲ್ಲಿ ಅಪಾರ ಯಶಸ್ಸನ್ನು ಗಳಿಸಿದೆ. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಶಬ್ಬಾಶ್‌ಗಿರಿ ಪಡೆದಿದೆ. ಪೃಥ್ವಿರಾಜ್ ಸುಕುಮಾರನ್ ಅವರ ಅತಿ ಹೆಚ್ಚು ಗಳಿಕೆಯ ಚಲನಚಿತ್ರವಾಗಿ ಹೊರಹೊಮ್ಮಿದೆ. ಈ ಸಿನಿಮಾ ಈಗ ಒಟಿಟಿಗೆ ಕಾಲಿಟ್ಟಿದೆ.

ಒಟಿಟಿಗೆ ಬಂದ 'ದಿ ಗೋಟ್ ಲೈಫ್'
'ದಿ ಗೋಟ್ ಲೈಫ್' ಎಂದೂ ಕರೆಯಲ್ಪಡುವ ಈ ಚಲನಚಿತ್ರವು ಮಾರ್ಚ್ ಅಂತ್ಯದಲ್ಲಿ ಬಿಡುಗಡೆಯಾಗಿ ನಂತರ 60 ದಿನಗಳ ಕಾಲ ಕೇರಳದಲ್ಲಿ ಹಲವು ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಂಡಿದೆ. ಚಿತ್ರದ ಬಗ್ಗೆ ಕೇಳಿ ಬಂದ ಮೆಚ್ಚುಗೆಯ ಮಾತುಗಳು ಜನರನ್ನು ಚಿತ್ರಮಂದಿರಗಳ ಕಡೆಗೆ ಸೆಳೆದಿದೆ. ಈಗ ಈ ಚಿತ್ರ ಒಟಿಟಿ ವೇದಿಕೆಗೆ ಲಗ್ಗೆ ಇಡುತ್ತಿದೆ.
ಆಡುಜೀವಿತಂ ಒಟಿಟಿಗೆ ಬರುತ್ತಿದೆ ಎಂದು ತಿಳಿಸ ತಕ್ಷಣ ಜನ ಅದರ ದಾರಿಯನ್ನು ಕಾಯುತ್ತಿದ್ದಾರೆ. ಈ ಚಿತ್ರವು ಡಿಸ್ನಿ + ಹಾಟ್‌ಸ್ಟಾರ್ ಒಟಿಟಿ ವೇದಿಕೆಯಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ. ಮೇ 26 ರಂದು ಸ್ಟ್ರೀಮಿಂಗ್ ಪ್ರಾರಂಭವಾಗುವ ನಿರೀಕ್ಷೆಯಿದೆ. ಡಿಜಿಟಲ್ ಸ್ಟ್ರೀಮಿಂಗ್‌ಗೆ ಚಿತ್ರ ಸಿದ್ಧವಾಗುತ್ತಿದ್ದಂತೆ, ಅಭಿಮಾನಿಗಳು ಚಿತ್ರದ ವಿಸ್ತೃತ ಆವೃತ್ತಿಯನ್ನು ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ.
ಕತ್ತರಿ ಪ್ರಯೋಗಕ್ಕೆ ಒಳಗಾದ ಅನೇಕ ದೃಶ್ಯಗಳು ಒಟಿಟಿಯಲ್ಲಿ!
ಆಡುಜೀವಿತಂ ಸಿನಿಮಾದ ಒಟಿಟಿ ಬಿಡುಗಡೆಯ ಪ್ರಮುಖ ಅಂಶವೆಂದರೆ ಚಿತ್ರದಲ್ಲಿ ಕತ್ತರಿ ಪ್ರಯೋಗ ಮಾಡಿದ್ದ ಅನೇಕ ದೃಶ್ಯಗಳನ್ನು ಸೇರಿಸಲಾಗುತ್ತದೆ ಎಂಬುದು. ನಿರ್ದೇಶಕ ಬ್ಲೆಸ್ಸಿ ಈ ಹಿಂದೆ 'ಆಡುಜೀವಿತಂ' ನ ಮೂಲ ರನ್‌ಟೈಮ್ 3 ಗಂಟೆ 30 ನಿಮಿಷಗಳು ಎಂದು ಉಲ್ಲೇಖಿಸಿದ್ದರು. ಬಳಿಕ ಈ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ ಸುಮಾರು 30 ನಿಮಿಷಗಳಷ್ಟು ಕತ್ತರಿ ಪ್ರಯೋಗಕ್ಕೆ ಒಳಗಾಗಿತ್ತು.

ಈಗ ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾದರೇ ಕಟ್ ಮಾಡಿರುವ ಸುಮಾರು 30 ನಿಮಿಷಗಳ ಸಿನಿಮಾದ ದೃಶ್ಯಗಳು ಪರದೆಯ ಮೇಲೆ ಕಾಣಿಸಲಿದೆ. ಈ ಹಿಂದೆ ಅಭಿಮಾನಿಗಳು ನಿರೀಕ್ಷಿಸಿದ ಹಲವಾರು ದೃಶ್ಯಗಳನ್ನು ಬಿಟ್ಟುಬಿಡಲಾಗಿತ್ತು. ಆ ಎಲ್ಲಾ ದೃಶ್ಯಗಳನ್ನು ಈಗ ಒಟಿಟಿಯಲ್ಲಿ ನೋಡಬಹುದು.
ಪೃಥ್ವಿರಾಜ್ ಸುಕುಮಾರನ್ ನಟನೆಯ ಆಡುಜೀವಿತಂ
'ಆಡುಜೀವಿತಂ' ಪೃಥ್ವಿರಾಜ್ ಸುಕುಮಾರನ್ ನಟನೆಯ ಆಡುಜೀವಿತಂ ಸಿನಿಮಾ ನಜೀಬ್ ಎಂಬುವವರ ನೈಜ ಜೀವನದ ಕಥೆಯನ್ನು ನಮ್ಮ ಮುಂದಿಡುತ್ತದೆ. ವಿದೇಶಿ ನೆಲದಲ್ಲಿ ಅವರು ಅನುಭವಿಸುವ ಭಯಾನಕ ನರಕ, ಪ್ರಯಾಣ ಮತ್ತು ಬದುಕುಳಿಯಲು ನಡೆಸುವ ಹೋರಾಟವನ್ನು ಚಿತ್ರ ಚಿತ್ರಿಸುತ್ತದೆ. ಈ ಚಿತ್ರದ ಅಭಿನಯ ಮತ್ತು ನಿರ್ದೇಶನವನ್ನು ವಿಮರ್ಶಕರು ಮತ್ತು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.
'ಆಡುಜೀವಿತಂ' ವಿಶ್ವಾದ್ಯಂತ 160 ಕೋಟಿಗಳನ್ನು ಗಳಿಸಿದೆ. ಪೃಥ್ವಿರಾಜ್ ಸುಕುಮಾರನ್ ಅವರ ಇಲ್ಲಿಯವರೆಗಿನ ಅತ್ಯಧಿಕ ಗಳಿಕೆಯ ಚಲನಚಿತ್ರವಾಗಿ ದಾಖಲೆ ಬರೆದಿದೆ. 'ಮಂಜುಮ್ಮೆಲ್ ಬಾಯ್ಸ್' ಮತ್ತು '2018' ನಂತರ ಸಾರ್ವಕಾಲಿಕ 3 ನೇ ಅತಿ ಹೆಚ್ಚು ಗಳಿಕೆಯ ಮಲಯಾಳಂ ಚಲನಚಿತ್ರವಾಗಿ ತನ್ನ ಸ್ಥಾನವನ್ನು ಗಟ್ಟಿಮಾಡಿಕೊಂಡಿದೆ.'











Click it and Unblock the Notifications