ಕೆಜಿಎಫ್‌ಗೂ ಮೊದಲೇ ಅಪ್ಪು ಸರ್‌ ಸಿನಿಮಾ ಬರಬೇಕಿತ್ತು: ಸೆಟ್ಟೇರದೆ ಉಳಿದ ಅಸಲಿ ಕಥೆ ಬಿಚ್ಚಿಟ್ಟ ಪ್ರಶಾಂತ್ ನೀಲ್

ರಾಕಿಂಗ್‌ ಯಶ್ ಅಭಿನಯದ 'ಕೆಜಿಎಫ್' (KGF) ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಹೆಗ್ಗಳಿಕೆ ನಿರ್ದೇಶಕ ಪ್ರಶಾಂತ್ ನೀಲ್ ಅವರದ್ದು. ಆದರೆ, ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಪ್ರಶಾಂತ್ ನೀಲ್ ಮಾಡಬೇಕಿದ್ದ ಮೊದಲ ಸಿನಿಮಾ ಕೆಜಿಎಫ್ ಆಗಿರಲಿಲ್ಲವಂತೆ. ಅದಕ್ಕೂ ಮುನ್ನ ಅವರು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (ಅಪ್ಪು) ಅವರಿಗಾಗಿ ವಿಭಿನ್ನ ಶೈಲಿಯ ಚಿತ್ರವೊಂದನ್ನು ಸಿದ್ಧಪಡಿಸಿದ್ದಾಗಿ ಪ್ರಶಾಂತ್‌ ನೀಲ್‌ ಬಹಿರಂಗಪಡಿಸಿದ್ದಾರೆ.

ಸಿನಿಮಾದ ಹೆಸರೇನು?

ಪ್ರಶಾಂತ್‌ ನೀಲ್‌ ಹಾಗೂ ಹೊಂಬಾಳೆ ಕಾಂಬಿನೇಷನ್‌ನಲ್ಲಿ ಮೂಡಿಬಂದ ಕೆಜಿಎಫ್‌ ಸರಣಿ ಹಾಗೂ ಸಲಾರ್‌ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ್ದು ಗೊತ್ತೇ ಇದೆ. ಆದರೆ ಕೆಜಿಎಫ್‌ಗೂ ಮೊದಲೇ ನೀಲ್‌ ಪುನೀತ್‌ ಅವರೊಂದಿಗೆ ಸಿನಿಮಾ ಪ್ಲ್ಯಾನ್‌ ಮಾಡಿಕೊಂಡಿದ್ದರು ಎಂಬ ವಿಚಾರವನ್ನು ರಿವೀಲ್‌ ಮಾಡಿದ್ದಾರೆ. ಆ ಚಿತ್ರದ ಹೆಸರು 'ಆಹ್ವಾನ' (Ahvana).

Prashanth Neel

ಇತ್ತೀಚಿನ ಸಂದರ್ಶನವೊಂದರಲ್ಲಿ ಜೂನಿಯರ್ ಎನ್‌ಟಿಆರ್ ಅಭಿನಯದ ತಮ್ಮ ಮುಂಬರುವ ಚಿತ್ರ 'ಡ್ರ್ಯಾಗನ್' (Dragon) ಕುರಿತು ಮಾತನಾಡುವಾಗ ಪ್ರಶಾಂತ್ ನೀಲ್ ಈ ಆಸಕ್ತಿದಾಯಕ ವಿಚಾರವನ್ನು ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ. ಪ್ರಶಾಂತ್ ನೀಲ್ ಎಂದರೆ ತಕ್ಷಣ ನೆನಪಿಗೆ ಬರುವುದು ಡಾರ್ಕ್ ಥೀಮ್, ರಗಡ್ ಆಕ್ಷನ್ ಮತ್ತು ಮಾಸ್ ಎಲಿಮೆಂಟ್‌ಗಳು. ಆದರೆ ಅಪ್ಪುಗಾಗಿ ಅವರು ಸಿದ್ಧಪಡಿಸಿದ್ದ 'ಆಹ್ವಾನ' ಚಿತ್ರದ ಕಥೆ ಇದಕ್ಕೆ ತದ್ವಿರುದ್ಧವಾಗಿತ್ತು. ಇದು ಪಕ್ಕಾ ಕೌಟುಂಬಿಕ ಭಾವನೆಗಳ ಸುತ್ತ ಸುತ್ತುವ ಒಂದು ಸೂಕ್ಷ್ಮ ಹಾಗೂ ಪಾತ್ರ-ಆಧಾರಿತ ಕಥೆಯಾಗಿತ್ತು ಎಂದಿದ್ದಾರೆ.

ನಟ ಜೂನಿಯರ್‌ ಎನ್‌ಟಿಆರ್‌ ಪತ್ನಿ, ಕುಟುಂಬಕ್ಕೆ ನನ್ನ ಮೇಲೆ ಕೋಪ ಇದೆ: ನಿರ್ದೇಶಕ ಪ್ರಶಾಂತ್‌ ನೀಲ್‌
ನಟ ಜೂನಿಯರ್‌ ಎನ್‌ಟಿಆರ್‌ ಪತ್ನಿ, ಕುಟುಂಬಕ್ಕೆ ನನ್ನ ಮೇಲೆ ಕೋಪ ಇದೆ: ನಿರ್ದೇಶಕ ಪ್ರಶಾಂತ್‌ ನೀಲ್‌

"ಈ ಪಾತ್ರವನ್ನು ಕೇವಲ ಪುನೀತ್ ರಾಜ್‌ಕುಮಾರ್ ಅವರನ್ನೇ ಮನಸ್ಸಿನಲ್ಲಿಟ್ಟುಕೊಂಡು ಬರೆಯಲಾಗಿತ್ತು. ಅವರ ಸ್ಕ್ರೀನ್ ಪ್ರೆಸೆನ್ಸ್ ಮತ್ತು ವ್ಯಕ್ತಿತ್ವಕ್ಕೆ ಸೂಕ್ತವಾಗಿ ಹೊಂದುತ್ತಿತ್ತು. ಆ ಪಾತ್ರಕ್ಕೆ ಪುನೀತ್ ಬಿಟ್ಟರೆ ಬೇರೆ ಯಾವುದೇ ನಟನೂ ನ್ಯಾಯ ಒದಗಿಸಲು ಸಾಧ್ಯವಿರಲಿಲ್ಲ" ಎಂದು ಪ್ರಶಾಂತ್ ನೀಲ್ ನೆನೆದಿದ್ದಾರೆ.

ಯಾಕೆ ಸಿನಿಮಾ ಸೆಟ್ಟೇರಲಿಲ್ಲ?

ಬಲವಾದ ಸೃಜನಶೀಲ ಆಲೋಚನೆ ಮತ್ತು ನಿರ್ಮಾಣ ಸಂಸ್ಥೆಯ ಬೆಂಬಲವಿದ್ದರೂ 'ಆಹ್ವಾನ' ಚಿತ್ರದ ಚಿತ್ರೀಕರಣ ಆರಂಭವಾಗಲೇ ಇಲ್ಲ. ಇದಕ್ಕೆ ಮುಖ್ಯ ಕಾರಣ ಡೇಟ್‌ ಸಮಸ್ಯೆ. ಆ ಸಮಯದಲ್ಲಿ ಪುನೀತ್ ರಾಜ್‌ಕುಮಾರ್ ಅವರು ಹಲವು ಚಿತ್ರಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದರು. ಸತತ ಶೂಟಿಂಗ್‌ಗಳ ಕಾರಣದಿಂದಾಗಿ ಇಬ್ಬರ ನಡುವೆ ಸಮಯ ಹೊಂದಾಣಿಕೆ ಮಾಡಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ, 'ಆಹ್ವಾನ' ಕೇವಲ ಕಾಗದದ ಮೇಲಷ್ಟೇ ಉಳಿದು, ಪ್ರೊಡಕ್ಷನ್ ಹಂತಕ್ಕೆ ತಲುಪಲಿಲ್ಲ.

Prashanth Neel

'ಆಹ್ವಾನ' ಕೈತಪ್ಪಿದ್ದರಿಂದ ಹುಟ್ಟಿಕೊಂಡಿದ್ದೇ 'ಕೆಜಿಎಫ್'

'ಆಹ್ವಾನ' ಚಿತ್ರ ತಡವಾದ ನಂತರ ಪ್ರಶಾಂತ್ ನೀಲ್ ಅವರು ಮತ್ತೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯನ್ನು ಸಂಪರ್ಕಿಸಿದರು. ಈ ಬಾರಿ ಅವರು ಕೌಟುಂಬಿಕ ಕಥೆಯ ಬದಲು, ನಂತರದ ದಿನಗಳಲ್ಲಿ 'ಕೆಜಿಎಫ್' ಚಿತ್ರದ ಕಥೆಯನ್ನು ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ವಿವರಿಸಿದರು. ಆ ಒಂದು ಸಣ್ಣ ಲೈನ್ ಹೊಂಬಾಳೆ ತಂಡಕ್ಕೆ ಎಷ್ಟು ಇಷ್ಟವಾಯಿತೆಂದರೆ, ಅಲ್ಲಿಂದ ಭಾರತೀಯ ಚಿತ್ರರಂಗದ ಇತಿಹಾಸವನ್ನೇ ಬದಲಾಯಿಸಿದ 'ಕೆಜಿಎಫ್' ಪಯಣ ಆರಂಭವಾಯಿತು.

"ಅಪ್ಪು ಅವರೊಂದಿಗೇ ಹೋದ ಆಹ್ವಾನ..."

'ಆಹ್ವಾನ' ಚಿತ್ರದ ಬಗ್ಗೆ ಇಂದಿಗೂ ಪ್ರಶಾಂತ್ ನೀಲ್ ಅವರಿಗೆ ಅಪಾರವಾದ ಭಾವನಾತ್ಮಕ ಒಡನಾಟವಿದೆ. 2021ರಲ್ಲಿ ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ನಿಧನದ ನಂತರ, ಈ ಚಿತ್ರದ ಕನಸು ಕೂಡ ಅವರೊಂದಿಗೇ ಮರೆಯಾಯಿತು ಎಂದು ನೀಲ್ ಭಾವುಕರಾಗಿದ್ದಾರೆ. ಅಪ್ಪು ಅವರಿಗೆ ಪರ್ಯಾಯವಾಗಿ ಮತ್ತೊಬ್ಬ ನಟನನ್ನು ಆ ಪಾತ್ರದಲ್ಲಿ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲದ ಕಾರಣ, ಈ ಚಿತ್ರವನ್ನು ಮತ್ತೊಬ್ಬ ನಟನೊಂದಿಗೆ ಸಿನಿಮಾ ಮಾಡುವ ಪ್ರಶ್ನೆಯೇ ಇಲ್ಲ. ಆ ಕಥೆ ಅವರೊಂದಿಗೇ ಹೊರಟು ಹೋಯಿತು ಎಂದಿದ್ದಾರೆ. ಅಪ್ಪು ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ನ ಕ್ಲಾಸಿಕ್ ಫ್ಯಾಮಿಲಿ ಸಿನಿಮಾವನ್ನು ಪರದೆ ಮೇಲೆ ನೋಡುವ ಅವಕಾಶವನ್ನು ಕನ್ನಡಿಗರು ಮಿಸ್ ಮಾಡಿಕೊಂಡಿರುವುದು ಮಾತ್ರ ನಿಜಕ್ಕೂ ಬೇಸರದ ಸಂಗತಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+