Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಡಿಕೆಶಿ ಹೇಳಿದ ಜಾಗವೇ ಫೈನಲ್ ಆಗುವುದು ಫಿಕ್ಸ್
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕಳೆದ ಎರಡು ವರ್ಷಗಳಿಂದಲೂ ಚರ್ಚೆ ನಡೆಯುತ್ತಿದೆ. ಬೆಂಗಳೂರಿನ ಪ್ರಸ್ತಾವಿತ ಎರಡನೇ ವಿಮಾನ ನಿಲ್ದಾಣದ ವಿಷಯಕ್ಕೆ ಸಂಬಂಧಿಸಿದಂತೆ ವಿವಿಧ ಪ್ರಕ್ರಿಯೆ ಚುರುಕು ಪಡೆದುಕೊಳ್ಳುತ್ತಿದೆ. ಕರ್ನಾಟಕ ಸರ್ಕಾರವು ಕನಕಪುರ ರಸ್ತೆಯ ದಕ್ಷಿಣ ಕಾರಿಡಾರ್‌ನಲ್ಲಿರುವ ಸ್ಥಳಗಳಲ್ಲಿ ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಹೆಚ್ಚಿನ ಒಲವು ಇದೆ. ಇದಕ್ಕೆ ಮುಖ್ಯ ಕಾರಣ ಈಚೆಗಷ್ಟೇ ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ಗ್ರಾಮಾಂತರ ಪ್ರದೇಶ ಎಂದು ಬದಲಾಯಿಸಲಾಯಿತು. ಅಲ್ಲದೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಈ ಭಾಗದಲ್ಲಿಯೇ ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಮುಕ್ತವಾಗಿ ಮಾತನಾಡಿದ್ದಾರೆ. ಅಲ್ಲದೆ ಈ ಭಾಗದ ಸಮೀಪದ ಪ್ರದೇಶಕ್ಕೆ ಮೆಟ್ರೋ ಸಂಪರ್ಕ ಹಾಗೂ ಬೆಂಗಳೂರಿನಿಂದ ಕೆಲವೇ ಕಿ.ಮೀ ದೂರದಲ್ಲಿ ಇರುವ ಕಾರಣಕ್ಕೂ ಈ ಪ್ರದೇಶ ಮಹತ್ವ ಪಡೆದುಕೊಂಡಿದೆ.
ಮೂಲಸೌಕರ್ಯ ಅಭಿವೃದ್ಧಿ ಇಲಾಖೆ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳು ಕನಕಪುರ ರಸ್ತೆಯಲ್ಲಿರುವ ಎರಡು ಪ್ರದೇಶಗಳನ್ನು ಈಗಾಗಲೇ ಶಾರ್ಟ್ ಲಿಸ್ಟ್ ಮಾಡಿದ್ದಾರೆ. ಈಗಾಗಲೇ ಗುರುತಿಸಲಾಗಿರುವ ಎರಡು ಸ್ಥಳಗಳನ್ನು ಏಕೀಕೃತ ಸ್ಥಳವಾಗಿ ವಿಲೀನಗೊಳಿಸುವ ಬಗ್ಗೆ ಚರ್ಚೆ ನಡೆದಿದೆ. ಈ ನಿರ್ಧಾರವು ಬೆಂಗಳೂರಿನಲ್ಲಿ ಈಗಾಗಲೇ ಇರುವ ದೇವನಹಳ್ಳಿಯಲ್ಲಿರುವ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ
ವಿಮಾನ ನಿಲ್ದಾಣ ಹಾಗೂ ನೂತನ ಮತ್ತು ಎರಡನೇ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ವಾಯುಪ್ರದೇಶದ ನಿರ್ಬಂಧಗಳನ್ನು ಕಡಿಮೆ ಮಾಡುತ್ತದೆ ಮತ್ತು ಸಂಪರ್ಕವನ್ನು ಸುಧಾರಿಸುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮೂರು ಸ್ಥಳಗಳನ್ನು ಪ್ರಸ್ತುತ ಪರಿಗಣನೆಯಲ್ಲಿರಿಸಲಾಗಿದೆ. ಕನಕಪುರ ರಸ್ತೆಯಲ್ಲಿರುವ ಚುಡಹಳ್ಳಿ ಮತ್ತು ಸೋಮನಹಳ್ಳಿ ಕ್ರಮವಾಗಿ 4,800 ಎಕರೆ ಮತ್ತು 5,000 ಎಕರೆಯಷ್ಟು ಭೂಮಿ ಇದೆ. ಆದರೆ ಪಶ್ಚಿಮದಲ್ಲಿ ತುಮಕೂರು ರಸ್ತೆಯ ಸಮೀಪದ ಕುಣಿಗಲ್ ಮತ್ತು ನೆಲಮಂಗಲ ನಡುವಿನ ಹಳ್ಳಿಗಳಲ್ಲಿ ಸುಮಾರು 5,200 ಎಕರೆ ಭೂಮಿ ಇದೆ. ಇನ್ನು ಈಗಾಗಲೇ ಕರ್ನಾಟಕ ಸರ್ಕಾರವು ಸಿಂಗಾಪುರ ಮೂಲದ ಸಲಹಾ ಸಂಸ್ಥೆಯಾದ ಮೈನ್‌ಹಾರ್ಡ್ ಇಪಿಸಿಎಂ ಅನ್ನು ಮೂರು ಸ್ಥಳಗಳ ಕಾರ್ಯಸಾಧ್ಯತೆಯನ್ನು ನಿರ್ಣಯಿಸಲು 4.96 ಕೋಟಿ ರೂ. ಮೊತ್ತದ ಒಪ್ಪಂದವನ್ನು ಮಾಡಿಕೊಂಡಿದೆ.
ಈ ಅಧ್ಯಯನವು AAI ಯ ಹಿಂದಿನ ಸಂಶೋಧನೆಗಳನ್ನು ಮೌಲ್ಯಮಾಪನ ಮಾಡುತ್ತದೆ, ತಾಂತ್ರಿಕ ಕಾರ್ಯಸಾಧ್ಯತೆಯನ್ನು ಪರಿಶೀಲಿಸುತ್ತದೆ, ಸ್ಥಳ ಆಯ್ಕೆ ಚೌಕಟ್ಟನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ಸಂಚಾರ ಬೇಡಿಕೆ ಮುನ್ಸೂಚನೆಯನ್ನು ಕೈಗೊಳ್ಳುತ್ತದೆ. ಅಂತಿಮ ವರದಿಯನ್ನು ಸುಮಾರು ಮೂರರಿಂದ ಐದು ತಿಂಗಳ ಅವಧಿಯಲ್ಲಿ ನಿರೀಕ್ಷಿಸಲಾಗಿದೆ. ಈ ವರದಿ ಬಂದ ಕೂಡಲೇ ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಕ್ರಿಯೆಯು ಚುರುಕು ಪಡೆದುಕೊಳ್ಳಲಿದೆ.
ಆದಾಗ್ಯೂ, KIADB ಮತ್ತು AAI ಮೂಲಗಳು ಈಗಾಗಲೇ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಹೇಳಿಕೆಯನ್ನು ಬಲಪಡಿಸಿವೆ. ಕನಕಪುರ ಭಾಗದಲ್ಲಿ ಭೂ ಲಭ್ಯತೆ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು KIADB ಅಧಿಕಾರಿಯೊಬ್ಬರು ಹೇಳಿದ್ದಾರೆ. ಕನಕಪುರ ಭಾಗದಲ್ಲಿ ಹೆಚ್ಚಿನ ಭೂಮಿ ಲಭ್ಯವಿರುವುದರಿಂದ, ಸರ್ಕಾರವು ಅದನ್ನು ಒಟ್ಟಾರೆಯಾಗಿ ನೋಡಲು ಆಯ್ಕೆ ಮಾಡಿದರೆ, ಪ್ರಸ್ತಾವಿತ ವಿಮಾನ ನಿಲ್ದಾಣವನ್ನು ನಿರ್ಮಿಸಲು 4,500-5,000 ಎಕರೆಗಳನ್ನು ಸಂಪೂರ್ಣವಾಗಿ ವಿಂಗಡಿಸಲು ಹೆಚ್ಚಿನ ಅವಕಾಶ ಸಿಗಲಿದೆ ಎಂದು ಹೇಳಲಾಗಿದೆ.












Click it and Unblock the Notifications