Karnataka Rains: ಬೆಂಗಳೂರು ಸೇರಿ ಈ ಜಿಲ್ಲೆಗಳಿಗೆ ಭಾರೀ ಮಳೆ, ಯೆಲ್ಲೋ ಅಲರ್ಟ್; ಮೇ 26ಕ್ಕೆ ಮುಂಗಾರು ಪ್ರವೇಶ
Karnataka Weather Forecast: ವಾಯು ಚಂಡಮಾರುತ ಪ್ರಸರಣ, ಇನ್ನಿತರ ವೈಪರೀತ್ಯಗಳ ಪ್ರಭಾವದಿಂದಾಗಿ ಕರ್ನಾಟಕದ ರಾಜ್ಯದಾದ್ಯಂತ ಮಳೆ ಚುರುಕಾಗಿದೆ. ಮುಂದಿನ 5 ದಿನದಲ್ಲಿ ಇಂದಿನಿಂದ ಮೊದಲ ಮೂರು ದಿನ ಒಳನಾಡು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮತ್ತು ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಪ್ರತಿ ಗಂಟೆಗೆ 50-60 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ. ಗುಡುಗ, ಮಿಂಚು ಸಹಿತ ವರ್ಷಧಾರೆ ಸುರಿಯಲಿದೆ. ಈ ಅವಧಿಯಲ್ಲಿ ದಿನಗಳಲ್ಲಿ ಮುಂಗಾರು ಮಳೆಯ ಪ್ರವೇಶವು ಆಗಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ.
ಹವಾಮಾನ ಇಲಾಖೆ ಪ್ರಕಾರ, ಕರಾವಳಿಯ ಮೂರು ಜಿಲ್ಲೆಗಳಿಗೆ ಮಳೆ ಸದ್ಯಕ್ಕೆ ಕಡಿಮೆ ಇದ್ದು, ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಗುರ ಮಳೆ ಆಗಬಹುದು. ಉಳಿದಂತೆ ಉತ್ತರ ಒಳನಾಡಿಗಿಂತ ರಾಜಧಾನಿ ಬೆಂಗಳೂರು ಸೇರಿ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಧಿಕ ಮಳೆ ನಿರೀಕ್ಷೆ ಇದೆ.

ಬೆಂಗಳೂರು ಸೇರಿ 6 ಜಿಲ್ಲೆಗಳಿಗೆ ಇಂದು ಭಾರೀ ಮಳೆ, ಯೆಲ್ಲೋ ಅಲರ್ಟ್
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಹಾಸನ, ಕೋಲಾರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಇಂದು (ಮೇ 23) ಶನಿವಾರ 75 ಮಿಲಿ ಮೀಟರ್‌ನಿಂದ 115 ಮಿಲಿ ಮೀಟರ್‌ವರೆಗೆ ಭಾರೀ ಮಳೆ ನಿರೀಕ್ಷೆ ಇದ್ದು, 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ. ಇಲ್ಲಿ ಮಳೆ ಸಂದರ್ಭದಲ್ಲಿ ಗಾಳಿಯ ವೇಗ ಗಂಟೆಗೆ 40-50 ಇರಲಿದೆ.
ನಾಳೆ ಮೇ 24 ರಂದು ಬಾಗಲಕೋಟೆ, ಕೊಪ್ಪಳ, ವಿಜಯಪುರ, ಚಿತ್ರದುರ್ಗ, ಹಾಸನ, ತುಮಕೂರು ಹಾಗೂ ಮೇ 25ರಂದು ತುಮಕೂರು, ಮೈಸೂರು, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆ ಆಗಲಿದ್ದು, 'ಯೆಲ್ಲೋ ಅಲರ್ಟ್' ನೀಡಲಾಗಿದೆ ಎಂದು ಹವಾಮಾನ ವಿಜ್ಞಾನಿಗಳು ತಿಳಿಸಿದ್ದಾರೆ.
ಇನ್ನುಳಿದಂತೆ ದಾವಣಗೆರೆ, ಹಾವೇರಿ, ಕಲಬುರಗಿ, ಯಾದಗಿರಿ, ಬೀದರ್, ಕಲಬುರಗಿ, ರಾಮನಗರ, ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರ ಸೇರಿದಂತೆ ಬಹುತೇಕ ಎಲ್ಲ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಪ್ರತಿನಿತ್ಯ ಹಗುರದಿಂದ ಸಾಮಾನ್ಯ ಮಳೆ ನಿರೀಕ್ಷಿಸಬಹುದು.
ರಾಜ್ಯದ ತಾಪಮಾನ ಹೇಗಿದೆ?
ಉತ್ತರ ಒಳನಾಡಿನ ವಿವಿಧೆಡೆ ಸಾಮಾನ್ಯಕ್ಕಿಂತ ಗರಿಷ್ಠ ತಾಪಮಾನ 3-5 ಡಿಗ್ರಿ ಸೆಲ್ಸಿಯಸ್ ಹೆಚ್ಚಿದ್ದರೆ, ದಕ್ಷಿಣ ಒಳನಾಡಿನಲ್ಲಿ 1.5-3 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆ ಆಗಿದೆ. ಇಡೀ ದಿನ ಭಾರದೇ ಸಂಜೆ, ರಾತ್ರಿ ಆಗಾಗ ಬಂದು ಹೋಗುವ ಕಾರಣ ಉಳಿದ ಅವಧಿಯಲ್ಲಿ ಸೆಖೆ, ಒಣಹವೆಯ ವಾತಾವರಣ ನಿರ್ಮಾಣವಾಗಿರುತ್ತದೆ. ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿಯ ವಾತವರಣ ಕಂಡು ಬರಲಿದೆ.
ಹವಾಮಾನ ವೈಪರೀತ್ಯ, ಮೇ 26ಕ್ಕೆ ಮುಂಗಾರು ಮಳೆ ಆರಂಭ
ಮುಂದಿನ ಮೂರು ದಿನಗಳಲ್ಲಿ ಅರಬ್ಬಿ ಸಮುದ್ರ, ಬಂಗಾಳ ಕೊಲ್ಲಿಯ ಕೆಲವು ಭಾಗಗಳು, ಕೊಮೊರಿನ್ ಪ್ರದೇಶ, ಅಂಡಮಾನ್ ಸಮುದ್ರದ ಉಳಿದ ಭಾಗಗಳಲ್ಲಿ ನೈಋತ್ಯ ಮಾನ್ಸೂನ್ (Monsoon Rain 2026) ಮಾರುತಗಳ ಸಕ್ರಿಯತೆಗೆ ಪೂರಕೆ ವಾತಾವರಣ ನಿರ್ಮಾಣವಾಗಲಿವೆ. ಹವಾಮಾನ ತಜ್ಞರ ಪ್ರಕಾರ, ಮೇ 26ರಂದು ಮುಂಗಾರು ಕೇರಳ ಪ್ರವೇಶಿಸಲಿದೆ.
ಸದ್ಯ ಬಂಗಾಳಕೊಲ್ಲಿ ಮತ್ತು ನೆರೆಹೊರೆಗಳಲ್ಲಿ ಸರಾಸರಿ ಸಮುದ್ರ ಮಟ್ಟಕ್ಕಿಂತ 3.1 ಕಿ.ಮೀ ಎತ್ತರದಲ್ಲಿ ಮೇಲ್ಬಾಗದ ವಾಯು ಚಂಡಮಾರುತದ ಪ್ರಸರಣ ಉಂಟಾಗಿದೆ. ಪೂರ್ವ ಅರಬ್ಬಿ ಸಮುದ್ರ ಮತ್ತು ನೆರೆಹೊರೆಗಳಲ್ಲಿ ಮೇಲ್ಬಾಗದ ವಾಯು ಚಂಡಮಾರುತದ ಪ್ರಸರಣವು ಮುಂದುವರಿದಿದೆ. ಅದು ಸಮುದ್ರ ಮಟ್ಟಕ್ಕಿಂತ 1.5 ಕಿ.ಮೀ ವರೆಗೆ ವಿಸ್ತರಿಸಿದೆ. ಅರಬ್ಬಿ ಸಮುದ್ರದ ಆಗ್ನೆಯ ದಿಕ್ಕಿನಲ್ಲೂ 3.1 ಕಿ.ಮೀ ಎತ್ತರದ ವಾಯು ಚಂಡಮಾರುತದ ಪರಿಚಲನೆ ಸೃಷ್ಟಿಯಾಗಿದೆ.
ಇನ್ನೂ ಕೇರಳ ಮತ್ತು ದಕ್ಷಿಣ ತಮಿಳುನಾಡಿನಾದ್ಯಂತ ಕೊಮೊರಿನ್ ಪ್ರದೇಶಕ್ಕೆ ಹೊಂದಿಕೊಂಡಂತೆ ಸರಾಸರಿ ಸಮುದ್ರ ಮಟ್ಟದಿಂದ 3.1 ಕಿ.ಮೀ ಎತ್ತರದಲ್ಲಿ ಒಂದು ಸುಳಿಗಾಳಿ ಚಲಿಸುತ್ತಿದೆ. ಬಂಗಾಳಕೊಲ್ಲಿಯ ಮಧ್ಯ ಭಾಗದಿಂದ ತಮಿಳುನಾಡಿನವರೆಗೆ ವಾಯುಭಾರ ಕುಸಿತ ಏರ್ಪಟ್ಟಿದೆ. ಈ ಎಲ್ಲ ವೈಪರೀತ್ಯಗಳು ಮುಂಗಾರು ಮಳೆ ಆಗಮನಕ್ಕೆ ಪೂರಕ ವಾತಾವರಣ ನಿರ್ಮಿಸಿಕೊಟ್ಟಿವೆ. ಈ ಬಾರಿ ಅವಧಿಗೂ ಮುನ್ನವೇ ಮುಂಗಾರು ಪ್ರವೇಶಿಸಲಿದೆ ಎಂದು ಐಎಂಡಿ ಮುನ್ಸೂಚನೆ ಕೊಟ್ಟಿದೆ.













Click it and Unblock the Notifications