Sara Tendulkar: 'ಮೋಟಿ' ಎಂದ ಪಾಪರಾಜಿಗೆ ಕ್ಲಾಸ್ ತೆಗೆದುಕೊಂಡ ಸಚಿನ್ ಪುತ್ರಿ: ಇದು ಅಸಹ್ಯಕರ ಎಂದ ಸಾರಾ
ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಅವರು ಇತ್ತೀಚೆಗೆ ತಮ್ಮ ದೇಹದ ಬಗ್ಗೆ ಅಸಹ್ಯಕರವಾಗಿ ಕಮೆಂಟ್ ಮಾಡಿದ ಪಾಪರಾಜಿಯೊಬ್ಬನ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. ವಿಮಾನ ನಿಲ್ದಾಣದಲ್ಲಿ ತೆಗೆದ ತಮ್ಮ ವಿಡಿಯೋವೊಂದಕ್ಕೆ 'ಬಾಡಿ-ಶೇಮಿಂಗ್' ಮಾಡುವಂತಹ ಶೀರ್ಷಿಕೆ ನೀಡಿದ್ದಕ್ಕಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಸಾರಾ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಈ ಘಟನೆಯು ಪ್ರಸ್ತುತ ಪಾಪರಾಜಿ ಸಂಸ್ಕೃತಿ, ಆನ್‌ಲೈನ್ ಕಿರುಕುಳ ಮತ್ತು ಸೆಲೆಬ್ರಿಟಿಗಳ ಖಾಸಗಿತನದ ಉಲ್ಲಂಘನೆಯ ಕುರಿತು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ಘಟನೆಯ ಹಿನ್ನೆಲೆ
ಈ ವಾರದ ಆರಂಭದಲ್ಲಿ, ತಾಹಿರ್ ಜಾಸೂಸ್ ಎಂಬ ಪಾಪರಾಜಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದನು. ವಿಮಾನ ನಿಲ್ದಾಣದಲ್ಲಿ ಸಾರಾ ತೆಂಡೂಲ್ಕರ್ ಅವರು ತಮ್ಮ ಅತ್ತಿಗೆ (ಸಹೋದರ ಅರ್ಜುನ್ ತೆಂಡೂಲ್ಕರ್ ಅವರ ಪತ್ನಿ) ಸಾನಿಯಾ ಚಂಡೋಕ್ ಅವರೊಂದಿಗೆ ನಡೆದುಕೊಂಡು ಹೋಗುತ್ತಿರುವ ದೃಶ್ಯ ಈ ವಿಡಿಯೋದಲ್ಲಿತ್ತು.

ಆದರೆ, ಈ ವಿಡಿಯೋದಲ್ಲಿ ಹಿಂದಿಯಲ್ಲಿ ಒಂದು ಸಾಲನ್ನು ಬರೆಯಲಾಗಿತ್ತು. ಅದರಲ್ಲಿ, "ಮೋಟಿ ವಾಲಿ ಸಾರಾ ಹೈ, ಬಗಲ್ ವಾಲಿ ಭಾಭಿ ಹೈ" (ದಪ್ಪಗಿರುವವಳು ಸಾರಾ, ಪಕ್ಕದಲ್ಲಿರುವವಳು ಅತ್ತಿಗೆ) ಎಂದು ಅತ್ಯಂತ ಕೀಳುಮಟ್ಟದ ಶೀರ್ಷಿಕೆಯನ್ನು ನೀಡಲಾಗಿತ್ತು. ಕಂಟೆಂಟ್ ಕ್ರಿಯೇಷನ್ ಹೆಸರಿನಲ್ಲಿ ಮಾಡಲಾದ ಈ ಬಾಡಿ-ಶೇಮಿಂಗ್ ಕಮೆಂಟ್ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿತ್ತು. ಹಲವರು ಪಾಪರಾಜಿಯ ಈ ವರ್ತನೆಯನ್ನು ಅಸಭ್ಯ ಮತ್ತು ಖಾಸಗಿತನದ ದಕ್ಕೆ ಎಂದು ಖಂಡಿಸಿದ್ದರು.
ಸಾರಾ ತೆಂಡೂಲ್ಕರ್ ತಿರುಗೇಟು
ತಮ್ಮ ಬಗ್ಗೆ ಮಾಡಲಾದ ಈ ಕೀಳುಮಟ್ಟದ ಕಮೆಂಟ್ ಅನ್ನು ಗಮನಿಸಿದ ಸಾರಾ, ಆ ವಿಡಿಯೋದ ಸ್ಕ್ರೀನ್‌ಶಾಟ್ ಅನ್ನು ತೆಗೆದು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಪಾಪರಾಜಿ ತಾಹಿರ್ ಜಾಸೂಸ್‌ನನ್ನು ಟ್ಯಾಗ್ ಮಾಡಿರುವ ಸಾರಾ, "ನೀನು ಅಸಹ್ಯಕರ. ಇದು ಖಂಡಿತವಾಗಿಯೂ 'ಪತ್ರಿಕೋದ್ಯಮ' ಅಲ್ಲ. ದಯವಿಟ್ಟು ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಡಿ," ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಅಷ್ಟೇ ಅಲ್ಲದೆ, ಮತ್ತೊಂದು ಪೋಸ್ಟ್‌ನಲ್ಲಿ, "ನೀನು ನಿನ್ನ ಪೋಸ್ಟ್ ಅನ್ನು ಡಿಲೀಟ್ ಮಾಡಬಹುದು. ಆದರೆ ಆ ಕಾರಣದಿಂದಾಗಿ ನೀನು ಮಾಡಿರುವ ಈ ಅಸಹ್ಯಕರ ಕೆಲಸ ಕಡಿಮೆಯಾಗುವುದಿಲ್ಲ," ಎಂದು ವಾಗ್ದಾಳಿ ನಡೆಸಿದ್ದಾರೆ.
ನೆಟ್ಟಿಗರ ಬೆಂಬಲ
ಸಾರಾ ಅವರ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಪಾಪರಾಜಿ ತನ್ನ ಖಾತೆಯಿಂದ ಆ ವಿಡಿಯೋವನ್ನು ಡಿಲೀಟ್ ಮಾಡಿದ್ದಾನೆ. ಆದರೆ, ಸಾರಾ ನೀಡಿದ ತಿರುಗೇಟಿನ ಸ್ಕ್ರೀನ್‌ಶಾಟ್‌ಗಳು ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಮಹಿಳೆಯರನ್ನು ಸಾರ್ವಜನಿಕವಾಗಿ ಅವರ ದೇಹದ ಬಗ್ಗೆ ಹಂಗಿಸುವುದು, ಕಂಟೆಂಟ್ ಹೆಸರಿನಲ್ಲಿ ಬಾಡಿ-ಶೇಮಿಂಗ್ ಮಾಡುವುದನ್ನು ಎಂದಿಗೂ ಸಹಿಸಲಾಗುವುದಿಲ್ಲ ಎಂದು ಸಾಮಾಜಿಕ ಜಾಲತಾಣದ ಬಳಕೆದಾರರು ಸಾರಾ ಬೆಂಬಲಕ್ಕೆ ನಿಂತಿದ್ದಾರೆ.
ಸಾರಾ ತೆಂಡೂಲ್ಕರ್ ಯಾರು?
ಅಕ್ಟೋಬರ್ 12, 1997 ರಂದು ಮುಂಬೈನಲ್ಲಿ ಜನಿಸಿದ ಸಾರಾ ತೆಂಡೂಲ್ಕರ್, ಕೇವಲ ಸಚಿನ್ ಪುತ್ರಿಯಾಗಿ ಮಾತ್ರವಲ್ಲದೆ ತಮ್ಮದೇ ಆದ ಗುರುತನ್ನು ಹೊಂದಿದ್ದಾರೆ. ಮಾಡೆಲ್ ಹಾಗೂ ನ್ಯೂಟ್ರಿಷನಿಸ್ಟ್ ಆಗಿರುವ ಅವರು, ಫ್ಯಾಷನ್ ಮತ್ತು ಲೈಫ್‌ಸ್ಟೈಲ್ ಕಂಟೆಂಟ್ ಮೂಲಕ ಇನ್‌ಸ್ಟಾಗ್ರಾಮ್‌ನಲ್ಲಿ ಭಾರಿ ಜನಪ್ರಿಯತೆ ಗಳಿಸಿದ್ದಾರೆ. ಜೊತೆಗೆ ಸಚಿನ್ ತೆಂಡೂಲ್ಕರ್ ಫೌಂಡೇಶನ್ ಜೊತೆಗೂಡಿ ಸಮಾಜಮುಖಿ ಕೆಲಸಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.












Click it and Unblock the Notifications