Darshan Thoogudeepa: ನಟ ದರ್ಶನ್‌ಗೆ ಎದುರಾಯ್ತು ದೊಡ್ಡ ಗಂಡಾಂತರ
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ತೂಗುದೀಪ ಹಾಗೂ ಗ್ಯಾಂಗ್‌ಗೆ ಹೈಕೋರ್ಟ್ ಇತ್ತೀಚೆಗಷ್ಟೇ ಜಾಮೀನು ಮಂಜೂರು ಮಾಡಿತ್ತು. ಈ ಹಿನ್ನೆಲೆ ನಟ ದರ್ಶನ್ ಅವರು ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ರೆಸ್ಟ್ ಮಾಡುತ್ತಿದ್ದಾರೆ. ಜಾಮೀನು ಸಿಕ್ಕ ಬೆನ್ನಲ್ಲೇ ಪ್ರಕರಣದ ಆರೋಪಿಗಳೆಲ್ಲ ತುಸು ನಿರಾಳರಾಗಿದ್ದರು. ಈ ಹೊತ್ತಿನಲ್ಲೇ ದರ್ಶನ್ ಸೇರಿದಂತೆ ಪ್ರಕರಣದ ಎಲ್ಲ ಆರೋಪಿಗಳಿಗೆ ದೊಡ್ಡ ಗಂಡಾಂತರವೊಂದು ಎದುರಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿಗಳಾದ ದರ್ಶನ್, ಪವಿತ್ರಾಗೌಡ ಸೇರಿದಂತೆ ಇನ್ನುಳಿದ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿರುವ ಜಾಮೀನು ರದ್ದು ಮಾಡುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಪೊಲೀಸರು ಮೇಲ್ಮನವಿ ಸಲ್ಲಿಸಿದ್ದಾರೆ. ಇದರಿಂದ ದರ್ಶನ್ ಹಾಗೂ ಅವರ ಗ್ಯಾಂಗ್‌ಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ದರ್ಶನ್ ಸೇರಿದಂತೆ ಈ ಪ್ರಕರಣದ ಇತರ ಏಳು ಮಂದಿ ಆರೋಪಿಗಳ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್‌ಗೆ ಪೊಲೀಸರು ಮೇಲ್ಮನವಿ ಸಲ್ಲಿಸಿದ್ದಾರೆ. ಕರ್ನಾಟಕ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ, ಇಂದು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಕೆಯಾಗಿದೆ. ಸುಪ್ರೀಂ ಕೋರ್ಟ್ ವಕೀಲರಾದ ಅನಿಲ್ ನಿಶಾನಿ ಅವರಿಂದ ಸುಪ್ರೀಂಗೆ ಅರ್ಜಿ ಸಲ್ಲಿಕೆಯಾಗಿದೆ. ಪ್ರಕರಣದಲ್ಲಿ ಆರೋಪಿಗಳಾದ ನಟ ದರ್ಶನ್, ಪವಿತ್ರಗೌಡ, ಲಕ್ಷ್ಮಣ್, ಪ್ರದೂಶ್, ನಾಗರಾಜು, ಅನುಕುಮಾರ್ ಹಾಗೂ ಜಗದೀಶ್ ಅವರಿಗೆ ನೀಡಿರುವ ಜಾಮೀನು ರದ್ದು ಮಾಡುವಂತೆ ಕೋರಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಕಳೆದ ಡಿಸೆಂಬರ್ 13ರಂದು ಕರ್ನಾಟಕ ಹೈಕೋರ್ಟ್ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಏಳು ಮಂದಿ ಆರೋಪಿಗಳಿಗೂ ಜಾಮೀನು ಮಂಜೂರು ಮಾಡಿತ್ತು. ಇದರ ಬೆನ್ನಲ್ಲೇ ಪೊಲೀಸರು ಜಾಮೀನು ರದ್ದು ಮಾಡುವಂತೆ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ತಿಳಿಸಿದ್ದರು. ಅದರಂತೆ ಗೃಹ ಇಲಾಖೆಯಿಂದ ಪೊಲೀಸರು ಅನುಮತಿ ಕೂಡ ಪಡೆದಿದ್ದರು. ಇದಕ್ಕೆ ಗೃಹ ಇಲಾಖೆ ಕೂಡ ಒಪ್ಪಿಗೆ ನೀಡಿತ್ತು. ಅದರಂತೆ ಪೊಲೀಸರು ಜಾಮೀನು ರದ್ದು ಕೋರಿ ಸುಪ್ರೀಂಕೋರ್ಟ್ ಕದ ತಟ್ಟಿದ್ದಾರೆ.
ಜಾಮೀನು ಸಿಕ್ಕ ಬಳಿಕ ನಟ ದರ್ಶನ್ ಅವರು ಬೆಂಗಳೂರಿನಿಂದ ಮೈಸೂರಿನಲ್ಲಿರುವ ಫಾರ್ಮ್‌ಹೌಸ್‌ಗೆ ಶಿಫ್ಟ್ ಆಗಿದ್ದರು. ಯಾವುದೇ ಜಂಜಾಟವಿಲ್ಲದೆ ಇರಲು ಅವರು ಮೈಸೂರಿಗೆ ತೆರಳಲು ಕೋರ್ಟ್‌ನಿಂದ ಅನುಮತಿಯೂ ಪಡೆದಿದ್ದರು. ಇದಕ್ಕೆ ಕೋರ್ಟ್ ಕೂಡ ಒಪ್ಪಿಗೆ ಸೂಚಿಸಿತ್ತು. ಅದರಂತೆ ಜನವರಿ 5ರವರೆಗೆ ದರ್ಶನ್ ಮೈಸೂರಿನಲ್ಲಿರಲು ಅನುಮತಿ ನೀಡಿತ್ತು. ನಿನ್ನೆಗೆ ಕೋರ್ಟ್ ನೀಡಿದ್ದ ಗಡುವು ಮುಗಿದಿದ್ದು, ಇಂದು ಬೆಂಗಳೂರಿಗೆ ಬರಬೇಕಿದೆ.

ಆದರೆ, ದರ್ಶನ್ ಅವರು ಇನ್ನೂ ಕೆಲಕಾಲ ಮೈಸೂರಿನಲ್ಲೇ ಉಳಿದುಕೊಳ್ಳುವ ಉದ್ದೇಶ ಹೊಂದಿದ್ದು, ಇದಕ್ಕಾಗಿ ಕೋರ್ಟ್ ನೀಡಿದ್ದ ಗಡುವನ್ನು ವಿಸ್ತರಿಸುವಂತೆ ಮನವಿ ಮಾಡಲು ಮುಂದಾಗಿದ್ದಾರೆ ಎಂದು ಹೇಳಲಾಗಿತ್ತು. ಇದರ ಬೆನ್ನಲ್ಲೇ ಪೊಲೀಸರು ಜಾಮೀನು ರದ್ದು ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಿರುವುದು ದರ್ಶನ್ ಅವರಿಗೆ ಮತ್ತೆ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸದ್ಯ ದರ್ಶನ್ ಅವರು ಬೆಂಗಳೂರಿಗೆ ವಾಪಸ್ ಬರ್ತಾರಾ, ಇಲ್ಲವೇ ಮೈಸೂರಿನಲ್ಲೇ ಇರಲು ಕೋರ್ಟ್ ಮತ್ತೆ ಅನುಮತಿ ನೀಡುತ್ತಾ ಅನ್ನೋದು ಕಾದುನೋಡಬೇಕಿದೆ.












Click it and Unblock the Notifications