Jaggesh: ಕನ್ನಡ ಚಿತ್ರರಂಗಕ್ಕೆ ಬೋಲ್ಟೇ ಇಲ್ಲ, ಟೈಟ್ ಮಾಡಿ ಏನು ಪ್ರಯೋಜನ?
ವಿಧಾನಸೌಧದ ಆವರಣದಲ್ಲಿ ನಡೆದ 16ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನೆಗೆ ಕನ್ನಡ ಚಿತ್ರರಂಗದ ಹಲವರು ಹಾಜರಾಗದ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಬೇಸರ ವ್ಯಕ್ತಪಡಿಸಿದ್ದರು. "ಯಾರಿಗೆ ಹೇಗೆ ನಟ್ಟು ಬೋಲ್ಟ್ ಟೈಟ್ ಮಾಡಬೇಕು ಎನ್ನುವುದು ಗೊತ್ತಿದೆ" ಎಂದು ಖಾರವಾಗಿ ಮಾತನಾಡಿರುವುದು ಈಗ ವಿವಾದಕ್ಕೆ ಗುರಿಯಾಗಿದೆ. ಈಗ ಬಗ್ಗೆ ಹಿರಿಯ ನಟ ಹಾಗೂ ಬಿಜೆಪಿ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ಪ್ರತಿಕ್ರಿಯಿಸಿದ್ದಾರೆ.
ಕಲಾವಿದರು ಒಟ್ಟುಗೂಡಬೇಕು ಎಂದೇ ಡಾ.ರಾಜ್‌ಕುಮಾರ್ ಅವರು ಕಲಾವಿದರ ಸಂಘ ಮಾಡಿದ್ದರು. ದೌರ್ಭಾಗ್ಯ, ಅದು ಇಂದು ನಿಷ್ಕ್ರಿಯಗೊಂಡಿದೆ. ಕೂಡಲೇ ನಿಮ್ಮ ಅಧಿಕಾರಿಗಳಿಗೆ ಸೂಚಿಸಿ ಎಲೆಕ್ಷನ್ ಮಾಡಿಸಿ. ಕಲಾವಿದರು ಒಂದೆಡೆ ಕೂರುವಂತೆ ಮಾಡಿ. ಒಗ್ಗಟ್ಟು ಇರುವ ಮನೆ ಹಾಳಾದ ನಿದರ್ಶನವಿಲ್ಲ. ಚಿತ್ರರಂಗದ ಸಮಸ್ಯೆಗಳು ಕೂಡ ಅನೇಕ. ಇದನ್ನು ನಿಮ್ಮ ಗಮನಕ್ಕಾಗಿ ತಂದಿರುವೆ ಎಂದು ಡಿ.ಕೆ.ಶಿವಕುಮಾರ್ ಅವರಿಗೆ ಜಗ್ಗೇಶ್ ಹೇಳಿದ್ದಾರೆ.

ಇನ್ನು ಈ ಕಾರ್ಯಕ್ರಮ 7 ಗಂಟೆಗೆ, ನನಗೆ ಆಹ್ವಾನ ಪತ್ರಿಕೆ ತಲುಪಿದ್ದು 6 ಗಂಟೆಗೆ, ಜೊತೆಗೆ ಒಗಟ್ಟಿಲ್ಲ ಸಂವಾದವಿಲ್ಲ. ಒಟ್ಟಾರೆ ಕಲಾವಿದರ ಸಂಘವೇ ಕಣ್ಮರೆ. ಕರ್ನಾಟಕದಲ್ಲೇ ಕನ್ನಡ ಚಿತ್ರರಂಗದ ಅವಸಾನ ಕಂಡುಬರುತ್ತಿದೆ. ಯಾವ ಕಲಾವಿದರು ಏನಾಗಿದ್ದಾರೆ? ಕಲಾವಿದರಾದ ನಮಗೆ ಮಾಹಿತಿಯಿಲ್ಲ? ಇನ್ನು ಸಾವಿನ ಅಂಚಿನ ಚಿತ್ರರಂಗಕ್ಕೆ ಬೋಲ್ಟೇ ಇಲ್ಲ, ಇನ್ನು ಟೈಟ್ ಮಾಡಿ ಏನು ಪ್ರಯೋಜನ? ಎಂದು ಜಗ್ಗೇಶ್ ಪ್ರಶ್ನಿಸಿದ್ದಾರೆ.
ಒಂದು ಕಮಿಟಿ ಮಾಡಿ, ಅದರಲ್ಲಿ ಹಿರಿಯ ನಟರು, ನಿರ್ಮಾಪಕರು, ನಿರ್ದೇಶಕರು, ಪತ್ರಕರ್ತರು ಇರುವಂತೆ ರಚಿಸಿ. ಈಗಿನ ಚಿತ್ರರಂಗದ ವಾಸ್ತವದ ಅರಿತು ಕನ್ನಡ ಚಿತ್ರರಂಗ ಉಳಿಯುವಂತೆ ಬೆಳೆಯುವಂತೆ ಒಗ್ಗಟ್ಟಿನಿಂದ ಒಟ್ಟುಗೂಡುವಂತೆ ಚಿಂತನೆಯ ಚಾವಡಿ ರಚನೆಯಾಗಲಿ. ನಿಮಗೆ ದಿನ ಸಿಗುವ ಕೆಲವರು ಮಾತ್ರ ಚಿತ್ರರಂಗವಲ್ಲ, ಅನೇಕರಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಡಿಕೆ ಶಿವಕುಮಾರ್ ಅಂದಿದ್ದೇನು?: ಕನ್ನಡ ಚಿತ್ರರಂಗವನ್ನು ತುಂಬಾ ದೊಡ್ಡಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದೀರಿ. ಅದರ ಬಗ್ಗೆ ನಮಗೆ ತುಂಬಾ ಗೌರವವಿದೆ. ಆದರೆ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಕೂಡ ನಿಮ್ಮ ಮೇಲೆಯೇ ಇದೆ ಎಂದು ಡಿ.ಕೆ.ಶಿವಕುಮಾರ್ ಅವರು ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಬೇಸರ ವ್ಯಕ್ತಪಡಿಸಿದ್ದರು.
ನನಗೆ ಫಿಲ್ಮ್ ಚೇಂಬರ್, ಸಿನಿಮಾ ನಟರ ಬಗ್ಗೆ ಬಹಳ ಕೋಪ ಇದೆ. ನಾವು ಮಾಡಿದ ನೆಲ ಜಲದ ಹೋರಾಟ ಪಾದಯಾತ್ರೆಯಲ್ಲಿ ಒಂದಿಬ್ಬರು ಬಿಟ್ಟರೆ ಇನ್ಯಾರೂ ಪಾಲ್ಗೊಳ್ಳಲಿಲ್ಲ. ಸಾಧುಕೋಕಿಲ, ದುನಿಯಾ ವಿಜಿ ಬಿಟ್ಟರೆ ಯಾರಿಂದಲೂ ಸಹಕಾರ ಸಿಗಲಿಲ್ಲ. ಇದೇ ಕಾರಣಕ್ಕೆ ನಮ್ಮ ಸರ್ಕಾರ ಬಂದ ನಂತರ ಸಾಧು ಕೋಕಿಲ ಅವರಿಗೆ ಅಕಾಡೆಮಿ ಅಧ್ಯಕ್ಷ ಸ್ಥಾನ ಕೊಟ್ಟಿದ್ದೇವೆ. ಏಕೆಂದರೆ ನಮ್ಮ ಸಂಕಷ್ಟಕ್ಕೆ ಜೊತೆಯಾದವರನ್ನು ನಾವು ಗುರುತಿಸಬೇಕು. ಕೆಲ ನಟರು ನನ್ನನ್ನು ಬಳಸಿಕೊಳ್ತಾರೆ, ಆ ಮೇಲೆ ಬಿಸಾಡುತ್ತಾರೆ. ಇದನ್ನ ನಾನು ಗಮನಿಸುವುದಿಲ್ಲ ಎಂದು ಭಾವಿಸಬೇಡಿ ಎಂದು ಎಚ್ಚರಿಕೆ ನೀಡಿದ್ದರು.
ಇನ್ನು ಮುಂದೆ ಆದ್ರೂ ನೀವೆಲ್ಲ ಸರಿಯಾಗಿ ನಡೆದುಕೊಳ್ಳಿ. ನಾವು ಸಿನಿಮಾ ಶೂಟಿಂಗ್‌ಗೆ ಅನುಮತಿ ಕೊಡಬೇಡಿ ಅಂದ್ರೆ ನಿಮ್ಮ ಶೂಟಿಂಗ್ ನಡೆಯೋದೇ ಇಲ್ಲ. ಆವಾಗ ಏನ್ ಮಾಡ್ತೀರಿ? ಯಾರಿಗೆ ಯಾವಾಗ ಎಲ್ಲೆಲ್ಲಿ ನಟ್ಟು ಬೋಲ್ಟು ಟೈಟ್ ಮಾಡಬೇಕು ಎನ್ನುವುದು ನನಗೆ ಗೊತ್ತಿದೆ. ಇದನ್ನು ಮನವಿ ಅಂತಾದ್ರೂ ತಿಳ್ಕೊಳ್ಳಿ, ಎಚ್ಚರಿಕೆ ಅಂತಾದ್ರೂ ಅನ್ಕೊಳ್ಳಿ ಎಂದು ಡಿ.ಕೆ.ಶಿವಕುಮಾರ್ ಖಾರವಾಗಿ ಮಾತನಾಡಿದ್ದರು. ಸದ್ಯ ಈ ಹೇಳಿಕೆಯು ವಿವಾದಕ್ಕೆ ಗುರಿಯಾಗಿದೆ.












Click it and Unblock the Notifications