ಚಂದನ್ ಶೆಟ್ಟಿಗೆ ಮತ್ತೆ ಜೊತೆಯಾಗ್ತೀರಾ? : ಖಡಕ್ ಉತ್ತರ ಕೊಟ್ಟ ನಿವೇದಿತಾ ಗೌಡ
ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ನಟ ಚಂದನ್ ಶೆಟ್ಟಿ ಹಾಗೂ ಕಿರುತೆರೆ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದಿರುವ ನಿವೇದಿತಾ ಗೌಡ ವಿಚ್ಛೇದನ ಪಡೆದುಕೊಂಡು ವರ್ಷಗಳು ಕಳೆಯುತ್ತಾ ಬಂದರೂ, ಈ ವಿಚಾರ ಇನ್ನೂ ತಣ್ಣಗಾಗಿಲ್ಲ. ಒಂದಲ್ಲ ಒಂದು ವಿಚಾರಕ್ಕೆ ಚಂದನ್-ನಿವೇದಿತಾ ವಿಚ್ಛೇದನ ಸುದ್ದಿಯಲ್ಲಿರುತ್ತದೆ. ಇದೀಗ ಮತ್ತೆ ಸ್ವತಃ ನಿವೇದಿತಾ ಗೌಡ ಡಿವೋರ್ಸ್ ಬಗ್ಗೆ ಮಾತನಾಡಿದ್ದಾರೆ.
ಮುದ್ದು ರಾಕ್ಷಸಿ ಸಿನಿಮಾದ ಸುದ್ದಿಗೋಷ್ಠಿಯಲ್ಲಿ, ಚಂದನ್ ಶೆಟ್ಟಿ ಅವರನ್ನು ನೋಡಿದಾಗ ಎಮೋಷನಲ್ ಆಗಿದ್ದೀರಿ. ಹಾಗಾದರೆ ಮತ್ತೆ ಒಂದಾಗುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, 'ಖಂಡಿತವಾಗಿಯೂ ನಾನು ಎಮೋಷನಲ್ ಆಗಿದ್ದೇನೆ. ಇಂತಹ ಪ್ರಶ್ನೆ ಕೇಳಿದರೆ ಸ್ವಲ್ಪ ಟ್ರಿಕ್ಕಿ ಆಗಿರುತ್ತದೆ. ಏನೂ ಫೀಲ್ ಆಗಿಯೇ ಇಲ್ಲ ಅಂತ ಹೇಳೋಕೆ ಆಗಲ್ಲ. ಅಷ್ಟು ವರ್ಷ ಜೊತೆಗಿದ್ದ ಮೇಲೆ ಖಂಡಿತಾ ಫೀಲ್ ಆಗುತ್ತದೆ' ಎಂದರು.

'ಬೇರೆ ಜೋಡಿಗಳ ಬಗ್ಗೆ ನನಗೆ ಗೊತ್ತಿಲ್ಲ. ಅವರಿಬ್ಬರ ಮಧ್ಯೆ ಪ್ರೀತಿ ಜಾಸ್ತಿ ಇದ್ದಿದ್ದರಿಂದ ಅವರೆಲ್ಲಾ ಮತ್ತೆ ಒಂದಾಗಿರಬಹುದು. ಆದರೆ ನಮ್ಮಲ್ಲಿ ಅಷ್ಟೊಂದು ಹೊಂದಾಣಿಕೆ ಇರಲಿಲ್ಲ. ಹಾಗಾಗಿ ಮತ್ತೆ ನಾವು ಒಂದಾಗಲ್ಲ. ನನ್ನ ಪ್ರಕಾರ ಮುಂದೆ ಆ ಆಲೋಚನೆಯೂ ಇಲ್ಲ' ಎಂದು ನಿವೇದಿತಾ ಗೌಡ ನೇರವಾಗಿ ಹೇಳಿದ್ದಾರೆ.
ಇನ್ನು ಡಿವೋರ್ಸ್ ಬಳಿಕ ಎದುರಾಗುವ ಆರೋಪಗಳ ಬಗ್ಗೆ ಮಾತನಾಡಿದ ಅವರು, 'ನನ್ನ ಪ್ರಕಾರ ನಮ್ಮ ಸಮಾಜವೇ ಹಾಗೆ ಇದೆ. ಏನೇ ಆದರೂ ಕೂಡ ಹುಡುಗಿಯರದ್ದೇ ತಪ್ಪು ಅಂತಾ ದೂಷಿಸಿ ಬಿಡುತ್ತಾರೆ. ಸಾಮಾನ್ಯವಾಗಿ ಹುಡುಗಿಯ ಮೇಲೆಯೇ ಆರೋಪ ಮಾಡುತ್ತಾರೆ. ಪ್ರತಿ ಬಾರಿ ಹೆಣ್ಣು ಮಕ್ಕಳೇ ಟಾರ್ಗೆಟ್ ಆಗುತ್ತಾರೆ. ಆದರೆ ಅವರ ಜೀವನದಲ್ಲಿ ಏನಾಗಿದೆ ಎನ್ನುವುದು ಯಾರಿಗೂ ಗೊತ್ತಿರುವುದಿಲ್ಲ. ಈಗ ನಮ್ಮ ಜೀವನದಲ್ಲಿ ಏನಾಗಿದೆ ಎನ್ನುವುದು ನಮಗೆ ಮಾತ್ರ ಗೊತ್ತು. ಬೇರೆಯವರಿಗೆ ಹೇಳುವ ಅವಶ್ಯಕತೆ ಸಹ ಇಲ್ಲ. ಕೆಲವೊಮ್ಮೆ ಇವರದೇ ತಪ್ಪು ಅಂತಾ ಊಹಿಸಿ ಬಿಡುತ್ತಾರೆ. ಆ ಬ್ಲೇಮ್ ಗೇಮ್ ನಡೆಯುತ್ತಲೇ ಇರುತ್ತದೆ' ಎಂದರು.

'ಬೇರೆಯವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಎನ್ನುವ ಮನುಷ್ಯತ್ವ ಎಲ್ಲರಿಗೂ ಇರಲ್ಲ ಅನಿಸುತ್ತದೆ. ನಾನು ಈ ಆರೋಪಗಳಿಂದ ಹೇಗೆ ಹೊರಬಂದೆ ಅಂದರೆ ನಾನು ನನ್ನ ಕೆಲಸದ ಮೇಲೆ ಗಮನ ಹರಿಸಿದೆ. ಬೇರೆಯವರು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಅಂದರೆ ಅದು ನನ್ನ ಸಮಸ್ಯೆ ಅಲ್ಲ. ಅದು ಅವರ ಸಮಸ್ಯೆ. ಬೇರೆಯವರು ಹೇಳಿದ ತಕ್ಷಣ ಕುಗ್ಗುವಷ್ಟು ನಾನು ವೀಕ್ ಇಲ್ಲ. ನಾನು ನನ್ನ ಕೆಲಸದ ಮೇಲೆ ಹೆಚ್ಚು ಗಮನ ಹರಿಸುತ್ತೇನೆ' ಎಂದು ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಮೆಂಟ್ ಬಗ್ಗೆ ಮಾತನಾಡಿದ ಅವರು, 'ನನ್ನ ಬಗ್ಗೆ ಕಮೆಂಟ್ ಏನೇ ಬಂದರೂ ಸಹ ನಾನು ನೋಡುವುದೂ ಇಲ್ಲ, ಏನೇನು ಕಮೆಂಟ್ ಬರುತ್ತದೆ ಅಂತಾ ನನಗೆ ಗೊತ್ತಿಲ್ಲ. ಕಮೆಂಟ್ ಮಾಡುವವರು ಮಾಡುತ್ತಲೇ ಇರಲಿ. ಬೇರೆಯವರಿಗೆ ಕೆಟ್ಟದಾಗಿ ಮಾತನಾಡಿ ಅವರಿಗೆ ಖುಷಿ ಸಿಗುತ್ತದೆ ಅಂದರೆ ಉಳಿದದನ್ನು ದೇವರು ನೋಡಿಕೊಳ್ಳುತ್ತಾನೆ. ನಾನು ನನ್ನ ಪಾಡಿಗೆ ಕೆಲಸ ಮಾಡಿಕೊಂಡು ಖುಷಿಯಾಗಿ ಇರುತ್ತೇನೆ. ನಮ್ಮನ್ನು ಇಷ್ಟಪಡುವವರು ಸಹ ಇದ್ದೇ ಇರುತ್ತಾರೆ' ಎಂದು ನಿವೇದಿತಾ ಗೌಡ ಹೇಳಿದರು.












Click it and Unblock the Notifications