ಗೋಪಾಲ ಮ್ಯಾ...ಮ್ಯಾ..ಅಂತಿದ್ದ: ಮುದ್ದುಮುದ್ದಾಗಿ ಮನಸ್ಸು ಗೆದ್ದ ಮುದ್ದು ಸೊಸೆ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸದಾಗಿ ಆರಂಭವಾದ ಮುದ್ದು ಸೊಸೆ ಧಾರಾವಾಹಿ ಶುರುವಿನಲ್ಲಿಯೇ ಜನರ ಮನಸ್ಸು ಗೆದ್ದಿದೆ. ಈ ಧಾರಾವಾಹಿಯಲ್ಲಿ ಬಿಗ್‌ಬಾಸ್ ಕನ್ನಡ ಸೀಸನ್ 11ರ ರನ್ನರ್‌ಅಪ್ ತ್ರಿವಿಕ್ರಮ್ ನಾಯಕನಾಗಿ ಕಾಣಿಸಿಕೊಂಡಿದ್ದು, ಪ್ರತಿಮಾ ಠಾಕೂರ್ ನಾಯಕಿಯಾಗಿದ್ದಾರೆ. ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಲೀಡ್ ಪಾತ್ರ ಮಾಡುತ್ತಿರುವ ಪ್ರತಿಮಾ ಠಾಕೂರ್ ಕೆಲವೇ ಕೆಲವು ಸಂಚಿಕೆಯಲ್ಲಿ ಪ್ರೇಕ್ಷಕರಿಗೆ ಮೆಚ್ಚುಗೆಯಾಗಿದ್ದಾರೆ.
ಸದ್ಯ ಮುದ್ದು ಸೊಸೆಯ ಭದ್ರ ಹಾಗೂ ವಿದ್ಯಾ ಜೋಡಿ ಕಿರುತೆರೆಯಲ್ಲಿ ಮೋಡಿ ಮಾಡುತ್ತಿದೆ. ಅದರಲ್ಲೂ ವಿದ್ಯಾ ಪಾತ್ರಧಾರಿ ಪ್ರತಿಮಾ ಠಾಕೂರ್ ತಮ್ಮ ಮುದ್ದು ಮುದ್ದಾದ ನಟನೆಯಿಂದ ಮುದ್ದು ಸೊಸೆಯಾಗಿ ಜನರಿಂದ ಮೆಚ್ಚುಗೆ ಪಡೆದಿದ್ದು, ಈ ಧಾರಾವಾಹಿ ನೋಡುವವರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ.

ಮುದ್ದು ಸೊಸೆಯ ನಾಯಕನಾದ ಭದ್ರ ಪಾತ್ರದಲ್ಲಿ ನಟಿಸುತ್ತಿರುವ ತ್ರಿವಿಕ್ರಮ್ ಈ ಹಿಂದೆ ಪದ್ಮಾವತಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಮಿಂಚುವ ಮೂಲಕ ತಮ್ಮದೇ ಅದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಹೀಗಾಗಿ ಈ ಹಿಂದೆ ಮುದ್ದು ಸೊಸೆ ಧಾರಾವಾಹಿಯ ಪ್ರೋಮೋ ನೋಡಿದ ಪ್ರೇಕ್ಷಕರು ತ್ರಿವಿಕ್ರಮ್‌ಗೆ ಬೇರೆ ನಾಯಕಿಯನ್ನು ಹುಡುಕಿ ಎಂದು ಕಮೆಂಟ್ ಮಾಡುತ್ತಿದ್ದರು. ಆದರೆ ಮುದ್ದು ಸೊಸೆ ಆರಂಭವಾಗಿ ಸಂಚಿಕೆಗಳನ್ನು ನೋಡಿದ ಮೇಲೆ ವಿದ್ಯಾ ಪಾತ್ರಕ್ಕೆ ಪ್ರತಿಮಾ ಠಾಕೂರ್ ಸರಿಯಾದ ಆಯ್ಕೆ ಎನ್ನುತ್ತಿದ್ದಾರೆ. ಅಷ್ಟರ ಮಟ್ಟಿಗೆ ಪ್ರತಿಮಾ ತಮ್ಮ ನಟನೆಯಿಂದ ಪ್ರೇಕ್ಷಕರನ್ನು ಗೆದ್ದಿದ್ದಾರೆ.
ಗೋಪಾಲ ಮ್ಯಾ...ಮ್ಯಾ..ಅಂತಿದ್ದ
ಸದ್ಯ ಮುದ್ದು ಸೊಸೆ ಧಾರಾವಾಹಿ ನಡೆಯುತ್ತಿರುವ ಕಥೆ ಬಗ್ಗೆ ಹೇಳುವುದಾದರೆ ಭದ್ರನ ಮದುವೆ ಮಾಡಿಸಬೇಕು ಎಂದು ನಿರ್ಧರಿಸಿರುವ ಮನೆಯವರು ಆತನ ಮದುವೆಗೆ ಯಾವುದೇ ವಿಘ್ನ ಬಾರದೇ ಇರಲಿ ಎಂದು ದೇವಿಗೆ ಮೇಕೆ ಬಲಿ ನೀಡುತ್ತಾರೆ. ಭದ್ರನ ಮನೆಗೆ ಬಲಿ ಕೊಡಲು ವಿದ್ಯಾ ಮನೆಯ ಮೇಕೆಯನ್ನು ತರುತ್ತಾರೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ವಿದ್ಯಾ ಕಣ್ಣಿರು ಹಾಕಿಕೊಂಡು ಭದ್ರನ ಬಳಿಗೆ ಬರುತ್ತಾಳೆ. ನಿಮ್ಮ ಕಡೆಯವರು ನಮ್ಮ ಗೋಪಾಲನನ್ನು ಕರೆದುಕೊಂಡು ಬಂದಿದ್ದಾರೆ ಎಂದು ವಿದ್ಯಾ ಗೋಳಾಡುತ್ತಾಳೆ.

ಈ ಗೋಪಾಲ ಯಾರು ಎಂದು ಭದ್ರ ಗೊಂದಲಕ್ಕೀಡಾಗುತ್ತಾನೆ. ಯಾರು ಗೋಪಾಲ ನಮ್ಮ ಕಡೆಯವರು ಯಾಕೆ ಅವನನ್ನು ಕರೆದುಕೊಂಡು ಬಂದಿದ್ದಾರೆ ಎಂದು ನೇರವಾಗಿ ಕೇಳುತ್ತಾನೆ. ಈ ವೇಳೆ ವಿದ್ಯಾ ನಮ್ಮ ಗೋಪಾಲ ಮ್ಯಾ...ಮ್ಯಾ..ಅಂತಾ ನಮ್ಮ ಸುತ್ತಲೇ ಸುತ್ತುತ್ತಿದ್ದ ಎನ್ನುತ್ತಾಳೆ. ಇದರಿಂದ ಗೋಪಾಲ ಎಂದರೆ ಮೇಕೆ ಎಂದು ಗೊತ್ತಾಗುತ್ತದೆ. ಓ ಮೇಕೆನಾ ಎಂದು ಕೇಳುತ್ತಾನೆ. ಇದರಿಂದ ಇನ್ನಷ್ಟು ನೊಂದ ವಿದ್ಯಾ ಅವನ ಹೆಸರು ಗೋಪಾಲ, ಅವನಿಗೂ ಒಂದು ಜೀವ ಇರುತ್ತದೆ ಅಲ್ಲವೇ ಎಂದು ಜೋರಾಗಿ ಅಳುತ್ತಾಳೆ.
ವಿದ್ಯಾಳ ಕಣ್ಣೀರಿಗೆ ಕರಗಿದ ಭದ್ರ, ಗೋಪಾಲನನ್ನು ಉಳಿಸಿಕೊಳ್ಳುವ ಮಾತು ಕೊಡುತ್ತಾನೆ. ಆದರೆ ಆ ಮಾತನ್ನು ಉಳಿಸಿಕೊಳ್ಳಲು ಆಗುವುದಿಲ್ಲ. ಮೊದಲು ತಲೆ ಕೊಡವದೇ ಜೀವ ಉಳಿಸಿಕೊಂಡಿದ್ದ ಗೋಪಾಲ ಬಳಿಕ ಭದ್ರನ ತಂದೆ ದೇವಿಯ ಪ್ರಾರ್ಥನೆ ಸಲ್ಲಿಸಿದ ಬಳಿಕ ತಲೆ ಕೊಡುವುತ್ತಾನೆ. ಭದ್ರನ ಕುಟುಂಬಸ್ಥರು ಹಾಗೂ ಊರಿನವರು ಸಂತೋಷದಿಂದ ಮೇಕೆಯನ್ನು ಬಲಿ ಕೊಡುತ್ತಾರೆ. ಇದರಿಂದ ಮನನೊಂದ ಭದ್ರ ಇನ್ನು ಮುಂದೆ ಮಾಂಸಹಾರ ತಿನ್ನುವುದಿಲ್ಲ ಎಂದು ಶಪಥ ಮಾಡುತ್ತಾನೆ. ಆ ಹುಡುಗಿ ವಿದ್ಯಾಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಆಗಲಿಲ್ಲ. ಆ ಹುಡುಗಿ ಎಲ್ಲಿ ಮರದ ಕೆಳಗೆ ಕುಳಿತುಕೊಂಡು ಅಳುತ್ತಿದ್ದಾಳೋ ಎಂದು ನೊಂದುಕೊಳ್ಳುತ್ತಾನೆ. ಆದರೆ ಭದ್ರನಲ್ಲಿಗೆ ಬಂದ ಕ್ವಾಟ್ಲೆ ಅವನಿಗೆ ಸತ್ಯ ದರ್ಶನ ಮಾಡಿಸುತ್ತಾನೆ.

ಗೋಪಾಲನನ್ನು ಉಳಿಸಿಕೊಡಿ ಎಂದು ಕಣ್ಣೀರು ಹಾಕುತ್ತಿದ್ದ ವಿದ್ಯಾ ಎಲ್ಲರಿಗಿಂದ ಮುಂಚೆ ಊಟಕ್ಕೆ ಕುಳಿತುಕೊಂಡು ಬಾಡು ಜಮಾಯಿಸುತ್ತಿರುತ್ತಾಳೆ. ರುಚಿ ರುಚಿಯಾಗಿದೆ ಎಂದು ಕೇಳಿ ಕೇಳಿ ಹಾಕಿಸಿಕೊಂಡು ತಿನ್ನುತ್ತಿರುತ್ತಾಳೆ. ಕ್ವಾಟ್ಲೆ ಈ ಸುಂದರವಾದ ದೃಶ್ಯವನ್ನು ಭದ್ರನಿಗೆ ತೋರಿಸುತ್ತಾನೆ. ಈ ದೃಶ್ಯ ನೋಡಿದ ಭದ್ರ ಒಮ್ಮೆಲೆ ಬೆಚ್ಚಿಬೀಳುತ್ತಾನೆ. ಗೋಪಾಲ ಗೋಪಾಲ ಅಂತಾ ಅಳುತ್ತಿದ್ದ ಹುಡುಗಿ ಇವಳೇನಾ ಅಂತಾ. ಬಳಿಕ ಭದ್ರನೇ ವಿದ್ಯಾಳಿಗೆ ಬಡಿಸಲು ಹೋಗಿ ಇನ್ನು ತಿನ್ನಿ ಅನ್ನುತ್ತಾನೆ. ಅಲ್ಲದೇ ಕ್ವಾಟ್ಲೆ ಗೋಪಾಲ ರುಚಿ ರುಚಿಯಾಗಿದ್ದಾನಾ ಎಂದು ಕೇಳುತ್ತಾನೆ. ಇದರಿಂದ ವಿದ್ಯಾಗೆ ಸಂಕೋಚವಾಗುತ್ತದೆ.
ಚೆನ್ನಾಗಿ ತಿಂದ ಬಳಿಕ ಸಂಕೋಚದಲ್ಲಿಯೇ ವಿದ್ಯಾ ಎದ್ದು ಹೋಗುತ್ತಾಳೆ. ಈ ವೇಳೆ ಅವಳನ್ನೇ ನೋಡುತ್ತಿದ್ದ ಭದ್ರ ಅವಳ ಮುಗ್ಧ ಸೌಂದರ್ಯಕ್ಕೆ ನಿಂತಲ್ಲೇ ಮನಸೋಲುತ್ತಾನೆ. ಆಕೆಯನ್ನೇ ನೋಡುತ್ತಿರುತ್ತಾನೆ. ಈ ವೇಳೆ ಭದ್ರ ಕನಸಿನ ಲೋಕಕ್ಕೆ ಹೋಗಿದ್ದು, ಕೈಯಲ್ಲಿ ತಾಳಿ ಹಿಡಿದುಕೊಂಡು ನೋಡಿದಾಗ ಎದುರಿಗೆ ವಿದ್ಯಾ ಕಾಣುತ್ತಾಳೆ. ಅದೇ ಕನಸ್ಸಿನಲ್ಲಿ ತೇಲಾಡುತ್ತಿದ್ದ ಭದ್ರನನ್ನು ಕಂಡು ತಂದೆ ಮಗ ಎಂದು ಕೂಗುತ್ತಾರೆ. ಅಲ್ಲದೇ ಬೇಗ ಬೇಗ ಎಡೆಗಳನ್ನು ಎತ್ತಿ ಸ್ವಚ್ಛ ಮಾಡುವಂತೆ ಹೇಳುತ್ತಾರೆ. ಈ ವೇಳೆ ಭದ್ರ, ವಿದ್ಯಾಳ ಗುಂಗಿನಲ್ಲೇ ಬುಟ್ಟಿಯಲ್ಲಿದ್ದ ಎಲೆಗಳನ್ನು ಮತ್ತೆ ಟೇಬಲ್ ಮೇಲೆ ಇಡುತ್ತಾನೆ. ಇದರಿಂದ ತಲೆ ಕೆಡಿಸಿಕೊಂಡ ಕ್ವಾಟ್ಲೆ ಅಣ್ತಮ್ಮ ಟೇಬಲ್ ಮೇಲಿರುವ ಎಲೆಗಳನ್ನು ತೆಗೆದು ಬುಟ್ಟಿಗೆ ಹಾಕು ಎಂದು ಭದ್ರನನ್ನು ಎಚ್ಚರಿಸುತ್ತಾನೆ. ಈ ಸಂಚಿಕೆ ದೃಶ್ಯಗಳು ಪ್ರೇಕ್ಷಕರ ಮನಸ್ಸು ಗೆದ್ದಿದ್ದು, ವಿದ್ಯಾಳ ನಮ್ಮ ಗೋಪಾಲ ಮ್ಯಾ...ಮ್ಯಾ..ಅಂತಿದ್ದ ಎನ್ನುವ ಡೈಲಾಗ್ ಸಖತ್ ವೈರಲ್ ಆಗುತ್ತಿದೆ.
ಕಥೆಯ ಆಯ್ಕೆಯಲ್ಲೇ ಪ್ರೇಕ್ಷಕರ ಮನಸ್ಸು ಗೆದ್ದ ಮುದ್ದು ಸೊಸೆ ಕಥೆ
ಲಕ್ಷ್ಮಿ ಬಾರಮ್ಮ ಧಾರಾವಾಹಿ ಬಳಿಕ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮುದ್ದು ಸೊಸೆ ಧಾರಾವಾಹಿ ಆರಂಭವಾಯಿತು. ಪ್ರೋಮೋ ಮೂಲಕವೇ ಪ್ರೇಕ್ಷಕರ ಮನಸ್ಸು ಗೆದ್ದಿದ್ದ ಮುದ್ದು ಸೊಸೆ ಧಾರಾವಾಹಿ, ಡಾಕ್ಟರ್ ಆಗಬೇಕು ಎಂಬ ಕನಸನ್ನು ಕಾಣುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿ ವಿದ್ಯಾ, ಶಾಲೆಯಿಂದ ಹಸೆಮಣೆ ಏರಿದ ಕಥೆಯಾಗಿದೆ. ಓದಿ ಸಾಧಿಸಬೇಕು ಎಂದು ಬೆಟ್ಟದಷ್ಟು ಕನಸು ಹೊತ್ತಿರುವ ವಿದ್ಯಾಳನ್ನು ದೊಡ್ಡ ಮನೆಗೆ ಮದುವೆ ಮಾಡಿಕೊಡಲು ಸಜ್ಜಾದ ಪೋಷಕರು, ತನ್ನನ್ನೇ ಮದುವೆಯಾಗಬೇಕು ಎಂದು ನಿರ್ಧರಿಸಿರುವ ಭದ್ರ ಜೊತೆಗೆ ಆತನ ಪ್ರೀತಿ. ಈ ಎಲ್ಲಾ ಕೋಟೆಗಳ ಮಧ್ಯೆ ವಿದ್ಯಾ, ಡಾಕ್ಟರ್ ಆಗಬೇಕು ಎನ್ನುವ ತನ್ನ ಕನಸನ್ನು ಹೇಗೆ ಕಾಪಾಡಿಕೊಳ್ಳುತ್ತಾಳೆ ಎನ್ನುವುದೇ ಮುದ್ದು ಸೊಸೆಯ ಕಥಾ ಹಂದರವಾಗಿದೆ.












Click it and Unblock the Notifications