'ಪ್ರಜ್ವಲ್ ದೇವರಾಜ್ ಇನ್ನಿಲ್ಲ': ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳು
ಸಾಮಾಜಿಕ ಜಾಲತಾಣಗಳು ಎಷ್ಟು ಉಪಯೋಗಕಾರಿಯೋ ಅಷ್ಟೇ ಅಪಾಯಕಾರಿ. ಎಷ್ಟೋ ಜನ ಸಾಮಾಜಿಕ ಜಾಲತಾಣಗಳನ್ನೇ ಬಳಸಿಕೊಂಡು ಜೀವನ ಕಟ್ಟಿಕೊಂಡಿದ್ದರೆ, ಇನ್ನೂ ಕೆಲವು ಕಿಡಿಗೇಡಿಗಳು ಇದನ್ನು ದುರುಪಯೋಗ ಪಡಿಸಿಕೊಂಡು ಬೇರೆಯವರ ಮನಸ್ಥಿತಿಯನ್ನು ಹಾಳು ಮಾಡುತ್ತಿವೆ. ಇತ್ತೀಚಿಗೆ ಸಾಮಾಜಿಕ ಜಾಲತಾಣಗಳ ದುರುಪಯೋಗ ಹೆಚ್ಚಾಗುತ್ತಿದೆ.
ಡೀಪ್ ಫೇಕ್ ವಿಡಿಯೋಗಳು, ಸುಳ್ಳ ಸುದ್ದಿಗಳು, ಕೆಟ್ಟ ಟ್ರೋಲ್‌ಗಳು, ಫೋಟೋಗಳನ್ನು ಅಶ್ಲೀಲವಾಗಿ ಬಳಸಿಕೊಳ್ಳುವುದು ಹೀಗೆ ಸಾಮಾಜಿಕ ಜಾಲತಾಣಗಳಿಂದಾಗುವ ಅವಾಂತರ ಒಂದೆರೆಡಲ್ಲ. ಸಿನಿಮಾ ನಟ-ನಟಿಯರು ಇದಕ್ಕೆ ಹೊರತಾಗಿಲ್ಲ. ಸಿನಿಮಾ ನಟಿಯರ ಡೀಪ್ ಫೇಕ್ ವಿಡಿಯೋಗಳನ್ನು ಸೃಷ್ಟಿ ಮಾಡುತ್ತಿದ್ದರೆ, ನಟ-ನಟಿಯರ ಬಗ್ಗೆ ಇಲ್ಲ ಸಲ್ಲದ ಸುಳ್ಳು ಸುದ್ದಿಗಳನ್ನು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದಾರೆ. ಇದೀಗ ಈ ಬಿಸಿ ಕನ್ನಡ ಚಿತ್ರರಂಗದ ನಟ ಪ್ರಜ್ವಲ್ ದೇವರಾಜ್ ಅವರಿಗೆ ತಟ್ಟಿದೆ.

ಕೆಲವು ಕಿಡಿಗೇಡಿಗಳು ಸೋಶಿಯಲ್ ಮೀಡಿಯಾದಲ್ಲಿ ಪ್ರಜ್ವಲ್ ದೇವರಾಜ್ ಫೋಟೋವನ್ನು ದುರ್ಬಳಕೆ ಮಾಡಿಕೊಂಡು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. 'ಪ್ರಜ್ವಲ್ ದೇವರಾಜ್ ಇನ್ನಿಲ್ಲ. ಓಂ ಶಾಂತಿ' ಎಂಬ ಕ್ಯಾಪ್ಷನ್ನೊಂದಿಗೆ ಪ್ರಜ್ವಲ್ ದೇವರಾಜ್ ಅವರ ಫೋಟೋವನ್ನು ಹಾಕಿ ವಿಡಿಯೋ ವೈರಲ್ ಮಾಡುತ್ತಿದ್ದಾರೆ. ಇದೊಂದು ಶುದ್ಧ ಸುಳ್ಳು ಸುದ್ದಿಯಾಗಿದೆ.
ಪ್ರಜ್ವಲ್ ದೇವರಾಜ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಅವರ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಈ ವಿಚಾರ ಅವರ ಕುಟುಂಬದವರ ಗಮನಕ್ಕೂ ಬಂದಿದ್ದು, ಸುಳ್ಳು ಸುದ್ದಿಯ ಬಗ್ಗೆ ಕುಟುಂಬದವರು ಬೇಸರ ವ್ಯಕ್ತಪಡಿಸಿದ್ದಾರೆ.
'ಪ್ರಜ್ವಲ್ ದೇವರಾಜ್ ಆರೋಗ್ಯವಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಪ್ರಜ್ವಲ್ ಅವರ ಫೋಟೋಗಳನ್ನು ದುರ್ಬಳಕೆ ಮಾಡಲಾಗಿದೆ. ನಟನ ಬಗ್ಗೆ ಈ ರೀತಿಯ ವದಂತಿಗಳು ಸಲ್ಲದು. ಇದರಿಂದ ಕುಟುಂಬಸ್ಥರು ಹಾಗೂ ಅಭಿಮಾನಿಗಳಲ್ಲಿ ಆತಂಕ ಉಂಟಾಗುತ್ತದೆ. ಪ್ರಜ್ವಲ್ ಕ್ಷೇಮವಾಗಿ ಇದ್ದಾರೆ. ಇದು ಸುಳ್ಳು ಸುದ್ದಿ' ಎಂದು ಪ್ರಜ್ವಲ್ ದೇವರಾಜ್ ಅವರ ಆಪ್ತರೊಬ್ಬರು ತಿಳಿಸಿದ್ದಾರೆ.
ಸದ್ಯ ಪ್ರಜ್ವಲ್ ಅಭಿಮಾನಿಗಳು ನಿಟ್ಟುಸಿರುಬಿಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ಆಗ್ರಹಿಸಿದ್ದಾರೆ.












Click it and Unblock the Notifications