ಚಿರು ಹೋದ ಮೇಲೆ ನಗುವುದಕ್ಕೂ ಹೆದರುತ್ತಿದ್ದೆ- ನಟಿ ಮೇಘನಾ ರಾಜ್
ಯುವ ಸಾಮ್ರಾಟ್ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ಕನ್ನಡ ಚಿತ್ರರಂಗದ ಕ್ಯೂಟ್ ಕಪಲ್. ಅದ್ಯಾವ ಕೆಟ್ಟ ದೃಷ್ಟಿ ಈ ಜೋಡಿಯ ಮೇಲೆ ಬಿತ್ತೋ ಚಿರಂಜೀವಿ ಸರ್ಜಾ ಪತ್ನಿ, ತುಂಬಿದ ಕುಟುಂಬ, ಅಪಾರ ಅಭಿಮಾನಿ ಬಳಗವನ್ನು ಅಗಲಿ ಇಹಲೋಕ ತ್ಯಜಿಸಿದರು. ಚಿರು ಅವರನ್ನು ಕಳೆದುಕೊಂಡ ಮೇಲೆ ಜೀವನ ಹೇಗಾಯಿತು? ಮತ್ತೆ ಕಂಬ್ಯಾಕ್ ಆಗಿದ್ದೇಗೆ ಎನ್ನುವುದರ ಬಗ್ಗೆ ಮೇಘನಾ ರಾಜ್ ಗೋಲ್ಡ್ ಕ್ಲಾಸ್ ವಿತ್ ಮಯೂರ ವಿಶೇಷ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.
'ಚಿರು ಹೋಗುವಾಗ ನಾನು ನಾಲ್ಕು ತಿಂಗಳ ಗರ್ಭಿಣಿ. ನನಗೆ ಜನರ ಅನುಕಂಪ ಬೇಡ. ಅವರ ನಗು ಬೇಕು. ನನ್ನನ್ನು ನೋಡಿ ಜನ ಒಂದೊಳ್ಳೆ ನಗು ಕೊಡಬೇಕು. ಅನುಕಂಪ ಒಳ್ಳೆಯದೇ ಆದರೆ ಅದು ತುಂಬಾ ಸಮಯ ಇರುವುದಿಲ್ಲ. ಎಷ್ಟು ದಿನ ಜನ ನಿಮ್ಮ ಬಗ್ಗೆ ಅನುಕಂಪ ತೋರಿಸಬಹುದು. ಅವರಿಗೆ ಅವರೇ ಆದ ಜೀವನ ಇದೆ. ಹೀಗಾಗಿ ನನಗೆ ಯಾರ ಅನುಕಂಪವೂ ಬೇಡ. ಬದಲಿಗೆ ನನ್ನನ್ನು ಅರ್ಥ ಮಾಡಿಕೊಳ್ಳಬೇಕು. ಒಂದು ವೇಳೆ ನಾನು ಒಳ್ಳೆಯದು ಮಾಡಿದರೆ ಅದನ್ನು ನೀವು ಕಲಿತುಕೊಂಡು ಮಾಡಿ'ಎಂದರು.

'ಆ ಸಮಯದಲ್ಲಿ ತುಂಬಾ ಜನ ಅನುಕಂಪ ತೋರಿಸಿರಬಹುದು. ಆ ಸಮಯದಲ್ಲಿ ನನ್ನನ್ನು ಹೇಗೆ ಮಾತನಾಡಿಸಬೇಕು ಎನ್ನುವುದು ಗೊತ್ತಾಗುತ್ತಿರಲಿಲ್ಲ. ರಾಯನ್ ನನ್ನ ಜೀವನದಲ್ಲಿ ಬರದೇ ಇದ್ದರೆ ನಾನು ಮತ್ತೆ ಮೊದಲಿನಂತೆ ಆಗುತ್ತಿರಲಿಲ್ಲ. ಈ ದುರ್ಘಟನೆ ಆದ ಮೇಲೆ ನನಗೆ ಮೊದಲು ಬಂದ ಯೋಚನೆ ಅಂದರೆ ನನ್ನ ಮಗುವನ್ನು ನಾನು ಉಳಿಸಿಕೊಳ್ಳಬೇಕು. ಅದೊಂದೇ ನನ್ನ ತಲೆಗೆ ಬಂದಿದ್ದು'.
'ರಾಯನ್ ನನ್ನ ಜೀವನದಲ್ಲಿ ಇಲ್ಲದೇ ಇದ್ದಿದ್ದರೆ ನಾನೇನು ಮಾಡುತ್ತಿದೆ ಎನ್ನುವುದನ್ನು ನಾನು ಈಗಲೂ ಯೋಚಿಸುತ್ತೇನೆ. ರಾಯನ್‌ನಿಂದ ನಾನು ಇಂದು ಖುಷಿಯಾಗಿದ್ದೇನೆ. ಜನ ಏನೇ ಅಂದರೂ ನಾನು ಖುಷಿಯಾಗಿರಬೇಕು ಎಂದು ನಿರ್ಧರಿಸಿದ್ದೇನೆ. ಮೊದಲು ನನಗೆ ನಗಲು ಭಯ ಆಗುತ್ತಿತ್ತು. ಈ ಘಟನೆಯಾಗಿ ಕೆಲವು ತಿಂಗಳು ಆದ ಮೇಲೆ ನನ್ನ ಸ್ನೇಹಿತರು ಮನೆಗೆ ಬಂದಾಗ ಏನೋ ಒಂದು ತಮಾಷೆಯ ಘಟನೆ ನಡೆಯಿತು. ನಾನು ಎಷ್ಟು ನಕ್ಕಿದ್ದೇನೆ ಎಂದರೆ, ಆ ರೀತಿ ನಾನು ನಗದೇ ಬಹಳ ಸಮಯವಾಗಿತ್ತು'.

'ಎಷ್ಟು ನಕ್ಕಿದ್ದೇನೆ ಅಂದರೆ ಈಗಲೂ ಅದನ್ನು ನೆನಪಿಸಿಕೊಳ್ಳುತ್ತೇನೆ ಅಷ್ಟರ ಮಟ್ಟಿಗೆ ನಕ್ಕಿದ್ದೇನೆ ಅವತ್ತು. ಆಗ ನನಗೆ ಗೊತ್ತಾಯ್ತು ನಕ್ಕು ಮನಸ್ಸಿನ ಭಾರವನ್ನು ಹೊರ ಹಾಕಬಹುದು ಎಂದು. ನಾನು ಮೊದಲೂ ನಗುತ್ತಿದೆ ಆದರೆ ಆ ರೀತಿ ಮೈ ಮರೆತು ನಗುವುದನ್ನು ನಾನು ಮಾಡಿರಲಿಲ್ಲ. ಆಗ ನನಗೆ ಗೊತ್ತಾಯ್ತು, ನಮ್ಮ ಜೊತೆ ಏನಿದೆ ಅದರೊಂದಿಗೆ ನಾವು ಖುಷಿಯಾಗಿರಬೇಕು ಎಂದು. ಈಗ ನನ್ನ ಜೊತೆ ನನ್ನ ಮಗ ಇದ್ದಾನೆ. ನಾನೇ ಖುಷಿಯಾಗಿಲ್ಲ ಅಂದ ಮೇಲೆ ಅದು ಅವನ ಮೇಲೆ ಪರಿಣಾಮ ಬೀರುತ್ತದೆ' ಎಂದರು.
'ಅವನನ್ನು ಈ ಜಗತ್ತಿಗೆ ಕರೆದುಕೊಂಡು ಬಂದು ಖುಷಿಯಾಗಿ ಇಡದಿದ್ದರೆ ಹೇಗೆ. ನನಗೆ ನೋವಿದೆ ಎಂದು ನನ್ನ ಮಗನೂ ಅದನ್ನು ಅನುಭವಿಸಬೇಕು ಅಂದರೆ ಅದು ನಿಜಕ್ಕೂ ಅನ್ಯಾಯ. ನಾನು ನನ್ನ ಮಗನಿಗೆ ಒಳ್ಳೆಯ ತಾಯಾಗಬೇಕು. ನಾನು ಖುಷಿಯಾಗಿದ್ದರೆ ಅವನು ಖುಷಿಯಾಗಿರುತ್ತಾನೆ. ಹೀಗಾಗಿ ನಾನೀಗ ಖುಷಿಯಾಗಿದ್ದೇನೆ' ಎಂದು ಹೇಳಿದರು.

ಇನ್ನು ತಮ್ಮ ನಂಬಿಕೆ ಬಗ್ಗೆ ಮಾತನಾಡಿದ ಮೇಘನಾ ರಾಜ್, 'ನಾನು ದೇವರಲ್ಲಿ ನಂಬಿಕೆ ಇಟ್ಟಿರುವಂತಹ ವ್ಯಕ್ತಿ. ನಾನು ದೇವರನ್ನು ತುಂಬಾ ನಂಬುತ್ತೇನೆ. ನಾನು ಇಲ್ಲಿ ಯಾವುದೇ ಧರ್ಮವನ್ನು ಮಧ್ಯೆ ಎಳೆದು ತರುವುದಿಲ್ಲ. ನಾನು ಪ್ರತಿ ದಿನ ಪ್ರಾರ್ಥನೆ ಮಾಡುತ್ತೇನೆ. ನಾನು ತುಂಬಾ ಅದೃಷ್ಟವಂತೆ ಯಾಕೆಂದರೆ ನಾನು ಹುಟ್ಟಿದಾಗಿನಿಂದ ಎರಡೂ ಧರ್ಮದ ನಂಬಿಕೆಯನ್ನು ಕಂಡವಳು. ನನ್ನ ಅಮ್ಮ ಕ್ರಿಶ್ಚಿಯನ್ ನನ್ನ ತಂದೆ ಅಯ್ಯಂಗಾರ್. ಅವರಿಬ್ಬರು ಯಾವತ್ತೂ ನನ್ನ ಮೇಲೆ ಧರ್ಮದ ನಂಬಿಕೆಯನ್ನು ಹೇರಿಲ್ಲ'.
'ನಾನು ಎರಡೂ ಧರ್ಮವನ್ನು ಆಚರಿಸುತ್ತೇನೆ. ನಾನು ಕೆಲವೊಮ್ಮೆ ಒಬ್ಬ ದೇವರನ್ನು ಪ್ರಾರ್ಥಿಸಿದರೆ, ಕೆಲವೊಮ್ಮೆ ತುಂಬಾ ದೇವರನ್ನು ಪ್ರಾರ್ಥಿಸುತ್ತೇನೆ. ಹಾಗಂತ ನಾನು ಯಾವುದೋ ಒಂದು ಧರ್ಮವನ್ನು ಪ್ರಚಾರ ಮಾಡಲ್ಲ. ನಾನು ಆ ರೀತಿಯ ವ್ಯಕ್ತಿ ಅಲ್ಲವೇ ಅಲ್ಲ. ಚಿರು ಕೂಡ ಇದೇ ರೀತಿಯ ಮನಸ್ಥಿತಿ ಇರುವ ವ್ಯಕ್ತಿಯಾಗಿದ್ದರು. ಅವರು ಮೊದಲು ಮನುಷ್ಯರಿಗೆ ಬೆಲೆ ಗೌರವ ಕೊಡುತ್ತಿದ್ದರು'.
'ನಾನು ಯಾವಾಗಲೂ ಒಂದು ಗಮನಿಸುತ್ತಿದ್ದೆ ಚಿರು ಯಾವತ್ತೂ ಯಾರನ್ನೂ ಯಾವ ಧರ್ಮ, ಯಾವ ಜಾತಿ ಎಂದು ಕೇಳಿಲ್ಲ. ಚಿರು ಕೂಡ ದೇವರನ್ನು ತುಂಬಾ ನಂಬುತ್ತಿದ್ದರು. ಹಾಗಂತ ಎಂದೂ ಅದರ ಬಗ್ಗೆ ಎಲ್ಲಾ ಮಾತನಾಡಿದವರಲ್ಲ. ಇದರಿಂದ ನಾವಿಬ್ಬರು ಒಂದೇ ರೀತಿಯ ಮನಸ್ಥಿತಿ ಎನ್ನುವುದು ಗೊತ್ತಾಗುತ್ತದೆ' ಎಂದರು.
'ಚಿರು ಹೋದ ಮೇಲೆ ಎರಡೂ ಕುಟುಂಬಗಳ ಸ್ಥಿತಿ ಹೇಗಿತ್ತು ಎಂದರೆ ಎಲ್ಲರಿಗೂ ಚಿರು ಬೇಕಿತ್ತು, ಯಾರಿಗೆ ಚಿರು ಬಗ್ಗೆ ಹೆಚ್ಚು ಗೊತ್ತು? ಯಾರು ಚಿರು ಅನ್ನು ಹೆಚ್ಚು ಪ್ರೀತಿಸುತ್ತಾರೆ. ಚಿರು ಯಾರಿಗೆ ಮುಖ್ಯ? ಎನ್ನುವುದು ಇತ್ತು. ನನಗೆ ಆಗ ಅನಿಸಿತು ಬದುಕಿದರೆ ಚಿರು ತರ ಬದುಕಬೇಕು. ಯಾಕೆಂದರೆ ಎಲ್ಲರಿಗೂ ಚಿರು ಬೇಕು. ಚಿರುವನ್ನು ಎಲ್ಲರೂ ಎಷ್ಟು ಇಷ್ಟಪಡುತ್ತಾರೆ ಅನಿಸಿಬಿಡ್ತು. ಎಲ್ಲರಿಗೂ ಶಾಕ್‌ನಿಂದ ಹೊರಬರಲು ಸ್ವಲ್ಪ ಸಮಯ ತೆಗೆದುಕೊಂಡಿತು. ಕೊನೆಯಲ್ಲಿ ಎರಡೂ ಕುಟುಂಬಗಳ ಮನಸ್ಥಿತಿಯನ್ನು ಸರಿದೂಗಿಸಲು ರಾಯನ್‌ನೇ ಬರಬೇಕಾಯಿತು' ಎಂದು ಹೇಳಿದರು.
'ನನ್ನ ಪ್ರಕಾರ ರಾಯನ್ ನಮ್ಮ ಫ್ಯಾಮಿಲಿಯಲ್ಲಿ glue ಇದ್ದ ಹಾಗೆ. ರಾಯನ್ ಬಂದ ಮೇಲೆ ತುಂಬಾ ಬದಲಾವಣೆ ಆಯ್ತು ಕುಟುಂಬದಲ್ಲಿ. ನಾವು ಮೊದಲಿದ್ದಕ್ಕಿಂತ ಇನ್ನಷ್ಟು ಹೆಚ್ಚು ಕ್ಲೋಸ್ ಆದೆವು. ಅಲ್ಲಿಯವರೆಗೂ ತುಂಬಾ ಗೊಂದಲ ಇತ್ತು. ಚಿರು ಅಗಲಿದ ಮೇಲೆ ರಾಯನ್ ಬರುವ ತನಕ ಎಲ್ಲರೂ ಸಂಬಂಧಗಳನ್ನು ಹೊಂದಾಣಿಕೆ ಮಾಡಿಕೊಳ್ಳಲು ಸೆಣಸಾಡುತ್ತಿದ್ದೇವು. ಪರಿಸ್ಥಿತಿ ಸಹ ಹಾಗಿತ್ತು. ಇಲ್ಲಿ ಯಾರನ್ನೂ ದೂರುವುದಿಲ್ಲ. ಅಂತಹ ಸಮಯದಲ್ಲಿ ಅಂತಹ ಪರಿಸ್ಥಿತಿ ಸಾಮಾನ್ಯ. ರಾಯನ್ ಬಂದ ಅಂದ ತಕ್ಷಣ ನಾವೆಲ್ಲರೂ ಒಂದಾದೆವು. ರಾಯನ್ ಎಂಟ್ರಿ ಆಗಿದ ತಕ್ಷಣ ಫ್ಯಾಮಿಲಿಯಲ್ಲಿ ಸೆಲೆಬ್ರೆಷನ್ ಶುರುವಾಯಿತು' ಎಂದು ರಾಯನ್ ರಾಜ್ ಸರ್ಜಾ ಆಗಮನದಿಂದ ಆದ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ.












Click it and Unblock the Notifications