Manjummel Boys on OTT: ಕೊನೆಗೂ ಒಟಿಟಿಗೆ ಬಂತು ಸೂಪರ್ ಹಿಟ್ ಮಂಜುಮ್ಮೆಲ್ ಬಾಯ್ಸ್, ಕನ್ನಡದಲ್ಲೂ ನೋಡಬಹುದು!
ಸೌಬಿನ್ ಶಾಹಿರ್, ಶ್ರೀನಾಥ್ ಭಾಸಿ, ಬಾಲು ವರ್ಗೀಸ್ ಮತ್ತು ಗಣಪತಿ ಅಭಿನಯಿಸಿರುವ ಚಿದಂಬರಂ ಅವರ ಹಿಟ್ ಮಲಯಾಳಂ ಚಿತ್ರ ಮಂಜುಮ್ಮೆಲ್ ಬಾಯ್ಸ್ ಕೊನೆಗೂ ಒಟಿಟಿಗೆ ಬರುತ್ತಿದೆ. ಇಷ್ಟು ದಿನ ಇವತ್ತು ಬರುತ್ತೆ, ನಾಳೆ ಬರುತ್ತೆ ಎಂದು ಕಾಯುತ್ತಿದ್ದ ಸಿನಿ ಪ್ರೇಮಿಗಳಿಗೆ ಅಂತಿಮವಾಗಿ ಸಿಹಿ ಸುದ್ದಿ ಸಿಕ್ಕಿದೆ.
ಕೇರಳದಲ್ಲಿ ಮಾತ್ರವಲ್ಲದೆ ಇತರ ರಾಜ್ಯಗಳಲ್ಲಿ ಉತ್ತಮ ವಿಮರ್ಶೆಗಳನ್ನು ಪಡೆದ ಈ ಚಿತ್ರವು ನೈಜ ಕಥೆಯನ್ನು ಆಧರಿಸಿದ ಥ್ರಿಲ್ಲರ್ ಸಿನಿಮಾವಾಗಿದೆ. ದೊಡ್ಡ ದೊಡ್ಡ ನಟರು, ಸ್ಟಾರ್ ನಿರ್ದೇಶಕರು ಈ ಸಿನಿಮಾವನ್ನು ಬಾಲಿವುಡ್ ಚಿತ್ರಗಳೊಂದಿಗೆ ಹೋಲಿಸಿ, ಹಿಂದಿ ಚಿತ್ರರಂಗವು 'ಇಷ್ಟು ಹಿಂದುಳಿದಿದೆ' ಎಂದು ಹೇಳಿದ್ದಾರೆ.

ಒಟಿಟಿಯಲ್ಲಿ ಮಂಜುಮ್ಮೆಲ್ ಬಾಯ್ಸ್
ಮಲಯಾಳಂ ಸಿನಿಮಾ ಮಂಜುಮ್ಮೆಲ್ ಬಾಯ್ಸ್ ಸಕತ್ ಹೈಪ್ ಕ್ರಿಯೆಟ್ ಮಾಡಿದ ಸಿನಿಮಾಗಳಲ್ಲಿ ಒಂದು. ಇದು 8.6 IMDb ರೇಟಿಂಗ್ ಅನ್ನು ಹೊಂದಿದೆ. ಚಿತ್ರವು ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಮಲಯಾಳಂ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲಿ ಸ್ಟ್ರೀಮ್ ಆಗಲಿದೆ. ಮೇ 5 ರಿಂದ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಬಹು ಭಾಷೆಗಳಲ್ಲಿ ಸ್ಟ್ರೀಮ್ ಆಗಲಿದೆ.
ಈ ಚಿತ್ರವು 2006 ರಲ್ಲಿ ತಮಿಳುನಾಡಿನ ಕೊಡೈಕೆನಾಲ್‌ನ ಕತೆ ಹೇಳುತ್ತದೆ. ಕಮಲ್ ಹಾಸನ್ ಅವರ 1991 ರ ಚಲನಚಿತ್ರದ ನಂತರ ಪ್ರಸಿದ್ಧ ಗುಣಾ ಗುಹೆಗಳಿಗೆ ಭೇಟಿ ನೀಡುವ ಸ್ನೇಹಿತರ ಗುಂಪಿನ ಕಥೆಯನ್ನು ತೆರೆಯ ಮೇಲೆ ತಂದಿಡುತ್ತದೆ. ಸರ್ವೈವಲ್ ಥ್ರಿಲ್ಲರ್ ಸಿನಿಮಾದಲ್ಲಿ ಕಂದಕದಲ್ಲಿ ಬಿದ್ದ ಸ್ನೇಹಿತನನ್ನು ಕಠಿಣ ಪರಿಸ್ಥಿತಿಯಿಂದ ರಕ್ಷಿಸಲು ಸ್ನೇಹಿತರ ಗುಂಪು ಮಾಡುವ ಸಾಹಸಗಳೇ ಸಿನಿಮಾದ ಜೀವಾಳ. ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ಗಳಿಕೆ ಕಂಡಿದೆ.

ಮಂಜುಮ್ಮೆಲ್ ಬಾಯ್ಸ್ ಫೆಬ್ರವರಿ 22 ರಂದು ಮಲಯಾಳಂ ಭಾಷೆಯಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಮಲಯಾಳಂ ಮತ್ತು ತಮಿಳಿನಲ್ಲಿ ದೊರೆತ ಪ್ರತಿಕ್ರಿಯೆಯೊಂದಿಗೆ ಮಂಜುಮ್ಮೆಲ್ ಬಾಯ್ಸ್ ತೆಲುಗಿನಲ್ಲೂ ಬಿಡುಗಡೆಯಾಗಿ ಮೆಚ್ಚುಗೆ ಪಡೆಯಿತು. ಈ ಚಿತ್ರ ತೆಲುಗಿನಲ್ಲಿ ಏಪ್ರಿಲ್ 6 ರಂದು ಬಿಡುಗಡೆಯಾಯಿತು.
ಸಂತಸ ಹಂಚಿಕೊಂಡ ನಿರ್ದೇಶಕ ಚಿದಂಬರಂ
ಚಿತ್ರಕ್ಕೆ ಸಿಕ್ಕಿರುವ ಪ್ರತಿಕ್ರಿಯೆಯಿಂದ ನಾನು ತುಂಬಾ ಸಂತೋಷಗೊಂಡಿದ್ದೇನೆ ಮತ್ತು ರೋಮಾಂಚನಗೊಂಡಿದ್ದೇನೆ ಎಂದು ನಿರ್ದೇಶಕ ಚಿದಂಬರಂ ತಿಳಿಸಿದ್ದಾರೆ. "ಮಂಜುಮ್ಮೆಲ್ ಬಾಯ್ಸ್ ಪಡೆದ ಪ್ರತಿಕ್ರಿಯೆಯಿಂದ ನಾನು ನಿಜವಾಗಿಯೂ ಸಂತೋಷದಲ್ಲಿ ಮುಳುಗಿದ್ದೇನೆ. ಎಲ್ಲಾ ಭಾಷೆಯ ಅಡೆತಡೆಗಳನ್ನು ಮೀರಿ ಸಾರ್ವತ್ರಿಕವಾಗಿ ಪ್ರತಿಧ್ವನಿಸುವ ಚಲನಚಿತ್ರವನ್ನು ರಚಿಸಲು ನಾವು ಹೊರಟಿದ್ದೇವು. ಭಾರತದಾದ್ಯಂತ ಪ್ರೇಕ್ಷಕರೊಂದಿಗೆ ಸಿನಿಮಾ ಕಟ್ಟಿಕೊಂಡ ಸಂಪರ್ಕ ನೋಡುವುದೇ ಅಪಾರವಾದ ಸಂತೋಷವನ್ನು ನೀಡುತ್ತದೆ" ಎಂದಿದ್ದಾರೆ.
ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುವುದರಿಂದ ಸಾಕಷ್ಟು ಪ್ರೀತಿಯನ್ನು ಪಡೆಯುತ್ತದೆ ಎಂದು ವಿಶ್ವಾಸವಿಟ್ಟುಕೊಂಡಿರುವುದಾಗಿ ಹೇಳಿದ್ದಾರೆ. "ಈಗ ಡಿಸ್ನಿ + ಹಾಟ್‌ಸ್ಟಾರ್ ವೇದಿಯೊಂದಿಗೆ ದೇಶಾದ್ಯಂತ ಪ್ರೇಕ್ಷಕರು ತಮ್ಮ ಆದ್ಯತೆಯ ಭಾಷೆಯಲ್ಲಿ ಚಲನಚಿತ್ರವನ್ನು ಪ್ರವೇಶಿಸಬಹುದು. ಪ್ರೇಕ್ಷಕರು ಅದೇ ಪ್ರೀತಿ ಮತ್ತು ಉತ್ಸಾಹದಿಂದ ಅದನ್ನು ಸ್ವೀಕರಿಸುತ್ತಾರೆ ಎಂದು ಭಾವಿಸುತ್ತೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications