Mahanati Deepika: ಬಹುಮಾನದ ಹಣಕ್ಕಾಗಿ ಸ್ಪರ್ಧೆಗಳಿಗೆ ಹೋಗ್ತಿದ್ದೆ, ಬಂದ ಹಣದಲ್ಲಿ ಫೀಸ್ ಕಟ್ಟುತ್ತಿದ್ದೆ!
ಜೀ ವಾಹಿನಿಯಲ್ಲಿ ಮಹಾನಟಿ ಸೀಸನ್-2 ಶುರುವಾಗಿದ್ದು, ಪ್ರತಿಭೆಗಳ ದಂಡು ಒಂದೆಡೆ ಸೇರಿದೆ. ಇತ್ತೀಚೆಗಷ್ಟೇ ಆಟ ಶುರು ಮಾಡಿರುವ ಸ್ಪರ್ಧಿಗಳ ಒಂದೊಂದೇ ಕಥೆಗಳು ಈ ಕಾರ್ಯಕ್ರಮದಲ್ಲಿ ತೆರೆದುಕೊಳ್ಳುತ್ತಿವೆ. ಪ್ರತಿ ಸ್ಪರ್ಧಿಯ ಬದುಕಿನ ಕಥೆಗಳು ಹೊರಬಂದು ವೇದಿಕೆಯಲ್ಲಿರುವವರನ್ನು ಕಣ್ಣೀರಿನಲ್ಲಿ ಮುಳುಗಿಸುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಅಂತಿಮವಾಗಿ 16 ಸ್ಪರ್ಧಿಗಳು ಮಹಾನಟಿ ವೇದಿಕೆಗೆ ಎಂಟ್ರಿ ನೀಡಿದ್ದಾರೆ. ಈ ಸೀಸನ್‌ನಲ್ಲಿ ತುಮಕೂರಿನ ದೀಪಿಕಾ ಕೂಡ ಎಲ್ಲರ ಗಮನ ಸೆಳೆದಿದ್ದಾರೆ. ಇವರು ತಮ್ಮ ಬದುಕಿನ ಕಥೆಯನ್ನು ಮಹಾನಟಿ ವೇದಿಕೆಯಲ್ಲಿ ಬಿಚ್ಚಿಟ್ಟಿದ್ದು, ಇದನ್ನು ಕೇಳಿದ ಎಲ್ಲರೂ ಕಣ್ಣೀರು ಹರಿಸಿದ್ದಾರೆ.
ಇತ್ತೀಚೆಗೆ ಮಹಾನಟಿ ಸ್ಪರ್ಧಿಗಳನ್ನು ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಗೆ ಕರೆದೊಯ್ದು ಫೋಟೋಶೂಟ್ ಮಾಡಿಸಲಾಗಿತ್ತು. ಈ ವೇಳೆ ದೀಪಿಕಾ ಅವರು ಗಗನಸಖಿಯಾಗಿ ಮಿಂಚಿದ್ದರು. ಆದರೆ ಈ ಅನುಭವ ಹಂಚಿಕೊಂಡ ದೀಪಿಕಾ ತನ್ನ ಬದುಕು ಹಾಗೂ ಬಡತನದ ಕಥೆಯನ್ನೂ ವೇದಿಕೆಯಲ್ಲಿದ್ದವರ ಮುಂದೆ ಹೇಳಿಕೊಂಡಿದ್ದಾರೆ. ಇದನ್ನು ಕಂಡು ನಿರೂಪಕಿ ಅನುಶ್ರೀ, ನಟಿ ನಿಶ್ವಿಕಾ ನಾಯ್ಡು ಸೇರಿ ಎಲ್ಲರೂ ಕಣ್ಣೀರಿಟ್ಟಿದ್ದಾರೆ.

ನಾನು ಓದುತ್ತಿದ್ದಾಗ ಯಾವುದಾದರೂ ಸ್ಪರ್ಧೆಗಳಿದ್ದರೆ, ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆ ಇದ್ರೆ ನಾನು ನನ್ನಲ್ಲಿ ಕಲೆ ಇದೆ ಎಂದು ಹೋಗುತ್ತಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಸ್ಪರ್ಧೆಯಲ್ಲಿ ಗೆದ್ದವರಿಗೆ ಪ್ರೈಸ್ ಮನಿ (ನಗದು ಬಹುಮಾನ) ಸಿಗುತ್ತೆ ಅಂತ ಹೋಗುತ್ತಿದ್ದೆ. ಸ್ಪರ್ಧೆಯಲ್ಲಿ ಗೆದ್ದರೆ 1,000 ರೂಪಾಯಿ ಹಾಗೂ 2,000 ರೂಪಾಯಿ ಕೊಡುತ್ತಿದ್ದರು. ಆ ಕಾರಣಕ್ಕಾಗಿ ನಾನು ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ. ಅದರಲ್ಲಿ ಬಂದ ಹಣದಲ್ಲಿ ಫೀಸ್ ಕಟ್ಟುತ್ತಿದ್ದೆ ಎಂದು ದೀಪಿಕಾ ಕಣ್ಣೀರು ಹಾಕಿದ್ದಾರೆ.
ಫೀಸ್ 4,000 ರೂಪಾಯಿ ಇದ್ರೆ, ಅಪ್ಪನ ಹತ್ತಿರ 2,000 ಅಂತ ಸುಳ್ಳು ಹೇಳಿ ಬಾಕಿ ಹಣವನ್ನು ನಾನೇ ಹಾಕೊಂಡು ಕಟ್ಟುತ್ತಿದ್ದೆ. ಎಲ್ಲರೂ ನನ್ನ ಗಂಡುಬೀರಿ ಅಂತಿದ್ರು, ಇವಳಿಗೆ ಯಾವುದೋ ನೋವಿಲ್ಲ, ಮನೆಯಲ್ಲಿ ಇವಳನ್ನ ಸ್ಟ್ರಿಕ್ಟ್ ಆಗಿ ಬೆಳೆಸಿಲ್ಲ ಅಂತೆಲ್ಲ ಮಾತನಾಡ್ತಿದ್ರು. ನಾನು ನನ್ನ ತಂದೆ ತಾಯಿಗೆ ಯಾವತ್ತಾದ್ರೂ ತಲೆ ಎತ್ತುವಂತ ಕೆಲಸ ಮಾಡ್ತೀನಿ ಅಂತ ಮಾತು ಕೊಟ್ಟಿದ್ದೆ. ಇವತ್ತು ಮಹಾನಟಿ ಮೂಲಕ ಅದು ನಡೆಯುತ್ತಿದೆ ಎಂದು ವೇದಿಕೆಗೆ ಕೈಮುಗಿದಿದ್ದಾರೆ.
ಅಮ್ಮ ಫ್ಯಾಕ್ಟರಿ ಕೆಲಸ, ಅಪ್ಪ ಗಾರೆ ಕೆಲಸ
ಇನ್ನು ದೀಪಿಕಾ ತಾಯಿ ಫ್ಯಾಕ್ಟರಿಯಲ್ಲಿ ಕಷ್ಟದ ಕೆಲಸ ಮಾಡುತ್ತಿದ್ದರೆ, ಅವರ ತಂದೆ ಗಾರೆ ಕೆಲಸ ಮಾಡುತ್ತಾರೆ ಎಂಬ ವಿಚಾರ ತಿಳಿಸಿದ್ದಾರೆ. ಇದನ್ನ ನೆನೆದು ದೀಪಿಕಾ ವೇದಿಕೆಯಲ್ಲಿ ಬಿಕ್ಕಳಿಸಿ ಅತ್ತಿದ್ದಾರೆ. ಇನ್ನು ಮುಂದೆ ನಮ್ಮ ಅಪ್ಪ ಹಾಗೂ ಅಮ್ಮನನ್ನ ಸಂತೋಷವಾಗಿ ನೋಡಿಕೊಳ್ಳುತ್ತೇನೆ. ಅವರು ಹೆಮ್ಮೆ ಪಡುವ ಕೆಲಸ ಮಾಡ್ತೀನಿ ಎಂದಿದ್ದಾರೆ. ದೀಪಿಕಾ ಅವರ ಬಡತನದ ಬದುಕು, ಜೀವದಲ್ಲಿ ಎದುರಿಸಿದ ಸಂಕಷ್ಟಗಳನ್ನು ಕೇಳಿ ಅನುಶ್ರೀ, ನಿಶ್ವಿಕಾ ನಾಯ್ಡು, ಇತರೆ ಸ್ಪರ್ಧಿಗಳು ಕೂಡ ಕಣ್ಣೀರಿಟ್ಟಿದ್ದಾರೆ. ಪಟ್ಟಿರುವ ಕಷ್ಟಕ್ಕೆ ನಿಮಗೆ ಒಳ್ಳೆಯದಾಗುತ್ತೆ ಹಲವರು ದೀಪಿಕಾಗೆ ಧೈರ್ಯದ ಮಾತುಗಳನ್ನಾಡಿದ್ದಾರೆ.












Click it and Unblock the Notifications