‘ಲವ್ ಮಾಕ್ಟೇಲ್ 3’ ಕಥೆ ವಿವಾದ ಸುಖಾಂತ್ಯ: ಫಿಲ್ಮ್ ಚೇಂಬರ್ ಸಭೆಯಲ್ಲಿ ಡಾರ್ಲಿಂಗ್ ಕೃಷ್ಣ-ಗುರು ದೇಶಪಾಂಡೆ ಸಂಧಾನ ಯಶಸ್ವಿ
ಕಳೆದ ಕೆಲವು ದಿನಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಸದ್ದು ಮಾಡುತ್ತಿದ್ದ 'ಲವ್ ಮಾಕ್ಟೇಲ್ 3' ಚಿತ್ರದ ಕಥೆಯ ಹಕ್ಕು ಹಾಗೂ ವೈಯಕ್ತಿಕ ಆರೋಪ-ಪ್ರತ್ಯಾರೋಪಗಳ ವಿವಾದಕ್ಕೆ ಈಗ ಅಧಿಕೃತವಾಗಿ ತೆರೆ ಬಿದ್ದಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (ಫಿಲ್ಮ್ ಚೇಂಬರ್) ಮಧ್ಯಸ್ಥಿಕೆಯಲ್ಲಿ ನಡೆದ ಸಂಧಾನ ಸಭೆಯಲ್ಲಿ ನಟ-ನಿರ್ದೇಶಕ ಡಾರ್ಲಿಂಗ್ ಕೃಷ್ಣ ಹಾಗೂ ನಿರ್ಮಾಪಕ ಗುರು ದೇಶಪಾಂಡೆ ನಡುವಿನ ಮುನಿಸು ಶಮನಗೊಂಡಿದೆ.
ವಿವಾದದ ಹಿನ್ನೆಲೆ ಏನು?
ಡಾರ್ಲಿಂಗ್ ಕೃಷ್ಣ ನಿರ್ದೇಶಿಸಿ ನಟಿಸಿರುವ 'ಲವ್ ಮಾಕ್ಟೇಲ್-3' ಚಿತ್ರದ ದ್ವಿತೀಯಾರ್ಧದಲ್ಲಿ ಬರುವ ಕೋರ್ಟ್ ರೂಂ ದೃಶ್ಯಗಳು ತಮ್ಮ ಕಥೆಯಿಂದ ಪ್ರೇರಿತವಾದವು ಎಂದು ಗುರು ದೇಶಪಾಂಡೆ ಮತ್ತು ನಿರ್ದೇಶಕ ರಾಘವೇಂದ್ರ ನಾಯ್ಕ್ ಆರೋಪಿಸಿದ್ದರು. ಈ ವಿವಾದವು ಸುದ್ದಿಗೋಷ್ಠಿಗಳ ಮೂಲಕ ವಿಕೋಪಕ್ಕೆ ಹೋಗಿತ್ತು. ಕೃಷ್ಣ ಅವರು ಗುರು ದೇಶಪಾಂಡೆ ಅವರ ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪಿಸಿದ್ದು ವಿವಾದಕ್ಕೆ ತುಪ್ಪ ಸುರಿದಂತಾಗಿತ್ತು. ಪ್ರತಿಯಾಗಿ ಡಾರ್ಲಿಂಗ್ ಕೃಷ್ಣ ಅವರು ಮಾನನಷ್ಟ ಮೊಕದ್ದಮೆ ಹೂಡುವ ಎಚ್ಚರಿಕೆಯನ್ನೂ ನೀಡಿದ್ದರು.

ಜಯಮಾಲಾ ಸಮ್ಮುಖದಲ್ಲಿ ಸಂಧಾನ
ಹಿರಿಯ ನಟಿ ಜಯಮಾಲಾ ಅವರ ಅಧ್ಯಕ್ಷತೆಯಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ಡಾರ್ಲಿಂಗ್ ಕೃಷ್ಣ, ಗುರು ದೇಶಪಾಂಡೆ ಹಾಗೂ ರಾಘವೇಂದ್ರ ನಾಯ್ಕ್ ಹಾಜರಿದ್ದು, ತಮ್ಮ ವಾದಗಳನ್ನು ಮಂಡಿಸಿದರು. ಸುದೀರ್ಘ ಚರ್ಚೆಯ ನಂತರ, ಇಬ್ಬರ ಚಿತ್ರಕಥೆಗಳು ಒಂದೇ ಘಟನೆಯಿಂದ ಸ್ಫೂರ್ತಿ ಪಡೆದಿದ್ದರೂ, ಅವುಗಳನ್ನು ನಿರೂಪಿಸಿದ ರೀತಿ ಮತ್ತು ಚಿತ್ರಕಥೆ ಸಂಪೂರ್ಣ ಭಿನ್ನವಾಗಿದೆ ಎಂಬ ತೀರ್ಮಾನಕ್ಕೆ ಬರಲಾಯಿತು.
ಕ್ಷಮೆ ಕೇಳಿದ ಡಾರ್ಲಿಂಗ್ ಕೃಷ್ಣ
ಸುದ್ದಿಗೋಷ್ಠಿಯ ಭರದಲ್ಲಿ ಗುರು ದೇಶಪಾಂಡೆ ಅವರ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಿದ್ದಕ್ಕೆ ಡಾರ್ಲಿಂಗ್ ಕೃಷ್ಣ ಅವರು ಸಭೆಯಲ್ಲಿ ಪಶ್ಚಾತ್ತಾಪ ವ್ಯಕ್ತಪಡಿಸಿ, ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. ಈ ಮೂಲಕ ವೈಯಕ್ತಿಕ ಕಿತ್ತಾಟಕ್ಕೆ ಬ್ರೇಕ್ ಬಿದ್ದಿದ್ದು, ಪ್ರಕರಣವು ಸೌಹಾರ್ದಯುತವಾಗಿ ಇತ್ಯರ್ಥಗೊಂಡಿದೆ. ರಾಘವೇಂದ್ರ ನಾಯ್ಕ್ ಅವರು 'ಕೂಡಲಸಂಗಮ' ಎಂಬ ಹೆಸರಿನಲ್ಲಿ ಈ ಕಥೆಯನ್ನು ಸಿನಿಮಾ ಮಾಡಲು ಯೋಜಿಸಿದ್ದರು. ಈಗ ವಿವಾದ ಬಗೆಹರಿದಿರುವುದರಿಂದ ಅವರು ತಮ್ಮದೇ ಆದ ಶೈಲಿಯಲ್ಲಿ ಅದೇ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮುಂದುವರಿಸುತ್ತಾರೆಯೇ ಎಂಬ ಕುತೂಹಲ ಸದ್ಯ ಗಾಂಧಿನಗರದಲ್ಲಿ ಮನೆಮಾಡಿದೆ. ಚಿತ್ರರಂಗದ ಹಿರಿಯರ ಹಸ್ತಕ್ಷೇಪದಿಂದಾಗಿ ಒಂದು ದೊಡ್ಡ ಕಾನೂನು ಸಮರ ತಪ್ಪಿದಂತಾಗಿದ್ದು, ಇಬ್ಬರು ಪ್ರತಿಭಾವಂತರು ಮತ್ತೆ ತಮ್ಮ ಕೆಲಸದತ್ತ ಗಮನಹರಿಸುವಂತಾಗಿದೆ.
ಫಿಲ್ಮ್ ಚೇಂಬರ್ ಪ್ರಕಟಣೆ
ಸ್ಯಾಂಡಲ್‌ವುಡ್‌ನ ಖ್ಯಾತ ನಟ ಹಾಗೂ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಅವರ 'ಲವ್ ಮಾಕ್ಟೇಲ್ 3' ಚಿತ್ರದ ಕಥೆಗೆ ಸಂಬಂಧಿಸಿದ ವಿವಾದವು ಈಗ ಅಧಿಕೃತವಾಗಿ ಸುಖಾಂತ್ಯ ಕಂಡಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಡಾ.ಜಯಮಾಲ ಅವರ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ, ಇಬ್ಬರ ನಡುವಿನ ಮನಸ್ತಾಪವನ್ನು ಬಗೆಹರಿಸಲಾಗಿದ್ದು, ಈ ಕುರಿತು ಮಂಡಳಿಯು ಅಧಿಕೃತ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದೆ.
ಸಭೆಯಲ್ಲಿ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು, ನಿರ್ಮಾಪಕರ ಸಂಘ ಹಾಗೂ ನಿರ್ದೇಶಕರ ಸಂಘದ ಅಧ್ಯಕ್ಷರು ಮತ್ತು ಮಾಜಿ ಅಧ್ಯಕ್ಷರು ಹಾಜರಿದ್ದರು. ವಿವಾದದ ಪ್ರಮುಖ ವ್ಯಕ್ತಿಗಳಾದ ಡಾರ್ಲಿಂಗ್ ಕೃಷ್ಣ, ನಿರ್ಮಾಪಕ ಗುರು ದೇಶಪಾಂಡೆ ಹಾಗೂ ಬರಹಗಾರ ರಾಘವೇಂದ್ರ ನಾಯಕ್ ಅವರು ಸಭೆಯಲ್ಲಿ ಉಪಸ್ಥಿತರಿದ್ದು, ತಮ್ಮ ವಾದಗಳನ್ನು ಮಂಡಿಸಿದರು. ಸಭೆಯ ಆರಂಭದಲ್ಲಿ ಅಧ್ಯಕ್ಷರು ಎಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಿ, ಸುದೀರ್ಘ ಚರ್ಚೆಯ ನಂತರ ಒಂದು ತೀರ್ಮಾನಕ್ಕೆ ಬಂದರು.

ಈ ವಿವಾದದ ಪ್ರಮುಖ ಅಂಶವೆಂದರೆ ಡಾರ್ಲಿಂಗ್ ಕೃಷ್ಣ ಅವರು ಸುದ್ದಿಗೋಷ್ಠಿಯಲ್ಲಿ ಗುರು ದೇಶಪಾಂಡೆ ಅವರ ಬಗ್ಗೆ ನೀಡಿದ್ದ ವೈಯಕ್ತಿಕ ಹೇಳಿಕೆಗಳು. ಈ ಹೇಳಿಕೆಗಳಿಂದ ಗುರು ದೇಶಪಾಂಡೆ ಅವರ ಮನಸ್ಸಿಗೆ ನೋವಾಗಿದ್ದನ್ನು ಗಮನಿಸಿದ ಸಭೆಯು, ಕೃಷ್ಣ ಅವರಿಂದ ಸ್ಪಷ್ಟನೆ ಕೋರಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಡಾರ್ಲಿಂಗ್ ಕೃಷ್ಣ ಅವರು, ಸಭೆಯಲ್ಲಿ ಗುರು ದೇಶಪಾಂಡೆ ಅವರ ಬಳಿ ವೈಯಕ್ತಿಕವಾಗಿ ಕ್ಷಮೆಯಾಚಿಸಿದರು. ಈ ಮೂಲಕ ಇಬ್ಬರ ನಡುವಿನ ವೈಯಕ್ತಿಕ ಮುನಿಸು ಶಮನಗೊಂಡಿತು.
ಇನ್ನು ಕಥೆಯ ಹಕ್ಕಿನ ಕುರಿತು ಚರ್ಚಿಸಿದ ಮಂಡಳಿಯು, ಇಬ್ಬರ ಚಿತ್ರಕಥೆಗಳನ್ನು ಸೂಕ್ಷ್ಮವಾಗಿ ಗಮನಿಸಿತು. ಈ ಕಥೆಯ ತಿರುಳನ್ನು ಇಬ್ಬರೂ ಒಂದೇ ಮೂಲದಿಂದ ಸ್ಫೂರ್ತಿ ಪಡೆದಿದ್ದರೂ, ಡಾರ್ಲಿಂಗ್ ಕೃಷ್ಣ ಅವರ 'ಲವ್ ಮಾಕ್ಟೇಲ್ 3' ಚಿತ್ರಕಥೆ ಮತ್ತು ಗುರು ದೇಶಪಾಂಡೆ ಅವರ ಬಳಿಯಿರುವ ಚಿತ್ರಕಥೆ ಸಂಪೂರ್ಣ ಭಿನ್ನವಾಗಿದೆ ಎಂಬ ನಿರ್ಧಾರಕ್ಕೆ ಬರಲಾಯಿತು. ಅಂತಿಮವಾಗಿ ಇವರಿಬ್ಬರ ಕಥೆಯೂ ಬೇರೆ ಬೇರೆಯಾಗಿರುವುದರಿಂದ ಯಾವುದೇ ಕಥೆ ಕಳವು ನಡೆದಿಲ್ಲ ಎಂದು ಮಂಡಳಿಯು ಪ್ರಕರಣವನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿತು ಎಂದು ಹೇಳಿದೆ.












Click it and Unblock the Notifications