Leelavathi: ಭಗವಂತ ನನ್ನ ಒಂಟಿ ಮಾಡಿಬಿಟ್ಟ: ಗದ್ಗದಿತರಾದ ವಿನೋದ್ ರಾಜ್
ಬೆಂಗಳೂರು, ಡಿಸೆಂಬರ್ 08: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ(86) ಇಂದು ಸಂಜೆ ನೆಲಮಂಗಲ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ನಟಿ ಲೀಲಾವತಿ ಕೆಲವು ತಿಂಗಳಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಕಳೆದ ಎರಡು ದಿನಗಳಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು, ಆದರೆ ಇಂದು ಮಧ್ಯಾಹ್ನ ದಿಢೀರ್ ಆರೋಗ್ಯದಲ್ಲಿ ಏರುಪೇರಾಗಿದ್ದು, ತಕ್ಷಣವೇ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಲೀಲಾವತಿ ನಿಧನರಾಗಿದ್ದಾರೆ. ಪುತ್ರ ವಿನೋದ್ ರಾಜ್ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ತಾಯಿಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನಟ ವಿನೋದ್ ರಾಜ್ ಆಸ್ಪತ್ರೆ ಎದುರೇ ಕುಸಿದು ಬಿದ್ದಿದ್ದಾರೆ. ಬಳಿಕ ತಾಯಿಯ ಅಂತಿಮ ಕಾರ್ಯದ ಬಗ್ಗೆ ಪೊಲೀಸರ ಜೊತೆ ಚರ್ಚಿಸಿದ್ದು, ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ. "ವಯೋಸಹಜದಿಂದ ಹೃದಯ ಸ್ತಂಭನ ಆಗಿಹೋಯ್ತು. ಭಗವಂತ ನನ್ನ ಒಂಟಿ ಮಾಡಿಬಿಟ್ಟ. ಅವರ ಆಸ್ಪತ್ರೆ ಉದ್ಘಾಟನೆ ಆಯ್ತು. ಅದು ಪುಣ್ಯದ ಕೆಲಸ. ಈ ಪೊಲೀಸರೇ ನನ್ನ ಜೊತೆಗಿದ್ದವರು. ನಮ್ಮ ಜೊತೆ ಇವರೆಷ್ಟು ಒದ್ದಾಡಿದರು. ಇವರೇ ನನಗೆ ಅಣ್ಣ ತಮ್ಮಂದಿರು" ಎಂದು ಕಣ್ಣೀರು ಹಾಕಿದರು.
ಲೀಲಾವತಿ ಚಿತ್ರರಂಗದ ಪಯಣ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯವರಾದ ಲೀಲಾವತಿ 1949ರಲ್ಲಿ ಶಂಕರ್ ಸಿಂಗ್ ಅವರ ನಾಗಕನ್ನಿಕ ಚಿತ್ರದಲ್ಲಿ ಸಖಿಯ ಪಾತ್ರದ ಮುಖಾಂತರ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಕನ್ನಡ ಮಾತ್ರವಲ್ಲ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆ ಸೇರಿದಂತೆ ಒಟ್ಟು 600 ಚಿತ್ರಗಳಲ್ಲಿ ನಟಿಸಿ ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿದ್ದರು. ಕರ್ನಾಟಕ ಸರ್ಕಾರ ಚಲನಚಿತ್ರರಂಗದ ಜೀವಮಾನ ಸಾಧನೆಗೆ ನೀಡುವ ಅತ್ತ್ಯುನ್ನತ ಪ್ರಶಸ್ತಿ ಡಾ. ರಾಜಕುಮಾರ್ ಪ್ರಶಸ್ತಿಯನ್ನು 1999-2000ದ ಸಾಲಿನಲ್ಲಿ ಲೀಲಾವತಿ ಅವರಿಗೆ ನೀಡಲಾಗಿತ್ತು. 2008ರಲ್ಲಿ ತುಮಕೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿತ್ತು.












Click it and Unblock the Notifications