ಕರ್ಣ ಧಾರಾವಾಹಿ ಮುಂದೂಡಿದ್ದೇಕೆ? ಕ್ಷಮೆ ಕೇಳಿ ಕಾರಣ ತಿಳಿಸಿದ ಕಿರಣ್ ರಾಜ್
ಜೀ ಕನ್ನಡ ವಾಹಿನಿಯಲ್ಲಿ ಎಲ್ಲರೂ ಕುತೂಹಲದಿಂದ ಎದುರು ನೋಡುತ್ತಿದ್ದ ಕರ್ಣ ಧಾರಾವಾಹಿ ನಿಗದಿತ ಸಮಯಕ್ಕೆ ಲಾಂಚ್ ಆಗಲೇ ಇಲ್ಲ. ನಟ ಕಿರಣ್ ರಾಜ್, ಭವ್ಯಾ ಗೌಡ ಸೇರಿ ದೊಡ್ಡ ತಾರಾಗಣವಿದ್ದ ಈ ಧಾರಾವಾಹಿ ಜೂನ್ 16ರಂದು ಸಂಜೆ 8 ಗಂಟೆಗೆ ಲಾಂಚ್ ಆಗುವುದಾಗಿ ವಾಹಿನಿ ಘೋಷಿಸಿತ್ತು. ಅಲ್ಲದೆ ಕರ್ಣ ಸೀರಿಯಲ್‌ನ ಪ್ರೋಮೋಗಳನ್ನು ಕೂಡ ವಾಹಿನಿ ಹಂಚಿಕೊಂಡಿತ್ತು. ಹಲವು ವರ್ಷಗಳ ಬಳಿಕ ಕಿರಣ್ ರಾಜ್ ಅವರನ್ನು ಮತ್ತೆ ಕಿರುತೆರೆಯಲ್ಲಿ ನೋಡಲು ಪ್ರೇಕ್ಷಕರು ಕಾದಿದ್ದರು. ಆದರೆ ಅಂದುಕೊಂಡ ಸಮಯಕ್ಕೆ ಕರ್ಣ ಧಾರಾವಾಹಿ ಶುರುವಾಗಲಿಲ್ಲ. ಇದರಿಂದ ಪ್ರೇಕ್ಷಕರು ಕೂಡ ಗೊಂದಲದಲ್ಲಿದ್ದಾರೆ. ಈ ಬಗ್ಗೆ ಖುದ್ದು ಕಿರಣ್ ರಾಜ್ ಪ್ರತಿಕ್ರಿಯಿಸಿದ್ದು, ಧಾರಾವಾಹಿ ಶುರುವಾಗದಿರುವುದಕ್ಕೆ ಕ್ಷಮೆ ಕೇಳಿ, ಕಾರಣವೂ ತಿಳಿಸಿದ್ದಾರೆ.
ಎಲ್ಲರಿಗೂ ನಮಸ್ಕಾರ, ನಾನು ಕರ್ಣನಾಗಿ ನಿಮ್ಮೆಲ್ಲರ ಮನೆಗೆ ಬರಬೇಕಿತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಇದಕ್ಕೆ ಮೊದಲಿಗೆ ನಾನು ಎಲ್ಲ ಪ್ರೇಕ್ಷಕರ ಕ್ಷಮೆ ಕೇಳುತ್ತೇನೆ. ನೀವು ಕೊಟ್ಟ ಸ್ಪಂದನೆ, ಪ್ರೀತಿಗೆ ನಾವು ಕೂಡ ಈ ಸೀರಿಯಲ್ ಅನ್ನ ನಿಮ್ಮ ಮುಂದೆ ಇಡಬೇಕು ಎಂದು ಉತ್ಸಾಹದಿಂದ ಕಾದಿದ್ವಿ. ಪ್ರತಿ ದಿನವೂ ನಮ್ಮ ಸೀರಿಯಲ್ ಯಾವಾಗ ಲಾಂಚ್ ಆಗುತ್ತೆ? ಯಾವಾಗ ಎಂಟು ಗಂಟೆಯಾಗುತ್ತೆ. ಯಾವಾಗ ನೀವು ಮೊದಲ ಎಪಿಸೋಡ್ ನೋಡ್ತೀರಿ? ನಿಮ್ಮ ಪ್ರತಿಕ್ರಿಯೆ ಹೇಗಿರುತ್ತೆ? ಎನ್ನುವ ಕುತೂಹಲ ನಮ್ಮಲ್ಲೂ ಇತ್ತು ಎಂದು ಕಿರಣ್ ರಾಜ್ ಹೇಳಿದ್ದಾರೆ.

ನಾನು ಕೂಡ ಈ ದಿನಕ್ಕೆ ಕಾಯುತ್ತಿದ್ದೆ. ಸುಮಾರು ಎರಡು ವರ್ಷಗಳ ನಂತರ ನಿಮ್ಮ ಮುಂದೆ, ನಿಮ್ಮ ಮನೆಗೆ ಕರ್ಣನಾಗಿ ಬರಬೇಕು ಅಂದುಕೊಂಡಿದ್ದೆ. ಆದರೆ ನನಗೆ ತಿಳಿದಿರುವ ಮಾಹಿತಿ ಪ್ರಕಾರ ಏನೋ ಲೀಗಲ್ ಸಮಸ್ಯೆ ಆಗಿದೆ. ಇದನ್ನು ಪರಿಹರಿಸಿಕೊಂಡು ಆದಷ್ಟು ಬೇಗನೆ ನಿಮ್ಮ ಮುಂದೆ ಬರ್ತೀವಿ, ಸ್ವಲ್ಪ ತಡ ಆಗಬಹುದು, ಆದರೆ ಬಂದೇ ಬರ್ತೀವಿ. ನಮಗೆ ಇನ್ನು ಸ್ವಲ್ಪ ಸಮಯ ಕೊಡಿ. ಇದು ಈ ಸಮಯದಲ್ಲಿ ಆಗಬಾರದಿತ್ತು. ಆದರೆ ಯಾವುದೂ ನಮ್ಮ ಕೈಯಲ್ಲಿ ಇಲ್ಲ ಎಂದಿದ್ದಾರೆ.
ನಿರ್ಮಾಪಕರು ಕೋಟಿ ಕೋಟಿ ಖರ್ಚು ಮಾಡಿ ಒಂದು ಒಳ್ಳೆಯ ಪ್ರಾಜೆಕ್ಟ್ ಅನ್ನ ನಿಮ್ಮ ಮುಂದೆ ಇಡಬೇಕು ಎನ್ನುವ ದೃಢಸಂಕಲ್ಪಕ್ಕೆ, ಹಲವು ಕಲಾವಿದರ ಪರಿಶ್ರಮಕ್ಕೆ ಹಾಗೂ ಕರ್ಣನಿಗೆ ನ್ಯಾಯ ಸಿಕ್ಕೇ ಸಿಗುತ್ತೆ. ಈ ಸಮಯದಲ್ಲಿ ನಿಮ್ಮ ಬೆಂಬಲ ನಮಗೆ ಬೇಕಿದೆ ಎಂದು ಕಿರಣ್ ರಾಜ್ ಮನವಿ ಮಾಡಿಕೊಂಡಿದ್ದಾರೆ.
ಭವ್ಯಾ ಗೌಡ ಖಾತೆಯಲ್ಲಿ ಎಲ್ಲ ಪ್ರೋಮೋ ಡಿಲೀಟ್
ವರದಿಗಳ ಪ್ರಕಾರ ಭವ್ಯಾ ಗೌಡ ಅವರ ಕಾರಣಕ್ಕೆ ಧಾರಾವಾಹಿಯ ಪ್ರಸಾರ ಮುಂದೂಡಿದೆ ಎಂದು ಹೇಳಲಾಗುತ್ತಿದೆ. ಈ ಧಾರಾವಾಹಿಯಲ್ಲಿ ನಾಯಕಿಯಾಗಿದ್ದ ಭವ್ಯಾ ಗೌಡ ಅವರ ಅಕೌಂಟ್‌ನಿಂದಲೂ ಧಾರಾವಾಹಿಗೆ ಸಂಬಂಧಿಸಿದ ಎಲ್ಲ ಪ್ರೋಮೋಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ಅವರು Trust The Process ಎಂದು ಪೋಸ್ಟ್ ಹಾಕಿ ಅಚ್ಚರಿ ಮೂಡಿಸಿದ್ದಾರೆ. ಇದೇ ಕಾರಣಕ್ಕೆ ಧಾರಾವಾಹಿ ನಿಂತಿರುವುದಾಗಿ ಹೇಳಲಾಗುತ್ತಿದೆ.
ಈ ಬಗ್ಗೆ ಜೀ ಕನ್ನಡ ವಾಹಿನಿ ಕೂಡ ಮಾಹಿತಿ ಹಂಚಿಕೊಂಡಿದೆ. ಕೊಟ್ಟ ಮಾತಿಗೆ ತಪ್ಪದ ಜೀವ ಅಂದ್ರೆ ಅದು ಕರ್ಣ, ನೀವೆಲ್ಲ ಕಾಯ್ತಾ ಇರ್ತೀರ ಅಂತ ಅವನಿಗೆ ಗೊತ್ತು. ಅದೇ ಪ್ರೀತಿ-ವಿಶ್ವಾಸದಿಂದ 'ಕರ್ಣ'ನನ್ನ ಬರಮಾಡಿಕೊಳ್ತೀರಿ ಅಲ್ವಾ? 'ಕರ್ಣ' ಬಂದೇ ಬರ್ತಾನೆ, ಶೀಘ್ರದಲ್ಲಿ ಎಂದು ಹೇಳಿದೆ.












Click it and Unblock the Notifications