ಭವ್ಯ ಗೌಡಗೆ ಬೆವರಿಳಿಸಿದ ಕಿಚ್ಚ ಸುದೀಪ್: ಕ್ಯಾಪ್ಟನ್ಸಿ ಟಾಸ್ಕ್‌ನ ಮೋಸ ಬಟಾಬಯಲು
ಕಳೆದ ವಾರ ಬಿಗ್ಬಾಸ್ ಮನೆ ಬಿಬಿ ರೆಸಾರ್ಟ್ ಆಗಿ ಬದಲಾಗಿತ್ತು. ಈ ರೆಸಾರ್ಟ್ ಬರುವ ಅತಿಥಿಗಳು ಒಂದು ತಂಡವಾದರೆ, ಬಂದ ಅತಿಥಿಗಳಿಗೆ ಸೇವೆ ನೀಡುವುದು ಅಂದರೆ ರೆಸಾರ್ಟ್ ಸಿಬ್ಬಂದಿ ಮತ್ತೊಂದು ತಂಡವಾಗಿತ್ತು. ಇದೇ ಈ ವಾರದ ಟಾಸ್ಕ್ ಆಗಿತ್ತು. ಒಂದು ತಂಡ, ಮತ್ತೊಂದು ತಂಡ ಯಶಸ್ವಿಯಾಗಿ ಟಾಸ್ಕ್ ಪೂರೈಸದಂತೆ ನೋಡಿಕೊಳ್ಳುವುದೇ ಈ ವಾರದ ಆಟದ ಉದ್ದೇಶವಾಗಿದ್ದು, ಸ್ಪರ್ಧಿಗಳೇ ನೀಡಿದ ಸ್ಟಾರ್‌ಗಳಿಂದ ಗೆಲುವು-ಸೋಲು ನಿರ್ಧಾರವಾಗಿತ್ತು.
ಮೊದಲು ಕಳೆದ ವಾರದ ಕ್ಯಾಪ್ಟನ್ ಆದ ಭವ್ಯ ಗೌಡ ನೇತೃತ್ವದ ಮೋಕ್ಷಿತಾ, ರಜತ್, ಧನರಾಜ್ ತ್ರಿವಿಕ್ರಮ್ ರೆಸಾರ್ಟ್ನ ಸಿಬ್ಬಂದಿಯಾಗಿದ್ದರು. ಅತಿಥಿಗಳಾಗಿ ಚೈತ್ರಾ ಕುಂದಾಪುರ, ಮಂಜು, ಹನುಮಂತು, ಗೌತಮಿ, ಐಶ್ವರ್ಯಾ ರೆಸಾರ್ಟ್‌ಗೆ ಬಂದಿದ್ದರು. ಈ ವೇಳೆ ಚೈತ್ರಾ ಕುಂದಾಪುರದ ತಂಡದವರು ರೆಸಾರ್ಟ್ ಸಿಬ್ಬಂದಿಗೆ ಕಾಟ ಕೊಡುವ ಉದ್ದೇಶದಿಂದ ಮನಬಂದಂತೆ ನಡೆದುಕೊಂಡಿದ್ದರು. ಇದರಿಂದ ಜಗಳ ವಾದ- ವಿವಾದ ಕೂಡ ನಡೆದು ಕೊನೆಗೆ ಕ್ಯಾಪ್ಟನ್ ಭವ್ಯ ಗೌಡ ಕಣ್ಣೀರಿಟ್ಟ ಸೀನ್ ಕೂಡ ನಡೆಯಿತು.

ಕೊನೆಗೆ ಆಟ ಅದಲು ಬದಲಾಗಿದ್ದು, ಭವ್ಯ ಗೌಡ ತಂಡ ರೆಸಾರ್ಟ್ ಅತಿಥಿಗಳಾದರೆ ಚೈತ್ರಾ ತಂಡ ರೆಸಾರ್ಟ್ ಸಿಬ್ಬಂದಿಯಾದರು. ಈ ಸಮಯದಲ್ಲಿ ರಜತ್ ಮಾಡಿದ ಉಪಾಯ ಇಡೀ ಸಂಚಿಕೆಯನ್ನು ನಗುವಿನಲ್ಲಿ ತೇಲಿಸುವಂತೆ ಮಾಡಿತು. ಕೊನೆಯಲ್ಲಿ ಎರಡೂ ತಂಡಗಳು ರೆಸಾರ್ಟ್ ಸಿಬ್ಬಂದಿಯಾಗಿದ್ದ ತಂಡಕ್ಕೆ ನೀಡಿದ ಸ್ಟಾರ್ ಪ್ರಕಾರ ಭವ್ಯ ಗೌಡ ತಂಡ ವಿಜೇತ ತಂಡವಾಯಿತು. ಜೊತೆಗೆ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಭಾಗವಹಿಸಲು ಅವಕಾಶ ಪಡೆದುಕೊಂಡಿತು. ಈ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ನಡೆದ ಮೋಸವೊಂದು ಈ ವಾರದ ವಿಕೇಂಡ್ ಸಂಚಿಕೆಯ ಹೈಲೈಟ್ ಆಗಿದೆ.
ಭವ್ಯ ಗೌಡ ಟಾಸ್ಕ್ ಗೆದ್ದು ಮೂರನೇ ಬಾರಿ ಮನೆಯ ಕ್ಯಾಪ್ಟನ್ ಆದರು. ಆದರೆ ಮೊದಲ ಸುತ್ತಿನಲ್ಲೇ ಭವ್ಯ ಮಾಡಿದ ಮೋಸದ ಬಗ್ಗೆ ನಿನ್ನೆಯ ವಾರದ ಕತೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಚರ್ಚೆ ನಡೆದಿದೆ. ಅದಕ್ಕೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಭವ್ಯ ಗೌಡ ಟಾಸ್ಕ್ ಗೆದ್ದಿದ್ದು ಹೇಗೆ ಎನ್ನುವ ವಿಡಿಯೋಗಳು ಸಖತ್ ವೈರಲ್ ಆಗಿದ್ದವು.
ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಜಾರುವ ಟ್ರ್ಯಾಕ್‌ನಲ್ಲಿ ತೆರಳಿ ಮೇಲೆ ಕಟ್ಟಲಾದ ಬುಟ್ಟಿಯಲ್ಲಿರುವ ಚೆಂಡುಗಳನ್ನು ಕೊಟ್ಟಿರುವ ಬಾಕ್ಸ್‌ನಲ್ಲಿ ಹಾಕಬೇಕಿತ್ತು. ಭವ್ಯಾ, ತ್ರಿವಿಕ್ರಮ್, ರಜತ್, ಧನರಾಜ್ ಹಾಗೂ ಮೋಕ್ಷಿತಾ ಈ ಟಾಸ್ಕ್‌ನ ಸ್ಪರ್ಧಿಗಳಾಗಿದ್ದು, ಚೈತ್ರಾ ಕುಂದಾಪುರ ಹಾಗೂ ಉಗ್ರಂ ಮಂಜು ಉಸ್ತುವಾರಿಗಳಾಗಿದ್ದರು. ಮೊದಲು ಒಂಬತ್ತನೇ ಸಂಖ್ಯೆಯ ಬುಟ್ಟಿಯಲ್ಲಿರುವ ಚೆಂಡುಗಳನ್ನು ಬುಟ್ಟಿಗೆ ಹಾಕುವ ಟಾಸ್ಕ್ ಅನ್ನು ನೀಡಲಾಗಿತ್ತು.

ಈ ವೇಳೆ ಮೊದಲ ಸುತ್ತಿನಲ್ಲೇ ಭವ್ಯಾಗೆ ಚೆಂಡು ಸಿಕ್ಕಿರಲಿಲ್ಲ. ಆದರೆ ಬೇರೆ ಸಂಖ್ಯೆಯ ಚೆಂಡನ್ನು ತೆಗೆದುಕೊಂಡು ವಾದ ಮಾಡಿ ಟಾಸ್ಕ್ ಗೆದ್ದು ಕ್ಯಾಪ್ಟನ್ ಆದರು. ಈ ದೃಶ್ಯದ ವಿಡಿಯೋವನ್ನು ಸುದೀಪ್ ವಾರದ ಕತೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ತೋರಿಸಿ ಪ್ರಶ್ನೆ ಮಾಡಿದರು. ಅಲ್ಲಿಯೂ ಭವ್ಯ ವಾದ ಮಾಡಿದ ಕಾರಣ ಮತ್ತೊಂದು ವಿಡಿಯೋ ತೋರಿಸಿದರು.
ಬಳಿಕ ಒಬ್ಬೊಬ್ಬರನ್ನೇ ಪ್ರಶ್ನಿಸಿದ ಸುದೀಪ್ ಟಾಸ್ಕ್ ವೇಳೆ ಸುಮ್ಮನಿದ್ದ ರಜತ್ ಹಾಗೂ ಮೋಕ್ಷಿತಾಗೆ ಕ್ಲಾಸ್ ತೆಗೆದುಕೊಂಡರು, ಬಳಿಕ ಇಬ್ಬರು ಉಸ್ತುವಾರಿಗಳಿಗೆ ಹಾಗೂ ಭವ್ಯಗೆ ಕೂಡ ಪ್ರಶ್ನಿಸಿದರು. ಅಲ್ಲಿಯೂ ವಾದಕ್ಕಿಳಿದ ಭವ್ಯಗೆ ಸುದೀಪ್ ಸುಳ್ಳನ್ನು ಸತ್ಯ ಮಾಡಬೇಡಿ ಎಂದು ಪರೋಕ್ಷವಾಗಿ ಎಚ್ಚರಿಸಿ, ಇರುವ ಸತ್ಯವನ್ನು ಉಳಿದ ಸ್ಪರ್ಧಿಗಳ ಮುಂದೆ ಅನಾವರಣ ಮಾಡಿ. ನಾನು ಈ ವಿಷಯವನ್ನು ಇಲ್ಲಿಗೆ ಬಿಡುತ್ತೇನೆ ಎಂದು ಹೇಳಿ ನಿಲ್ಲಿಸಿದರು.
Photo Credit- Bhavya gowda Instagram












Click it and Unblock the Notifications