"ಮ್ಯಾಕ್ಸ್" ಡೈರೆಕ್ಟರ್‌ಗೆ ಕಿಚ್ಚ ಸುದೀಪ್ ದಸರಾ ಗಿಫ್ಟ್, ಈ ದುಬಾರಿ ಕಾರಿನ ಬೆಲೆ ಎಷ್ಟು?
ಸಿನಿಮಾರಂಗದಲ್ಲಿ ಇತ್ತೀಚೆಗೆ ಹೊಸ ಟ್ರೆಂಡ್ ನಡೆಯುತ್ತಿದೆ. ಒಂದು ಸಿನಿಮಾ ಹಿಟ್ ಆದರೆ ಅದರ ನಿರ್ದೇಶಕರಿಗೆ ದುಬಾರಿ ಗಿಫ್ಟ್ ನೀಡುವುದು ಕಂಡುಬರುತ್ತಿದೆ. ಆ ಸಿನಿಮಾದ ಹೀರೋಗಳು ಹೆಚ್ಚಾಗಿ ನಿರ್ದೇಶಕರಿಗೆ ದುಬಾರಿ ಕಾರುಗಳನ್ನು ಉಡುಗೊರೆಯಾಗಿ ನೀಡುವ ಟ್ರೆಂಡ್ ಶುರು ಮಾಡಿದ್ದಾರೆ. ಆದರೆ ನಟ ಕಿಚ್ಚ ಸುದೀಪ್ ಅವರು ತನ್ನ ನೆಚ್ಚಿನ ನಿರ್ದೇಶಕರಿಗೆ ದುಬಾರಿ ಕಾರನ್ನು ದಸರಾಗೆ ಗಿಫ್ಟ್ ಮಾಡಿದ್ದಾರೆ. ಇತ್ತೀಚೆಗೆ ಹಿಟ್ ಕಂಡ ಸುದೀಪ್ ಅಭಿನಯದ "ಮ್ಯಾಕ್ಸ್" ಸಿನಿಮಾದ ನಿರ್ದೇಶಕ ವಿಜಯ್ ಕಾರ್ತಿಕೇಯ ಅವರಿಗೆ ಈ ದುಬಾರಿ ಕಾರು ಗಿಫ್ಟ್ ನೀಡಿದ್ದು, ಫೋಟೋಸ್ ವೈರಲ್ ಆಗಿದೆ.
ದಸರಾ ಹಬ್ಬದ ವೇಳೆಯೇ ಕಿಚ್ಚ ಸುದೀಪ್ ಅವರು "ಮ್ಯಾಕ್ಸ್" ಸಿನಿಮಾದ ನಿರ್ದೇಶಕ ವಿಜಯ್ ಕಾರ್ತಿಕೇಯ ಅವರಿಗೆ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕರಾದ ವಿಜಯ್ ಕಾರ್ತಿಕೇಯ ಅವರು ಸುದೀಪ್ ಅವರಿಗೆ ಮಾಡಿದ್ದ ಮ್ಯಾಕ್ಸ್ ಸಕ್ಸಸ್ ಕಂಡಿತ್ತು. ಹೀಗಾಗಿ ಇದರ ಕೃತಜ್ಞತೆಯ ಭಾಗವಾಗಿ ಕಿಚ್ಚ ಕಾರು ನೀಡಿ ಗಮನ ಸೆಳೆದಿದ್ದಾರೆ.

ಕಿಚ್ಚ ಸುದೀಪ್ ಸರ್ ಮತ್ತು ಅವರ ಕುಟುಂಬದಿಂದ ಬಂದ ಈ ಅದ್ಭುತ ಉಡುಗೊರೆ ನನ್ನ ಹೃದಯದಲ್ಲಿ ಯಾವಾಗಲೂ ವಿಶೇಷ ಸ್ಥಾನವನ್ನು ಹೊಂದಿರುತ್ತದೆ. ಧನ್ಯವಾದಗಳು ಕಿಚ್ಚ ಸರ್ ಎಂದು ವಿಜಯ್ ಕಾರ್ತಿಕೇಯ ಅವರು ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸ್ಕೋಡಾ ಕಂಪನಿಯ ಕೈಲ್ಯಾಕ್ (Skoda Kylaq) ಕಾರು ವಿಜಯ್ ಅವರ ಕೈಸೇರಿದೆ.
ಕಾರಿನ ವಿಶೇಷತೆ, ಬೆಲೆ?
ಹೊಸ ಸ್ಕೋಡಾ ಕೈಲಾಕ್ ಎಸ್‌ಯುವಿ ಸಬ್-4 ಮೀಟರ್ ವಿಭಾಗದ ಈ ವಾಹನವಾಗಿದ್ದು, ಆಧುನಿಕ ವಿನ್ಯಾಸ ಹಾಗೂ ಪ್ರಬಲ ತಾಂತ್ರಿಕ ವೈಶಿಷ್ಟ್ಯಗಳೊಂದಿಗೆ ಗ್ರಾಹಕರ ಮನಸೆಳೆಯುತ್ತಿದೆ. ಸ್ಕೋಡಾ ಕೈಲಾಕ್‌ನ ಕನಿಷ್ಠ ಎಕ್ಸ್-ಶೋರೂಂ ದರ ರೂ.7.55 ಲಕ್ಷರಿಂದ ಪ್ರಾರಂಭವಾಗಿ, ಟಾಪ್ ಎಂಡ್ ಮಾದರಿಯ ಕಾರಿನ ಬೆಲೆ 15 ಲಕ್ಷ ರೂಪಾಯಿಗೂ ಹೆಚ್ಚಿದೆ ಎಂದು ತಿಳಿದುಬಂದಿದೆ. 999 ಸಿಸಿ ಟರ್ಬೋ ಎಂಜಿನ್, ಗರಿಷ್ಠ 19 ಕಿಲೋಮೀಟರ್‌ವರೆಗೆ ಮೈಲೇಜ್ ಕೂಡ ದಾಖಲಾಗಿದೆ. ಸ್ಕೋಡಾ ಕೂಡ ಐಷಾರಾಮಿ ಕಾರುಗಳ ಬ್ರ್ಯಾಂಡ್ ಆಗಿದ್ದು, ಸುದೀಪ್ ಇದೇ ಕಂಪನಿಯ ಕಾರನ್ನು ಗಿಫ್ಟ್ ನೀಡಿದ್ದಾರೆ.
ಮ್ಯಾಕ್ಸ್ ಚಿತ್ರವು 2024ರಲ್ಲಿ ಡಿಸೆಂಬರ್ 25ರ ಕ್ರಿಸ್‌ಮಸ್ ಹಬ್ಬದಂದು ಕನ್ನಡ, ತಮಿಳು , ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗಿತ್ತು. ಅಲ್ಲದೆ ಇದು 2024ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಕನ್ನಡ ಚಿತ್ರವಾಗಿ ಹೊರಹೊಮ್ಮಿತ್ತು. ಇದನ್ನು ವಿ ಕ್ರಿಯೇಷನ್ಸ್ ಅಡಿಯಲ್ಲಿ ಕಲೈಪ್ಪುಲಿ ಎಸ್.ಥಾನು ಮತ್ತು ಕಿಚ್ಚ ಕ್ರಿಯೇಷನ್ಸ್ ಅಡಿಯಲ್ಲಿ ಜಂಟಿಯಾಗಿ ನಿರ್ಮಿಸಿ, ವಿಜಯ್ ಕಾರ್ತಿಕೇಯ ನಿರ್ದೇಶಿಸಿದ್ದರು. ಈ ಸಿನಿಮಾದಲ್ಲಿ ವರಲಕ್ಷ್ಮಿ ಶರತ್‌ಕುಮಾರ್, ಸುನೀಲ್, ಸಂಯುಕ್ತ ಹೊರನಾಡು ಸೇರಿ ಪ್ರಮುಖರು ನಟಿಸಿದ್ದರು.












Click it and Unblock the Notifications