Toxic: ಟಾಕ್ಸಿಕ್ ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದ ರಾಕಿಂಗ್ ಸ್ಟಾರ್ ಯಶ್
ಅಂತೂ ಇಂತೂ ಯಶ್ ಅಭಿಮಾನಿಗಳಿಗೆ ಖುಷಿ ಪಡಲು ಸುದ್ದಿಯೊಂದು ಸಿಕ್ಕಿದೆ. ಸುದೀರ್ಘ ಕಾಯುವಿಕೆ ಬಳಿಕ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ವರ್ಷ ಏಪ್ರಿಲ್ 10ರಂದು ಸಿನಿಮಾ ಬಿಡುಗಡೆಯಾಗಬೇಕಿತ್ತು, ಆದರೆ ದೊಡ್ಡ ಮಟ್ಟದಲ್ಲಿ ಸಿನಿಮಾ ಮಾಡುತ್ತಿದ್ದು ಹೆಚ್ಚಿನ ಸಮಯ ತೆಗೆದುಕೊಳ್ಳಲಾಗುತ್ತಿದೆ, ಟಾಕ್ಸಿಕ್ ಸಿನಿಮಾ ನೋಡಲು ಅಭಿಮಾನಿಗಳು ಇನ್ನೂ ಒಂದು ವರ್ಷ ಕಾಯಬೇಕಾಗಿದೆ.
ಮಾರ್ಚ್ 19, 2026ರಂದು ಟಾಕ್ಸಿಕ್ ಸಿನಿಮಾ ಬಿಡುಗಡೆ ಮಾಡಲು ಮುಹೂರ್ತ ನಿಗದಿ ಮಾಡಲಾಗಿದೆ. ಮುಂದಿನ ಉಗಾದಿ ಹಬ್ಬಕ್ಕೆ ಯಶ್ ಅಭಿಮಾನಿಗಳಿಗೆ ಡಬಲ್ ಧಮಾಕ ಸಿಗಲಿದೆ. ಸಿನಿಮಾ ಹಾಲಿವುಡ್ ಮಟ್ಟದಲ್ಲಿ ನಿರ್ಮಾಣ ಮಾಡುತ್ತಿರುವುದರಿಂದ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

ಯಶ್, ಕೆವಿಎನ್ ಪ್ರೊಡಕ್ಷನ್ಸ್ ಘೋಷಣೆ!
ಮಾರ್ಚ್ 22ರಂದು ಐಪಿಎಲ್ 2025ರ ಆರಂಭದ ದಿನವೇ ಯಶ್ ಅಭಿಮಾನಿಗಳಿಗೆ ಸಂತಸದ ಸುದ್ದಿ ಕೊಟ್ಟಿದ್ದಾರೆ. ಯಶ್ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಸಿನಿಮಾ ಬಿಡುಗಡೆ ಪೋಸ್ಟರ್ ಹಂಚಿಕೊಂಡಿದ್ದಾರೆ.
ಈಗಾಗಲೇ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲಕ್ಕೆ ಶೂಟಿಂಗ್ ಮಾಡಲಾಗುತ್ತಿದೆ. ಈ ಸಿನಿಮಾವನ್ನು ಭಾರತ ಮಾತ್ರವಲ್ಲದೆ ಗ್ಲೋಬಲ್ ಸಿನಿಮಾ ಮಾಡಲು ಯಶ್ ದೊಡ್ಡದಾಗಿ ಯೋಜನೆ ಹಾಕಿಕೊಂಡಿದ್ದಾರೆ ಎನ್ನಲಾಗಿದ್ದು ಅದಕ್ಕಾಗಿ ಶೂಟಿಂಗ್‌ಗೆ ಹೆಚ್ಚಿನ ಸಮಯ ನೀಡಲಾಗುತ್ತಿದೆ.
ಅದ್ದೂರಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ
ಟಾಕ್ಸಿಕ್ ಸ್ಯಾಂಡಲ್‌ವುಡ್ ಇತಿಹಾಸದಲ್ಲೇ ಅತಿ ದೊಡ್ಡ ಬಜೆಟ್ ಸಿನಿಮಾ. 350 ರಿಂದ 400 ಕೋಟಿ ರೂಪಾಯಿ ಬಂಡವಾಳ ಹೂಡಲಾಗುತ್ತಿದೆ ಎಂದು ಹೇಳಲಾಗಿದೆ. ಯಶ್ ಕೂಡ ಸಿನಿಮಾದ ನಿರ್ಮಾಕಪರಲ್ಲಿ ಒಬ್ಬರಾಗಿದ್ದಾರೆ. ಹಾಲಿವುಡ್‌ನಿಂದ ಕೂಡ ನಟರು, ತಂತ್ರಜ್ಞರನ್ನು ಸಿನಿಮಾಗಾಗಿ ಕರೆಸಲಾಗಿದೆ. ಖ್ಯಾತ ಹಾಲಿವುಡ್ ಸಾಹಸ ನಿರ್ದೇಶಕ ಜೆಜೆ ಪೆರ್‍ರಿ ಈಗಾಗಲೇ ಮುಂಬೈನಲ್ಲಿ ಹಲವು ಆಕ್ಷನ್ ದೃಶ್ಯಗಳನ್ನು ಸಂಯೋಜಿಸಿದ್ದಾರೆ. ಇದೊಂದು ಗ್ಲೋಬಲ್ ಸಿನಿಮಾ ಎಂದು ಅವರೇ ಹೇಳಿದ್ದಾರೆ.
ಸಿನಿಮಾದಲ್ಲಿ ಯಶ್ ಜೊತೆ ನಯನತಾರಾ, ಕಿಯಾರ ಅಡ್ವಾನಿ, ಹುಮಾ ಖುರೇಶಿ, ತಾರಾ ಸುತಾರಿಯಾ, ಅಕ್ಷಯ್ ಒಬೆರಾಯ್ ಸೇರಿದಂತೆ ದೊಡ್ಡ ತಾರಾಬಳಗವೇ ಸಿನಿಮಾದಲ್ಲಿದೆ. ಈಗಾಗಲೇ ಮುಂಬೈ ಮತ್ತು ಬೆಂಗಳೂರಿನಲ್ಲಿ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಲಂಡನ್ ಮತ್ತು ಗೋವಾದಲ್ಲಿ ಕೂಡ ಸಿನಿಮಾದ ಕೆಲವು ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗುತ್ತದೆ ಎಂದು ಹೇಳಲಾಗಿದೆ.
ಯಶ್ ಏನೇ ಮಾಡಿದರೂ ದೊಡ್ಡದಾಗಿ ಮಾಡುತ್ತಾರೆ ಎಂದು ಕೆಜಿಎಫ್ ಮೂಲಕ ಈಗಾಗಲೇ ಸಾಬೀತು ಮಾಡಿದ್ದಾರೆ. ಭಾರತ ಚಿತ್ರರಂಗವನ್ನು ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿರುವ ಅವರು, ಇದೀಗ ಹಾಲಿವುಡ್ ಮಟ್ಟದಲ್ಲಿ ಸಿನಿಮಾ ಮಾಡುತ್ತಿದ್ದು ಕನ್ನಡಿಗರು ಕಾತರದಿಂದ ಈ ಸಿನಿಮಾಗಾಗಿ ಕಾಯುವಂತೆ ಮಾಡಿದೆ.












Click it and Unblock the Notifications