'ಸ್ಯಾಂಡಲ್‌ವುಡ್‌ಗೂ ಕಮಿಟಿʼ ಕೂಗು; ಕರ್ನಾಟಕ ಫಿಲ್ಮ್ ಚೇಂಬರ್ ಹೇಳಿದ್ದೇನು ಗೊತ್ತಾ?
ನಟಿಯರಿಗೆ ವಿರುದ್ಧ ಲೈಂಗಿಕ ದೌರ್ಜನ್ಯ ನೀಡಲಾಗುತ್ತಿದೆಯೇ? ಎಂಬ ವಿಚಾರವಾಗಿ ಮಲೆಯಾಳಂ ಚಿತ್ರರಂಗದಲ್ಲಿ ರಚನೆಯಾಗಿದ್ದ ಹೇಮಾ ಕಮಿಟಿ ಮಾದರಿಯಲ್ಲೇ ಸ್ಯಾಂಡಲ್‌ವುಡ್‌ಗೂ ಒಂದು ಕಮಿಟಿ ರಚಿಸಬೇಕು ಎನ್ನುವ ಕೂಗು ಜೋರಾಗಿ ಎದ್ದಿದೆ. ಈ ಬಗ್ಗೆ ನಟ-ನಟಿಯರು ಸೇರಿ ನೂರಾರು ಮಂದಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಕೂಡ ಮಾಡಿದ್ದಾರೆ. ಮತ್ತೊಂದೆಡೆ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಸಭೆ ನಡೆಸಲು ನಿರ್ಧರಿಸಿದೆ.
ಸ್ಯಾಂಡಲ್‌ವುಡ್‌ನಲ್ಲಿ ನಟಿಯರು ಎದುರಿಸುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ಅಧ್ಯಯನ ಮಾಡಿ ವರದಿ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 16ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಟಿಯರು ಹಾಗೂ ಚಿತ್ರರಂಗದ ಹಿರಿಯರೆಲ್ಲ ಸೇರಿ ಸಭೆ ನಡೆಸಲು ನಿರ್ಧರಿಸಿದ್ದಾರೆ.

ಚಿತ್ರರಂಗದಲ್ಲಿ ನಟಿಯರು ಎದುರಿಸುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ಅಧ್ಯಯನಕ್ಕೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸುವಂತೆ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (ಫೈರ್) ನಿಯೋಗವು ಗುರುವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿತ್ತು. ಬಳಿಕ ಚಿತ್ರರಂಗದ ಎಲ್ಲರನ್ನೂ ಒಟ್ಟುಗೂಡಿಸಿ ಸಭೆ ನಡೆಸುವಂತೆ ರಾಜ್ಯ ಮಹಿಳಾ ಆಯೋಗ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸೂಚಿಸಿತ್ತು.
ಈಗಾಗಲೇ ಈ ವಿಚಾರ ಸಂಬಂಧ ವಾಣಿಜ್ಯ ಮಂಡಳಿಯಲ್ಲಿ ಆಂತರಿಕ ಸಭೆ ನಡೆದಿದೆ. ಹಬ್ಬ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳಲ್ಲಿ ನಟ-ನಟಿಯರು ಸದ್ಯ ಬ್ಯುಸಿಯಾಗಿರುವುದರಿಂದ ಸೆ.16ಕ್ಕೆ ವಾಣಿಜ್ಯ ಮಂಡಳಿ ಆವರಣದಲ್ಲಿ ಸಭೆ ನಡೆಸಲಿದ್ದೇವೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹೇಳಿದೆ.
ಇನ್ನು ಈ ಸಭೆಗೆ ಸಿನಿಮಾರಂಗದ ಪ್ರಮುಖರೆಲ್ಲ ಕರೆಯಲಾಗುವುದು. ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು. ನಗರದ ಪ್ರಮುಖ ಪಬ್‌ಗಳಲ್ಲಿ ನಟ-ನಟಿಯರು ಭಾಗಿಯಾಗಿ ಪಾರ್ಟಿ ನಡೆಸುವುದು ಟ್ರೆಂಡ್ ಆಗಿದ್ದು, ಸರ್ಕಾರ ಇದಕ್ಕೆ ಮೊದಲು ಕಡಿವಾಣ ಹಾಕಬೇಕು. ಈ ಬಗ್ಗೆಯೂ ಅಂದಿನ ಸಭೆಯಲ್ಲಿ ಚರ್ಚಿಸುತ್ತೇವೆ. ನಟಿಯರ ಹಿತ ಕಾಪಾಡಲು ವಾಣಿಜ್ಯ ಮಂಡಳಿ ಸದಾ ಬದ್ಧ ಎಂದು ಹೇಳಿದೆ.

ಮಲೆಯಾಳಂ ಸಿನಿಮಾರಂಗದಲ್ಲಿ ಸಂಚಲನ ಮೂಡಿಸಿರುವ ಹೇಮಾ ಸಮಿತಿ ವರದಿಯು ಇದೀಗ ಭಾರತೀಯ ಚಿತ್ರರಂಗವನ್ನೇ ಬೆಚ್ಚಿಬೀಳಿಸಿದೆ. ಇದರ ಗಾಳಿ ಸ್ಯಾಂಡಲ್‌ವುಡ್ ಕಡೆಗೂ ಬೀಸಿದ್ದು, ಇಲ್ಲಿಯೂ ಹೇಮಾ ಮಾದರಿಯ ಕಮಿಟಿಯೊಂದನ್ನು ರಚಿಸಬೇಕು ಎನ್ನುವ ಕೂಗು ಎದ್ದಿದೆ. ಈ ಬಗ್ಗೆ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (FIRE) ಸಂಘಟನೆಯು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಕೂಡ ಮಾಡಿದೆ.
FIREನ ಈ ಒಂದು ನಡೆಯು ಹೆಸರಿಗೆ ತಕ್ಕಂತೆ ಇಡೀ ಚಿತ್ರರಂಗಕ್ಕೆ ಕಿಚ್ಚು ಹೊತ್ತಿಸಿದೆ. ಏಕೆಂದರೆ, ಸ್ಯಾಂಡಲ್‌ವುಡ್ ಖ್ಯಾತ ನಟ-ನಟಿಯರೇ ಈ ಕಮಿಟಿ ಬೇಕೆಂದು ಸಹಿ ಮಾಡಿರುವುದು ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಿದೆ. ಒಟ್ಟಾರೆ ನಟ ನಟಿಯರೂ ಸೇರಿದಂತೆ 153 ಮಂದಿ ಈ ಬೇಡಿಕೆ ಮುಂದಿಟ್ಟಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವ ಮಹಿಳೆಯರ ಸಮಸ್ಯೆಗಳಿಗಾಗಿ ಈ ಹಿಂದೆ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (FIRE) ರಚನೆ ಮಾಡಲಾಗಿತ್ತು. ಇದರಲ್ಲಿ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ, ನಿರ್ದೇಶಕ ಕವಿತಾ ಲಂಕೇಶ್ ಅಂತಹ ದಿಗ್ಗಜರು ಇದ್ದರು. ಅದೇ ಫೈರ್ ಈಗ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿಯನ್ನು ರಚಿಸುವಂತೆ ಕರ್ನಾಟಕ ಸರ್ಕಾರಕ್ಕೆ ಫೈರ್ ಕರೆ ನೀಡಿದೆ.

ನಟಿ ರಮ್ಯಾ, ನಿರ್ದೇಶಕಿ ಕವಿತಾ ಲಂಕೇಶ್, ನಟ ಸುದೀಪ್, ನಟ ಚೇತನ್, ನಟ ಕಿಶೋರ್, ಮೇಘನಾ, ಪೂಜಾ ಗಾಂಧಿ, ನಿರ್ದೇಶಕ ಸುನಿ, ಲೇಖಕಿ ಉಷಾ, ಶ್ರುತಿ ಹರಿಹರನ್, ಐಂದ್ರಿತಾ ರೈ, ಶಾನ್ವಿ ಶ್ರೀವಾಸ್ತವ, ಆಶಿಕಾ ರಂಗನಾಥ್ ಹೀಗೆ 153 ಜನ ಮನವಿ ಪತ್ರದಲ್ಲಿ ಸಹಿ ಹಾಕಿದ್ದಾರೆ.












Click it and Unblock the Notifications