CCL 2025: ಸೆಮಿಫೈನಲ್‌ನಲ್ಲಿ ಕರ್ನಾಟಕ ಬುಲ್ಡೋಜರ್ಸ್‌ಗೆ ಚೆನ್ನೈ ರ್‍ಹಿನೋಸ್ ಸವಾಲು; ಪಂದ್ಯ ಯಾವಾಗ?
ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2025ರ ಲೀಗ್ ಹಂತದ ಪಂದ್ಯಗಳು ಮುಕ್ತಾಯವಾಗಿದ್ದು ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ವೇದಿಕೆ ಸಜ್ಜಾಗಿದೆ. ಒಟ್ಟು 7 ತಂಡಗಳು ಲೀಗ್ ಹಂತದಲ್ಲಿ ತಲಾ 4 ಪಂದ್ಯಗಳನ್ನು ಆಡಿದ್ದವು. ಅಗ್ರ ನಾಲ್ಕು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದು, ಮಾರ್ಚ್ 1 ರಂದು ನಡೆಯಲಿರುವ ಸೆಮಿಫೈನಲ್ ಪಂದ್ಯಗಳಲ್ಲಿ ಸೆಣೆಸಲಿವೆ.
ಹಾಲಿ ಚಾಂಪಿಯನ್ ಬೆಂಗಾಲ್ ಟೈಗರ್ಸ್ ಆಡಿರುವ ನಾಲ್ಕು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡು ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆ. ರನ್ನರ್ ಅಪ್ ತಂಡವಾಗಿರುವ ಕರ್ನಾಟಕ ಬುಲ್ಡೋಜರ್ಸ್ ಎರಡನೇ ಸ್ಥಾನದೊಂದಿಗೆ ಸೆಮಿಫೈನಲ್ ಆಡಲು ಸಜ್ಜಾಗಿದ್ದರೆ. ಚೆನ್ನೈ ರ್‍ಹಿನೋಸ್ ಮತ್ತು ಪಂಜಾಬ್ ದಿ ಶೇರ್ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದೊಂದಿಗೆ ಸೆಮಿಫೈನಲ್ ಪ್ರವೇಶಿಸಿವೆ.

ಕರ್ನಾಟಕ ಬುಲ್ಡೋಜರ್ಸ್‌ಗೆ ಚೆನ್ನೈ ಸವಾಲು!
ಮಾರ್ಚ್ 1ರಂದು ಶನಿವಾರ, ಮೈಸೂರಿನ ಯೂನಿವರ್ಸಿಟಿ ಕ್ಯಾಂಪಸ್ ಕ್ರೀಡಾಂಗಣದಲ್ಲಿ ಸೆಮಿಫೈನಲ್ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ 3 ಪಂದ್ಯಗಳನ್ನು ಗೆದ್ದಿರುವ ಕರ್ನಾಟಕ ಬುಲ್ಡೋಜರ್ಸ್ ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದು ಮೂರನೇ ಸ್ಥಾನದಲ್ಲಿರುವ ಚೆನ್ನೈ ರ್‍ಹಿನೋಸ್ ತಂಡವನ್ನು ಸೆಮಿಫೈನಲ್ ಪಂದ್ಯದಲ್ಲಿ ಎದುರಿಸಲಿದೆ. ಮಾರ್ಚ್ 1ರಂದು ಶನಿವಾರ ಸಂಜೆ 6.30ಕ್ಕೆ ಈ ಪಂದ್ಯ ಆರಂಭವಾಗಲಿದೆ.
ಮತ್ತೊಂದು ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ ಪಂಜಾಬ್ ದಿ ಶೇರ್ ತಂಡದ ವಿರುದ್ದ ಆಡಲಿದೆ. ಸೆಮಿಫೈನಲ್‌ನಲ್ಲಿ ಗೆಲ್ಲುವ ತಂಡಗಳು ಮಾರ್ಚ್ 2ರಂದು ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.
ಕಿಚ್ಚ ಸುದೀಪ್ ಪಡೆಗೆ ಸವಾಲು!
ಲೀಗ್ ಹಂತದ ಪಂದ್ಯಗಳಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಗೆದ್ದಿದೆ. ಲೀಗ್ ಹಂತದಲ್ಲೇ ಚೆನ್ನೈ ರ್‍ಹಿನೋಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದು ಕರ್ನಾಟಕ ಬುಲ್ಡೋಜರ್ಸ್ ತಂಡದ ವಿಶ್ವಾಸ ಹೆಚ್ಚಿಸಿದೆ. ಡಾರ್ಲಿಂಗ್ ಕೃಷ್ಣ ಅತ್ಯುತ್ತಮ ಫಾರ್ಮ್‌ನಲ್ಲಿದ್ದು ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ಮೂರು ಅರ್ಧಶತಕ, ಒಂದು ಶತಕ ಬಾರಿಸಿದ್ದು ಮೈಸೂರಿನಲ್ಲಿ ಮತ್ತೊಮ್ಮೆ ಅಬ್ಬರಿಸಿದರೆ ಕರ್ನಾಟಕ ಬುಲ್ಡೋಜರ್ಸ್ ಗೆಲುವು ಸುಲಭವಾಗಲಿದೆ. ಡಾರ್ಲಿಂಗ್ ಕೃಷ್ಣ ಮಾತ್ರವಲ್ಲದೆ ರಾಜೀವ್ ಹನು, ಮಂಜುನಾಥ್ ಗೌಡ, ಕರಣ್ ಆರ್ಯನ್ ಕರ್ನಾಟಕ ಬುಲ್ಡೋಜರ್ಸ್‌ನ ಬ್ಯಾಟಿಂಗ್ ಅಸ್ತ್ರವಾಗಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್, ಚಂದನ್ ಕುಮಾರ್ ಬೌಲಿಂಗ್‌ನಲ್ಲಿ ಉತ್ತಮ ಲಯದಲ್ಲಿದ್ದಾರೆ.
ಕಳೆದ ಬಾರಿ ಫೈನಲ್ ತಲುಪಿದ್ದ ಕರ್ನಾಟಕ ಬುಲ್ಡೋಜರ್ಸ್ ಪ್ರಶಸ್ತಿ ಗೆಲ್ಲುವ ಪಂದ್ಯದಲ್ಲಿ ಸೋತು ರನ್ನರ್ ಅಪ್ ಆಗಿತ್ತು. ಈ ಬಾರಿ ತಂಡದ ಪ್ರದರ್ಶನ ಉತ್ತಮವಾಗಿದ್ದು ಮೂರನೇ ಬಾರಿ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ.












Click it and Unblock the Notifications