CCL 2024 Karnataka Bulldozers: ಚೆನ್ನೈ ರಿನೋಸ್ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್‌ಗೆ ಭರ್ಜರಿ ಗೆಲುವು
ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ 2024ರ ಆವೃತ್ತಿಯಲ್ಲಿ ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ಪಡೆ ಗೆಲುವಿನ ಓಟವನ್ನು ಮುಂದುವರೆಸಿದೆ. ಭಾನುವಾರ ಹೈದರಾಬಾದ್‌ನ ಶ್ರೀ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಚೆನ್ನೈ ರಿನೋಸ್ ವಿರುದ್ಧ 67 ರನ್‌ಗಳ ಭಾರಿ ಗೆಲುವು ಸಾಧಿಸಿದೆ.
ಟಾಸ್ ಗೆದ್ದ ಚೆನ್ನೈ ರಿನೋಸ್ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ 10 ಓವರ್ ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 137 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತು. ಡಾರ್ಲಿಂಗ್ ಕೃಷ್ಣ ಅತ್ಯುತ್ತಮ ಫಾರ್ಮ್ ಮುಂದುವರೆಸಿದರು. ಸಿಸಿಎಲ್ 2024ರ ಆವೃತ್ತಿಯ ನಾಲ್ಕನೇ ಅರ್ಧಶತಕ ಗಳಿಸಿದರು.

ಮೊದಲ ಇನ್ನಿಂಗ್ಸ್‌ನಲ್ಲಿ ಡಾಲಿಂಗ್ ಕೃಷ್ಣ 22 ಎಸೆತಗಳಲ್ಲಿ 57 ರನ್ ಗಳಿಸಿದರೆ, ಪ್ರದೀಪ್ 33 ಎಸೆತಗಳಲ್ಲಿ ಅಜೇಯ 66 ರನ್ ಗಳಿಸಿ ಮಿಂಚಿದರು. ಇವರಿಬ್ಬರ ಅಮೋಘ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ ಮೊತ್ತ ಕಲೆಹಾಕಿತು. ಬಳಕ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಚೆನ್ನೈ ರಿನೋಸ್ 84 ರನ್‌ಗಳಿಗೆ ಆಲೌಟ್ ಆಯಿತು.
ಜಯರಾಮ್ ಕಾರ್ತಿಕ್ ಮತ್ತು ಕರಣ್ ಆರ್ಯನ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಚೆನ್ನೈ ರಿನೋಸ್ ತಂಡಕ್ಕೆ ಆಘಾತ ನೀಡಿದರು. ಇಬ್ಬರೂ ತಲಾ ಮೂರು ವಿಕೆಟ್ ಪಡೆದು ಚೆನ್ನೈ ಓಟಕ್ಕೆ ಬ್ರೇಕ್ ಹಾಕಿದರು. ಚೆನ್ನೈ 84 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ 53 ರನ್‌ಗಳ ಬೃಹತ್ ಮುನ್ನಡೆ ಪಡೆದುಕೊಂಡಿತು.
ಎರಡನೇ ಇನ್ನಿಂಗ್ಸ್‌ನಲ್ಲಿ ರಾಜೀವ್ ಅಬ್ಬರ
53 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ಬುಲ್ಡೋಜರ್ಸ್ ಮತ್ತಷ್ಟು ಆಕ್ರಮಣಕಾರಿ ಬ್ಯಾಟಿಂಗ್ ಮಾಡಿತು. ರಾಜೀವ್ ಹನು 25 ಎಸೆತಗಳಲ್ಲಿ 8 ಬೌಂಡರಿ, ಮೂರು ಭರ್ಜರಿ ಸಿಕ್ಸರ್ ಸಹಿತ 63 ರನ್ ಗಳಿಸಿದರು. ಜಯರಾಮ್ ಕಾರ್ತಿಕ್ 9 ಎಸೆತಗಳಲ್ಲಿ 12 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಪ್ರತಾಪ್ 9 ಎಸೆತಗಳಲ್ಲಿ 17 ರನ್ ಗಳಿಸಿದರೆ. ಕೊನೆಯ ಓವರ್ ಗಳಲ್ಲಿ ಆರ್ಭಟಿಸಿದ ಮಂಜುನಾಥ್ 12 ಎಸೆತಗಳಲ್ಲಿ ಅಜೇಯ 28 ರನ್ ಗಳಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದ್ದ ಡಾರ್ಲಿಂಗ್ ಕೃಷ್ಣ ಎರಡನೆ ಇನ್ನಿಂಗ್ಸ್‌ನಲ್ಲಿ 6 ಎಸೆತಗಳಲ್ಲಿ ಅಜೇಯ 20 ರನ್ ಗಳಿಸಿದರು.
ಈ ಗೆಲುವಿನ ಮೂಲಕ ಆಡಿರುವ ಮೂರು ಪಂದ್ಯಗಳನ್ನು ಗೆದ್ದಿರುವ ಕರ್ನಾಟಕ ಬುಲ್ಡೋಜರ್ಸ್ ತಂಡ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಕರ್ನಾಟಕ ಬುಲ್ಡೋಜರ್ಸ್ ಮುಂದಿನ ಪಂದ್ಯದಲ್ಲಿ ತೆಲುಗು ವಾರಿಯರ್ಸ್ ತಂಡವನ್ನು ಎದುರಿಸಲಿದೆ.












Click it and Unblock the Notifications