Kantara Chapter-1 Review: ಕನ್ನಡದ ಮತ್ತೊಂದು ಮೈಲಿಗಲ್ಲು ಸಿನಿಮಾ ಎಂದ ಪ್ರೇಕ್ಷಕ: ಸೀಕ್ವೆಲ್ ಕಾಂತಾರ-2 ಘೋಷಣೆ
Kantara Chapter 1: ಬಹುನಿರೀಕ್ಷೆಯ ರಿಷಬ್ ಶೆಟ್ಟಿ (Rishab Shetty) ಅವರು ನಟಿಸಿ ನಿರ್ದೇಶಿಸಿರುವ ಕನ್ನಡದ "ಕಾಂತಾರಾ ಚಾಪ್ಟರ್ 1' (Kantara chapert -1)ಸಿನಿಮಾ ಬಹುಭಾಷೆಗಳಲ್ಲಿ ಏಕಕಾಲಕ್ಕೆ ವಿಶ್ವದಾದ್ಯಂತ ಇಂದು ಅಕ್ಟೋಬರ್ 02ರಂದು ರಿಲೀಸ್ ಆಗಿದೆ. ಕಾಡು, ರಾಜಾಡಳಿತ, ವ್ಯಾಪಾರ, ದೈವ, ಧರ್ಮ, ಅಧರ್ಮ ಸೇರಿದಂತೆ ಮಹತ್ವದ ವಿಷಯಗಳು ಸಿನಿಮಾದಲ್ಲಿ ಪ್ರಸ್ತಾಪವಾಗಿದೆ. ಅದ್ಭುತ ಓಪನಿಂಗ್ ಪಡೆಯುವ ಸಿನಿಮಾ ಇಂಟರ್‌ವಲ್ ಹೊತ್ತಿಗೆ ಕ್ಲೈಮ್ಯಾಕ್ಸ್ ಬಂತು ಎನ್ನುವಷ್ಟರ ಮಟ್ಟಿಗೆ ಕಟ್ಟಿಕೊಡಲಾಗಿದೆ. ಹಾಗಾದರೆ ಸಿನಿಮಾ ಹೇಗಿದೆ? ಜನ ಮೆಚ್ಚಿಕೊಂಡಿದ್ದೇನೆ, "ಕಾಂತಾರ ಚಾಪ್ಟರ್ 2' ಎಂಬ ಮಾಹಿತಿ ಇಲ್ಲಿದೆ.
"ಕಾಂತಾರ' ಸಿನಿಮಾ ಸಕ್ಸಸ್ ಆಗುತ್ತಿದ್ದಂತೆ ಅದರ ಪ್ರಿಕ್ವೆಲ್ ಘೋಷಣೆ ಆಯಿತು. ಅದಕ್ಕೆ 'ಕಾಂತಾರಾ ಚಾಪ್ಟರ್ 1'ಎಂದು ಹೆಸರಿಟ್ಟ ರಿಷಬ್ ಶೆಟ್ಟಿ ಅವರು ಅದನ್ನು ತೆರೆಮೇಲೆ ತರಲು ಸತತ ಮೂರು ವರ್ಷಗಳ ಶ್ರಮ ಹಾಕಿದ್ದಾರೆ. ಅವರ ಶ್ರಮ, ಪ್ರತಿ ಫ್ರೇಮ್‌ನಲ್ಲೂ ಕಾಣಿಸುತ್ತದೆ. ಕಾಡಿನ ಜನರಿಗೆ ರಾಜ್ಯದ ಮೇಲೆ ಆಸೆ, ರಾಜಾಡಳಿತಕ್ಕೆ ಕಾಡಿನ ಮೇಲೆ ಆಸೆ. ಇವರಿಬ್ಬರ ಜೊತೆಗೆ ದೈವದ ಅವತಾರಗಳನ್ನು ತೋರಿಸಲಾಗಿದೆ. ಸಿನಿಮಾ ಕ್ಲೈಮ್ಯಾಕ್ಸ್ ಹಂತಕ್ಕೆ ಬರುವ ಹೊತ್ತಿಗೆ ಏನೆಲ್ಲ ಆಗುತ್ತದೆ ಎಂಬುದನ್ನು ನೀವು ಥಿಯೇಟರ್‌ನಲ್ಲೇ ನೋಡಬೇಕು.

ಮೊದಲಾರ್ಧ ನಿಧಾನವಾಯಿತು ಎನ್ನುವಷ್ಟರಲ್ಲಿ ಸೆಕೆಂಡ್ ಹಾಫ್ ಸಿನಿಮಾ ಸೀಟಿನ ತುದಿಗೆ ಕೂರುವಂತೆ ಮಾಡುತ್ತದೆ. ಇಲ್ಲಿ ರಿಷಬ್ ಶೆಟ್ಟಿಯು ಬೆರ್ಮೆ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಂಬಾಳೆ ಫಿಲಂಸ್ ಉದಾರವಾಗಿ ಹಣ ಒದಗಿಸಿದ್ದು, ಅದನ್ನು ಸೂಕ್ತವಾಗಿ ಬಳಕೆ ಮಾಡುವಲ್ಲಿ ರಿಷಬ್ ಶೆಟ್ಟಿಯ ಜಾಣ್ಮೆ ಕಾಣಿಸುತ್ತದೆ. ವಿಎಫ್‌ಎಕ್ಸ್ ಸಿನಿಮಾವನ್ನು ಅದ್ಧೂರಿಗೊಳಿಸಿದೆ. ಫೈಟಿಂಗ್ ಸೀನ್‌ಗಳು ರಾಜಮೌಳಿ ಸಿನಿಮಾಗಳನ್ನು ನೆನಪಿಸುವಂತಿವೆ.
ಟ್ರೈಲರ್ ನೋಡಿದಾಗ ಸಿನಿಮಾ ಅಷ್ಟಾಗಿರದು ಎಂದುಕೊಂಡರು ಸಿನಿಮಾ ನೋಡಿದ ಮೇಲೆ ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ. ಶಿವನ ಭಕ್ತರು ಈ ಸಿನಿಮಾ ನೋಡಲೇಬೇಕೆಂದು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಕಾಂತಾರವನ್ನು ಜನಮೆಚ್ಚಿ ಹಾಡಿ ಹೊಗಳುತ್ತಿದ್ದಾರೆ. ಡೂಪ್ಸ್ ಇಲ್ಲದೇ ರಿಷಬ್ ಶೆಟ್ಟಿ ಫೈಟಿಂಗ್ ಸಿನ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕದಂಬರ ಕಾಲದಲ್ಲಿನ ಕಥೆ ಇದಾಗಿದ್ದು, ಅಂದಿನ ಕಾಲದ ತಕ್ಕಂತೆ ಉಡುಪು ವಿನ್ಯಾಸ ಮಾಡಲಾಗಿದೆ. ರಾಣಿ ಪಾತ್ರದಲ್ಲಿ ಕನಕವತಿಯಾಗಿ ನಟಿ ರುಕ್ಮಿಣಿ ವಸಂತ್ ಮತ್ತಷ್ಟು ಸೌಂದರ್ಯವತಿಯಾಗಿ ಕಾಣಿಸಿಕೊಂಡಿದ್ದಾರೆ. ಕುಲಶೇಖರ್ ಪಾತ್ರದಲ್ಲಿ ಗುಲ್ಕನ್ ದೇವಯ್ಯ, ಜಯರಾಮ್, ಪ್ರಮೋದ್ ಶೆಟ್ಟಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪ್ರಕಾಶ್ ತಮ್ಮಿನಾಡ್, ದೀಪಕ್ ರೈ ಪಣಜೆ, ರಾಕೇಶ್ ಪೂಜಾರಿ ಸಹ ಅದ್ಭುತವಾಗಿ ನಟಿಸಿದ್ದಾರೆ.

ಸೆಕೆಂಡ್ ಹಾಫ್‌ನಲ್ಲಿ ಸಿನಿಮಾದ ಅದ್ಧೂರಿತನ, ದೃಶ್ಯ ವೈಭವಕ್ಕೆ ಜನರು ಫೀದಾ ಆಗಿದ್ದಾರೆ. ದೈವ ಕೋಲದ ಅವತಾರಗಳನ್ನು ತೋರಿಸಿರುವ ರೀತಿ, ಕ್ಲೈಮ್ಯಾಕ್ಸ್‌ನಲ್ಲಿ ರಿಷಬ್ ಅವರ ನಟನೆ ಅದ್ಭುತವಾಗಿದೆ. ಕನ್ನಡ ಮಾತ್ರಲ್ಲದೇ ವಿವಿಧ ಭಾಷೆಯ ಪ್ರೇಕ್ಷಕರು ಕನ್ನಡ ಕಥೆಯನ್ನು ಒಪ್ಪಿ, ಅಪ್ಪಿಕೊಂಡಿದ್ದಾರೆ. "ಕಾಂತಾರ' ಸಿನಿಮಾದ ಕ್ಲೈಮ್ಯಾಕ್ಸ್‌ಗಿಂತಲೂ "ಕಾಂತಾರ ಚಾಪ್ಟರ್ 1' ಕ್ಲೈಮ್ಯಾಕ್ಸ್ ಅದ್ಭುತವಾಗಿದೆ. ಥಿಯೇಟರ್‌ನಿಂದ ಹೊರಬಂದ ಮೇಲೂ ಪ್ರೇಕ್ಷಕರು ಭಾವುಕರಾಗುತ್ತಿದ್ದಾರೆ. ಅಷ್ಟರ ಮಟ್ಟಿಗೆ ಸಿನಿಮಾ ಜನರ ಮನಸ್ಸಿಗೆ ಇಳಿದಿದೆ. ಒಟ್ಟಾರೆ ಹೇಳುವುದಾದರೆ ಕಾಂತಾರ ಕನ್ನಡ ಇಂಡಸ್ಟ್ರಿಯ ಮತ್ತೊಂದು ಮೈಲಿಗಲ್ಲು ಸಿನಿಮಾ ಆಗಿ ಹೊರಹೊಮ್ಮಿದೆ. ಕರ್ನಾಟಕ, ದೇಶ, ವಿದೇಶಗಳಲ್ಲೂ ಸಿನಿಮಾ ಬಿಡುಗಡೆ ಆಗಿದೆ.
"ಕಾಂತಾರ' ಸಿನಿಮಾದ ನೆನಪುಗಳೊಂದಿಗೆ "ಕಾಂತಾರ ಚಾಪ್ಟರ್ 01' ಸಾಗುತ್ತದೆ. ಇದು ನೋಡುಗರಿಗೆ ಗೊತ್ತಾಗುತ್ತದೆ. ಸಿನಿಮಾದ ಕೊನೆಯಲ್ಲಿ ರಿಷಬ್ ಶೆಟ್ಟಿ ಅವರು "ಕಾಂತಾರ ಚಾಪ್ಟರ್ 2' ಮಾಡುವುದಾಗಿ ಸುಳಿವು ಬಿಟ್ಟುಕೊಟ್ಟಿದ್ದಾರೆ. ಸದ್ಯ ಅವರು ಮೂರು ವರ್ಷ ಒಂದೇ ಸಿನಿಮಾದಲ್ಲಿ ಬ್ಯೂಸಿ ಆಗಿದ್ದರು. ಅವರು ಕೊಂಚ ಬ್ರೇಕ್ ತೆಗೆದುಕೊಳ್ಳಲಿದ್ದಾರೆ. ಬಳಿಕ ಈಗಾಗಲೇ ಒಪ್ಪಿಕೊಂಡ ಸಿನಿಮಾಗಳಲ್ಲಿ ಮತ್ತೆ ಬ್ಯೂಸಿಯಾಗಲಿದ್ದಾರೆ. ಬಳಿಕವೇ "ಕಾಂತಾರ ಚಾಪ್ಟರ್ 2' ಬಗ್ಗೆ ಹೆಚ್ಚಿನ ಮಾಹಿತಿ ಸಿಗಬಹುದೆಂದು ಹೇಳಲಾಗುತ್ತಿದೆ.












Click it and Unblock the Notifications