Kantara Chapter 1: ಕಾಂತಾರ ಚಾಪ್ಟರ್-1 ಪ್ರೀಮಿಯರ್ ಶೋ ನೋಡಿದವರು ಏನಂದ್ರು?
Kantara Chapter 1: ರಿಷಬ್ ಶೆಟ್ಟಿ ಕನಸಿನ ಕಾಂತಾರ ಚಾಪ್ಟರ್-1 ಸಿನಿಮಾ ತೆರೆ ಕಾಣಲು ಕ್ಷಣಗಣನೆ ಶುರುವಾಗಿದೆ. ಬುಧವಾರವೇ ಪ್ರೀಮಿಯರ್ ಶೋ ಇದ್ದಿದ್ದರಿಂದ ಹಲವು ಸಿನಿಮಾ ವೀಕ್ಷಿಸಲು ಮುಗಿಬಿದ್ದಿದ್ದಾರೆ. ಪ್ರೀಮಿಯರ್ ಶೋ ನೋಡಿ ಬಂದವರು ಸಿನಿಮಾ ಬಗ್ಗೆ ಉತ್ತಮ ಪ್ರತಿಕ್ರಿಯೆ ಹೊರಹಾಕುತ್ತಿದ್ದಾರೆ. ನಾಳೆ ಸರ್ಕಾರಿ ರಜೆಯೂ ಇರುವ ಕಾರಣ ಎಲ್ಲ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಬುಕಿಂಗ್ ಕಂಡುಬಂದಿದೆ. ಕಾಂತಾರ ಸಿನಿಮಾದಂತೆಯೇ ಪ್ರೀಕ್ವೆಲ್ ಕೂಡ ಮುಂಗಡ ಬುಕಿಂಗ್‌ನಲ್ಲಿ ಭಾರೀ ದಾಖಲೆ ಬರೆದಿದೆ. ಬರೋಬ್ಬರಿ 4 ಲಕ್ಷಕ್ಕಿಂತ ಹೆಚ್ಚು ಟಿಕೆಟ್‌ಗಳು ಮುಂಗಡವಾಗಿ ಮಾರಾಟವಾಗಿ ಭರ್ಜರಿ ದಾಖಲೆ ಬರೆದಿದೆ.
ರಿಷಬ್ ಶೆಟ್ಟಿ ಅವರ ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1 ಚಿತ್ರವು ಅಂತಿಮವಾಗಿ ಚಿತ್ರಮಂದಿರಗಳಿಗೆ ತಲುಪಿದ್ದು, ಟ್ವಿಟರ್‌ನಲ್ಲಿ ಸಿಕ್ಕಾಪಟ್ಟೆ ಚರ್ಚೆಯಲ್ಲಿದೆ. ಕೆಲವು ವೀಕ್ಷಕರು ಪ್ರೀಮಿಯರ್ ನೋಡಿ ಅದ್ಭುತ ಎಂದು ಶ್ಲಾಘಿಸುತ್ತಿದ್ದಾರೆ. ಸಿನಿಮಾದಲ್ಲಿನ ಭವ್ಯ ದೃಶ್ಯಗಳನ್ನು ಕಂಡು ಬೆರಗಾಗಿದ್ದಾರೆ. ಹಲವಾರು ಅಭಿಮಾನಿಗಳು ಚಿತ್ರದ ಪಾತ್ರಗಳು ಹಾಗೂ ವಿಎಫ್‌ಎಕ್ಸ್ ಕಂಡು ಪ್ರಶಂಸೆಯ ಸುರಿಮಳೆಗೈಯುತ್ತಿದ್ದಾರೆ. ಕಾಂತಾರದಲ್ಲಿ ರಿಷಬ್ ಶೆಟ್ಟಿ ಅಭಿನಯ, ರುಕ್ಮಿಣಿ ವಸಂತ್ ಗ್ಲಾಮರ್, ಬಹಳ ಭವ್ಯವಾದ ದೃಶ್ಯಗಳಿವೆ. ಇದನ್ನು ಚಿತ್ರಮಂದಿರಗಳಲ್ಲಿ ನೋಡಲೇಬೇಕು ಎಂದು ರಿವ್ಯೂ ಕೊಡುತ್ತಿದ್ದಾರೆ.

ಬುಕಿಂಗ್‌ನಲ್ಲೂ ದಾಖಲೆ
ರಿಷಬ್ ಶೆಟ್ಟಿಯ ನಿರ್ದೇಶಿಸಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಕಾಂತಾರ ಭಾಗ-1 ಚಿತ್ರವು ಅಕ್ಟೋಬರ್ 2ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರದ ಮುಂಗಡ ಟಿಕೆಟ್‌ಗಳ ಮಾರಾಟವು 4 ಲಕ್ಷಕ್ಕಿಂತ ಅಧಿಕವಾಗಿದ್ದು, ಸುಮಾರು 11,800 ಪ್ರದರ್ಶನಗಳಿಗೆ 11.46 ಕೋಟಿ ರೂಪಾಯಿ ಆದಾಯ ಗಳಿಸಿದೆ ಎಂದು ವರದಿಯಾಗಿದೆ. ಬ್ಲಾಕ್ ಸೀಟ್‌ಗಳೊಂದಿಗೆ ಈ ಮೊತ್ತ 18.95 ಕೋಟಿ ರೂಪಾಯಿಗೆ ತಲುಪಿದೆ.
ಕನ್ನಡ ಪ್ರೇಕ್ಷಕರು ಈ ಸಿನಿಮಾ ವೀಕ್ಷಿಸಲು ತುದಿಗಾಲಿನಲ್ಲಿ ನಿಂತಿದ್ದು, ಬರೋಬ್ಬರಿ 2,14,933 ಟಿಕೆಟ್‌ಗಳು ಮಾರಾಟವಾಗಿ 1,780 ಪ್ರದರ್ಶನಗಳು ರಾಜ್ಯದಲ್ಲಿ ನಿಗದಿಯಾಗಿವೆ. ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಇತರ ಭಾಷೆಗಳಲ್ಲಿಯೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಿನಿಮಾ ಕದಂಬ ವಂಶದ ಕಾಲಘಟ್ಟದಲ್ಲಿದ್ದು, ಭೂತ ಕೋಲ ಆಚರಣೆಯ ಕಥೆಯನ್ನ ವರ್ಣಿಸುತ್ತದೆ. ಇಂದು ಕಾಂತಾರ ಚಿತ್ರದ ಪ್ರೀಕ್ವೆಲ್ ಆಗಿದ್ದು, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ಮೂಡಿಬಂದಿದೆ. ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಮತ್ತು ಜಯರಾಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಈ ಕಥೆಯು ಕ್ರಿ.ಶ.300ರಲ್ಲಿ ಕದಂಬ ರಾಜವಂಶದ ಆಳ್ವಿಕೆಯಲ್ಲಿ ನಡೆಯುತ್ತದೆ. ಇದು ಭೂತಕೋಲ ಆಚರಣೆಯ ಮೂಲವನ್ನು ಅನಾವರಣಗೊಳಿಸುತ್ತದೆ. ಮೊದಲಾರ್ಧದಲ್ಲಿ ಹಳ್ಳಿಗನಾಗಿ ಕಾಣಿಸಿಕೊಂಡಿದ್ದ ರಿಷಬ್ ಶೆಟ್ಟಿ ಅವರು ಈ ಸಿನಿಮಾದಲ್ಲಿ ಉಗ್ರ ಯೋಧನಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಪ್ರಮುಖ ಖಳನಾಯಕನಾಗಿ ಗುಲ್ಶನ್ ದೇವಯ್ಯ ನಿರ್ವಹಿಸಿದ ಕ್ರೂರ ರಾಜಕುಮಾರ ಕುಲಶೇಖರನೊಂದಿಗಿನ ಯುದ್ಧದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ ಎಂದು ಟ್ರೈಲರ್‌ನಿಂದ ತಿಳಿದುಬಂದಿದೆ. ಬಾಕ್ಸಾಫೀಸ್‌ನಲ್ಲಿ ಹೇಗೆ ಸದ್ದು ಮಾಡಲಿದೆ ಎಂಬುದು ತಿಳಿಯಲಿದೆ.












Click it and Unblock the Notifications