Kantara Chapter 1: ರಿಷಬ್ ಸಿನಿಮಾಗೆ ಸಾಲು ಸಾಲು ವಿಘ್ನಗಳು, ದೈವ ನುಡಿದಿದ್ದೇ ಮತ್ತೆ ನಿಜವಾಯ್ತಾ?
ರಿಷಬ್ ಶೆಟ್ಟಿ ನಿರ್ದೇಶಿಸುತ್ತಿರುವ ಕಾಂತಾರ ಚಾಪ್ಟರ್ 1 ಸಿನಿಮಾಗೆ ಎದುರಾಗುತ್ತಿರುವ ವಿಘ್ನಗಳು ಒಂದೆರಡಲ್ಲ. ರಿಷಬ್ ನಿರ್ದೇಶಿಸಿ ನಟಿಸಿದ ಕಾಂತಾರ ಸಿನಿಮಾಗೆ ಭಾರತದಾದ್ಯಂತ ಭಾರಿ ಮೆಚ್ಚುಗೆ ಸಿಕ್ಕ ಹಿನ್ನೆಲೆ ಈ ಚಿತ್ರದ ಸರಣಿಯನ್ನು ಶುರುಮಾಡಿದ್ದಾರೆ. ಆದರೆ ಈ ಸಿನಿಮಾ ಚಿತ್ರೀಕರಣ ಇನ್ನೂ ನಡೆಯುತ್ತಿರುವಾಗಲೇ ವಿಘ್ನಗಳ ಮೇಲೆ ವಿಘ್ನಗಳು ಎದುರಾಗುತ್ತಲೇ ಇವೆ. ಕಾಂತಾರ ಸಿನಿಮಾದಲ್ಲಿ ದೈವದ ಬಗ್ಗೆ ಉಲ್ಲೇಖಿಸಲಾಗಿತ್ತು. ಆದರೆ ಇತ್ತೀಚೆಗೆ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಕಾಂತಾರ ಸಿನಿಮಾ ಮೇಲೆ ದೈವ ಮುನಿಸಿಕೊಂಡಿದೆಯಾ ಎಂಬ ಅನುಮಾನಗಳನ್ನು ಹುಟ್ಟುಹಾಕುತ್ತಿದೆ. ರಿಷಬ್ ಶೆಟ್ಟಿ ಅವರ ಈ ಸಿನಿಮಾ ತಂಡದ ಕಲಾವಿದರ ಸರಣಿ ಸಾವು ಇದಕ್ಕೆ ಪುಷ್ಟಿ ನೀಡುತ್ತಿದೆ. ಒಟ್ಟಾರೆ ಕಾಂತಾರಾ ಚಾಪ್ಟರ್ 1 ಸಿನಿಮಾ ವಿಘ್ನಗಳ ಸರಮಾಲೆಯಲ್ಲಿ ಸಿಲುಕಿದೆ. ಈ ಹಿಂದೆ ರಿಷಬ್ ಶೆಟ್ಟಿ ಅವರಿಗೆ ದೈವ ನುಡಿದಿದ್ದ ಮಾತುಗಳಿಗೆ ಹೋಲುವಂತಹ ಘಟನೆಗಳು ನಡೆಯುತ್ತಲೇ ಇವೆ.
ರಿಷಬ್ ಶೆಟ್ಟಿ ಅವರು ಈ ವಿಘ್ನಗಳ ನಡುವೆಯೂ ಶೂಟಿಂಗ್ ಮುಂದುವರಿಸಿದ್ದಾರೆ. ನಿನ್ನೆ ಶೂಟಿಂಗ್ ವೇಳೆ ಮತ್ತೊಂದು ಅವಘಡ ಸಂಭವಿಸಿದ್ದು, ರಿಷಬ್ ಶೆಟ್ಟಿ ಸೇರಿ ಹಲವು ಮಂದಿ ಇದ್ದ ಬೋಟ್ ಮುಗುಚಿ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಘಟನೆಯಲ್ಲಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಕೆಲವರು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮಾಸ್ತಿಕಟ್ಟೆಯ ಮಾಣಿ ಜಲಾಶಯದಲ್ಲಿ ಈ ಘಟನೆ ನಡೆದಿದೆ.

ಮೂರು ಸರಣಿ ಸಾವು
ಕಾಂತಾರಾ ಸಿನಿಮಾದ ಶೂಟಿಂಗ್‌ನಲ್ಲಿ ಭಾಗವಹಿಸಿದ್ದ ಮೂರು ಕಲಾವಿದರು ಸರಣಿಯಾಗಿ ಸಾವನ್ನಪ್ಪಿರುವುದು ಕೂಡ ಆತಂಕಕ್ಕೀಡು ಮಾಡಿದೆ. ಮೊದಲಿಗೆ ಕೊಲ್ಲೂರು ಬಳಿ ಕೇರಳ ಮೂಲದ ಕಪಿಲ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಬಳಿಕ ಇದೇ ಸಿನಿಮಾ ಶೂಟಿಂಗ್ ಮುಗಿಸಿ ಬಂದಿದ್ದ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ರಾಕೇಶ್ ಪೂಜಾರಿ ಹೃದಯಾಘಾತದಿಂದ ಹಠಾತ್ ನಿಧನರಾಗಿದ್ದರು. ಈ ಘಟನೆ ಮಾಸುವ ಮುನ್ನವೇ ಶೂಟಿಂಗ್‌ಗಾಗಿ ಬಂದಿದ್ದ ಮಿಮಿಕ್ರಿ ಕಲಾವಿದ ಕೂಡ ಹೃದಯಾಘಾತದಿಂದ ಸಾವನಪ್ಪಿದ್ದರು. ಈ ಆತಂಕದಲ್ಲೇ ಇದ್ದ ಚಿತ್ರತಂಡಕ್ಕೆ ನಿನ್ನೆ ರಾತ್ರಿ ಮತ್ತೊಂದು ಆಪತ್ತು ಎದುರಾಗಿದೆ. ಈ ಬಾರಿ ರಿಷಬ್ ಶೆಟ್ಟಿಯೂ ಇದ್ದು ದೋಣಿ ನೀರಿನಲ್ಲಿ ಮುಗುಚಿರುವ ಘಟನೆ ನಡೆದಿದೆ. ಇದೆಲ್ಲವನ್ನು ಗಮನಿಸಿದರೆ ಕಾಂತಾರ ಸಿನಿಮಾಗೆ ಪದೇ ಪದೇ ವಿಘ್ನಗಳು ಎದುರಾಗುತ್ತಿರುವುದಕ್ಕೂ ದೈವ ನೀಡಿದ್ದ ಎಚ್ಚರಿಕೆಗೂ ಸಂಬಂಧವಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಸಿನಿಮಾ ಶೂಟಿಂಗ್ ಆರಂಭದಿಂದಲೂ ರಿಷಬ್ ಶೆಟ್ಟಿ ಅವರಿಗೆ ಅಡ್ಡಿ ಆತಂಕಗಳು ಎದುರಾಗುತ್ತಲೇ ಇವೆ. ಮೊದಲಿಗೆ ಕಳೆದ ವರ್ಷ ಈ ಸಿನಿಮಾ ಕಲಾವಿದರು ಪ್ರಯಾಣಿಸುತ್ತಿದ್ದ ಮಿನಿ ಬಸ್ ಪಲ್ಟಿಯಾಗಿತ್ತು. ಬಳಿಕ ಹಾಸನ ಬಳಿ ಶೂಟಿಂಗ್‌ಗೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿತ್ತು. ಇದಾದ ನಂತರ ಮೂರು ಮಂದಿ ಸರಣಿಯಾಗಿ ಸಾವನ್ನಪ್ಪಿದ್ದರು. ಇದೂ ಸಾಲದೆಂಬಂತೆ ನಿನ್ನೆ ಮತ್ತೊಂದು ದುರ್ಘಟನೆ ಸಂಭವಿಸಿದೆ. ರಿಷಬ್ ಸಿನಿಮಾಗೆ ಯಾಕೆ ಪದೇ ಪದೇ ಇಂತಹ ಅಡ್ಡಿಗಳು ಎದುರಾಗುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಹಿಂದೆ ರಿಷಬ್‌ಗೆ ದೈವ ನುಡಿದಿದ್ದ ಎಚ್ಚರಿಕೆ ಮಾತುಗಳು ನಿಜವಾಗುತ್ತಿದೆ ಎಂದೂ ಹೇಳಲಾಗುತ್ತಿದೆ.












Click it and Unblock the Notifications