Kantara Chapter 1: ಕೊಟ್ಟ ಮಾತಿನಂತೆ ಹರಕೆ ತೀರಿಸಿದ ರಿಷಬ್ ಶೆಟ್ಟಿ, ದೈವ ಕೊಟ್ಟ ಅಭಯ ಏನು?
ನಟ ರಿಷಬ್ ಶೆಟ್ಟಿ ಅವರ ಕಾಂತಾರ ಚಾಪ್ಟರ್-1 ಕೂಡ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿದೆ. ಈ ಸಿನಿಮಾದಲ್ಲಿಯೂ ರಿಷಬ್ ತುಳುನಾಡಿನ ದೈವಗಳನ್ನು ಉಲ್ಲೇಖಿಸಿದ್ದರು. ಅಲ್ಲದೆ ತಮ್ಮ ಪಾತ್ರಕ್ಕಾಗಿ ಅವರು ದೈವಿಕ ನಿಯಮಗಳನ್ನು ಕೂಡ ಪಾಲಿಸಿದ್ದರು. ದೈವದ ಆಶೀರ್ವಾದದಿಂದಲೇ ಈ ಸಿನಿಮಾ ತೆರೆಗೆ ಬಂದು, ಸಕ್ಸಸ್ ಕಂಡಿದೆ ಎನ್ನುವುದು ರಿಷಬ್ ಅವರ ಮನದಾಳದ ಮಾತು. ಸಿನಿಮಾ ಯಶಸ್ಸಿನ ಹಿನ್ನೆಲೆ ರಿಷಬ್ ದಂಪತಿ ಹಾಗೂ ಚಿತ್ರತಂಡ ಮಂಗಳೂರಿನಲ್ಲಿ ವಾರಾಹಿ ಪಂಜುರ್ಲಿ ದೈವಕ್ಕೆ ಹರಕೆಯ ನೇಮೋತ್ಸವ ಸಲ್ಲಿಸಿದ್ದಾರೆ. ಈ ವೇಳೆ ದೈವ ರಿಷಬ್‌ಗೆ ಅಭಯ ನೀಡಿದೆ.
ರಿಷಬ್ ನಿರ್ದೇಶಿಸಿ ನಟಿಸಿದ್ದ ಕಾಂತಾರ ಸಿನಿಮಾ ಮೊದಲಿಗೆ ಕನ್ನಡದಲ್ಲಿ ರಿಲೀಸ್ ಆಗಿ ನಂತರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಅಭೂತಪೂರ್ವ ಯಶಸ್ಸಿನ ಹಿನ್ನೆಲೆ ರಿಷಬ್ ಇದರ ಪ್ರೀಕ್ವೆಲ್ ಸಿನಿಮಾ "ಕಾಂತಾರ ಚಾಪ್ಟರ್-1" ಘೋಷಿಸಿದ್ದರು. ಈ ಸಿನಿಮಾ ಮಾಡುವ ಮುನ್ನವೂ ರಿಷಬ್ ದೈವದ ಮೊರೆ ಹೋಗಿದ್ದರು. ಅದರಂತೆ ಹಲವು ಸವಾಲುಗಳನ್ನು ಎದುರಿಸಿ ಹೊರತಂದ ಈ ಸಿನಿಮಾಗೂ ಒಳ್ಳೆಯ ಸ್ಪಂದನೆ ಸಿಕ್ಕಿದೆ. ಈ ಹಿನ್ನೆಲೆ ರಿಷಬ್ ದೈವಕ್ಕೆ ಹರಕೆ ತೀರಿಸಿದ್ದಾರೆ.

ಮಂಗಳೂರಿನ ಯೆಯ್ಯಾಡಿಯ ಬಾರೆಬೈಲ್‌ನ ಶ್ರೀಅರಸು ಧರ್ಮ ಜಾರಂದಾಯ, ಜಾರಂದಾಯ ಬಂಟ ಹಾಗೂ ವರಾಹಿ ದೈವಸ್ಥಾನದಲ್ಲಿ ಕಾಂತಾರ ಚಿತ್ರತಂಡವು ವಿಶೇಷ ಹರಕೆ ತೀರಿಸಿದೆ. ನೇಮೋತ್ಸವ ಸಲ್ಲಿಸುವ ಮೂಲಕ ರಿಷಬ್ ಶೆಟ್ಟಿ ಹಾಗೂ ಪ್ರಗತಿ ರಿಷಬ್ ಶೆಟ್ಟಿ, ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ವಿಜಯ್ ಕಿರಗಂದೂರು ಅವರು ಇದರಲ್ಲಿ ಪಾಲ್ಗೊಂಡಿದ್ದಾರೆ.
ಈ ಸಿನಿಮಾ ನಿರ್ದೇಶನಕ್ಕೂ ಮುನ್ನವೇ ನಟ ರಿಷಬ್ ಶೆಟ್ಟಿ ಪ್ರಾರ್ಥನೆ ಮಾಡಿ ಹರಕೆ ಹೊತ್ತಿದ್ದರು. ಅದರಂತೆ ಸಿನಿಮಾ ಯಶಸ್ಸು ಕಂಡಿರುವ ಹಿನ್ನೆಲೆ ಚಿತ್ರತಂಡದೊಂದಿಗೆ ಹರಕೆ ಸಲ್ಲಿಸಿದ್ದಾರೆ. ನೇಮೋತ್ಸವದ ವೇಳೆ ಪಂಜುರ್ಲಿ ದೈವವು ರಿಷಬ್ ಶೆಟ್ಟಿಯನ್ನ ಅಪ್ಪಿಕೊಂಡು, ಅಭಯ ನೀಡಿದೆ. ವೀಳ್ಯ ಶಕುನದ ಮೂಲಕ ನಾನು ಸಂತುಷ್ಟನಾಗಿದ್ದೇನೆ. ಕಣ್ಣೀರು ಸುರಿಸಬೇಡ... ನಿನ್ನ ಹಿಂದೆ ನಾನು ಇದ್ದೇನೆ ಎಂದು ಪಂಜುರ್ಲಿ ದೈವ ರಿಷಬ್ ಶೆಟ್ಟಿಗೆ ಅಭಯ ನೀಡಿದೆ.
ಒಟ್ಟು ಗಳಿಸಿದ್ದೆಷ್ಟು?
ರಿಷಬ್ ಶೆಟ್ಟಿ ಅವರ ಕಾಂತಾರ ಚಾಪ್ಟರ್-1 ಸಿನಿಮಾ ಅಕ್ಟೋಬರ್ 2ರಂದು ಬಹುಭಾಷೆಗಳಲ್ಲಿ ತೆರೆ ಕಂಡಿತ್ತು. ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 800 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆಯೊಂದಿಗೆ ತನ್ನ ಬ್ಲಾಕ್‌ಬಸ್ಟರ್ ಓಟವನ್ನು ಪೂರ್ಣಗೊಳಿಸಿದೆ. ಅಂತಿಮ ಕಲೆಕ್ಷನ್ ಅಪ್‌ಡೇಟ್ ಪ್ರಕಾರ, ಕಾಂತಾರ ಅಧ್ಯಾಯ 1 ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ 622.19 ಕೋಟಿ ನಿವ್ವಳ ಗಳಿಕೆಯೊಂದಿಗೆ ತನ್ನ ಓಟವನ್ನು ಕೊನೆಗೊಳಿಸಿದೆ. ಇದರಲ್ಲಿ ಹಿಂದಿ-ಡಬ್ಡ್ ಆವೃತ್ತಿಯಿಂದಲೇ 224.53 ಕೋಟಿ ಕಲೆಕ್ಷನ್ ಆಗಿದೆ. ಮೂಲ ಕನ್ನಡ ಆವೃತ್ತಿಯು 199.77 ಕೋಟಿ ರೂಪಾಯಿ ನಿವ್ವಳವನ್ನು ಸಂಗ್ರಹಿಸಿದೆ. ಉಳಿದದ್ದು ತೆಲುಗು, ತಮಿಳು ಮತ್ತು ಮಲಯಾಳಂ ಆವೃತ್ತಿಗಳಿಂದ ಬಂದಿದ್ದು, ಜಿಎಸ್‌ಟಿ ಸೇರಿ ದೇಶೀಯ ಒಟ್ಟು 734.18 ಕೋಟಿ ನಿವ್ವಳ ಸಂಗ್ರಹ ಮಾಡಿದೆ.












Click it and Unblock the Notifications