ಹೊಸ ದಾಖಲೆ ಬರೆದ 2025: ಕನ್ನಡದಲ್ಲೀಗ 6000 ಚಲನಚಿತ್ರಗಳು, ಕಾಳೆಷ್ಟು? ಜೊಳ್ಳೆಷ್ಟು? -ಚೇತನ್ ನಾಡಿಗೇರ್ ಬರಹ
ಹೊಸ ವರ್ಷ 2026ರ ಎಂಟ್ರಿಗೆ ಇನ್ನೂ ಕೆಲವೇ ವಾರಗಳು ಮಾತ್ರ ಬಾಕಿಯಿವೆ. ಆದರೂ, 2025ರಲ್ಲಿ ನಡೆದ ಪ್ರಮುಖ ಘಟನೆಗಳು ಅಥವಾ ರೇಕಾರ್ಡ್ ಬ್ರೇಕಿಂಗ್‌ಗಳನ್ನು ಮೆಲುಕು ಹಾಕಲೇಬೇಕಾಗುತ್ತದೆ. ಈ ವರ್ಷ ಕನ್ನಡದಲ್ಲಿ 250ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆ ಆಗಿರುವುದು ಒಂದು ದಾಖಲೆಯಾದರೆ, ಸದ್ದಿಲ್ಲದೆ ಮತ್ತೊಂದು ದಾಖಲೆ ಆಗಿದೆ. ಈ ವರ್ಷ ಚಿತ್ರರಂಗವು ಆರು ಸಾವಿರದ ಗಡಿ ದಾಟಿದೆ ಎಂದು ಹೇಳಲಾಗುತ್ತಿದೆ. ಅಂದರೆ, 2025ರ ನವೆಂಬರ್ ತಿಂಗಳಲ್ಲಿ ಕನ್ನಡದ 6,000ನೇ ಚಿತ್ರ ಬಿಡುಗಡೆ ಆಗಿದ್ದು, ಆ ಸಂಖ್ಯೆ ಬೆಳೆಯುತ್ತಲೇ ಇದೆ.
1934ರಲ್ಲಿ ಕನ್ನಡದ ಮೊದಲ ಮಾತನಾಡುವ ಚಿತ್ರ 'ಸತಿ ಸುಲೋಚನಾ' ಬಿಡುಗಡೆ ಆಗಿತ್ತು. ಅಲ್ಲಿಂದ 91 ವರ್ಷಗಳಲ್ಲಿ ಚಿತ್ರರಂಗ, ಆರು ಸಾವಿರ ಗಡಿ ದಾಟಿರುವ ಹೆಗ್ಗಳಿಕೆ ಮತ್ತು ದಾಖಲೆಗೆ ಪಾತ್ರವಾಗಿರುವುದು ವಿಶೇಷ. ಕನ್ನಡದಲ್ಲೇ ಇದುವರೆಗೂ 6,000ಕ್ಕೂ ಅಧಿಕ ಚಿತ್ರಗಳು ಬಿಡುಗಡೆಯಾಗಿದ್ದರೆ, ಒಟ್ಟಾರೆ ಭಾರತೀಯ ಚಿತ್ರರಂಗದ ಬೇರೆ ಬೇರೆ ಭಾಷೆಗಳಲ್ಲಿ ಎಷ್ಟು ಚಿತ್ರಗಳು ಬಿಡುಗಡೆ ಆಗಿರಬಹುದು ಒಮ್ಮ ಆಲೋಚಿಸಿ.

ಹಾಗೆ ನೋಡಿದರೆ, ದಕ್ಷಿಣ ಭಾರತದಲ್ಲಿ ಕನ್ನಡ ಮತ್ತು ಮಲಯಾಳಂ ಚಿತ್ರಗಳಿಗೆ ಹೋಲಿಕೆ ಮಾಡಿದರೆ ತೆಲುಗು ಮತ್ತು ತಮಿಳು ಚಿತ್ರರಂಗಗಳಲ್ಲಿ ಮೊದಲಿನಿಂದಲೂ ಚಿತ್ರ ನಿರ್ಮಾಣ ಮತ್ತು ಬಿಡುಗಡೆ ಹೆಚ್ಚೇ ಇದೆ. ಕನ್ನಡದಲ್ಲೇ ಆರು ಸಾವಿರ ಚಿತ್ರಗಳು ಬಂದಿದ್ದರೆ, ತೆಲುಗು ಮತ್ತು ತಮಿಳು ಚಿತ್ರಗಳ ಲೆಕ್ಕ ಎಷ್ಟಾಗಿರಬಹುದು?
1934ರಲ್ಲೇ ಕನ್ನಡದ ಮೊದಲ ಚಿತ್ರ ಬಿಡುಗಡೆಯಾದರೂ, 100ನೇ ಚಿತ್ರ ಬರುವುದಕ್ಕೆ 26 ವರ್ಷಗಳು (1960) ಕಾಯಬೇಕಾಯಿತು. 500 ಚಿತ್ರಗಳು ಬಿಡುಗಡೆಯಾಗುವುದಕ್ಕೆ 42 ವರ್ಷಗಳು (1976), ಸಾವಿರ ಚಿತ್ರ ಬಿಡುಗಡೆ ಆಗುವುದಕ್ಕೆ 51 ವರ್ಷಗಳು (1985), ಎರಡು ಸಾವಿರ ಚಿತ್ರ ಬಿಡುಗಡೆ ಆಗುವುದಕ್ಕೆ 66 ವರ್ಷಗಳು (2000) ಬೇಕಾದವು. ಮೊದಲ 66 ವರ್ಷಗಳಲ್ಲಿ ಎರಡು ಸಾವಿರ ಚಿತ್ರಗಳು ಬಿಡಗಡೆಯಾದರೆ, ಅಲ್ಲಿಂದ 25 ವರ್ಷಗಳಲ್ಲಿ ನಾಲ್ಕು ಸಾವಿರ ಚಿತ್ರಗಳು ಬಿಡುಗಡೆಯಾಗಿವೆ ಎಂದರೆ, ಕನ್ನಡ ಚಿತ್ರರಂಗ ಯಾವ ವೇಗದಲ್ಲಿ ಓಡುತ್ತಿದೆ ಎಂಬುದು ಅರ್ಥವಾದೀತು.
ಸೋಲು-ಗೆಲುವು, ಲಾಭ-ನಷ್ಟ, ಗುಣಮಟ್ಟ ಇವೆಲ್ಲಾ ಒಂದು ಕಡೆಯಾದರೆ, ಏರುತ್ತಿರುವ ಸಂಖ್ಯೆಯೇ ಒಂದು ಅಧ್ಯಯನದ ವಿಷಯ ಎಂದರೆ ತಪ್ಪಿಲ್ಲ. ಒಂದು ಚಿತ್ರದ ಬಿಡುಗಡೆ ಎಂಬುದು ನಂತರದ ಮಾತು. ಅದಕ್ಕೂ ಮೊದಲು ಒಂದು ಚಿತ್ರದ ನಿರ್ಮಾಣ ಸಂಸ್ಥೆಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಬೇಕಾಗುತ್ತದೆ. ನಂತರ ಚಿತ್ರದ ಹೆಸರು. ಮೂಲಗಳ ಪ್ರಕಾರ, 2024ರವರೆಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪ್ರಕಾರ ಬಿಡುಗಡೆಯಾಗಿರುವ ಚಿತ್ರಗಳ ಸಂಖ್ಯೆಯೇ 4,800 ಮೀರುತ್ತದೆ.
ಅಷ್ಟೇ ದಲ್ಲದೆ, ಬೇರೆ ವಾಣಿಜ್ಯ ಮಂಡಳಿಗಳೂ ಇವೆ. ಈ ಪೈಕಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಸುಮಾರು ಸಾವಿರ ಚಿತ್ರಗಳು ಬಿಡುಗಡೆ ಆಗಿವೆ ಎಂದು ಹೇಳಲಾಗುತ್ತದೆ. ಇನ್ನು, ಅಧಿಕೃತವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗದಿದ್ದರೂ, ಹಲವು ಚಿತ್ರೋತ್ಸವಗಳು ಸೇರಿದಂತೆ ಬೇರೆ ಬೇರೆ ವೇದಿಕೆಗಳಲ್ಲಿ ಬಿಡುಗಡೆಯಾದ ಚಿತ್ರಗಳನ್ನು ಒಟ್ಟುಗೂಡಿಸಿದರೆ, ಆ ಸಂಖ್ಯೆ ಆರು ಸಾವಿರ ಮೀರುತ್ತದೆ.
ಬಿಡುಗಡೆಯಾಗಿರುವ ಚಿತ್ರಗಳೇ ಅಷ್ಟಿರುವಾಗ, ತಯಾರಾಗಿ ಬಿಡುಗಡೆಯಾಗದಿರುವ, ಕಾರಣಾಂತರಗಳಿಂದ ನಿಂತು ಹೋಗಿರುವ ಚಿತ್ರಗಳು ಎಷ್ಟಿರಬಹುದು? ತಯಾರಿಕೆಯ ಬೇರೆಬೇರೆ ಹಂತಗಳಲ್ಲಿರುವ ಚಿತ್ರಗಳು ಎಷ್ಟಿರಬಹುದು? ಅವನ್ನೆಲ್ಲಾ ಸೇರಿಸಿದರೆ ಲೆಕ್ಕ ಎಷ್ಟಾಗಬಹುದು? ಚಿತ್ರರಂಗ ಎನ್ನುವುದು ಎಷ್ಟು ಜನರಿಗೆ ಆಸರೆಯಾಗಿರಬಹುದು? ಎಷ್ಟು ಜನ ಚಿತ್ರರಂಗವನ್ನು ನಂಬಿ ಬದುಕಿತ್ತಿರಬಹುದು? ಚಿತ್ರರಂಗ ಎಷ್ಟು ಜನರ ಕನಸು, ನನಸು ಮಾಡಿರಬಹುದು? ಈ ಲೆಕ್ಕ ಇಡುವುದು ಹೇಗೆ? ಇಷ್ಟೆಲ್ಲಾ ದಾಖಲೆಗಳು ಆದ್ರೆ, ಸಾಮಾನ್ಯವಾಗಿ ಇಂತಹ ಪ್ರಶ್ನೆಗಳು ಉದ್ಘವವಾಗುತ್ತವೆ.












Click it and Unblock the Notifications