TG Nandish: ಖ್ಯಾತ ಸಿನಿಮಾ ಸಂಭಾಷಣೆಕಾರ, ಬರಹಗಾರ ಟಿ.ಜಿ.ನಂದೀಶ್ ಹೃದಯಾಘಾತದಿಂದ ನಿಧನ

ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಸಂಭಾಷಣೆಕಾರರಾಗಿ ಗುರುತಿಸಿಕೊಂಡಿದ್ದ ಪ್ರತಿಭಾವಂತ ಬರಹಗಾರ ಟಿ.ಜಿ. ನಂದೀಶ್ (37) ಅವರು ಇಂದು (ಬುಧವಾರ) ಮಧ್ಯಾಹ್ನ ದಿಢೀರ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸದಾ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾ, ಸಾಹಿತ್ಯ ಮತ್ತು ಸಿನಿಮಾ ಬರವಣಿಗೆಯಲ್ಲಿ ತೊಡಗಿದ್ದ ನಂದೀಶ್ ಅವರ ಅಕಾಲಿಕ ಸಾವು ಚಿತ್ರರಂಗಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ.

'ನಂದಿ ರೈಟ್ಸ್' ಮೂಲಕ ಮನೆಮಾತಾಗಿದ್ದ ಪ್ರತಿಭೆ

ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರಾದ ಟಿ.ಜಿ. ನಂದೀಶ್ ಅವರು ಆಶಾ ಮತ್ತು ಗಂಗಾಧರಯ್ಯ ದಂಪತಿಯ ಪುತ್ರ. ಅವರು ಬರಹಗಾರರಾಗಿದ್ದರು, ಸಾಮಾಜಿಕ ಜಾಲತಾಣಗಳಲ್ಲಿ ಅವರು ಬರೆಯುತ್ತಿದ್ದ 'ನಂದಿ ರೈಟ್ಸ್' (Nandi Writes) ಎಂಬ ಬರಹಗಳು ನೆಟ್ಟಿಗರ ಮನ ಗೆದ್ದಿದ್ದವು. ಅತ್ಯಂತ ಆಳವಾದ ಮತ್ತು ತಾರ್ಕಿಕ ಆಲೋಚನೆಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಅವರು ದೊಡ್ಡ ಓದುಗ ಬಳಗವನ್ನು ಸಂಪಾದಿಸಿದ್ದರು.

TG Nandish

ಸಿನಿಮಾ ಮತ್ತು ಕಿರುತೆರೆ ಪಯಣ

ಬೆಂಗಳೂರಿಗೆ ಬಂದು ಚಿತ್ರರಂಗದಲ್ಲಿ ನೆಲೆಕಾಣಲು ಶ್ರಮಿಸುತ್ತಿದ್ದ ನಂದೀಶ್, ಪ್ರಸಿದ್ಧ 'ಚಿತ್ತಾರ' ಸಿನಿಮಾ ಮ್ಯಾಗಜೀನ್‌ನಲ್ಲಿ ಹಲವು ವರ್ಷಗಳ ಕಾಲ ಕೆಲಸ ನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ಚಿತ್ರರಂಗದ ಪ್ರಮುಖ ನಟರು, ನಿರ್ದೇಶಕರು ಹಾಗೂ ತಂತ್ರಜ್ಞರೊಂದಿಗೆ ಅತ್ಯುತ್ತಮ ಒಡನಾಟ ಹೊಂದಿದ್ದರು. 2023ರಲ್ಲಿ ತೆರೆಕಂಡು ವಿಮರ್ಶಕರ ಪ್ರಶಂಸೆ ಗಳಿಸಿದ್ದ 'ಒಂದಂಕೆ ಕಾಡು' (Ondanke Kaadu) ಚಿತ್ರಕ್ಕೆ ನಂದೀಶ್ ಸಂಭಾಷಣೆ ಬರೆದಿದ್ದರು. ಇದರ ಜೊತೆಗೆ ಇತ್ತೀಚಿನ ಜನಪ್ರಿಯ ಸಿನಿಮಾ 'ದೂರದರ್ಶನ' ಸೇರಿದಂತೆ ಹಲವು ಸಿನಿಮಾಗಳಿಗೆ ಸಂಭಾಷಣೆಕಾರರಾಗಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದರು.

ಕೇವಲ ಸಿನಿಮಾಗಳಷ್ಟೇ ಅಲ್ಲದೆ, ಕನ್ನಡದ ಕೆಲವು ಪ್ರಮುಖ ದೂರದರ್ಶನ ಧಾರಾವಾಹಿಗಳಿಗೂ (TV Serials) ಸಂಭಾಷಣೆ ಬರೆಯುವ ಮೂಲಕ ಕಿರುತೆರೆಯಲ್ಲೂ ಗುರುತಿಸಿಕೊಂಡಿದ್ದರು. ಇತ್ತೀಚೆಗೆ ಅವರು ಬೆಂಗಳೂರಿನಿಂದ ತಮ್ಮ ಹುಟ್ಟೂರಾದ ತೀರ್ಥಹಳ್ಳಿಗೆ ಮರಳಿ, ಅಲ್ಲಿಂದಲೇ ತಮ್ಮ ಸಿನಿಮಾ ಮತ್ತು ಲೇಖನ ಬರವಣಿಗೆಯ ಕೆಲಸಗಳನ್ನು ಮುಂದುವರಿಸಿದ್ದರು.

ಬೆಳಗ್ಗೆ ಪೋಸ್ಟ್.. ಮಧ್ಯಾಹ್ನ ಇಲ್ಲ, ವಿಧಿಯ ಆಟ

ಫೇಸ್‌ಬುಕ್‌ನಲ್ಲಿ ಸದಾ ಆಕ್ಟೀವ್ ಆಗಿರುತ್ತಿದ್ದ ನಂದೀಶ್ ಅವರು ಇಂದು (ಬುಧವಾರ) ಬೆಳಗ್ಗೆ ಕೂಡ ಎಂದಿನಂತೆ ತಮ್ಮ ಫೇಸ್‌ಬುಕ್‌ ಪುಟದಲ್ಲಿ ಖಾತೆಯಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದರು. ಆದರೆ, ವಿಧಿಯ ಆಟ ಬೇರೆಯೇ ಆಗಿತ್ತು. ಮಧ್ಯಾಹ್ನದ ವೇಳೆಗೆ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ನಾಳೆ ಅಂತ್ಯಸಂಸ್ಕಾರ

ಮೃತರ ಅಂತಿಮ ಸಂಸ್ಕಾರದ ಕುರಿತು ಕುಟುಂಬದ ಮೂಲಗಳು ಮಾಹಿತಿ ನೀಡಿದ್ದು, ನಾಳೆ (ಮೇ 21, ಗುರುವಾರ) ಮಧ್ಯಾಹ್ನ 12:30ಕ್ಕೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಾಳೂರು ಗ್ರಾಮದಲ್ಲಿ ನಂದೀಶ್ ಅವರ ಅಂತ್ಯಕ್ರಿಯೆ ನೆರವೇರಲಿದೆ ಎಂದು ತಿಳಿದುಬಂದಿದೆ. ಪ್ರತಿಭಾವಂತ ಬರಹಗಾರನನ್ನು ಕಳೆದುಕೊಂಡ ಅವರ ಹುಟ್ಟೂರಿನಲ್ಲೂ ಸದ್ಯ ಶೋಕದ ವಾತಾವರಣ ನಿರ್ಮಾಣವಾಗಿದೆ.

ಕುಟುಂಬಕ್ಕೆ ಆಧಾರವಾಗಿದ್ದ ನಂದೀಶ್‌

ಮೃತ ನಂದೀಶ್ ಅವರಿಗೆ ಪತ್ನಿ, ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಇಡೀ ಕುಟುಂಬಕ್ಕೆ ಇವರೇ ಏಕೈಕ ಆಧಾರವಾಗಿದ್ದರು. "ನಂದೀಶ್‌ಗೆ ಯಾವುದೇ ರೀತಿಯ ಕೆಟ್ಟ ಅಭ್ಯಾಸಗಳು ಇರಲಿಲ್ಲ. ಅತ್ಯಂತ ಸರಳ ಹಾಗೂ ಸೃಜನಶೀಲ ವ್ಯಕ್ತಿಯಾಗಿದ್ದರು" ಎನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲ ಸ್ನೇಹಿತರು ಹಾಗೂ ಚಿತ್ರರಂಗದ ಆಪ್ತರು. ನಂದೀಶ್ ಅವರ ದಿಢೀರ್ ನಿಧನಕ್ಕೆ ಸ್ಯಾಂಡಲ್‌ವುಡ್ ಕಲಾವಿದರು, ಕಿರುತೆರೆಯ ನಟ-ನಟಿಯರು, ಪತ್ರಕರ್ತರು ಹಾಗೂ ಫೇಸ್‌ಬುಕ್‌ನ ಅವರ ಸಾವಿರಾರು ಅಭಿಮಾನಿಗಳು ತೀವ್ರ ಸಂತಾಪ ಸೂಚಿಸಿದ್ದು, ಕಂಬನಿ ಮಿಡಿಯುತ್ತಿದ್ದಾರೆ. ಭಗವಂತ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+