ನಟಿಯರಿಗೂ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್: ರಾಗಿಣಿ ದ್ವಿವೇದಿ ಹೇಳಿದ್ದೇನು?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಹಾಗೂ ಹಲವು ಆರೋಪಿಗಳು ಜೈಲು ಸೇರಿದ್ದಾರೆ. ರೇಣುಕಾಸ್ವಾಮಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಮಾಡಿದ್ದೇ ಈ ಕೊಲೆಗೆ ಕಾರಣ ಎಂದು ಹೇಳಲಾಗಿದೆ. ಅಲ್ಲದೆ ಮೃತ ರೇಣುಕಾಸ್ವಾಮಿ ಬಗ್ಗೆಯೂ ಹಲವು ಆರೋಪಗಳು ಕೇಳಿಬಂದಿತ್ತು. ಪವಿತ್ರಾ ಗೌಡ ಸೇರಿದಂತೆ ಸ್ಯಾಂಡಲ್‌ವುಡ್‌ನ ಹಲವು ನಟಿಯರಿಗೂ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಮಾಡಿದ್ದ ಎಂಬ ಆರೋಪವಿದೆ.
ಇದರಲ್ಲಿ ಮುಖ್ಯವಾಗಿ ಸ್ಯಾಂಡಲ್‌ವುಡ್‌ನ ಕೆಲವು ನಟಿಯರ ಹೆಸರು ಕೂಡ ಕೇಳಿಬಂದಿತ್ತು. ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಶುಭ ಪೂಂಜಾ ಸೇರಿದಂತೆ ಇನ್ನೂ ಹಲವು ನಟಿಯರಿಗೆ ರೇಣುಕಾಸ್ವಾಮಿ ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದರು ಎಂಬ ವಿಚಾರವನ್ನು ಕೊಲೆ ಕೇಸ್ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ ಎಂದೆಲ್ಲ ವರದಿಯಾಗಿತ್ತು.

ಇನ್ನು ಈ ವಿಚಾರವಾಗಿ ನಟಿ ರಾಗಿಣಿ ದ್ವಿವೇದಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ರೇಣುಕಾಸ್ವಾಮಿ ಅವರಿಂದ ನನಗೆ ಯಾವುದೇ ಅಶ್ಲೀಲ ಮೆಸೇಜ್ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ನನಗೆ ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದಾರೆ ಎನ್ನುವ ಅಂಶ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ ಎನ್ನುವ ಸುದ್ದಿ ಹರಿದಾಡಿದೆ, ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ನಟಿ ರಾಗಿಣಿ ಹೇಳಿದ್ದಾರೆ.
ʼಸೆಲೆಬ್ರಿಟಿಗಳ ಸೋಶಿಯಲ್ ಮೀಡಿಯಾಗಳನ್ನು ಸಾಮಾನ್ಯವಾಗಿ ಏಜೆನ್ಸಿಗಳು ನೋಡಿಕೊಳ್ಳುತ್ತವೆ. ಹಾಗಾಗಿ, ಆ ರೀತಿಯ ಅಶ್ಲೀಲ ಮೆಸೇಜ್‌ಗಳು ಬಂದರೂ ನಮ್ಮವರೆಗೆ ತಲುಪುವುದೂ ಇಲ್ಲ. ಇದೊಂದು ಕ್ಷುಲ್ಲಕ ವಿಚಾರ. ಇಂತಹ ವಿಚಾರಗಳಲ್ಲಿ ನಮ್ಮ ಹೆಸರನ್ನು ಮಧ್ಯೆ ತರುವುದು ಒಂದು ಜೋಕ್ ಎನಿಸುತ್ತಿದೆʼ ಎಂದು ನಟಿ ರಾಗಿಣಿ ತಮ್ಮ ಮೇಲಿನ ಗಾಳಿಸುದ್ದಿಗಳಿಗೆ ತೆರೆ ಎಳೆದಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಇನ್ನಿತರೆ ಆರೋಪಿಗಳನ್ನು ವಿಚಾರಣೆ ನಡೆಸಿದಾಗ ರೇಣುಕಾಸ್ವಾಮಿ ತನ್ನ ನಕಲಿ ಅಕೌಂಟ್‌ನಿಂದ ಸ್ಯಾಂಡಲ್‌ವುಡ್‌ನ ಖ್ಯಾತ ನಟಿಯರಿಗೂ ಅಶ್ಲೀಲ ಮೆಸೇಜ್ ಮಾಡಿರುವುದನ್ನು ನೋಡಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿತ್ತು.

ರೇಣುಕಾಸ್ವಾಮಿ ಮೊಬೈಲ್ ಪಡೆದಿದ್ದ ಆರೋಪಿಗಳು, ಈ ವೇಳೆ ಆತ ಮಾಡಿದ್ದ ಮೆಸೇಜ್‌ಗಳನ್ನು ನೋಡಿದ್ದರಂತೆ. ಇದರಲ್ಲಿ ಸ್ಯಾಂಡಲ್‌ವುಡ್ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಶುಭಾ ಪೂಂಜಾ ಸೇರಿದಂತೆ ಅನೇಕ ನಟಿಯರಿಗೂ ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದ ಎಂದು ತನಿಖೆ ವೇಳೆ ಆರೋಪಿಗಳು ಹೇಳಿಕೆ ನೀಡಿದ್ದರು ಎನ್ನಲಾಗಿದೆ.
ʼರೇಣುಕಾಸ್ವಾಮಿ ಮೊಬೈಲ್‌ನಲ್ಲಿ ನಾವು ನಟಿ ರಾಗಿಣಿ, ಶುಭಾ ಪೂಂಜಾ ಸೇರಿದಂತೆ ಅನೇಕ ನಟಿಯರಿಗೆ ಅಶ್ಲೀಲ ಮಸೇಜ್ ಕಳುಹಿಸಿರೋದನ್ನ ನೋಡಿದ್ದೇವೆʼ ಎಂದು ಆರೋಪಿಗಳು ಪೊಲೀಸರಿಗೆ ಮುಂದೆ ಹೇಳಿಕೆ ನೀಡಿದ್ದು, ಇದನ್ನೂ ಕೂಡ ಚಾರ್ಜ್‌ಶೀಟ್‌ನಲ್ಲೂ ದಾಖಲಿಸಲಾಗಿತ್ತು ಎಂದು ವರದಿಯಾಗಿದೆ. ಇದೀಗ ನಟಿ ರಾಗಿಣಿ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ರೇಣುಕಾಸ್ವಾಮಿ ತನಗೆ ಯಾವುದೇ ಅಶ್ಲೀಲ ಮೆಸೇಜ್ ಹಾಕಿಲ್ಲ ಎಂದು ತೆರೆ ಎಳೆದಿದ್ದಾರೆ.

ಪವಿತ್ರಾಗೌಡ ಅವರಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದರಿಂದಲೇ ರೇಣುಕಾಸ್ವಾಮಿಯನ್ನು ನಟ ದರ್ಶನ್ ಹಾಗೂ ಇನ್ನಿತರೆ ಆರೋಪಿಗಳು ಬೆಂಗಳೂರಿಗೆ ಕರೆ ತಂದು ಹಲ್ಲೆ ನಡೆಸಿ, ಕೊಲೆ ಮಾಡಿದ್ದರು ಎಂದು ಆರೋಪಿಸಲಾಗಿದೆ. ಈ ಅಶ್ಲೀಲ ಮೆಸೇಜ್‌ಗಳೇ ಈ ಘಟನೆಗೆ ಕಾರಣ ಎಂದು ಹೇಳಲಾಗಿದೆ.












Click it and Unblock the Notifications