ನಟ ಶಿವಣ್ಣ ಆಸ್ಪತ್ರೆಯಿಂದ ಡಿಸ್ಚಾರ್ಜ್, ಬೆಂಗಳೂರಿಗೆ ಬರುವ ದಿನಾಂಕ ಕೂಡ ಫಿಕ್ಸ್
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಅಮೇರಿಕಾದಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿದ್ದು, ಇತ್ತೀಚೆಗೆ ಸರ್ಜರಿ ಕೂಡ ಸಕ್ಸಸ್ ಆಗಿತ್ತು. ಈ ಬಗ್ಗೆ ವಿಡಿಯೋ ಹಂಚಿಕೊಂಡಿದ್ದ ಶಿವಣ್ಣ ನಾನು ಆರೋಗ್ಯವಾಗಿದ್ದೇನೆ. ಆದಷ್ಟು ಬೇಗ ನಿಮ್ಮ ಮುಂದೆ ಬರುತ್ತೇನೆ ಎಂದಿದ್ದರು. ಸದ್ಯ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಬೆಂಗಳೂರಿಗೆ ಯಾವಾಗ ವಾಪಸ್ಸಾಗಲಿದ್ದಾರೆ ಎನ್ನುವ ಮಾಹಿತಿ ಕೂಡ ಹೊರಬಿದ್ದಿದೆ.
ಅಮೇರಿಕಾದ ಮಿಯಾಮಿ ಕ್ಯಾನ್ಸರ್ ಇನ್ಸ್‌ಟಿಟ್ಯೂಟ್‌ನಲ್ಲಿ ಶಿವಣ್ಣ ಅವರಿಗೆ ಇತ್ತೀಚೆಗೆ ಸರ್ಜರಿ ನಡೆದಿತ್ತು. ಬಳಿಕ ಅವರಿಗೆ ಎರಡು ಬಾರಿ ಮೆಡಿಕಲ್ ಚೆಕಪ್ ಇತ್ತು. ಸದ್ಯ ಈ ಪ್ರಕ್ರಿಯೆ ಕೂಡ ಪೂರ್ಣಗೊಂಡಿದ್ದು, ಶಿವಣ್ಣ ಕ್ಯಾನ್ಸರ್‌ನಿಂದ ಗುಣಮುಖರಾಗಿದ್ದಾರೆ. ಸದ್ಯ ಈ ತಿಂಗಳ ಕೊನೆಯ ವಾರದವರೆಗೂ ಶಿವಣ್ಣ ಅಮೇರಿಕಾದಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ. ಜನವರಿ 24ರ ಬಳಿಕ ಅವರು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸದ್ಯ ಶಿವಣ್ಣ ಫುಲ್ ಆಕ್ಟಿವ್ ಆಗಿದ್ದಾರೆ. ತಮ್ಮ ಕುಟುಂಬದವರೊಂದಿಗೆ ಸೆಲ್ಫಿಗೆ ಪೋಸ್ ನೀಡಿರುವ ಶಿವಣ್ಣ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶಿವಣ್ಣ ಆಸ್ಪತ್ರೆಯಿಂದ ಡಿಸ್ಚಾರ್ಜ್ ಕೂಡ ಆಗಿದ್ದು, ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಆಪರೇಷನ್ ಬಳಿಕ ಮೊದಲ ಬಾರಿಗೆ ಶಿವಣ್ಣ ಹೊಸ ವರ್ಷದಂದು ವಿಡಿಯೋ ಶೇರ್ ಮಾಡಿಕೊಂಡಿದ್ದರು. ವಿಡಿಯೋದಲ್ಲಿ ಹೊಸ ವರ್ಷಕ್ಕೆ ಶುಭಕೋರಿ ಎಲ್ಲರ ಆತಂಕ ದೂರ ಮಾಡಿದ್ದರು. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದಕ್ಕೆ ನಾನು ಚಿರಋಣಿ, ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಎಂದು ಶಿವಣ್ಣ ಶುಭಕೋರಿದ್ದರು.
ಎಲ್ಲರಿಗೂ ನಮಸ್ಕಾರ, ನನಗೆ ಮಾತನಾಡುವಾಗ ಎಲ್ಲಿ ಎಮೋಷನ್ ಆಗ್ತೀನೋ ಎಂದು ಭಯ. ಆ ಭಯ ಅನ್ನೋದು ಮನುಷ್ಯನಿಗೆ ಇದ್ದೇ ಇರುತ್ತೆ. ಆ ಭಯ ನೀಗಿಸಲು ಕೆಲವು ಅಭಿಮಾನಿಗಳು, ಸಹ ಕಲಾವಿದರು, ಸ್ನೇಹಿತರು, ಸಂಬಂಧಿಕರು ಹಾಗೂ ವೈದ್ಯರು ಇರುತ್ತಾರೆ. ನನಗೆ ಚಿಕಿತ್ಸೆ ನೀಡಿದ ವೈದ್ಯ ಸಿಬ್ಬಂದಿ ನೋಡಿಕೊಂಡ ರೀತಿಯಿಂದಲೇ ನಾನು ಇಂದು ಧೈರ್ಯವಾಗಿದ್ದೇನೆ ಎಂದು ಶಿವಣ್ಣ ಹೇಳಿದ್ದರು.

ಆಪರೇಷನ್ ದಿನ ಹತ್ತಿರ ಬರುತ್ತಿದ್ದಂತೆ ತುಂಬಾ ಟೆನ್ಷನ್ ಆಯ್ತು. ಆದರೂ ನನ್ನೊಂದಿಗೆ ನನ್ನೆಲ್ಲ ಸ್ನೇಹಿತರು ಆಪ್ತರು ಇದ್ರು. ಗೀತಾ ಇಲ್ಲದೆ ಶಿವಣ್ಣ ಇಲ್ಲವೇ ಇಲ್ಲ. ಗೀತಾರಂತೆ ಸಪೋರ್ಟ್ ನನಗೆ ಬೇರೆ ಯಾರಿಂದಲೂ ಸಿಗಲ್ಲ. ನನ್ನ ಮಗಳು ನಿವೇದಿತಾ ಸೇರಿದಂತೆ ಹಲವರು ನನ್ನನ್ನ ಮಗುವಂತೆ ನೋಡಿಕೊಂಡಿದ್ದಾರೆ ಎಂದು ಆಸ್ಪತ್ರೆಯಿಂದಲೇ ಶಿವಣ್ಣ ಮಾತನಾಡಿದ್ದರು.
ನನ್ನ ಆಪರೇಷನ್ ಬಗ್ಗೆ ಯಾರೂ ಗೊಂದಲ ಮಾಡಿಕೊಳ್ಳಬೇಡಿ. ತುಂಬಾ ಸಿಂಪಲ್ ಆಗಿ ಆಪರೇಷನ್ ನಡೆದಿದೆ. ಆಪರೇಷನ್ ಬಗ್ಗೆ ವಿವರವಾಗಿ ಹೇಳಲು ಹೋದರೆ ಎಲ್ಲರೂ ಗಾಬರಿಯಾಗ್ತಾರೆ. ನಮ್ಮ ಎಲ್ಲ ಹಂತದಲ್ಲೂ ನಮ್ಮೊಂದಿಗೆ ಇದ್ದೀರಿ ಎನ್ನುವುದೇ ಖುಷಿ. ನಾನು ಶೀಘ್ರದಲ್ಲೇ ಹೊಸ ವರ್ಶನ್‌ನಲ್ಲಿ ನಿಮ್ಮ ಮುಂದೆ ಬರುತ್ತೇನೆ ಎಂದು ಸಿಹಿಸುದ್ದಿ ನೀಡಿದ್ದರು.

ವೈದ್ಯರು ಮೊದಲ ತಿಂಗಳು ವಿಶ್ರಾಂತಿ ಪಡೆಯಲು ಹೇಳಿದ್ದಾರೆ. ಬಳಿಕ ಕೆಲ ತಿಂಗಳ ನಂತರ ಸಹಜ ಸ್ಥಿತಿಗೆ ಮರಳುತ್ತೇನೆ. ನಾನು ಖಂಡಿತ ನನ್ನ ಶೈಲಿಯಲ್ಲೇ ವಾಪಸ್ ನಿಮ್ಮ ಮುಂದೆ ಬರುತ್ತೇನೆ. ಶಿವಣ್ಣ ಮೊದಲು ಹೇಗಿದ್ದನೋ, ಈಗ ಅದಕ್ಕಿಂತ ಡಬಲ್ ಪವರ್ ಇದ್ದೇ ಇರುತ್ತೆ. ಡ್ಯಾನ್ಸ್, ಫೈಟ್, ಲುಕ್ ಎಲ್ಲದರಲ್ಲೂ ಹಾಗೇಯೇ ಇರುತ್ತಾನೆ. ಎಲ್ರಿಗೂ ಲವ್ ಯೂ ಆಲ್, ಹ್ಯಾಪಿ ನ್ಯೂ ಇಯರ್ ಎಂದು ವಿಶ್ ಮಾಡಿದ್ದರು. ಹೀಗಾಗಿ ಶಿವಣ್ಣ ಅವರ ಬರುವಿಕೆಗಾಗಿ ಅಭಿಮಾನಿಗಳು ಕಾತರದಿಂದ ಕಾದಿದ್ದಾರೆ.












Click it and Unblock the Notifications