'ಶಿವಣ್ಣ ತಮಿಳು ಸಿನಿಮಾ ಮಾಡಿಲ್ವಾ? ತಮನ್ನಾ ಬೇಡ ಅಂದ್ರೆ ಅವರ ಸಿನಿಮಾ ನೋಡಬೇಡಿ'
ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ನೇಮಕ ವಿಚಾರವಾಗಿ ವಿವಾದ ಭುಗಿಲೆದ್ದಿದೆ. ತಮನ್ನಾ ಬದಲು ಕನ್ನಡ ನಟಿಯರು ಉಚಿತವಾಗಿಯೇ ರಾಯಭಾರಿ ಆಗ್ತಿದ್ರು, ಹೀಗಿರುವಾಗ ತಮನ್ನಾಗೆ ಕೋಟಿ ಕೋಟಿ ಸಂಭಾವನೆ ಕೊಡುತ್ತಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇದೇ ವಿಚಾರವಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿದ್ದು, ತಮ್ಮ ಸಂಬಂಧಿ ಹಾಗೂ ನಟ ಶಿವರಾಜ್ ಕುಮಾರ್ ತಮಿಳಿನ ಜೈಲರ್ ಸಿನಿಮಾದಲ್ಲಿ ನಟಿಸಿಲ್ಲವೇ? ಎನ್ನುವ ಮೂಲಕ ಟಾಂಗ್ ನೀಡಿದ್ದಾರೆ.
ಮೈಸೂರು ಸ್ಯಾಂಡಲ್ ಸೋಪ್‌ಗೆ ತಮನ್ನಾ ಅವರನ್ನು ರಾಯಭಾರಿಯನ್ನಾಗಿ ಮಾಡಿರುವುದನ್ನು ಸಮರ್ಥಿಸಿಕೊಂಡಿರುವ ಅವರು, ಮಾರ್ಕೆಟಿಂಗ್ ಸ್ಟ್ರ್ಯಾಟಜಿಗಾಗಿ ನಟಿ ತಮನ್ನಾ ಅವರನ್ನು ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿ ಮಾಡಿದ್ದಾರೆ. ಒಂದು ವೇಳೆ ತಮನ್ನಾ ಅವರನ್ನು ವಿರೋಧ ಮಾಡುವುದಾದ್ರೆ ಅವರ ಸಿನಿಮಾಗಳನ್ನೂ ನೀವು ನೋಡಬೇಡಿ ಎಂದು ತಿರುಗೇಟು ನೀಡಿದ್ದಾರೆ.

ಈಗ ಯಾವುದೇ ವಿಷಯಕ್ಕೂ ಟೀಕೆ ಬರುತ್ತೆ. ಬಹುಶಃ ಮಾರ್ಕೆಟಿಂಗ್ ಉದ್ದೇಶದಿಂದ ತಮನ್ನಾ ಅವರನ್ನು ಆಯ್ಕೆ ಮಾಡಿರಬಹುದು. ತಮನ್ನಾ ಅವರನ್ನು ವಿರೋಧಿಸುವುದಾದರೆ ಅವರ ಸಿನಿಮಾಗಳನ್ನೂ ಕೂಡ ನೀವು ನೋಡಬೇಡಿ. ನಟ ಶಿವರಾಜ್ ಕುಮಾರ್ ಅವರು ತಮಿಳಿನ "ಜೈಲರ್" ಸಿನಿಮಾದಲ್ಲಿ ನಟಿಸಿಲ್ವಾ? ಎಂದು ಪ್ರಶ್ನಿಸಿದ್ದಾರೆ.
ಕೆಎಸ್‌ಡಿಎಲ್ ಒಂದು ಸಂಸ್ಥೆಯಾಗಿದ್ದು, ತನ್ನದೇ ನಿರ್ಧಾರ ಕೈಗೊಳ್ಳುವ ಹಕ್ಕು ಸಂಸ್ಥೆಗೆ ಇದೆ. ಆದರೆ ಪ್ರತಿಯೊಂದು ವಿಚಾರದಲ್ಲೂ ತಪ್ಪು ಹುಡುಕುವುದು ಸರಿಯಲ್ಲ. ಏಕೆಂದರೆ ಸಂಸ್ಥೆಯವರು ಕೂಡ ಎಲ್ಲ ರೀತಿಯಲ್ಲಿ ಯೋಚಿಸಿಯೇ ಈ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ. ಎಲ್ಲದರಲ್ಲೂ ತಪ್ಪು ಹುಡುಕುವುದನ್ನು ರಿಪೇರಿ ಮಾಡಲು ಆಗಲ್ಲ ಎಂದಿದ್ದಾರೆ.
ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣ ಅವರಂತಹ ಕನ್ನಡದ ನಟಿಯರಿಗೆ ಇದರಲ್ಲಿ ಅವಕಾಶ ನೀಡಿದ್ದರೆ ತುಂಬಾ ಚೆನ್ನಾಗಿರುತ್ತಿತ್ತು ಎಂದು ಬಿಜೆಪಿ ನಾಯಕ ಕುಮಾರ್ ಬಂಗಾರಪ್ಪ ಕೂಡ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಈ ನಟಿಯರು ಕೂಡ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದ್ದಾರೆ. ಇವರಲ್ಲೇ ಯಾರಿಗಾದರೂ ಅವಕಾಶ ಕೊಟ್ಟಿದ್ರೆ ಕನ್ನಡಿಗರಿಗೆ ಖುಷಿ ಆಗ್ತಿತ್ತು. ಬೇರೆ ರಾಜ್ಯದ ನಟಿಯರು ಪ್ರಚಾರ ಮಾಡಿದರೆ ಮೈಸೂರು ಸ್ಯಾಂಡಲ್ ಸೋಪ್ ಅನುಕೂಲವಾಗುತ್ತೆ ಅಂದ್ರೆ ಅದು ಕೂಡ ಒಳ್ಳೆಯದೇ. ಇದರಿಂದ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ.
ಕನ್ನಡದ ನಟರು ಅಂತರರಾಷ್ಟ್ರೀಯ ಬ್ರ್ಯಾಂಡ್ಗಳಲ್ಲಿ ನಟಿಸುವುದನ್ನು ಸಂಭ್ರಮಿಸುತ್ತೇವೆ. ಉದಾಹರಣೆಗೆ ಯಶ್ ಪೆಪ್ಸಿ ಜಾಹೀರಾತು ಮಾಡಿದಾಗ ಖುಷಿ ಪಡ್ತೀವಿ. ಆದರೆ ಯಶ್ ಅವರು ಜಾಹೀರಾತು ಮಾಡಿರುವುದು ಒಂದು ಜಿಲ್ಲೆಗೆ ಸಂಬಂಧಿಸಿದ್ದಲ್ಲ. ಅದು ಜಾಗತಿಕ ಬ್ರ್ಯಾಂಡ್, ಆದರೆ ಮೈಸೂರು ಸ್ಯಾಂಡಲ್ ಸೋಪ್ ಒಂದು ಜಿಲ್ಲೆಗೆ, ಒಂದು ಪ್ರದೇಶಕ್ಕೆ ಸೇರಿದ್ದು. ಹಾಗಾಗಿ ಅದನ್ನ ನಾವೇ ಉಳಿಸಿಕೊಳ್ಳಬೇಕು. ಮೈಸೂರು ಹೆರಟೇಜ್ ಬ್ರ್ಯಾಂಡ್‌ಗೆ ಕನ್ನಡಿಗರು ಯಾಕೆ ಬೇಡ ಅನಿಸ್ತಿದೆ? ಯಾರೋ ಒಂದಿಬ್ಬರು ಒಪ್ಪಿಕೊಳ್ಳಲಿಲ್ಲ ಅಂದರೇನು? ನೂರಾರು ಜನ ಕಲಾವಿದರಿದ್ದಾರೆ. ಯಾರಿಗಾದರೂ ಕೊಡಬಹುದಿತ್ತು ಅಲ್ವಾ? ಎಂದು ನಟಿ ಕಾರುಣ್ಯ ರಾಮ್ ಕೂಡ ಹೇಳಿದ್ದಾರೆ.












Click it and Unblock the Notifications