ಬಿಗ್‌ಬಾಸ್ ಮೇಲಿನ ಆಸಕ್ತಿ ಎಲೆಕ್ಷನ್‌ಗಳಲ್ಲಿ ತೋರಿಸಿದ್ರೆ ನಮ್ ದೇಶ ಉದ್ಧಾರ ಆಗ್ತಿತ್ತು: ಜಾಹ್ನವಿ
ಕನ್ನಡ ಬಿಗ್‌ಬಾಸ್‌ನ ಕೆಲ ಸ್ಪರ್ಧಿಗಳ ಪರ ಅತಿಯಾದ ಅಭಿಮಾನ ಮತ್ತು ಆವೇಶದ ಬಗ್ಗೆ ಬಿಗ್‌ಬಾಸ್ ಸ್ಪರ್ಧಿ ಜಾಹ್ನವಿ ಮಾತನಾಡಿದ್ದಾರೆ. ತಮ್ಮ ಆತ್ಮೀಯ ಗೆಳತಿ ಹಾಗೂ ಬಿಗ್‌ಬಾಸ್ ಫೈನಲ್‌ಗೆ ಪ್ರವೇಶಿಸಿರುವ ಅಶ್ವಿನಿ ಗೌಡ ಪರವಾಗಿ ಮಾತನಾಡಿದ ಅವರು, ವೋಟಿಂಗ್ ಜೊತೆಗೆ ಅಭಿಮಾನಿಗಳ ವರ್ತನೆ ಬಗ್ಗೆಯೂ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ವಿಡಿಯೋ ಹಂಚಿಕೊಂಡಿರುವ ಜಾಹ್ನವಿ, "ನನ್ನ ಆತ್ಮೀಯ ಗೆಳತಿ ಅಶ್ವಿನಿ ಗೌಡ ಅವರು ಬಿಗ್‌ಬಾಸ್ ಫಿನಾಲೆಗೆ ಬಂದಿದ್ದಾರೆ. ಅವರು ಸಂಪೂರ್ಣ ಮನಸ್ಸಿಟ್ಟು ಆಟ ಆಡಿದ್ದಾರೆ. ನೇರವಾದ ಮಾತುಗಳು, ಶಕ್ತಿ ಮೀರಿ ಟಾಸ್ಕ್‌ಗಳಲ್ಲಿ ಪಾಲ್ಗೊಂಡಿರುವ ರೀತಿ ನನಗೆ ತುಂಬಾ ಇಷ್ಟವಾಗಿದೆ. ನಾನು ಅವರಿಗೆ ವೋಟ್ ಮಾಡಿದ್ದೇನೆ. ನೀವೂ ನಿಮ್ಮ ಅಮೂಲ್ಯ ವೋಟ್‌ಗಳನ್ನು ಅಶ್ವಿನಿ ಅವರಿಗೆ ಹಾಕಿ, ಅವರನ್ನು ಗೆಲ್ಲಿಸೋಣ" ಎಂದು ಮನವಿ ಮಾಡಿದ್ದಾರೆ.

ಇದೇ ವೇಳೆ, ಕೆಲವು ಅಭಿಮಾನಿಗಳ ವರ್ತನೆ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿರುವ ಜಾಹ್ನವಿ "ಕೆಲವರು ತಮ್ಮ ನೆಚ್ಚಿನ ಸ್ಪರ್ಧಿ ಗೆಲ್ಲದಿದ್ದರೆ, ಸುಟ್ಟಾಕ್ತೀವಿ, ಹೀಗೆ ಮಾಡ್ತೀವಿ, ಹಾಗೆ ಮಾಡ್ತೀವಿ ಎಂದು ಬೆದರಿಕೆ ಹಾಕ್ತಿದ್ದಾರೆ. ಈ ರೀತಿಯ ವರ್ತನೆ ಯಾವುದೇ ರೀತಿಯಲ್ಲೂ ವರ್ಕ್ ಆಗಲ್ಲ. ನೀವು ಸ್ಪರ್ಧಿಯ ಪರ ಮಾಡೋ ಈ ಕೆಲಸ ಅವರಿಗೆ ಪಾಸಿಟಿವ್ ಆಗುವುದಿಲ್ಲ, ನೆಗೆಟಿವ್ ಆಗುತ್ತದೆ. ದಯವಿಟ್ಟು ಇದರ ಬಗ್ಗೆ ಹುಷಾರಾಗಿರಿ" ಎಂದು ಎಚ್ಚರಿಸಿದ್ದಾರೆ.
ಬಿಗ್‌ಬಾಸ್ ಒಂದು ಶೋ ಮಾತ್ರ
ಬಿಗ್‌ಬಾಸ್ ಒಂದು ರಿಯಾಲಿಟಿ ಶೋ ಮಾತ್ರ ಎಂಬುದನ್ನು ನೆನಪಿಸಿದ ಅವರು, "ಈ ಎಲ್ಲ ಬೆಳವಣಿಗೆ ನೋಡಿದ್ರೆ ನಗಬೇಕೋ ಅಳಬೇಕೋ ಗೊತ್ತಾಗ್ತಿಲ್ಲ. ಬಿಗ್‌ಬಾಸ್ ಒಂದು ರಿಯಾಲಿಟಿ ಶೋ, ಅದನ್ನು ಎಂಟರ್‌ಟೈನ್‌ಮೆಂಟ್‌ಗಾಗಿ ನೋಡಿ. ಅದನ್ನು ಬಿಟ್ಟು ವೈಯಕ್ತಿಕವಾಗಿ ತಗೊಂಡು ಈ ರೀತಿ ವರ್ತಿಸುವುದು ನಿಜಕ್ಕೂ ಆಶ್ಚರ್ಯಕರ" ಎಂದು ಬುದ್ಧಿಮಾತು ಹೇಳಿದ್ದಾರೆ.

"ಒಂದು ರಿಯಾಲಿಟಿ ಶೋಗೆ ಜನ ತೋರುವ ಆಸಕ್ತಿ, ಆವೇಶ ಮತ್ತು ಉತ್ಸಾಹವನ್ನು ಐದು ವರ್ಷಕ್ಕೊಮ್ಮೆ ಬರುವ ಎಲೆಕ್ಷನ್‌ಗಳಿಗೆ ತೋರಿಸಿದ್ದರೆ, ನಮ್ಮ ದೇಶ ಮತ್ತು ನಾಡು ಈಗಾಗಲೇ ಉದ್ಧಾರ ಆಗುತ್ತಿತ್ತು. ನಮ್ಮ ಜನಪ್ರತಿನಿಧಿ ಯಾರು ಆಗಬೇಕು ಎಂದು ಜನರು ಇಷ್ಟೇ ತಲೆಕೆಡಿಸಿಕೊಂಡಿದ್ದರೆ, ಇಂತಹ ಸ್ಥಿತಿ ಬರುತ್ತಿರಲಿಲ್ಲ" ಎಂದು ಅಭಿಪ್ರಾಯಪಟ್ಟಿದ್ದಾರೆ. ಮಾತಿನ ಕೊನೆಯಲ್ಲಿ, "ಇದನ್ನ ಹೇಳಬೇಕು ಅನಿಸಿತು, ಅದಕ್ಕಾಗಿ ಹೇಳಿದ್ದೇನೆ. ಈ ಬಾರಿ ಅಶ್ವಿನಿ ಗೌಡ ಅವರನ್ನೇ ಗೆಲ್ಲಿಸೋಣ" ಎಂದು ಜಾಹ್ನವಿ ಪುನಃ ತಮ್ಮ ಬೆಂಬಲವನ್ನು ಸ್ಪಷ್ಟಪಡಿಸಿದ್ದಾರೆ.
ಗಿಲ್ಲಿಗೆ ವೋಟ್ ಎಂದು ಕಾಮೆಂಟ್
ಜಾಹ್ನವಿ ಅವರ ಹೇಳಿಕೆ ಬಿಗ್‌ಬಾಸ್ ಸ್ಪರ್ಧೆಯಲ್ಲಿನ ವೋಟಿಂಗ್ ಮನವಿಗಿಂತಲೂ, ಅತಿಯಾದ ಅಭಿಮಾನ, ಬೆದರಿಕೆ ಸಂಸ್ಕೃತಿ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ. ಜಾಹ್ನವಿ ಅವರ ಈ ವಿಡಿಯೋ ಸಾವಿರಾರು ಮಂದಿ ಕಾಮೆಂಟ್ ಮಾಡಿದ್ದಾರೆ. ಇದರಲ್ಲಿ ಬಹುತೇಕರು ವೋಟ್ ಫಾರ್ ಗಿಲ್ಲಿ ಎಂದು ಪ್ರತಿಕ್ರಿಯಿಸಿದ್ದಾರೆ. ನಮಗೆ ಗಿಲ್ಲಿಯೇ ಗೆಲ್ಲಬೇಕು ಎಂದು ಆಸೆ ಬಿಚ್ಚಿಟ್ಟಿದ್ದಾರೆ.












Click it and Unblock the Notifications