Kiccha Sudeep: ಅಹಂಕಾರದಲ್ಲಿ ಅಭಿಮಾನಿಗಳನ್ನ ಮುಂದಿಟ್ಟುಕೊಂಡು ಮಾತಾಡುವ ವ್ಯಕ್ತಿ ನಾನಲ್ಲ: ಸುದೀಪ್
ನಟ ಕಿಚ್ಚ ಸುದೀಪ್ ತಮ್ಮ ಮಾರ್ಕ್ ಸಿನಿಮಾ ಕಾರ್ಯಕ್ರಮದ ಹುಬ್ಬಳ್ಳಿ ವೇದಿಕೆಯಲ್ಲಿ ಆಡಿದ್ದ ಕೆಲ ಮಾತುಗಳು ಸ್ಯಾಂಡಲ್‌ವುಡ್‌ನಲ್ಲಿ ಫ್ಯಾನ್ ವಾರ್ ಸ್ವರೂಪಕ್ಕೆ ತಿರುಗಿತ್ತು. ಬಳಿಕ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಬೇರೊಂದು ವೇದಿಕೆಯಲ್ಲಿ ಆಡಿದ ಮಾತುಗಳು ಕೂಡ ಸುದೀಪ್ ಅಭಿಮಾನಿಗಳನ್ನು ಕೆರಳಿಸಿತ್ತು. ಆದರೆ ಸುದೀಪ್ ಮಾತನಾಡಿದ್ದು ಪೈರಸಿ ಬಗ್ಗೆ ಎಂದು ಈಗಾಗಲೇ ಸ್ಪಷ್ಟನೆಯೂ ನೀಡಿದ್ದಾರೆ. ಇಂದು ತಮ್ಮ "ಮಾರ್ಕ್" ಸಿನಿಮಾದ ಸಕ್ಸಸ್ ಮೀಟ್ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ, "ಅಹಂಕಾರದಲ್ಲಿ ಅಭಿಮಾನಿಗಳನ್ನ ಮುಂದಿಟ್ಟುಕೊಂಡು ಮಾತಾಡುವ ವ್ಯಕ್ತಿ ನಾನಲ್ಲ" ಎಂದಿದ್ದಾರೆ ಕಿಚ್ಚ.
'ಪೈರಸಿ ಬಗ್ಗೆ ಸಿನಿಮಾ ರಿಲೀಸ್ ಆಗುವ 24 ಗಂಟೆ ಮುನ್ನವೇ ನಾನು ಎಚ್ಚರಿಸಿದೆ. ಯಾಕಂದ್ರೆ ನನಗೆ 48 ಗಂಟೆಗಳ ಮುನ್ನವೇ ಆ ಮಾಹಿತಿ ಬಂದಿತ್ತು. ಅವರಿಗೆಲ್ಲ ನಾವೂ ಸರಿಯಾಗಿ ಕೊಟ್ಟಿದ್ದೀವಿ. ನಾನು ನನ್ನ ಸಿನಿಮಾವನ್ನು, ನನ್ನ ಅಭಿಮಾನಿಗಳನ್ನು ಕಾಪಾಡಿಕೊಳ್ಳಲ್ಲ ಅಂದ್ರೆ ಇನ್ಯಾರು ಮಾಡ್ತಾರೆ? ನಾನು ಪರದೆ ಮೇಲೆ ಮಾತ್ರವಲ್ಲ, ಎಲ್ಲ ರೀತಿಯಲ್ಲೂ ಹೀರೋ ಆಗಿ ಇರಬೇಕಾಗುತ್ತೆ. ಹಾಗಂತ ಯಾವುದೇ ಗಲಾಟೆ ಎಲ್ಲ ಮಾಡ್ಕೊಂಡು ಹೋಗುವ ವ್ಯಕ್ತಿ ನಾನಲ್ಲ' ಎಂದಿದ್ದಾರೆ.

'ತಾಳ್ಮೆಯಿಂದ ಇದ್ದಾಗ ಉತ್ತರ ಸಿಗುತ್ತೆ'
'ಪೈರಸಿ ಬಗ್ಗೆ ನಮ್ಮ ಸಂಪರ್ಕಗಳಿಂದ ಬಂದ ದೃಢವಾದ ಮಾಹಿತಿ ಬಂದಾಗ ನಾವು ರೆಡಿ ಇದ್ದೀವಿ ಅಂತ ಹೇಳಿದ್ವಿ. ಸ್ವಲ್ಪ ತಾಳ್ಮೆಯಿಂದ ಇದ್ದಾಗ ಪ್ರತಿಯೊಬ್ಬರಿಗೂ ಅವರ ಉತ್ತರ ಸಿಗುತ್ತೆ. ಇಲ್ಲಿ ಯಾವುದೂ ದೊಡ್ಡದಲ್ಲ, ಇದು ಚಿತ್ರರಂಗ ಅಷ್ಟೇ, ಇದು ಪ್ರೀತಿಯಿಂದ ಸಂಭ್ರಮ ಪಡುವ ವೃತ್ತಿ. ನಿಮ್ಮೆಲ್ಲರನ್ನೂ ಮನರಂಜಿಸಲು, ನಕ್ಕು ನಗಿಸಲು ಇರುವ ವೃತ್ತಿ. ಥಿಯೇಟರ್‌ಗಳ ಮುಂದೆ ಕಾಣಿಸಿದ ಸಂಭ್ರಮ ಅವರೇ ಮನೆಯದ್ದಲ್ಲ. ಅದು ನಮ್ಮನ್ನ ಅವರ ಮನೆಯವರು ಅಂದುಕೊಂಡು ಮಾಡಿದ ಸಂಭ್ರಮ' ಎಂದಿದ್ದಾರೆ.
'ಅಹಂಕಾರದಲ್ಲಿ ಅಭಿಮಾನಿಗಳನ್ನ ಮುಂದಿಟ್ಟುಕೊಂಡು ಮಾತಾಡುವ ವ್ಯಕ್ತಿ ನಾನಲ್ಲ. ಒಂದು ವೇಳೆ ನಾನೇನಾದರೂ ಆ ರೀತಿ ಇದ್ದಿದ್ರೆ, ಇಷ್ಟು ವರ್ಷ ನೀವು ನೋಡಿದ ಸುದೀಪ್ ಸುಳ್ಳು ಎಂದರ್ಥ. ಆದರೆ ನಾನು ಮಾತನಾಡಿದ್ದೀನಿ ಅಂದ್ರೆ, ನಾನೇನೋ ನೋಡಿರಬೇಕು, ಕೇಳಿರಬೇಕು, ದೃಢವಾದ ಮಾಹಿತಿ ಬಂದಿರಬೇಕು. ಅದು ಈಗ ಎಲ್ಲರ ಕಣ್ಣಿಗೆ ಕಾಣಿಸ್ತಿದೆ' ಎಂದು ಸುದೀಪ್ ಹೇಳಿದ್ದಾರೆ.

'ಪೈರಸಿ ತಡೆಗೆ ಸರ್ಕಾರವೂ ಬರಬೇಕು'
'ಇಲ್ಲಿ ಪೈರಸಿ ಅಂತ ಬಂದಾಗ ನಾವು ಮಾತ್ರವಲ್ಲ, ಸರ್ಕಾರವೂ ಅದರ ವಿರುದ್ಧ ಇಳಿಯಬೇಕಾಗುತ್ತೆ. ಪವರ್ ಇರೋದು ಅವರಿಗೆ, ನಾವೆಲ್ಲ ಎಷ್ಟು ಹೋರಾಡಬಹುದೋ ಅಷ್ಟು ಹೋರಾಡಬಹುದು. ಆದರೆ ಒಂದು ಬಲವಾದ ಕಾನೂನಿನ ಭಯ ಹುಟ್ಟಲಿಲ್ಲ ಅಂದಾಗ, ಯಾವ ದೇಶವನ್ನೂ ಉಳಿಸಿಕೊಳ್ಳೋಕೆ ಆಗಲ್ಲ. ಪೈರಸಿ ತುಂಬಾ ಜನರನ್ನು ಸಾಯಿಸುತ್ತಿದೆ' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
'ಇನ್ನು ಚಿತ್ರರಂಗ ಪೈರಸಿ ವಿಚಾರದಲ್ಲಿ ಒಟ್ಟಾಗಿ ನಿಂತಿಲ್ಲ ಅಂತೇನಿಲ್ಲ. ಆ ನೋವು ಅವರವರಿಗೆ ಆದಾಗ ಮಾತ್ರವೇ ತಿಳಿಯುತ್ತಿದೆ. ನನ್ನ ಪ್ರಕಾರ ಕೇವಲ ಚಿತ್ರರಂಗದಿಂದ ಮಾತ್ರ ಇದು ಸಾಧ್ಯವಾಗುವುದಿಲ್ಲ. ನಾವು ಧ್ವನಿ ಅಷ್ಟೇ ಎತ್ತಬಹುದು. ಅಧಿಕಾರ ಇರುವವರು ಈ ವಿಚಾರಕ್ಕೆ ಮಧ್ಯಪ್ರವೇಶಿಸಿದರೆ ಮಾತ್ರವೇ ಏನಾದರೂ ಬದಲಾಗುತ್ತೆ. ಎಲ್ಲದಕ್ಕೂ ಒಂದು ಪರಿಹಾರ ಇದ್ದೇ ಇರುತ್ತೆ. ನಾವೆಲ್ಲ ಸರಿಯಾದ ದಾರಿಯಲ್ಲಿ ಹೋದಾಗ ಮಾತ್ರ ಅದು ಸಾಧ್ಯ. ಈ ಎಲ್ಲದಕ್ಕೂ ನಾನು ಅತಿ ಶೀಘ್ರದಲ್ಲೇ ಉತ್ತರ ಕೊಡ್ತೀನಿ' ಎಂದಿದ್ದಾರೆ.












Click it and Unblock the Notifications