ಥಿಯೇಟರ್‌ಗಳಲ್ಲಿ ಖಾಲಿ ಹೊಡೆದಿದ್ದ ಸಿನಿಮಾ 500 ದಿನ ಹೌಸ್‌ಫುಲ್ ಪ್ರದರ್ಶನ ಕಂಡಿದ್ದೇಗೆ?
ಚಂದನವನ ಎಂದೇ ಕರೆಸಿಕೊಂಡಿದ್ದ ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ ಹಲವು ಸಿನಿಮಾಗಳು ಇತಿಹಾಸದ ಪುಟ ಸೇರಿವೆ. ಈಗೆಲ್ಲ ಒಂದು ಸಿನಿಮಾ ಪ್ರದರ್ಶನ ಚೆನ್ನಾಗಿ ಕಾಣಬೇಕಂದ್ರೆ ಹೆಣಗಾಡುವ ಸ್ಥಿತಿ ಇದೆ. ಹಿಂದೆ ತಿರುಗಿ ನೋಡಿದರೆ 100 ದಿನ, 500 ಪ್ರದರ್ಶನ ಕಂಡಿರುವ ಸಿನಿಮಾಗಳು ಕನ್ನಡದಲ್ಲಿವೆ. ಈ ಪೈಕಿ ಕನ್ನಡದ ಖ್ಯಾತ ನಿರ್ದೇಶಕ, ನಟ ಎಸ್.ನಾರಾಯಣ್ ನಿರ್ದೇಶಿಸಿದ್ದ ಆ ಸಿನಿಮಾ ಕೂಡ ಒಂದು. ಈ ಸಿನಿಮಾ ಮೂಲಕವೇ ಕನ್ನಡಕ್ಕೆ ಮತ್ತೊಬ್ಬ ನಾಯಕ ಎಂಟ್ರಿ ನೀಡಿದ್ದರು. ಮೊದಲ ಸಿನಿಮಾದಲ್ಲೇ ಬ್ಲಾಕ್‌ಬಸ್ಟರ್ ಹಿಟ್ ನೀಡಿದ್ದರು. ಆ ಸಿನಿಮಾ ಯಾವುದು? ಏನಿದರ ದಾಖಲೆ ಎಂಬ ವಿವರ ಇಲ್ಲಿದೆ..
ಎಸ್.ನಾರಾಯಣ್ ಅವರು ಕನ್ನಡ ಚಿತ್ರರಂಗದಲ್ಲಿ ನಟರಾಗಿ, ನಿರ್ದೇಶಕರಾಗಿ ಗುರುತಸಿಕೊಂಡವರು. ತಮ್ಮ ನಿರ್ದೇಶನದ ಕಾಲವನ್ನು ಮೆಲುಕು ಹಾಕಿರುವ ಅವರು, 'ಅದು ಒಂಥರಾ ಸುವರ್ಣ ಕಾಲ, ತುಂಬಾ ಸುಂದರವಾಗಿದ್ದಂತಹ ಕಾಲ. ಆಗ ಒಳ್ಳೊಳ್ಳೇ ಸಿನಿಮಾಗಳನ್ನ ಮಾಡುವ ಅವಕಾಶ ಸಿಕ್ಕಿತ್ತು. ಒಳ್ಳೆಯ ಕಥೆಗಳು ಸಿಗುತ್ತಿತ್ತು. ತುಂಬಾ ಅದ್ಭುತವಾದ ನಾಯಕನಟರು, ಕಲಾವಿದರಿದ್ದರು ಎನ್ನುತ್ತಾರೆ. ಒಂದು ಸಿನಿಮಾ ಒಬ್ಬರಿಂದ ಆಗೋದಿಲ್ಲ, ಒಂದು ಕಥೆ ಬೇಕು, ಕಥೆಗೆ ತಕ್ಕ ಕಲಾವಿದರು ಬೇಕು. ಕಲಾವಿದರಲ್ಲಿ ಬದ್ಧತೆ ಇರಬೇಕು, ಒಳ್ಳೆಯ ತಂತ್ರಜ್ಞರ ಜೊತೆಗೆ ಉತ್ತಮವಾದ ಪ್ರೇಕ್ಷಕರು ಇರಬೇಕು. ಪ್ರೇಕ್ಷಕರೇ ಇಲ್ಲದಿದ್ರೆ ನಾವು ಏನು ಮಾಡಿಯೂ ಪ್ರಯೋಜನ ಇಲ್ಲ' ಎನ್ನುವುದು ಅವರ ಅಭಿಪ್ರಾಯ.
'2003ರಲ್ಲಿ ನನ್ನ ನಿರ್ದೇಶನದ "ಚಂದ್ರಚಕೋರಿ" ಸಿನಿಮಾ 500 ದಿನ ಪ್ರದರ್ಶನ ಕಾಣುತ್ತೆ ಅನ್ನೋದು ನನಗೆ ಗೊತ್ತೇ ಇರಲಿಲ್ಲ. ಆ ಸಿನಿಮಾದಲ್ಲಿ ಶ್ರೀಮುರುಳಿ ನಟಿಸಿದ್ದರು. ಸುಮ್ಮನೆ ಶುರು ಮಾಡಿದ, ಹೀರೋಯಿಸಂ ಇಲ್ಲದ ಸಿನಿಮಾ ಅದು. ಆ ಸಿನಿಮಾ ರಿಲೀಸ್ ಆದ ಮೇಲೆ ಇಂಡಸ್ಟ್ರಿಗೆ ಒಬ್ಬ ಹೀರೋ ಬಂದ. ತುಂಬಾ ಜನ ಈ ಕಥೆ ಕೇಳಿ ರಿಜೆಕ್ಟ್ ಮಾಡಿದ್ರು. ಇದರಲ್ಲಿ ಕಥೆ ಇಲ್ಲ, ಹೀರೋಯಿಸಂ ಇಲ್ಲ ಅಂದಿದ್ರು. ಹೀರೋಯಿಸಂ ಮುಖ್ಯ ಅಲ್ಲ, ಕಥೆಯಲ್ಲಿ ಪಾತ್ರ ತುಂಬಾ ಮುಖ್ಯ. ಪಾತ್ರ ಗೆದ್ದಾಗ ಮಾತ್ರ ಹೀರೋ ಆಗ್ತಾನೆ' ಅಂತಾರೆ ಎಸ್.ನಾರಾಯಣ್.

'ಖಾಲಿ ಥಿಯೇಟರ್‌ನಿಂದ ಹೌಸ್‌ಫುಲ್'
'ಚಂದ್ರಚಕೋರಿ ಸಿನಿಮಾ ರಿಲೀಸ್ ಆದ ಆರಂಭದಲ್ಲಿ ಅಷ್ಟಾಗಿ ಪ್ರದರ್ಶನ ಕಾಣಲಿಲ್ಲ. ಎರಡನೇ ವಾರಕ್ಕೆ ಸಿನಿಮಾ ಥಿಯೇಟರ್‌ನಿಂದ ತೆಗೀಬೇಕು ಅಂತಿದ್ರು. ಆದರೆ ಸಿನಿಮಾ ತೆಗೆದರೆ ಬೇರೆ ಸಿನಿಮಾ ಹಾಕೋಕೆ ಯಾವುದೂ ಇರಲಿಲ್ಲ. ಆಗ ಥಿಯೇಟರ್‌ನವರು ಇದೇ ಸಿನಿಮಾನ ಮುಂದುವರಿಸುತ್ತೀವಿ ಅಂತ ನಿರ್ಮಾಪಕರನ್ನ ಕೇಳಿಕೊಂಡ್ರು. ಆಗ ನಿರ್ಮಾಪಕರು ಬಾಡಿಗೆ ಕೇಳಬೇಡ, ಶೇರ್ ಬಂದ್ರೆ ನೀನೇ ಇಟ್ಕೋ ಅಂದ್ರು. ಆದರೆ ಮೂರನೇ ವಾರ ಕಲೆಕ್ಷನ್ ಆಗುತ್ತೆ, ನಾಲ್ಕನೇ ವಾರ ಹೌಸ್‌ಫುಲ್ ಬೋರ್ಡ್ ಹಾಕಿದ್ರು. ಅದು ನೂರು ದಿನಗಳವರೆಗೆ ಹಾಗೇ ಇತ್ತು' ಎಂದು ಅನುಭವ ಹೇಳಿದ್ದಾರೆ.
'ಆ ಮೇಲೆ ಬೆಳಗಾವಿಯಲ್ಲಿ 500 ದಿನ ಸಿನಿಮಾ ಪ್ರದರ್ಶನ ಕಂಡಿತ್ತು. ಮಹಾರಾಷ್ಟ್ರದ ಸೊಲ್ಲಾಪುರದ ಬಳಿಯೂ ನಮ್ಮ ಕನ್ನಡ ಸಿನಿಮಾ 25 ವಾರ ಓಡಿತ್ತು. ಇದು ಇತಿಹಾಸ ಎಂದು ಎಸ್.ನಾರಾಯಣ್ ನೆನೆದಿದ್ದಾರೆ. ಪಾತ್ರಗಳನ್ನ ಬಯಸಿ ಕಲಾವಿದರು ಬಂದಾಗ ಸಿನಿಮಾ ಗೆಲ್ಲುತ್ತೆ' ಎನ್ನುವುದು ಎಸ್.ನಾರಾಯಣ್ ಅವರು ಹೇಳುವ ಕಿವಿಮಾತು.












Click it and Unblock the Notifications