Bigg Boss: ಬಿಗ್‌ಬಾಸ್ ಮನೆಗೆ ಬಂದ ಫ್ಯಾನ್ಸ್: ಸ್ಪರ್ಧಿಗಳ ಡೈಲಾಗ್ ಕೇಳಿ ಜನ ದಿಲ್ ಖುಷ್
ಬಿಗ್‌ಬಾಸ್ ಕನ್ನಡ ಸೀಸನ್ 11 ಕೆಲವೇ ದಿನಗಳಲ್ಲಿ ಫಿನಾಲೆ ತಲುಪಲಿದೆ. ಪ್ರಸ್ತುತ ಕೇವಲ ಆರು ಜನ ಮಾತ್ರ ಬಿಗ್‌ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಇದೀಗ ತಮ್ಮ ನೆಚ್ಚಿನ ಸ್ಪರ್ಧಿಗಳನ್ನು ನೋಡಲು ಜನ ಬಿಗ್‌ಬಾಸ್ ಮನೆಗೆ ಆಗಮಿಸಿದ್ದಾರೆ. ಇಂದು ಬಿಡುಗಡೆ ಮಾಡಿದ ವಿಡಿಯೋದಲ್ಲಿ ಅಭಿಮಾನಿಗಳು ಬಿಗ್‌ಬಾಸ್ ಮನೆಗೆ ಪ್ರವೇಶ ಮಾಡಿ ತಮ್ಮ ನೆಚ್ಚಿನ ಸ್ಪರ್ಧಿಗಳನ್ನು ಕಂಡು ಜೈಕಾರ ಹಾಕಿದ್ದಾರೆ. ಜೊತೆಗೆ ಸಂತೋಷದಿಂದ ಶಿಳ್ಳೆ ಹೊಡೆದು ಬಿಗಿದಪ್ಪಿದ್ದಾರೆ. ಈ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಹೌದು... ಬಿಗ್‌ಬಾಸ್ ಮನೆಗೆ ಅಭಿಮಾನಿಗಳ ದಂಡು ಆಗಮಿಸಿದೆ. ಸ್ಪರ್ಧಿಗಳು ತಮ್ಮ ಅಭಿಮಾನಿ ಬಳಗ ಕಂಡು ಸಿಕ್ಕಾಪಟ್ಟೆ ಖುಷಿ ಆಗಿದ್ದಾರೆ. ಜೊತೆಗೆ ಪ್ರತಿಯೊಬ್ಬ ಸ್ಪರ್ಧಿಯೂ ಕೂಡ ಡೈಲಾಗ್ ಹೊಡೆಯುವ ಮೂಲಕ ತಮ್ಮ ಫ್ಯಾನ್ಸ್‌ಗಳನ್ನು ಮತ್ತಷ್ಟು ಖುಷಿ ಪಡಿಸಿದ್ದಾರೆ. ಹಾಗಾದರೆ ವೈರಲ್ ಆದ ಪ್ರೋಮೋದಲ್ಲಿ ಏನಿದೆ? ಯಾರು ಯಾವ ಡೈಲಾಗ್ ಹೊಡೆದರು?

ಅಭಿಮಾನಿಗಳ ಮುಂದೆ ಡೈಲಾಗ್
ಗಾರ್ಡನ್ ಏರಿಯಾದಲ್ಲಿ ಬಿಗ್‌ಬಾಸ್ ಪ್ರತಿಯೊಬ್ಬ ಸ್ಪರ್ಧಿಗಳ ಅಭಿಮಾನಿಗಳು ಆಗಮಿಸಿರುವುದು ವೀಡಿಯೋದಲ್ಲಿ ಕಂಡು ಬಂದಿದೆ. ಮೊದಲಿಗೆ ಮೋಕ್ಷಿತಾ ಪೈ ಅವರು ಅಭಿಮಾನಿಗಳ ಮುಂದೆ 'ನಾವು ಬಿಗ್‌ಬಾಸ್ ಮನೆಗೆ ಬಂದಿದ್ದು ಒಬ್ಬರೇ, ಆಡಿದ್ದು ಒಬ್ಬರೇ, ಗೆಲ್ಲೋದು ಕೂಡ ಒಬ್ಬರೇ' ಎಂದು ಡೈಲಾಗ್ ಹೊಡೆದಿದ್ದಾರೆ.
ಜೊತೆಗೆ ತ್ರಿವಿಕ್ರಮ್ ಅವರು ಕೂಡ, 'ಅಡೆತಡೆಗಳನ್ನೆಲ್ಲಾ ದಾಟಿಕೊಂಡು ನಿಮ್ಮಲ್ಲಿ ನಿಮ್ಮ ಅಣ್ಣನೋ ತಮ್ಮನೋ ನುಗ್ಗಿಕೊಂಡು ಬಂದು ನಿಂತುಕೊಂಡರೆ ಈ ರೀತಿಯಾಗಿ ಇರುತ್ತಾನೆ ಎಂದು ಅಂದುಕೊಳ್ಳಿ' ಎಂದು ತಮ್ಮ ಅಭಿಮಾನಿಗಳಿಗೆ ಹೇಳುತ್ತಾರೆ. ಇದು ತೀರಾ ಸಿನಿಮಾ ಡೈಲಾಗ್ ತರಹ ಇತ್ತು. ಆದರೂ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಪರ್ಧಿಯ ಮಾತು ಕೇಳಿ ಶಿಳ್ಳೆ ಹೊಡೆದಿದ್ದಾರೆ.
ಇನ್ನೂ ಹನುಮಂತ ಗಾರ್ಡನ್ ಏರಿಯಾಗೆ ಆಗಮಿಸುತ್ತಿದ್ದಂತೆ ಅವರ ಅಭಿಮಾನಿಗಳು ವಿನ್ನರ್... ವಿನ್ನರ್... ವಿನ್ನರ್... ಎಂದು ಕೂಗಿದ್ದಾರೆ. ಇದರಿಂದಾಗಿ ಹನುಮಂತ ಗಾಬರಿಯಾಗಿದ್ದು ಕಂಡು ಬಂದಿದೆ. ಬಿಗ್‌ಬಾಸ್ ಮನೆಗೆ ಆಗಮಿಸಿದ ವೀಕ್ಷಕರನ್ನು ಕಂಡು ಹನುಮಂತ ಗಾಬರಿಯಿಂದಲೇ ಮಾತನಾಡಿದ್ದಾರೆ, 'ತಂಡಿ ಹೆಚ್ಚಾಗಿ, ನಿಮ್ಮ ನೋಡಿ ಹೆದರಿಕೆ ಬರ್ಲಿಕತ್ಯಾದಾ' ಎಂದು ಹೇಳಿದ್ದಾರೆ.
ಇನ್ನೂ ಇದೇ ಅಭಿಮಾನಿಗಳ ಮುಂದೆ ಸ್ಪರ್ಧಿಗಳ ಜರ್ನಿ ವಿಟಿ ಕೂಡ ಪ್ಲೇ ಮಾಡಿದಂತೆ ಕಾಣಿಸುತ್ತಿದೆ. ಜೊತೆಗೆ ಬಿಗ್‌ಬಾಸ್ ಮನೆಗೆ ಆಗಮಿಸಿದ ಅಭಿಮಾನಿಗಳ ಗುಂಪು ಒಂದೇ ಆಗಿತ್ತಾ ಅಥವಾ ಪ್ರತೀ ಸ್ಪರ್ಧಿ ಗಾರ್ಡನ್ ಏರಿಯಾಕ್ಕೆ ಬರುತ್ತಿದ್ದಂತೆ ಚೇಂಜ್ ಮಾಡಲಾಗುತ್ತಿತ್ತಾ ಅನ್ನೋದು ಸ್ಪಷ್ಟವಾಗಿಲ್ಲ. ಮನೆಗೆ ಆಗಮಿಸಿದ ಜನರ ಒಂದು ಗುಂಪೇ ಪ್ರತಿ ಸ್ಪರ್ಧಿಗಳ ಫೋಟೋ ಹಿಡಿದು ಜೈಕಾರ ಹಾಕಿದಿಯಾ ಎನ್ನುವುದು ನಿಖರವಾಗಿಲ್ಲ.
ಈ ಬಗ್ಗೆ ಇಂದಿನ ಸಂಚಿಕೆಯಲ್ಲಿ ಎಲ್ಲವೂ ಗೊತ್ತಾಗಲಿದೆ. ಆದರೆ ಕಳೆದ ದಿನ ರಾತ್ರಿ ಬಿಗ್‌ಬಾಸ್ ಮನೆಯಲ್ಲಿ ತಮ್ಮ ಅಭಿಮಾನಿಗಳ ಬಳಗವನ್ನು ಕಂಡು ಸ್ಪರ್ಧಿಗಳು ಮಾತ್ರ ಸಖತ್ ಖುಷಿಯಾಗಿದ್ದಾರೆ. ತಮಗೆ ಓಟ್ ಮಾಡಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಜೊತೆಗೆ ಫಿನಾಲೆವರೆಗೂ ಓಟ್ ಮಾಡಿ ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ. ಒಟ್ಟಿನಲ್ಲಿ ಬಿಗ್‌ಬಾಸ್ ಮನೆಯಲ್ಲಿ ಅಭಿಮಾನಿಗಳ ಘೋಷಣೆ ಮುಗಿಲೆತ್ತರಕ್ಕೆ ಕೇಳಿಸಿದೆ. ಸ್ಪರ್ಧಿಗಳಿಗೂ ಗೆಲ್ಲುವ ವಿಶ್ವಾಸ ಹೆಚ್ಚಾಗಿದೆ.












Click it and Unblock the Notifications