ಹೇಮಾ ಮಾಲಿನಿ ಪುತ್ರಿ ದಾಂಪತ್ಯದಲ್ಲಿ ಬಿರುಕು: ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ ಇಶಾ ಡಿಯೋಲ್
ಬಾಲಿವುಡ್‌ನ ಹಿರಿಯ ನಟಿ ಹೇಮಾ ಮಾಲಿನಿ ಹಾಗೂ ಧರ್ಮೇಂದ್ರ ದಂಪತಿಯ ಪುತ್ರಿ ಇಶಾ ಡಿಯೋಲ್ ತಮ್ಮ 12 ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಉದ್ಯಮಿ ಭರತ್ ತಖ್ತಾನಿ ಹಾಗೂ ಇಶಾ ಡಿಯೋಲ್ ದೂರಾಗಿದ್ದು, ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ.
ಇಶಾ ಡಿಯೋಲ್ 2012ರ ಜೂನ್ 29ರಂದು ಉದ್ಯಮಿ ಭರತ್ ತಖ್ತಾನಿ ಅವರನ್ನು ಮುಂಬೈನ ಇಸ್ಕಾನ್ ದೇವಸ್ಥಾನದಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ರಾಧ್ಯ ಮತ್ತು ಮಿರಾಯಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದು, ಕಳೆದ ವರ್ಷ ಸಹ ಈ ದಂಪತಿ 11 ವರ್ಷದ ತುಂಬು ದಾಂಪತ್ಯದ ಖುಷಿಯನ್ನು ಹಂಚಿಕೊಂಡಿದ್ದರು. ಆದರೆ ಏಕಾಏಕಿ ಈ ದಂಪತಿ ಜೀವನದಲ್ಲಿ ಬಿರುಕು ಮೂಡಿದ್ದು, ಇದೀಗ ದಾಂಪತ್ಯ ಜೀವನ ಕೊನೆಗೊಳಿಸಲು ಮುಂದಾಗಿದ್ದಾರೆ.

ಇತ್ತೀಚಿಗೆ ಇಶಾ ಡಿಯೋಲ್ ಹಾಗೂ ಭರತ್ ತಖ್ತಾನಿ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು. ಇದೀಗ ವಿಚ್ಚೇದನದ ಬಗ್ಗೆ ಇಶಾ ಡಿಯೋಲ್ ಹಾಗೂ ಭರತ್ ತಖ್ತಾನಿ ಖಚಿತ ಪಡಿಸಿದ್ದಾರೆ ಎನ್ನಲಾಗಿದೆ.
"ನಾವು ಪರಸ್ಪರ ಒಪ್ಪಿಗೆಯಿಂದ ಬೇರೆಯಾಗಲು ನಿರ್ಧರಿಸಿದ್ದೇವೆ. ಈ ಮೂಲಕ ನಮ್ಮ ಜೀವನದಲ್ಲಿ ಬದಲಾವಣೆಯಾಗಲಿದೆ. ನಮ್ಮ ಇಬ್ಬರು ಮಕ್ಕಳ ಆಸಕ್ತಿ ಮತ್ತು ಅವರ ಜೀವನ ನಮಗೆ ಅತ್ಯಂತ ಮಹತ್ವದ್ದಾಗಿದೆ. ಮುಂದೆ ಕೂಡ ಹಾಗೆ ಇರುತ್ತದೆ. ನಮ್ಮಿಬ್ಬರ ಖಾಸಗಿ ಜೀವನವನ್ನು ಇಬ್ಬರು ಪರಸ್ಪರ ಗೌರವಿಸುತ್ತೇವೆ, ನೀವು ಕೂಡ ನಮ್ಮ ಖಾಸಗಿ ಜೀವನವನ್ನು ಗೌರವಿಸಿದರೆ ಪ್ರಶಂಸಿಸುತ್ತೇವೆ" ಎಂದು ಇಶಾ ಡಿಯೋಲ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಕಳೆದ ಕೆಲವು ದಿನಗಳಿಂದ ಇಶಾ ಡಿಯೋಲ್ ಹಾಗೂ ಭರತ್ ತಖ್ತಾನಿ ಎಲ್ಲೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿರಲಿಲ್ಲ. ನಟಿ ಹೇಮಾ ಮಾಲಿನಿಯ ಹುಟ್ಟುಹಬ್ಬ ಹಾಗೂ ಇಶಾ ಡಿಯೋಲ್ ಹುಟ್ಟುಹಬ್ಬದ ಆಚರಣೆಯ ಸಂದರ್ಭದಲ್ಲಿ ಭರತ್ ತಖ್ತಾನಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ.
ತಮ್ಮ ಎರಡನೇ ಮಗಳು ಮಿರಾಯಾ ಜನಿಸಿದ ನಂತರ ಇಶಾ ಡಿಯೋಲ್ ತಾವು ಬರೆದ ಅಮ್ಮಾ ಮಿಯಾ ಎಂಬ ಪುಸ್ತಕದಲ್ಲಿ ಪತಿಗೆ ತಮ್ಮ ಮೇಲಿದ್ದ ಅಸಮಾಧಾನದ ಬಗ್ಗೆ ಉಲ್ಲೇಖಿಸಿದ್ದರು. 'ನನ್ನ ಎರಡನೇ ಮಗು ಜನಿಸಿದ ನಂತರ ಸ್ವಲ್ಪ ಸಮಯದವರೆಗೆ ಭರತ್‌ಗೆ ನನ್ನಿಂದ ಕಿರಿಕಿರಿ ಅನುಭವಿಸುವುದನ್ನು ನಾನು ಗಮನಿಸಿದೆ. ಈ ಸಮಯದಲ್ಲಿ ನಾನು ಅವರಿಗೆ ಸಾಕಷ್ಟು ಗಮನ ನೀಡುತ್ತಿಲ್ಲ ಎಂದು ಅವರು ಭಾವಿಸಿದರು. ಗಂಡನಿಗೆ ಈ ರೀತಿ ಅನಿಸುವುದು ತುಂಬಾ ಸಹಜ ಏಕೆಂದರೆ, ಆ ಸಮಯದಲ್ಲಿ ನಾನು ಮೊದಲ ಮಗು ರಾಧ್ಯಾ ಪ್ಲೇಸ್ಕೂಲ್ ಹಾಗೂ ಮಿರಾಯಾಳ ಆರೈಕೆ ಬಗ್ಗೆ ಹೆಚ್ಚು ಗಮನ ಹರಿಸುತ್ತಿದೆ' ಎಂದು ಬರೆದುಕೊಂಡಿದ್ದರು.
ಬಾಲಿವುಡ್‌ನ ಡ್ರೀಮ್‌ಗರ್ಲ್ ಹೇಮಾ ಮಾಲಿನಿ ಮಾಲಿನಿ ಪುತ್ರಿಯಾದ ಇಶಾ ಡಿಯೋಲ್ ನಾ ತುಮ್ ಜಾನೋ ನಾ ಹಮ್, ಕ್ಯಾ ದಿಲ್ ನೆ ಕಹಾ, ಹೈಜಾಕ್ ಮತ್ತು ಪ್ಯಾರೆ ಮೋಹನ್ ಸೇರಿದಂತೆ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು.












Click it and Unblock the Notifications