'ದೇವರ' ಕ್ರೇಜ್: ಥಿಯೇಟರ್ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಬಾರಿಸಿದ ಫ್ಯಾನ್ಸ್
ಟಾಲಿವುಡ್ ನಟ ನಂದಮೂರಿ ತಾರಕ್ ರಾಮ್ (ಜ್ಯೂನಿಯರ್ ಎನ್‌ಟಿಆರ್) ಅಭಿನಯ ದೇವರ ಸಿನಿಮಾ ಇಂದು ತೆರೆಗಪ್ಪಳಿಸಿದೆ. ಇಂದು ಮುಂಜಾನೆಯಿಂದ ಹಲವು ಪರದೆಗಳಲ್ಲಿ ಫ್ಯಾನ್ ಶೋ ಇದ್ದಿದ್ದರಿಂದ ಅಭಿಮಾನಿಗಳು ಥಿಯೇಟರ್‌ಗಳತ್ತ ದೌಡಾಯಿಸಿದ್ದರು. ಈ ವೇಳೆ ನೂಕುನುಗ್ಗಲಾಗಿ ಹಲವೆಡೆ ಗಲಾಟೆಗಳು ಕೂಡ ನಡೆದಿರುವುದು ವರದಿಯಾಗಿದೆ.
ಆಂಧ್ರಪ್ರದೇಶದ ಕಡಪ ಜಿಲ್ಲೆಯ ರಾಜಾ ಥಿಯೇಟರ್‌ಗೆ ಎನ್‌ಟಿಆರ್ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ನುಗ್ಗಿದ್ದಾರೆ. ನೆಚ್ಚಿನ ನಟನ ಸಿನಿಮಾ ನೋಡಲು ಹಲವರು ಟಿಕೆಟ್ ಸಿಕ್ಕಿಲ್ಲ. ಈ ಬೇಸರದಿಂದ ಹಲವರು ಟಿಕೆಟ್ ಇಲ್ಲದೆಯೇ ಥಿಯೇಟರ್ ಒಳಗೆ ನುಗ್ಗಿ, ಸಿನಿಮಾ ವೀಕ್ಷಿಸಲು ಮುಂದಾದರು. ಈ ವೇಳೆ ಥಿಯೇಟರ್ ಸಿಬ್ಬಂದಿ ಹಾಗೂ ಫ್ಯಾನ್ಸ್ ನಡುವೆ ವಾಗ್ವಾದ ನಡೆದಿದೆ.

ಟಿಕೆಟ್ ಇಲ್ಲದವರನ್ನು ಕೂಡಲೇ ಹೊರ ಹೋಗುವಂತೆ ಸಿಬ್ಬಂದಿ ಸೂಚಿಸಿದ್ದಾರೆ. ಇದಕ್ಕೆ ಕೋಪಗೊಂಡ ಫ್ಯಾನ್ಸ್, ಥಿಯೇಟರ್ ಸಿಬ್ಬಂದಿಯನ್ನು ಥಳಿಸಿದ್ದಾರೆ ಎಂದು ವರದಿಯಾಗಿದೆ. ಇಷ್ಟೆಲ್ಲ ಅವಾಂತರ ಆಗಿ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣ ಸಿನಿಮಾ ಪ್ರದರ್ಶನ ನಿಲ್ಲಿಸಿದ್ದಾರೆ ಎನ್ನಲಾಗಿದೆ.
ಮತ್ತೊಂದೆಡೆ ಜೂನಿಯರ್ ಎನ್‌ಟಿಆರ್ ಅವರು ಕಟೌಟ್ ಎದುರು ಭಾರಿ ಪಟಾಕಿ ಸಿಡಿಸಲಾಗಿದೆ. ಈ ವೇಳೆ ಕಟೌಟ್ಗೆ ಬೆಂಕಿ ಕೂಡ ಹೊತ್ತಿಕೊಂಡಿರುವುದು ವರದಿಯಾಗಿದೆ. ಕರ್ನಾಟಕದಲ್ಲೂ ಮುಂಜಾನೆ 4 ಗಂಟೆಯಿಂದಲೇ ಪ್ರದರ್ಶನ ಶುರುವಾಗಿದೆ. ಟ್ವಿಟರ್‌ನಲ್ಲಿ ಅಭಿಮಾನಿಗಳು ಈ ಸಿನಿಮಾ ವೀಕ್ಷಣೆಯ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಂಡು ಸಂಭ್ರಮಿಸಿದ್ದಾರೆ. ಈ ಸಿನಿಮಾ ಸದ್ಯ ಟ್ವಿಟರ್ ಟ್ರೆಂಡಿಂಗ್‌ನಲ್ಲೂ ಇದೆ.
ಜೂ.ಎನ್‌ಟಿಆರ್ ನಟನೆಯ ʼದೇವರʼ ಬಹುನಿರೀಕ್ಷಿತ ಸಿನಿಮಾ. ಹಾಗಾಗಿ ಇಂದು ಬಿಡುಗಡೆ ದಿನವೇ ಮಧ್ಯರಾತ್ರಿಯಿಂದಲೇ ಫ್ಯಾನ್ ಶೋಗಳು ಪ್ರದರ್ಶನಗೊಂಡಿವೆ. ಅಭಿಮಾನಿಗಳು ರಾತ್ರಿಯಿಡೀ ಥಿಯೇಟರ್‌ಗಳ ಮುಂದೆ ಜಮಾಯಿಸಿ, ಸಿನಿಮಾ ವೀಕ್ಷಿಸಿ ಖುಷ್ ಆಗಿದ್ದಾರೆ. ಕಟೌಟ್‌ಗಳನ್ನು ನಿಲ್ಲಿಸಿ ನಟನ ಪರ ಘೋಷಣೆಗಳನ್ನು ಮೊಳಗಿಸಿದ್ದಾರೆ. ಥಿಯೇಟರ್‌ನಲ್ಲಿ ಸಿನಿಮಾ ಪ್ರದರ್ಶನಗೊಂಡಾಗ ಅಭಿಮಾನಿಗಳು ಹಬ್ಬವನ್ನೇ ಆಚರಿಸಿದ್ದಾರೆ.

ಕೆಲವೆಡೆ ಫ್ಯಾನ್ಸ್ ಮಿತಿಮೀರಿ ವರ್ತಿಸಿದ್ದು, ಭಾರಿ ಗದ್ದಲ ಎದುರಾಗಿದ್ದರಿಂದ ಶೋಗಳು ಕ್ಯಾನ್ಸಲ್ ಕೂಡ ಆಗಿವೆ. ಈ ಸಿನಿಮಾ ಇಂದು ರಿಲೀಸ್ ಆದ ಕಾರಣ ಕಳೆದೊಂದು ವಾರದಿಂದಲೇ ಎಲ್ಲೆಡೆ ಟಿಕೆಟ್ ಸೋಲ್ಡ್‌ಔಟ್ ಆಗಿತ್ತು. ಹಾಗಾಗಿ ಮೊದಲ ದಿನವೇ ಈ ಸಿನಿಮಾಗೆ ಭರ್ಜರಿ ಸ್ಪಂದನೆ ಅಭಿಮಾನಿಗಳಿಂದ ವ್ಯಕ್ತವಾಗಿದೆ.
ಈ ಸಿನಿಮಾಗೆ ಕೊರಟಾಲ ಶಿವ ಆಕ್ಷನ್ ಕಟ್ ಹೇಳಿದ್ದು, ಜೂನಿಯರ್ ಎನ್‌ಟಿಆರ್ ಅವರ ಸಹೋದರ ನಂದಮೂರಿ ಕಲ್ಯಾಣ್ ರಾಮ್ ಇದನ್ನು ನಿರ್ಮಿಸಿದ್ದಾರೆ. ತಾರಕ್ ಜೊತೆಗೆ ಜಾಹ್ನವಿ ಕಪೂರ್ ಮುಖ್ಯಭೂಮಿಕೆಯಲ್ಲಿದ್ದು, ಈಗಾಗಲೇ ಕ್ರೇಜ್ ಹುಟ್ಟಿಸಿದೆ. ಇಂದು ಮೊದಲ ದಿನವೇ ಬಹುತೇಕ ಎಲ್ಲ ಶೋಗಳು ಹೌಸ್ಫುಲ್ ಆಗಿವೆ.
ಸಿನಿಮಾ ರಿಲೀಸ್ ಹಿನ್ನೆಲೆ ಮುಂಚಿತವಾಗಿ ಟಿಕೆಟ್ ಬುಕಿಂಗ್‌ಗೆ ಅವಕಾಶ ನೀಡಲಾಗಿತ್ತು. ನಿನ್ನೆ ಸಂಜೆ ವೇಳೆಗೆ ಬರೋಬ್ಬರಿ 12 ಲಕ್ಷ ಟಿಕೆಟ್‌ಗಳು ಬುಕಿಂಗ್ ಆಗಿರುವುದಾಗಿ ವರದಿಯಾಗಿದೆ. ಕರ್ನಾಟಕದಲ್ಲೂ ಜೂ.ಎನ್‌ಟಿಆರ್‌ಗೆ ಅಪಾರ ಅಭಿಮಾನಿಗಳಿದ್ದು, ಇಲ್ಲಿಯೂ ಮುಂಜಾನೆಯಿಂದಲೇ ಸಿನಿಮಾ ಪ್ರದರ್ಶನಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ.












Click it and Unblock the Notifications