Dr. Rajkumar: ಈ 4 ಕಾರಣಗಳಿಗೆ ಕನ್ನಡಿಗರು ಎಂದಿಗೂ "ಡಾ.ರಾಜ್‌ಕುಮಾರ್" ಮರೆಯಲ್ಲ!
Dr. Rajkumar: ಕನ್ನಡಿಗರ ಕಣ್ಮಣಿ.. ಕನ್ನಡ ಲೋಕದ ಮುತ್ತಿನಂತ ರಾಜಕುಮಾರ, ಗಾನ ಗಂಧರ್ವ, ನಟಸಾರ್ವಭೌಮ ಹಾಗೂ ಪದ್ಮಭೂಷಣ ಡಾ. ರಾಜ್‌ಕುಮಾರ್ ಅವರ ಜನ್ಮದಿನ ಇಂದು. (ಏಪ್ರಿಲ್ 24 ಡಾ.ರಾಜ್‌ಕುಮಾರ್ ಅವರ 96ನೇ ಜನ್ಮದಿನ) ಡಾ.ರಾಜ್‌ಕುಮಾರ್ ಅವರನ್ನು ಕನ್ನಡಿಗರು ಮರೆಯದೇ ಇರುವುದಕ್ಕೆ ಹತ್ತಾರು ಕಾರಣಗಳಿವೆ. ಆದರೆ, ಆ ನಾಲ್ಕು ಕಾರಣಗಳಿಗೆ ಕನ್ನಡಿಗರು ಎಂದೆಂದಿಗೂ ಡಾ.ರಾಜ್‌ಕುಮಾರ್ ಅವರನ್ನು ಮರೆಯುವುದೇ ಇಲ್ಲ. ಡಾ ರಾಜ್‌ಕುಮಾರ್ ಅವರ ಜನುಮದಿನದ ಸಂಭ್ರಮದಲ್ಲಿ ಆ ನಾಲ್ಕು ವಿಷಯಗಳು ಯಾವುದು ಅಂತ ನೋಡೋಣ.
ಡಾ.ರಾಜ್‌ಕುಮಾರ್.. ಕನ್ನಡಿಗರನ್ನು ಅಭಿಮಾನಿ ದೇವರು.. ಎನ್ನುತ್ತಿದ್ದರು.. ಕನ್ನಡಿಗರು ಸಹ ಅವರ ಹೃದಯದಲ್ಲಿ ಡಾ.ರಾಜ್ ಅವರಿಗೆ ಅಣ್ಣಾವ್ರು ಅಂತಲೇ ಗೌರವಿಸಿದ್ದಾರೆ. ಡಾ.ರಾಜ್‌ಕುಮಾರ್ ಅವರನ್ನು ಕನ್ನಡಿಗರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಕರ್ನಾಟಕದ ಅಸ್ಮಿತೆ ಹಾಗೂ ಕನ್ನಡಿಗರ ಅಸ್ಥಿತ್ವದ ಪ್ರಶ್ನೆ ಬಂದಾಗಲೆಲ್ಲವೂ ಮುಂದೆ ನಿಲ್ಲುತ್ತಿದ್ದರು. ಇಡೀ ಜೀವಮಾನವೆಲ್ಲ ಕನ್ನಡಿಗರನ್ನು ರಂಜಿಸಿದ್ದ ಡಾ.ರಾಜ್‌ಕುಮಾರ್ ಅವರು ಕನ್ನಡದಲ್ಲಿ ಹಲವು ಹೊಸತುಗಳಿಗೆ ಸಾಕ್ಷಿಯಾಗಿದ್ದೂ ಇದೆ.

ಕನ್ನಡದ ಅಸ್ಮಿತೆ ಪ್ರಶ್ನೆ: ಡಾ.ರಾಜ್‌ಕುಮಾರ್ ಅವರು ಕನ್ನಡ ಹಾಗೂ ಕನ್ನಡಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಇರುತ್ತಿದ್ದರು. ಬಾಲಿವುಡ್ ಸಿನಿಮಾಗಳು ಕರ್ನಾಟಕದಲ್ಲಿ ಮಿತಿ ಮೀರಿ ಕನ್ನಡದ ಚಿತ್ರಗಳಿಗೇ ಕುತ್ತು ಬರುವಷ್ಟು ಪ್ರಸಾರವಾಗುವ ಸಂದರ್ಭದಲ್ಲಿ ರಾಜ್‌ಕುಮಾರ್ ಅವರು ವಿರೋಧಿಸಿದ್ದರು. ಗೋಕಾಕ್ ಆಂದೋಲನ / ಗೋಕಾಕ್ ಚಳವಳಿಯಲ್ಲಿ ಡಾ.ರಾಜ್‌ಕುಮಾರ್ ಅವರು ಮುಂಚೂಣಿಯಲ್ಲಿದ್ದರು. ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು - ಶಾಲಾ - ಕಾಲೇಜುಗಳಲ್ಲಿ ಕನ್ನಡವೇ ಪ್ರಥಮ ಭಾಷೆಯಾಗಿರಬೇಕು ಎನ್ನುವ ಹೋರಾಟ ಇದಾಗಿತ್ತು. ಈ ಹೋರಾಟ ಕನ್ನಡಿಗರನ್ನು ಒಂದುಗೂಡಿಸಿತ್ತು. ಕಾವೇರಿ ವಿವಾದ, ಕನ್ನಡಿಗರಿಗೆ ಅನ್ಯಾಯವಾದಗೆಲ್ಲವೂ ಡಾ.ರಾಜ್‌ಕುಮಾರ್ ಅವರು ಮುಂಚೂಣಿಯಲ್ಲಿ ಇರುತ್ತಿದ್ದರು.
* ರಾಜಕೀಯದಿಂದ ದೂರ: ಡಾ.ರಾಜ್‌ಕುಮಾರ್ ಅವರು ರಾಜಕೀಯದಿಂದ ಯಾವಾಗಲೂ ದೂರವೇ ಉಳಿದರು. ಅವರು ಯಾವುದೇ ರಾಜಕೀಯ ಪಕ್ಷಗಳೊಂದಿಗೆ ಗುರುತಿಸಿಕೊಳ್ಳಲಿಲ್ಲ. ಚುನಾವಣೆಗಳಲ್ಲಿ ಸ್ಪರ್ಧೆ ಮಾಡಲಿಲ್ಲ. ರಾಜಕೀಯಕ್ಕೆ ಬರುವಂತೆ ಒತ್ತಾಯ ಮಾಡಿದರೂ ಇಲ್ಲ ನಾನು ರಾಜಕೀಯಕ್ಕೆ ಬರುವುದಿಲ್ಲ ಎಂದು ತುಂಬಾ ದೂರವೇ ಉಳಿದರು. ಡಾ.ರಾಜ್‌ಕುಮಾರ್ ಅವರು ರಾಜಕೀಯಕ್ಕೆ ಬಂದರೆ ರಾಜ್ಯದ ಮುಖ್ಯಮಂತ್ರಿಯೇ ಆಗಬಹುದಿತ್ತು. ಅಷ್ಟೊಂದು ಜನ ಬೆಂಬಲ ಅವರಿಗಿತ್ತು. ಆದರೆ, ರಾಜಕೀಯ ಪಕ್ಷಗಳ ಆಹ್ವನವನ್ನು ಅಣ್ಣಾವ್ರು ನಯವಾಗಿ ತಿರಸ್ಕರಿಸಿದ್ದರು.

* ನಟಸಾರ್ವಭೌಮ: ಡಾ.ರಾಜ್‌ಕುಮಾರ್ ಅವರ ನಟನೆ, ಗಾಯನಕ್ಕೆ ಅವರೇ ಸಾಟಿ. ಪ್ರತಿ ಪಾತ್ರಕ್ಕೂ ನ್ಯಾಯ ದೊರಕಿಸುತ್ತಿದ್ದ ಅವರು ನಟಸಾರ್ವಭೌಮ ಅಂತಲೇ ಫೇಮಸ್. ಡಾ. ರಾಜ್‌ಕುಮಾರ್ ಅವರು ಹಳ್ಳಿ ಹಾಗೂ ಸಿಟಿಯ ಯಾವ ಪಾತ್ರವಿದ್ದರೂ ಆಯಾ ಪ್ರದೇಶಕ್ಕೆ ಅನುಗುಣವಾಗಿ ಅಭಿನಯಿಸುತ್ತಿದ್ದರು. ಸಾಹಿತಿ, ಮೇಷ್ಟ್ರ, ಕುರಿಗಾಹಿ, ಪೊಲೀಸ್ ಈ ರೀತಿ ಯಾವ ಪಾತ್ರಗಳಿದ್ದರೂ 100ಕ್ಕೆ 100ರಷ್ಟು ಪಾತ್ರಗಳ ಪರಕಾಯ ಪ್ರವೇಶ ಮಾಡುತ್ತಿದ್ದರು.
* ಅಖಂಡ ಕರ್ನಾಟಕಕ್ಕೆ ಆದ್ಯತೆ: ಡಾ.ರಾಜ್‌ಕುಮಾರ್ ಅವರಿಗೆ ಇಡೀ ಕರ್ನಾಟಕ ಮಾತ್ರವಲ್ಲ ದೇಶ ವಿದೇಶದಲ್ಲೂ ಅಭಿಮಾನಿಗಳು ಇದ್ದಾರೆ. ಇದಕ್ಕೆ ಮತ್ತೊಂದು ಕಾರಣ ಡಾ.ರಾಜ್‌ಕುಮಾರ್ ಅವರು ಉತ್ತರ ಹಾಗೂ ದಕ್ಷಿಣ ಕರ್ನಾಟಕದ ಸಂಸ್ಕೃತಿಯನ್ನು ಪ್ರತಿಬಿಂಬಿಸಿದ್ದಾರೆ. ಎಲ್ಲಾ ಊರುಗಳ ಸೊಗಡುಗಳು ಇರುವ ಅವರ ಸಿನಿಮಾಗಳನ್ನು ಕನ್ನಡಿಗರು ನೋಡಿದ್ದಾರೆ. ಪೌರಾಣಿಕ ಹಾಗೂ ಆಧುನಿಕ ಸಿನಿಮಾಗಳಲ್ಲಿನ ಅವರ ಅಭಿನಯಕ್ಕೆ ಅವರೇ ಸಾಕ್ಷಿ. ನಿಮಗೆ ಡಾ.ರಾಜ್‌ಕುಮಾರ್ ಯಾವ ಕಾರಣಕ್ಕೆ ಇಷ್ಟ ಅಂತ ಕಮೆಂಟ್ ಮಾಡಿ ನಮಗೆ ತಿಳಿಸಿ.












Click it and Unblock the Notifications