ನಿಮ್ಮನೆಗೆ ಬಂದು, ನಿಮ್ಮ ಮೇಲೆ ದರ್ಪ ತೋರಿದ್ರೆ ಹೇಗಿರುತ್ತೆ? ಪರಭಾಷಿಕರಿಗೆ ಗುಮ್ಮಿದ ರಾಜ್ ಬಿ.ಶೆಟ್ಟಿ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾಷೆಯ ವಿಚಾರವಾಗಿ ಗಲಾಟೆಗಳು ಸರ್ವೇಸಾಮಾನ್ಯವಾಗಿದೆ. ಇದರ ಹಿಂದೆ ಕನ್ನಡಿಗರು ಕೆಟ್ಟವರು ಎಂದು ಬಿಂಬಿಸುವ ಪ್ರಯತ್ನವೂ ಇದೆ. 'ಅನೇಕರು ಕನ್ನಡ ಗೊತ್ತಿಲ್ಲ ಅಂತಾರೆ ಪರವಾಗಿಲ್ಲ, ಆದರೆ ನನಗೆ ಕನ್ನಡ ಗೊತ್ತಿಲ್ಲ ಅನ್ನೋದೇ ಹೆಮ್ಮೆ ಎನ್ನುವವರಿದ್ದಾರೆ' ಎಂದು ಸ್ಯಾಂಡಲ್‌ವುಡ್ ನಟ, ನಿರ್ದೇಶಕ ರಾಜ್ ಬಿ.ಶೆಟ್ಟಿ ದೂರಿದ್ದಾರೆ. ಇತ್ತೀಚೆಗೆ ತಮ್ಮ ಸು ಫ್ರಂ ಸೋ ಸಿನಿಮಾ ತೆಲುಗು ಭಾಷೆಯಲ್ಲಿ ರಿಲೀಸ್ ಆಗಿದ್ದು, ಈ ವೇಳೆ ತೆಲುಗು ನಿರೂಪಕಿ 'ಯಾಕೆ ನಿಮ್ಮವರು ಕನ್ನಡ ಕನ್ನಡ ಅಂತ ಜೋರು ಮಾಡುತ್ತಾರೆ' ಎಂಬ ಪ್ರಶ್ನೆ ಕೇಳಿದ್ದರು. ಇದಕ್ಕೆ ರಾಜ್ ಬಿ.ಶೆಟ್ಟಿ ತಮ್ಮದೇ ಸ್ಟೈಲಲ್ಲಿ ಸರಿಯಾಗಿ ಜಾಡಿಸಿ, ಪರಭಾಷಿಕರಿಗೆ ಕ್ಲಾರಿಟಿ ಕೊಟ್ಟಿದ್ದಾರೆ.
'ಕಳೆದ ಕೆಲವು ದಶಕಗಳಿಂದ ಮೂಲ ಕನ್ನಡಿಗರನ್ನ ನೋಡುವ ಮನಸ್ಥಿತಿ ಬೇರೆಯಾಗಿದೆ. ಯಾವುದೇ ಭಾಷೆಯ ವಿಚಾರವಾದರೂ ನಾನು ಹಿಂಸೆಯನ್ನ ಒಪ್ಪುವುದಿಲ್ಲ. ಆದರೆ ಬೇರೆಯವರ ಮನಸ್ಥಿತಿಯೂ ಯಾಕೆ ಹಾಗಿದೆ ಎಂಬುದು ನನ್ನ ಪ್ರಶ್ನೆ. ನೋಡಿ ಈಗ ನಾನು ತೆಲುಗು ಸಂದರ್ಶನ ನೀಡಲು ಇಲ್ಲಿಗೆ ಬಂದಿದ್ದೀನಿ. ನಾನು ನೇರವಾಗಿ ನನಗೆ ತೆಲುಗು ಗೊತ್ತಿಲ್ಲ ಎಂದು ಹೇಳಿದರೆ ಹೇಗಿರುತ್ತೆ? ಬದಲಾಗಿ ನನಗೆ ತೆಲುಗು ಬರಲ್ಲ ಕ್ಷಮಿಸಿ ಎಂದು ಕೇಳಿದೆ. ಅದನ್ನೇ ನಾನು ನನಗೆ ತೆಲುಗು ಗೊತ್ತಿಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳುವುದು ಸರಿಯಾದ ವಿಧಾನವಲ್ಲ' ಎಂದಿದ್ದಾರೆ ರಾಜ್.

'ಕನ್ನಡ ಕಲಿಯಲ್ಲ ಅನ್ನೋದೆ ನಮ್ಮ ಹೆಮ್ಮೆ ಅನ್ನಬೇಡಿ'
ನೀವು ಬೇರೆ ಕಡೆ ಹೋದಾಗ ಅಲ್ಲಿನ ಸ್ಥಳೀಯ ಭಾಷೆ ಗೊತ್ತಿಲ್ಲದಿದ್ದರೂ ಓಕೆ, ನೀವು ಆ ಭಾಷೆಯನ್ನ ಕಲಿಯದಿದ್ದರೂ ಓಕೆ, ಆದರೆ ಅಲ್ಲಿನ ಭಾಷೆ ಕಲಿಯದೇ ಇರುವುದೇ ನನ್ನ ಹೆಮ್ಮೆ ಅಂದುಕೊಳ್ಳುವುದು ತಪ್ಪು. ನಾನು ಲೋಕಲ್ ವ್ಯಕ್ತಿ ಅಲ್ಲ ಅನ್ನೋದೆ ನನ್ನ ಹೆಮ್ಮೆಯಾದರೆ ಅಲ್ಲಿನ ಜನರಿಂದಲೂ ರಿಯಾಕ್ಷನ್‌ಗಳು ಸಹಜವಾಗಿ ಇದ್ದೇ ಇರುತ್ತೆ. ಹಾಗಾಗಿ ನೀವು ಭಾಷೆ ಕಲಿಯದೇ ಇರುವುದೇ ಹೆಮ್ಮೆ ಅಂತ ಅಲ್ಲಿನವರನ್ನ ಟ್ರಿಗರ್ ಮಾಡಬಾರದು. ಅದೇ ರೀತಿ ಇದಕ್ಕೆಲ್ಲ ಹಿಂಸಾಚಾರವನ್ನ ನಾನೂ ಒಪ್ಪಲ್ಲ ಎಂದು ರಾಜ್ ಹೇಳಿದ್ದಾರೆ.
'ನಾವು ಎಲ್ಲ ಭಾಷೆಯನ್ನ ಸ್ವಾಗತಿಸುತ್ತೇವೆ'
'ನೀವು ಬಂದು ನೋಡಿ, ದೇಶದ ಬೇರೆ ಯಾವುದೇ ರಾಜ್ಯದಲ್ಲಿ ಬೇರೆ ಭಾಷೆಗಳಿಗೆ ಸಿಗದಷ್ಟು ಸಪೋರ್ಟ್ ಕರ್ನಾಟಕದಲ್ಲಿ ಸಿಗುತ್ತೆ. ಕನ್ನಡದಿಂದ ತೆಲುಗುಗೆ ಡಬ್ ಆದ ಸಿನಿಮಾಗಳಿಗಿಂತ, ತೆಲುಗು ಸಿನಿಮಾಗಳೇ ಹೆಚ್ಚಾಗಿ ಪ್ರದರ್ಶನ ಕಾಣುತ್ತವೆ. ಅದೇ ರೀತಿ, ತಮಿಳು, ಮಲಯಾಳಂ, ಹಿಂದಿ ಸಿನಿಮಾಗಳೂ ಕೂಡ. ಅದು ಕರ್ನಾಟಕದ ಬ್ಯೂಟಿ, ಎಲ್ಲ ಭಾಷೆಯನ್ನೂ ಕೈಬೀಸಿ ಸ್ವಾಗತಿಸುತ್ತದೆ. ಹೀಗಿರುವಾಗ ಬೇರೆ ಭಾಷೆಯವರು ಬಂದು ನೇರವಾಗಿ ನಿಮ್ಮ ಭಾಷೆ ಸರಿ ಇಲ್ಲ, ನಾವು ಇಲ್ಲಿರುವುದರಿಂದೇ ನೀವೆಲ್ಲ ಉಳಿದಿದ್ದೀರಿ, ಇಲ್ಲದಿದ್ರೆ ನೀವೆಲ್ಲ ಟೊಮ್ಯಾಟೋ ಮಾರಬೇಕು ಅನ್ನುವುದು ತುಂಬಾ ಅವಮಾನ ಮಾಡುವ ವಿಧಾನ' ಎಂದು ಸಿಡಿದಿದ್ದಾರೆ.
'ನನಗೆ ಭಾಷೆ ಗೊತ್ತಿಲ್ಲ ಅಂದರೆ ಪರವಾಗಿಲ್ಲ, ಆದರೆ ಕನ್ನಡ ಬರಲ್ಲ ಅನ್ನೋದೇ ನಿಮ್ಮ ಹೆಮ್ಮೆ ಆಗಬಾರದು. ಈಗ ಉದಾಹರಣೆಗೆ ನಾನು ನಿಮ್ಮ ಮನೆಗೆ ಬಂದು, ನಿಮ್ಮ ಮೇಲೆ ದರ್ಪ ತೋರಿದರೆ ಹೇಗಿರುತ್ತೆ? ಎಂದು ಟಾಂಗ್ ನೀಡಿದ್ದಾರೆ. ಇದಕ್ಕೆಲ್ಲ ಹಿಂಸೆ ಮಾರ್ಗವಲ್ಲ, ಅದೇ ರೀತಿ ಬೇರೆಯವರಿಗೆ ನಮ್ಮ ಭಾಷೆ ಕಲಿಯಿರಿ ಅಂತ ಒತ್ತಡ ಕೂಡ ಹಾಕಬಾರದು. ಈಗ ಬೇರೆಯವರು ಅವಮಾನ ಮಾಡಿ, ನಂತರ ಭಾಷೆ ವಿಚಾರಕ್ಕೆ ಗಲಾಟೆ ಎಂದು ಕಥೆ ಕಟ್ಟುವುದು ಕೂಡ ಸರಿಯಲ್ಲ. ಆ ಮಾತನ್ನ ಬಳಸಬಾರದು. ಕನ್ನಡಿಗರೂ ಕೂಡ ಯಾರನ್ನೂ ಹೊಡೆಯಬೇಡಿ. ಅದೇ ರೀತಿ ಬೇರೆ ಭಾಷಿಕರೂ ಬಾಯಿಗೆ ಬಂದಂತೆ ಮಾತನಾಡಬೇಡಿ' ಎಂದು ರಾಜ್ ಮನವಿ ಮಾಡಿದ್ದಾರೆ.
'ಇನ್ನು ಸು ಫ್ರಂ ಸೋ ಕಡಿಮೆ ಬಜೆಟ್‌ನ ಸಿನಿಮಾ. ಆ ಸಿನಿಮಾ ಅಲ್ಲಿ ಯಶಸ್ಸು ಕಂಡಾಗ ಮಾತ್ರವೇ ಬೇರೆ ಭಾಷೆಗಳಿಗೆ ಸಹಜವಾಗಿ ತಲುಪುತ್ತದೆ. ಹಾಗಾಗಿ ಕನ್ನಡದಲ್ಲಿ ಹಿಟ್ ಕಂಡಿದ್ದರಿಂದ ಬೇರೆ ಭಾಷೆಗಳಲ್ಲೂ ಈ ಸಿನಿಮಾ ತೆರೆಕಾಣುತ್ತಿದೆ. ಇದೇ ಕಾರಣದಿಂದ ಬೇರೆ ಭಾಷೆಗಳ ವಿತರಕರಿಂದಲೂ ಬೇಡಿಕೆ ಇರುವುದರಿಂದ ನಮ್ಮ ಸಿನಿಮಾ ಇಲ್ಲೆಲ್ಲ ಬರುವಂತಾಯಿತು. ಹಾಗಾಗಿ ಇದಕ್ಕೆಲ್ಲ ಸಹಜವಾಗಿ ಸಮಯ ಹಿಡಿಯುತ್ತೆ' ಎಂದಿದ್ದಾರೆ.












Click it and Unblock the Notifications