Blink Movie: ನನ್ನ ಸಿನಿಮಾ ನೋಡದಿದ್ರೂ ಪರ್ವಾಗಿಲ್ಲ ಈ ಸಿನಿಮಾ ನೋಡಿ ಎಂದ ಸಿಂಪಲ್ ಸುನಿ!
ಕನ್ನಡದಲ್ಲಿ ಹೊಸತನದ ಸಿನಿಮಾ ಬರಲ್ಲ ಎನ್ನುವ ಅಪವಾದ ಸಾಮಾನ್ಯವಾಗಿ ಆಗಾಗ್ಗೆ ಕೇಳುತ್ತೇವೆ. ಸಿದ್ದ ಸೂತ್ರದ ಸಿನಿಮಾಗಳಿಗೆ ಕನ್ನಡ ನಿರ್ದೇಶಕರು ಜೋತು ಬೀಳುತ್ತಾರೆ, ಹೊಸದಾಗಿ ಯೋಚನೆ ಮಾಡಲ್ಲ ಎನ್ನುವ ಅಪವಾದಗಳಿಗೆ ಉತ್ತರವಾಗಿ ಹೊಸ ನಿರ್ದೇಶಕರು ಹೊಸತನದ ಸಿನಿಮಾಗಳನ್ನು ಮಾಡಿ ಗಮನ ಸೆಳೆದಿದ್ದಾರೆ.
2024ರಲ್ಲಿ ಕಡಿಮೆ ಬಜೆಟ್‌ನಲ್ಲೇ ತಯಾರಾದರೂ ಹಲವು ಸಿನಿಮಾಗಳು ಗಮನ ಸೆಳೆದಿವೆ. ಶಾಖಾಹಾರಿ ಸಿನಿಮಾ ಬಗ್ಗೆ ಸಾಕಷ್ಟು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗ 'ಬ್ಲಿಂಕ್' ಸಿನಿಮಾ ಸಾಕಷ್ಟು ಉತ್ತಮ ಪ್ರಶಂಸೆಗಳನ್ನು ಪಡೆಯುತ್ತಿದೆ.

'ಬ್ಲಿಂಕ್' ಸಿನಿಮಾ ಟ್ರೈಲರ್ ಮೂಲಕವೇ ಗಮನ ಸೆಳೆದಿತ್ತು. ಇದು ಕನ್ನಡ ಸಿನಿಮಾದಲ್ಲೇ ಹೊಸ ರೀತಿಯ ಪ್ರಯತ್ನ ಎನ್ನುವ ಸೂಚನೆ ಸಿಕ್ಕಿತ್ತು. ಮಾರ್ಚ್ 8ರಂದು ಸಿನಿಮಾ ಬಿಡುಗಡೆಯಾದ ಬಳಿಕ ಇದು ಕನ್ನಡದಲ್ಲಿ ಇದುವರೆಗೂ ಬಂದಿರದ ರೀತಿಯ ಸಿನಿಮಾ ಎನ್ನುವುದು ಸಾಬೀತಾಗಿದೆ.
#ಬ್ಲಿಂಕ್ #blink
— ಸುನಿ/SuNi (@SimpleSuni) March 11, 2024
ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಅನ್ನುವ ವಾಕ್ಯ ಹಳೆಯದಾಯಿತು ..
ಈ ರೀತಿ ಚಿತ್ರಗಳು ಬಂದಾಗ ಸಿನಿಮಾ ಪ್ರೇಮಿಗಳು #ಶೋ ಎಲ್ಲೇ ಇದ್ದರೂ ಹುಡುಕಿಕೊಂಡು ನೋಡಬೇಕು ..
ಇಡೀ ತಂಡದ ಶ್ರಮಕ್ಕೆ ನನ್ನ ನಮನಗಳು ..
ಪ್ರತಿಯೊಂದು ಪ್ರಶಂಸನೀಯ
ತಂತ್ರಜ್ಞರ ಹಾಡು -ಪಾಡು
ಸಂಕಲನಕಾರ ಮಾಡಿರುವ ಶಾಟ್ಸ್ ಗಳ ವ್ಯವಕಲನ
ರಚನಾ…
ಹೊಸ ಸಿನಿಮಾಗೆ ಬೇಕು ಬೆಂಬಲ
ಸಿನಿಮಾ ಎಷ್ಟೇ ಚನ್ನಾಗಿದೆ ಎಂದರೂ ಅದು ಸೂಪರ್ ಹಿಟ್ ಆಗಲು ಪ್ರೇಕ್ಷಕರ ಆಶೀರ್ವಾದ ಬೇಕು. ಬ್ಲಿಂಕ್ ಮೊದಲ ದಿನ ಬೆರಳೆಣಿಕೆಯ ಶೋಗಳೊಂದಿಗೆ ಬಿಡುಗಡೆಯಾಯಿತು. ಆದರೆ ಸಿನಿಮಾ ನೋಡಿದವರು ಯಾವಾಗ ಹೊಗಳಲು ಶುರು ಮಾಡಿದ್ರೋ ಆಗ ಸಿನಿಮಾ ಹೌಸ್ ಫುಲ್ ಆಗಲು ಶುರುವಾಯ್ತು, ಸದ್ಯ ಶೋಗಳನ್ನು ಹೆಚ್ಚಿಸಿಕೊಂಡಿರುವ ಬ್ಲಿಂಕ್ ಸಿನಿಮಾಗೆ ಜನಾಶೀರ್ವಾದ ಬೇಕಿದೆ.
ಒಂದು ಸರಳ ಪ್ರೇಮಕತೆ ಮೂಲಕ ಗೆಲುವು ಕಂಡಿರುವ ನಿರ್ದೇಶಕ ಸಿಂಪಲ್ ಸುನಿ ಬ್ಲಿಂಕ್ ಸಿನಿಮಾ ನೋಡಿದ್ದು ಚಿತ್ರತಂಡವನ್ನು ಹಾಡಿ ಹೊಗಳಿದ್ದಾರೆ. ಇಂತಹ ಸಿನಿಮಾ ಬಂದಾಗ ಸಮಯ ಮಾಡಿಕೊಂಡು ನೋಡಬೇಕು ಎಂದು ಜನರಿಗೆ ಮನವಿ ಮಾಡಿದ್ದಾರೆ. ನನ್ನ ಒಂದು ಸರಳ ಪ್ರೇಮಕಥೆ ನೋಡದಿದ್ದರೂ ಪರವಾಗಿಲ್ಲ ಈ ಸಿನಿಮಾ ಬಂದು ನೋಡಿ ಎಂದಿದ್ದಾರೆ.
ಸಿನಿಮಾ ನೋಡಿದ ಬಳಿಕ ಮಾತನಾಡಿದ ಅವರು, ಇಂತಹ ಸಿನಿಮಾ ಮಲಯಾಳಂನಲ್ಲಿ ಬಂದಿದ್ದರೆ ನಮ್ಮ ಕನ್ನಡಿಗರೇ ನೋಡಿ, ಮೆಚ್ಚುತ್ತಿದ್ದರು. ಆದರೆ ಇದು ಕನ್ನಡದಲ್ಲಿ ಬಂದಿರುವ ಕಾರಣ ತಲೆ ಕೆಡಿಸಿಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಉತ್ತಮ ಸಿನಿಮಾ ಬಂದಾಗ ಜನ ಮೆಚ್ಚಿ ಗೆಲ್ಲಿಸಿದರೆ ಅಲ್ಲವಾ ಮತ್ತಷ್ಟು ಹೊಸತನದ ಸಿನಿಮಾ ಮಾಡಲು ನಿರ್ಮಾಪಕ, ನಿರ್ದೇಶಕ ಮುಂದಾಗುವುದು ಎಂದಿದ್ದಾರೆ.
ಶೋಗಳ ಸಂಖ್ಯೆ ಹೆಚ್ಚಳ
ಸಿನಿಮಾ ಬಗ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾದ ಬಳಿಕ ಶೋಗಳ ಸಂಖ್ಯೆಯನ್ನು ಹೆಚ್ಚು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಚಿತ್ರದ ಕಲೆಕ್ಷನ್ ಕೂಡ ಹೆಚ್ಚಾಗುವ ನಿರೀಕ್ಷೆಯಲ್ಲಿದೆ ಚಿತ್ರ ತಂಡ.
ಶ್ರೀನಿಧಿ ಬೆಂಗಳೂರು ನಿರ್ದೇಶನದ ಬ್ಲಿಂಕ್ ಸಿನಿಮಾದಲ್ಲಿ ದೀಕ್ಷಿತ್ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಉತ್ತಮ ಸಿನಿಮಾ ಬಂದ್ರೆ ಕನ್ನಡಿಗರು ಯಾವತ್ತು ಕೈಬಿಡಲ್ಲ ಎನ್ನುವ ಮಾತಿದೆ. ಬ್ಲಿಂಕ್ ಸಿನಿಮಾವನ್ನೂ ಕನ್ನಡಿಗರು ನೋಡಿ ಗೆಲ್ಲಿಸಿದರೆ, ಮತ್ತಷ್ಟು ಹೊಸತನದ ಸಿನಿಮಾ ಮಾಡುವವರಿಗೆ ಪ್ರೋತ್ಸಾಹ ಕೊಟ್ಟಂತಾಗುತ್ತದೆ.












Click it and Unblock the Notifications