Dinakar Thoogudeepa:'ಅಂತಹ ಸೊಸೆ ಸಿಗಲು ನಮ್ಮಮ್ಮ ಲಕ್ಕಿ': ದಿನಕರ್ ತೂಗುದೀಪ ಹೀಗಂದಿದ್ಯಾಕೆ?
ಕನ್ನಡ ಚಿತ್ರರಂಗದ ನಟ ದರ್ಶನ್ ತೂಗುದೀಪ ಜೈಲು ಸೇರಿದ್ದ ಸಮಯದಲ್ಲಿ ಅವರ ಕುಟುಂಬದ ವಿಚಾರವಾಗಿ ಒಂದಿಷ್ಟು ವದಂತಿಗಳು ಎಲ್ಲೆಡೆ ಹರಿದಾಡುತ್ತಿದ್ದವು. ಅವರ ಸಹೋದರ ದಿನಕರ್ ತೂಗುದೀಪ ಇನ್ನೂ ಬಾಡಿಗೆ ಮನೆಯಲ್ಲಿ ಇದ್ದಾರೆ. ದರ್ಶನ್ ಹಾಗೂ ವಿಜಯಲಕ್ಷ್ಮೀ ಅವರನ್ನು ದೂರ ಇಟ್ಟಿದ್ದಾರೆ ಎಂದೆಲ್ಲಾ ಊಹಾಪೋಹಗಳು ಹರಿದಾಡಿದ್ದವು.
ಈ ಎಲ್ಲಾ ವದಂತಿಗಳಿಗೆ ದಿನಕರ್ ತೂಗುದೀಪ ಅಂದೇ ಪೂರ್ಣವಿರಾಮ ಇಟ್ಟಿದ್ದರು. ದರ್ಶನ್ ಬಿಡುಗಡೆಗೆ ವಿಜಯಲಕ್ಷ್ಮೀ ಜೊತೆಗೆ ನಿಂತಿದ್ದರು. ಈ ವೇಳೆ ಎಲ್ಲರೂ ಅತ್ತಿಗೆ ಮೈದಿನ ಅಂದರೆ ಹೀಗಿರಬೇಕು ಎಂದು ಹೇಳುತ್ತಿದ್ದರು. ಹಾಗಿದ್ದರೆ ನಿಜ ಜೀವನದಲ್ಲಿ ದಿನಕರ್ ತೂಗುದೀಪ ಹಾಗೂ ವಿಜಯಲಕ್ಷ್ಮೀ ಹೇಗಿರುತ್ತಾರೆ ಎನ್ನುವುದರ ಬಗ್ಗೆ ಸ್ವತಃ ದಿನಕರ್ ತೂಗುದೀಪ ಅವರೇ ಮಾತನಾಡಿದ್ದಾರೆ.

'ನನ್ನ ಅತ್ತಿಗೆ ವಯಸ್ಸಿನಲ್ಲಿ ನನಗಿಂತ ಚಿಕ್ಕವಳು. ನಾನು ಮತ್ತು ಅವಳು ಅತ್ತಿಗೆ ಮೈದಿನ ಅನ್ನೋದಕ್ಕಿಂತ ಹೆಚ್ಚಾಗಿ ಸ್ನೇಹಿತರು. ನಾವಿಬ್ಬರು ತುಂಬಾ ಕಿತ್ತಾಡುತ್ತೇವೆ. ನಾನು ದರ್ಶನ್‌ಕ್ಕಿಂತ ಜಾಸ್ತಿ ನಮ್ಮ ಅತ್ತಿಗೆ ಜೊತೆ ಕಿತ್ತಾಡುತ್ತೇನೆ. ನನ್ನ ಹೆಂಡತಿ ಮತ್ತು ನಮ್ಮ ಅಮ್ಮ ಪ್ರತಿ ಸಲ ನಿಮ್ಮಿಬ್ಬಿರ ಜಗಳ ನೋಡಿ ನಮಗೆ ಬೇಜಾರಾಗಿದೆ ಅಂತಾ ಹೇಳಿ ಹೋಗುತ್ತಾರೆ'.
'ವಿಜಯಲಕ್ಷ್ಮೀ ಮತ್ತು ನಾನು ಈ ಕ್ಷಣಕ್ಕೆ ಕಿತ್ತಾಡಿಕೊಂಡರೆ ಇನ್ನೊಂದು ಅರ್ಧ ಗಂಟೆಯಲ್ಲಿ ಸರಿಯಾಗಿ ಚೆನ್ನಾಗಿ ಮಾತನಾಡಿಕೊಂಡು ಕೂರುತ್ತೇವೆ. ಇದನ್ನು ನೋಡಿ ನನ್ನ ಹೆಂಡತಿ ಮತ್ತು ನಮ್ಮ ಅಮ್ಮ ನಮ್ಮ ವಿಚಾರಕ್ಕೆ ತಲೆ ಹಾಕಲ್ಲ' ಎಂದರು.

'ಸಾಮಾನ್ಯವಾಗಿ ಒಂದು ವಿಚಾರ ಎಲ್ಲರ ಮನೆಯಲ್ಲೂ ಇರುತ್ತದೆ. ಅತ್ತೆಯಂದಿರಿಗೆ ಸೊಸೆ ಮೇಲೆ ಪೂರ್ಣ ಪ್ರಮಾಣದ ನಂಬಿಕೆ ಇರಲ್ಲ. ಯಾವತ್ತೂ ನನ್ನ ಮತ್ತು ನನ್ನ ಮಗನನ್ನು ದೂರ ಮಾಡೋಕೆನೇ ಸೊಸೆ ಬರುತ್ತಾಳೆ ಎನ್ನುವ ಭಾವನೆ ತಾಯಂದಿರಿಗೆ ಇರುತ್ತದೆ. ಅದೇ ರೀತಿ ಸೊಸೆಗೂ ಇರುತ್ತದೆ ಅವರ ತಾಯಿ ಏನೇನೋ ಹೇಳಿಕೊಟ್ಟು ದೂರ ಮಾಡುತ್ತಾರೆ ಎನ್ನುವ ಭಾವನೆ ಸೊಸೆಗೂ ಇರುತ್ತದೆ. ಆದರೆ ನಮ್ಮ ಮನೆಯಲ್ಲಿ ಇದಿಲ್ಲ'.
'ನಮ್ಮ ಅತ್ತಿಗೆಗೆ ನಮ್ಮ ಅಮ್ಮನ ಕಡೆಯಿಂದ ಸಿಕ್ಕ ದೊಡ್ಡ ಪ್ರಶಂಸೆ ಅಂದರೆ ನನ್ನ ಸೊಸೆ ನನ್ನ ಮನೆಯ ಹೆಸರನ್ನು ಕಾಪಾಡಿದಳು. ನನಗೆ ಅವಳ ಮೇಲೆ ತುಂಬಾ ಖುಷಿ ಇದೆ ಅಂತಾ ಅಮ್ಮ ಹೇಳಿದ್ದಾರೆ. ಇದಕ್ಕಿಂತ ದೊಡ್ಡ ಪ್ರಶಂಸೆ ಒಬ್ಬ ಸೊಸೆಗೆ ಏನು ಸಿಗುತ್ತದೆ. ಅದೊಂತರ ಸಾಧನೆ. ನಮ್ಮ ಅಮ್ಮ ಬಾಯಲ್ಲಿ ಆ ಪದ ಬಂದಿದೆ ಅಂದರೆ ವಿಜಯಲಕ್ಷ್ಮೀ ಅಷ್ಟು ಪ್ರಯತ್ನ ಮಾಡಿದ್ದಾರೆ' ಎಂದರು.

'ನನಗೆ ಅವರ ಮೇಲೆ ಖುಷಿ ಇದೆ. ಅಂತಹ ಅತ್ತಿಗೆ ಸಿಗಲು ನಾನು ಅದೃಷ್ಟವಂತನೇ. ದರ್ಶನ್ ಕೂಡ ತುಂಬಾ ಅದೃಷ್ಟವಂತ ಅಂತಹ ಹೆಂಡತಿ ಸಿಗಲು. ಅಂತಹ ಸೊಸೆ ಪಡೆಯಲು ನಮ್ಮ ಅಮ್ಮ ಕೂಡ ಲಕ್ಕಿ. ಅವರು ಕೂಡ ಲಕ್ಕಿ. ತುಂಬಾ ಜನ ಮೈದಿನರು ತಮ್ಮ ಅತ್ತಿಗೆ ಜೊತೆ ಮಾತನಾಡುವುದಿಲ್ಲ. ಆದರೆ ನಾನು ಮತ್ತು ನಮ್ಮ ಅತ್ತಿಗೆ ಎಲ್ಲವನ್ನೂ ಮಾತನಾಡುತ್ತೇವೆ. ಅವರ ತಪ್ಪನ್ನು ನಾನು ಹೇಳುತ್ತೇನೆ. ನನ್ನ ತಪ್ಪನ್ನು ಅವರು ಹೇಳುತ್ತಾರೆ ಹೀಗೆ ನಮ್ಮ ಫ್ಯಾಮಿಲಿಯಲ್ಲಿ ಒಬ್ಬರಿಗೊಬ್ಬರು ಸಿಗಲು ಎಲ್ಲರೂ ಅದೃಷ್ಟವಂತರೇ' ಎಂದು ದಿನಕರ್ ತೂಗುದೀಪ್ ಬಾಸ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.












Click it and Unblock the Notifications