ಮಾರ್ಟಿನ್‌ನಲ್ಲಿ 'ಡಬಲ್' ಶಾಕ್ ಕೊಟ್ರಾ ಧ್ರುವ ಸರ್ಜಾ?
ಸ್ಯಾಂಡಲ್‌ವುಡ್‌ನ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ 'ಮಾರ್ಟಿನ್' ಸಿನಿಮಾ ಇಂದು ತೆರೆಗಪ್ಪಳಿಸಿದೆ. ಧ್ರುವ ಅವರ ಸಿನಿ ಕೆರಿಯರ್‌ನಲ್ಲಿ ಇದು ನೆಕ್ಸ್ಟ್ ಲೆವೆಲ್ ಸಿನಿಮಾ ಎಂದೇ ಹೇಳಲಾಗಿತ್ತು. ಇಂದು ರಾಜ್ಯಾದ್ಯಂತ ಸಿನಿಮಾ ರಿಲೀಸ್ ಆಗಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ವರದಿಯಾಗಿದೆ.
ಈ ಸಿನಿಮಾ ಮೇಲೆ ಸಖತ್ ಹೋಪ್ ಇಟ್ಟುಕೊಂಡಿದ್ದ ಆಕ್ಷನ್ ಪ್ರಿನ್ಸ್ ಅಭಿಮಾನಿಗಳಿಗೆ ದಸರಾ ಜೊತೆಗೆ ದೊಡ್ಡ ಹಬ್ಬವೇ ಆಗಿದೆಯಂತೆ. ಸಿನಿಮಾದಲ್ಲಿನ ಕೆಲವು ಸೀನ್‌ಗಳಿಗೆ ಫಿದಾ ಆಗಿರುವ ಫ್ಯಾನ್ಸ್ ಅವುಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.

ಸಿನಿಮಾ ನೋಡಿ ಬಂದಿರುವ ಹಲವರು ಒಂದು ಗುಟ್ಟನ್ನು ರಟ್ಟು ಮಾಡುತ್ತಿದ್ದಾರೆ. ಅದೇನೆಂದ್ರೆ ಧ್ರುವ ಸರ್ಜಾ ಎರಡು ಪಾತ್ರಗಳಲ್ಲಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರಂತೆ. ಹೀಗಾಗಿ ಸಿನಿಮಾ ನೋಡಿದವರಿಗೆ ಡಬಲ್ ಶಾಕ್ ಆಗಿದೆಯಂತೆ. ಒಂದೇ ಸ್ಕ್ರೀನ್‌ನಲ್ಲಿ ಧ್ರುವ ಎರಡು ಪಾತ್ರಗಳಲ್ಲಿರುವ ಫೋಟೋಗಳನ್ನು ಫ್ಯಾನ್ಸ್ ಹಂಚಿಕೊಂಡು ಫುಲ್ ಖುಷ್ ಆಗಿದ್ದಾರೆ. ಹೀಗಾಗಿ ಟ್ವಿಟರ್‌ನಲ್ಲೂ ಮಾರ್ಟಿನ್ ಟ್ರೆಂಡಿಂಗ್‌ನಲ್ಲಿದೆ.
ಮಾರ್ಟಿನ್ ಸಿನಿಮಾ ಕನ್ನಡ ಸೇರಿದಂತೆ 13 ಭಾಷೆಗಳಲ್ಲಿ ಬರೋಬ್ಬರಿ 3,000 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದೆ. ಪ್ರೇಕ್ಷಕರಿಂದ ಉತ್ತಮವಾಗಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಫುಲ್ ಮಾಸ್ ಸಿನಿಮಾ ಎನಿಸಿಕೊಂಡಿರುವ ಮಾರ್ಟಿನ್‌ನಲ್ಲಿ ಸುಕೃತಾ ವಾಗ್ಲೆ, ಅಚ್ಯುತ್ ಕುಮಾರ್, ನಿಕಿತಿನ್ ಧೀರ್ ಸೇರಿದಂತೆ ಹಲವು ಇದ್ದಾರೆ. ನಟಿಯರಾದ ಅನ್ವೇಶಿ ಜೈನ್ ಹಾಗೂ ವೈಭವಿ ಶಾಂಡಿಲ್ಯ ಅವರೊಟ್ಟಿಗೆ ಧ್ರುವಾ ರೊಮ್ಯಾನ್ಸ್ ಮಾಡಿದ್ದಾರೆ.
ನಿರ್ದೇಶಕ ಎ.ಪಿ.ಅರ್ಜುನ್ ಮಾರ್ಟಿನ್‌ಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರಕ್ಕೆ ಖುದ್ದು ಅರ್ಜುನ್ ಸರ್ಜಾ ಅವರೇ ಕಥೆ ಬರೆದಿರುವುದು ವಿಶೇಷ. ನಿರ್ಮಾಪಕ ಉದಯ್ ಮೆಹ್ತಾ ಮಾರ್ಟಿನ್‌ಗೆ ಬಂಡವಾಳ ಹೂಡಿದ್ದಾರೆ. ರವಿ ಬಸ್ರೂರ್ ಅವರ ಹಿನ್ನೆಲೆ ಸಂಗೀತವು ಈ ಸಿನಿಮಾವನ್ನು ಬೇರೆ ಲೆವೆಲ್‌ಗೆ ತೆಗೆದುಕೊಂಡು ಹೋಗಿದೆ ಎಂದು ಹೇಳಲಾಗುತ್ತಿದೆ.

ಸಿನಿಮಾದಲ್ಲಿ ಧ್ರುವ ಸರ್ಜಾ ಅವರ ಅವತಾರ ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ. ಅಜಾನುಬಾಹುವಿನಂತೆ ಧ್ರುವಾ ಮಿಂಚಿದ್ದು, ವಿಲನ್‌ಗಳೇ ಸೈಲೆಂಟ್ ಆಗುವಂತೆ ಸರ್ಜಾ ಅಬ್ಬರಿಸಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇನ್ನು ಸಿನಿಮಾದಲಿ ವಿಎಫ್‌ಎಕ್ಸ್ ಕೂಡ ಹೆಚ್ಚಾಗಿದ್ದು, ಕೆಲವರು ಮಾರ್ಟಿನ್ ಸಿನಿಮಾವನ್ನು ಹಾಲಿವುಡ್ ಸಿನಿಮಾಗಳಿಗೂ ಹೋಲಿಸಿದ್ದಾರೆ.
ಈ ಚಿತ್ರದ ಬಗ್ಗೆ ಮಾತನಾಡಿರುವ ನಟ ಧ್ರುವ ಸರ್ಜಾ, ಈ ವೀಕೆಂಡ್‌ನಲ್ಲಿ ಇನ್ನೂ ಉತ್ತಮ ಪ್ರದರ್ಶನ ಕಾಣುವ ನಿರೀಕ್ಷೆ ಇದೆ. ಕರ್ನಾಟಕ ಮಾತ್ರವಲ್ಲದೆ, ತೆಲಂಗಾಣ ಹಾಗೂ ಬೇರೆ ರಾಜ್ಯಗಳಲ್ಲೂ ಮಾರ್ಟಿನ್ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ರಾಜ್ಯದಲ್ಲೂ ಎಲ್ಲೆಡೆ ಒಳ್ಳೆಯ ಮಾತುಗಳೇ ಕೇಳಿಬರುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಅಭಿಮಾನಿಗಳು ಮಾತ್ರವಲ್ಲದೆ, ಕುಟುಂಬ ಸಮೇತರಾಗಿ ಬಂದು ಸಿನಿಮಾ ಎಂಜಾಯ್ ಮಾಡುತ್ತಿದ್ದಾರೆ. ನಮ್ಮ ಚಿತ್ರತಂಡದ ಮೂರು ವರ್ಷಗಳ ಶ್ರಮವನ್ನು ಪ್ರೇಕ್ಷಕರು ಕೇವಲ ಎರಡೂವರೆ ಗಂಟೆ ಸಮಯದಲ್ಲಿ ನೋಡಬಹುದು. ಬಹುತೇಕ ಥಿಯೇಟರ್‌ಗಳು ಹೌಸ್‌ಫುಲ್ ಆಗಿದೆ ಎಂದು ಕೇಳಿ ನಿಜಕ್ಕೂ ಖುಷಿಯಾಗಿದೆ ಎಂದು ಧ್ರುವ ಹೇಳಿದ್ದಾರೆ.












Click it and Unblock the Notifications