ಸರ್ಜಾ ಕುಟುಂಬ ದುಡ್ಡಿಗೋಸ್ಕರ ಸಂಬಂಧ ಕಳೆದುಕೊಳ್ಳಲ್ಲ: ತೂಗುದೀಪ ಕುಟುಂಬದ ಜತೆ ಬಿರುಕು ವದಂತಿಗೆ ಧ್ರುವ ಸರ್ಜಾ ಸ್ಪಷ್ಟನೆ
ಕನ್ನಡ ಚಿತ್ರರಂಗದ ಎರಡು ಪ್ರಭಾವಿ ಕುಟುಂಬಗಳಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಹಾಗೂ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ಕುಟುಂಬಗಳ ನಡುವೆ ವೈಮನಸ್ಸು ಉಂಟಾಗಿದೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ವದಂತಿಗಳಿಗೆ ಈಗ 'ಆ್ಯಕ್ಷನ್ ಪ್ರಿನ್ಸ್' ಧ್ರುವ ಸರ್ಜಾ ಅವರು ತಮ್ಮದೇ ಶೈಲಿಯಲ್ಲಿ ಬ್ರೇಕ್ ಹಾಕಿದ್ದಾರೆ.
ವದಂತಿಗಳಿಗೆ ಕಾರಣವಾಗಿದ್ದೇನು?
ಸರ್ಜಾ ಕುಟುಂಬದ ನಿರ್ಮಾಣದ 'ಪ್ರೇಮಬರಹ' ಸಿನಿಮಾದ ನಂತರ ಎರಡೂ ಕುಟುಂಬಗಳ ನಡುವೆ ಹಣಕಾಸಿನ ವಿಚಾರವಾಗಿ ಭಿನ್ನಾಭಿಪ್ರಾಯ ಮೂಡಿದೆ ಮತ್ತು ದರ್ಶನ್ ಹಾಗೂ ಧ್ರುವ ಸರ್ಜಾ ನಡುವೆ ಮೊದಲಿನ ಬಾಂಧವ್ಯ ಇಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಯೂಟ್ಯೂಬ್ ಹಾಗೂ ಇತರೆ ಮಾಧ್ಯಮಗಳಲ್ಲಿ ಈ ಬಗ್ಗೆ ನೂರಾರು ಸುದ್ದಿಗಳು ಹರಿದಾಡುತ್ತಿದ್ದವು.

ಧ್ರುವ ಸರ್ಜಾ ಹೇಳಿದ್ದೇನು?
ಈ ಎಲ್ಲ ಬೆಳವಣಿಗೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ಧ್ರುವ ಸರ್ಜಾ, "ಯುಟ್ಯೂಬ್‌ನಲ್ಲಿ ಇಂತಹ ಸುದ್ದಿಗಳನ್ನು ನೋಡಿ ನಿಜಕ್ಕೂ ಮನಸ್ಸಿಗೆ ನೋವಾಗುತ್ತದೆ. ಸರ್ಜಾ ಫ್ಯಾಮಿಲಿ ದುಡ್ಡಿಗೋಸ್ಕರ ಒಂದು ಸಂಬಂಧ ಕಳೆದುಕೊಳ್ಳುವುದಿಲ್ಲ. ಅದೇ ರೀತಿ ತೂಗುದೀಪ ಶ್ರೀನಿವಾಸ್ ಅಪ್ಪಾಜಿ ಫ್ಯಾಮಿಲಿ ಕೂಡ. ಹೀಗಿರುವಾದ ನಮ್ಮ ನಡುವೆ ದುಡ್ಡಿನ ವಿಚಾರಕ್ಕೆ ಬಿರುಕು ಮೂಡಿದೆ ಎಂಬುದೆಲ್ಲಾ ಕೇವಲ ಸುಳ್ಳು ಸುದ್ದಿ" ಎಂದು ಸ್ಪಷ್ಟಪಡಿಸಿದ್ದಾರೆ.
ವಿವಾದ ಸೃಷ್ಟಿಸುವವರಿಗೆ ತಿರುಗೇಟು
"ಯಾರಿಗೆ ಈ ಸಂಬಂಧಗಳ ನಡುವೆ ಬಿರುಕು ಮೂಡಲಿ ಎಂಬ ಆಸೆ ಇತ್ತೋ, ಅವರೇ ಇಂತಹ ಒಂದು ಕಾರಣವನ್ನು ಸೃಷ್ಟಿಸಿ ಸಮಾಜದ ಮುಂದೆ ಬಿಂಬಿಸುತ್ತಿದ್ದಾರೆ. ಇಲ್ಲಿ ಯಾರೂ ಕೂಡ ಹಣದ ಹಿಂದೆ ಬೀಳುವವರಲ್ಲ. ದುಡ್ಡಿಗಾಗಿ ಬಿರುಕು ಅನ್ನೋದೆಲ್ಲ ಸುಳ್ಳು. ಈ ಬಗ್ಗೆ ಇನ್ನೂ ಹೆಚ್ಚಿನ ಸ್ಪಷ್ಟನೆ ಬೇಕಿದ್ದಲ್ಲಿ ಅರ್ಜುನ್ ಸರ್ಜಾ ಅಂಕಲ್ ಅವರನ್ನೇ ಕೇಳಿ. ಸದ್ಯಕ್ಕೆ ಕೆಲವು ವಿಷಯಗಳು ನ್ಯಾಯಾಲಯದ ಹಂತದಲ್ಲಿರುವುದರಿಂದ ನಾವು ಹೆಚ್ಚಾಗಿ ಮಾತನಾಡುವುದು ಸರಿಯಲ್ಲ" ಎಂದು ಧ್ರುವ ಸರ್ಜಾ ಹೇಳಿದ್ದಾರೆ.
ತೂಗುದೀಪ ಹಾಗೂ ಸರ್ಜಾ ಕುಟುಂಬದ ನಡುವೆ ಮನಸ್ತಾಪ, ಬಿರುಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ ಸುದ್ದಿಗಳಿಗೆ ಧ್ರುವ ಬ್ರೇಕ್ ಹಾಕಿದ್ದಾರೆ. ಇದೇ ವೇಳೆ ಎಲ್ಲರಿಗೂ ಒಳ್ಳೆಯದಾಗಲಿ ಎಂದು ತಮ್ಮದೇ ಶೈಲಿಯಲ್ಲಿ ಧ್ರುವ ಸರ್ಜಾ ಟೀಕಾಕಾರರಿಗೆ ತಕ್ಕ ಉತ್ತರ ನೀಡಿದ್ದಾರೆ. ತಮ್ಮ "ಕೆಡಿ" ಸಿನಿಮಾ ಪ್ರಚಾರದ ವೇಳೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಧ್ರುವ ಈ ಬಗ್ಗೆ ಮಾತನಾಡಿದ್ದಾರೆ.
ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿಬಂದಿರುವ 'ಕೆಡಿ' ಸಿನಿಮಾ ಇದೇ ಏಪ್ರಿಲ್ 30ರಂದು ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಈ ಚಿತ್ರದಲ್ಲಿ ಧ್ರುವ ಸರ್ಜಾ ಅವರು ಹಿಂದೆಂದೂ ಕಾಣಿಸಿಕೊಳ್ಳದ ರಗಡ್ ಅವತಾರದಲ್ಲಿ ನಟಿಸಿದ್ದು, ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದ್ದಾರೆ.
ಈ ಸಿನಿಮಾದ ಪ್ಲಸ್ ಪಾಯಿಂಟ್ ಎಂದರೆ ಅದರ ಬೃಹತ್ ತಾರಾಗಣ. ಧ್ರುವ ಸರ್ಜಾ ಅವರಿಗೆ ನಾಯಕಿಯಾಗಿ ಪ್ರತಿಭಾವಂತ ನಟಿ ರೀಷ್ಮಾ ನಾಣಯ್ಯ ಜೋಡಿಯಾಗಿದ್ದಾರೆ. ವಿಶೇಷವೆಂದರೆ, ಕನ್ನಡ ಚಿತ್ರರಂಗದ ಇಬ್ಬರು ದೈತ್ಯ ಪ್ರತಿಭೆಗಳಾದ ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ನಟ ರಮೇಶ್ ಅರವಿಂದ್ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಚಿತ್ರಕ್ಕೆ ಆನೆಬಲ ತಂದಿದ್ದಾರೆ.












Click it and Unblock the Notifications