Vishnuvardhan: ಹೃದಯದ ಗುಡಿಯಲ್ಲಿರುವ ವಿಷ್ಣು ಸರ್‌ಗೆ ಸ್ಮಾರಕ ಏಕೆ ಬೇಕು? ನಟ ಧ್ರುವ ಸರ್ಜಾ
ಕನ್ನಡದ ಹಿರಿಯ ನಟ, ಸಾಹಸಸಿಂಹ ವಿಷ್ಣುವರ್ಧನ್ ಅವರ ಸಮಾಧಿ ಕೆಡವಿರುವ ವಿಚಾರಕ್ಕೆ ರಾಜ್ಯದೆಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದ್ದ ಅವರ ಮೂಲ ಸಮಾಧಿ ಜಾಗವನ್ನು ಕೋರ್ಟ್ ಸೂಚನೆ ಮೇರೆಗೆ ತೆರವು ಮಾಡಲಾಗಿದ್ದು, ಕೊನೆಯ ಪಕ್ಷ ಅವರ ಸಮಾಧಿ ಇದ್ದ ಜಾಗವನ್ನಾದರೂ ಉಳಿಸಬೇಕಿತ್ತು ಎಂದು ವಿಷ್ಣುದಾದಾ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಈ ವಿಚಾರವಾಗಿ ಕಿಚ್ಚ ಸುದೀಪ್ ಕೂಡ ಹೋರಾಟಕ್ಕಿಳಿದಿದ್ದಾರೆ. ಸಮಾಧಿ ಕೆಡವಿರುವ ಬಗ್ಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೂಡ ಬೇಸರ ಹೊರಹಾಕಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ನಟ ಬಾಲಕೃಷ್ಣ ಅವರು ಅಭಿಮಾನ್ ಸ್ಟುಡಿಯೋ ಆರಂಭಿಸಿದ್ದರು. ಇದೇ ಜಾಗದಲ್ಲಿ ವಿಷ್ಣುವರ್ಧನ್ ಅವರು ನಿಧನರಾದಾಗ ಅಂತ್ಯಕ್ರಿಯೆ ಮಾಡಲಾಗಿತ್ತು. ಆಗ ಕಂಠೀರವ ಸ್ಟುಡಿಯೋದಲ್ಲಿನ ಡಾ.ರಾಜ್‌ಕುಮಾರ್ ಅವರ ಸ್ಮಾರಕದಂತೆ ವಿಷ್ಣುವರ್ಧನ್ ಅವರಿಗೂ ಬೃಹತ್ ಸ್ಮಾರಕ ನಿರ್ಮಿಸಬೇಕು ಎಂದು ಹಲವು ವರ್ಷಗಳ ಕಾಲ ಹೋರಾಟ ನಡೆಸಲಾಯಿತು.

ಆದರೆ ಅಭಿಮಾನ್ ಸ್ಟುಡಿಯೋದ ಆ ಜಾಗವು ವಿವಾದದಲ್ಲಿ ಇದ್ದಿದ್ದರಿಂದ ಇದು ಸಾಧ್ಯವಾಗಲಿಲ್ಲ. ಸರ್ಕಾರ ಕೂಡ ಈ ವಿವಾದ ಬಗೆಹರಿಸಲಿಲ್ಲ. ಬದಲಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಆಸಕ್ತಿ ತೋರಿತು. ಆದರೆ ಅಂತ್ಯಕ್ರಿಯೆ ನಡೆದ ಜಾಗವೇ ನಮ್ಮ ಯಜಮಾನರ ಮೂಲ ಸ್ಮಾರಕ ಎಂದು ಅಭಿಮಾನಿಗಳು ಭಾವನಾತ್ಮಕವಾಗಿ ನಂಟು ಹೊಂದಿದ್ದರು.
ಆರಂಭದಲ್ಲಿ ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್ ಅವರ ಸಮಾಧಿ ಜಾಗದಲ್ಲಿ ಪೂಜೆ, ಪುನಸ್ಕಾರಗಳಿಗೆ ಅಭಿಮಾನಿಗಳಿಗೆ ಅವಕಾಶವೂ ಇತ್ತು. ಆ ಜಾಗದಲ್ಲಿ ಪುಟ್ಟ ಗುಡಿಯಂತೆ ನಿರ್ಮಾಣ ಮಾಡಲಾಗಿತ್ತು. ಪ್ರತಿ ವರ್ಷ ವಿಷ್ಣುವರ್ಧನ್ ಅವರ ಹುಟ್ಟುಹಬ್ಬ ಹಾಗೂ ಪುಣ್ಯಸ್ಮರಣೆ ವೇಳೆ ಅಭಿಮಾನಿಗಳು ಅಲ್ಲಿಗೆ ಹೋಗಿ, ಸಮಾಧಿಗೆ ಪೂಜೆ ಸಲ್ಲಿಸಿ ದರ್ಶನ ಪಡೆಯುತ್ತಿದ್ದರು.
ಆದರೆ ಇತ್ತೀಚೆಗೆ ಅಲ್ಲಿಗೆ ಅಭಿಮಾನಿಗಳ ಪ್ರವೇಶ ನಿರ್ಬಂಧಿಸಲಾಯಿತು. ಇದರಿಂದ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು. ಅಭಿಮಾನಿಗಳು ಬರುವುದೇ ವರ್ಷದಲ್ಲಿ ಎರಡು ದಿನ. ಅದಕ್ಕೂ ಅವಕಾಶವಿಲ್ಲ ಎಂದು ಕಣ್ಣೀರಿಟ್ಟಿದ್ದರು. ಆದರೆ ಈಗ ಇದ್ದಕ್ಕಿದ್ದಂತೆ ಅವರ ಮೂಲ ಸಮಾಧಿಯನ್ನು ತೆರವು ಮಾಡಲಾಗಿದೆ. ಇದರಿಂದ ಅಭಿಮಾನಿಗಳು ಕೆರಳಿ ನಿಂತಿದ್ದಾರೆ. ಅಭಿಮಾನಿಗಳ ಪರ ನಟ ಧ್ರುವ ಸರ್ಜಾ ಧ್ವನಿ ಎತ್ತಿದ್ದಾರೆ.

ಅಭಿಮಾನಿಗಳ ಜೊತೆ ನಾನಿದ್ದೇನೆ ಎಂದ ಧ್ರುವ
"ಸಾಧಕನಿಗೂ ಸಾವಿಲ್ಲ, ಕಲೆಗೂ ಸಾವಿಲ್ಲ, ವಿಷ್ಣು ಅಪ್ಪಾಜಿ ಅಜರಾಮರ ಎಂದಿದ್ದಾರೆ ಧ್ರುವ ಸರ್ಜಾ. ಕೋಟ್ಯಂತರ ಕನ್ನಡಿಗರ ಹೃದಯದಲ್ಲಿ ಗುಡಿ ಕಟ್ಟಿರುವ ವ್ಯಕ್ತಿಗೆ ಸ್ಮಾರಕ ಏಕೆ ಬೇಕು? ಎಂದು ಪ್ರಶ್ನಿಸಿದ್ದಾರೆ. ಆದರೂ ಸಹ ಈ ಒಂದು ನಾಡಿನಲ್ಲಿ ಇಂತಹ ಒಬ್ಬ ಸಾಧಕನಿಗೆ ಈ ರೀತಿ ಅವಮಾನ ಮಾಡುವುದು ಸರಿಯಲ್ಲ. ಇದರಿಂದ ಮನಸ್ಸಿಗೆ ಬಹಳಷ್ಟು ನೋವು ಉಂಟಾಗಿದೆ. ಕೇಳಲು ಸಾಕಷ್ಟು ಪ್ರಶ್ನೆಗಳಿವೆ. ಆದರೆ ಇದೆಲ್ಲದಕ್ಕೂ ಉತ್ತರ, ನಾನು ಒಬ್ಬ ಕನ್ನಡಿಗನಾಗಿ, ಒಬ್ಬ ಕಲಾವಿದನಾಗಿ, ಈ ಒಂದು ಸಂದರ್ಭದಲ್ಲಿ ನಾನು ವಿಷ್ಣು ಸರ್ ಅಭಿಮಾನಿಗಳ ಜೊತೆ ಪ್ರಾಮಾಣಿಕವಾಗಿ ಇದ್ದೇನೆ. ನಿಮ್ಮ ಮುಂದಿನ ನಡೆಗಾಗಿ ಕಾಯುತ್ತಿದ್ದೇನೆ. ಜೈ ಕನ್ನಡಾಂಬೆ ವಿಷ್ಣು ದಾದಾ ಅಜರಾಮರ!" ಎಂದು ಧ್ರುವ ಸರ್ಜಾ ಅಭಿಮಾನಿಗಳ ಪರ ಧ್ವನಿ ಎತ್ತಿದ್ದಾರೆ.












Click it and Unblock the Notifications