Rachana Rai: ದರ್ಶನ್ ಅವರ ವಿಚಾರದಲ್ಲಿ ನಾನು ತಲೆ ಹಾಕಲ್ಲ: ಡೆವಿಲ್ ನಟಿ ಹೇಳಿದ್ದೇನು?
ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ ಅವರ ಬಹುನಿರೀಕ್ಷಿತ "ಡೆವಿಲ್" ಸಿನಿಮಾವು ಡಿಸೆಂಬರ್ 12ಕ್ಕೆ ರಿಲೀಸ್ ಆಗಲಿದೆ. ಸದ್ಯ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಅವರು ಮತ್ತೆ ಜೈಲು ಸೇರಿದ್ದಾರೆ. ಹೀಗಾಗಿ ಚಿತ್ರತಂಡವು ಅವರ ಅನುಪಸ್ಥಿತಿಯಲ್ಲೇ ಸಿನಿಮಾ ರಿಲೀಸ್ ಮಾಡಲು ನಿರ್ಧರಿಸಿದೆ. ಈ ಸಿನಿಮಾದ ನಾಯಕಿ ನಟಿ ರಚನಾ ರೈ ಕೂಡ ಪ್ರಚಾರಕ್ಕೆ ಒಂಟಿಯಾಗಿ ಇಳಿದಿದ್ದಾರೆ. ವಿವಿಧ ಸಂದರ್ಶನದಲ್ಲಿ ತೊಡಗುತ್ತಾ ಡೆವಿಲ್ ಸಿನಿಮಾದ ಪ್ರಚಾರ ಶುರು ಮಾಡಿದ್ದಾರೆ. ಈ ವೇಳೆ ದರ್ಶನ್ ಅವರ ಕುರಿತು ಅಚ್ಚರಿಯ ವಿಚಾರಗಳನ್ನು ಹಂಚಿಕೊಂಡಿರುವ ರಚನಾ, ಆ ವಿಚಾರದಲ್ಲಿ ನಾನು ತಲೆಹಾಕಲ್ಲ ಎಂದಿದ್ದಾರೆ.
'ದರ್ಶನ್ ಸರ್‌ಗೆ ನಾಯಕಿಯಾಗಿ ಎಂದು ಹೇಳಿದಾಗ ನಾನು ನಂಬಲೇ ಇಲ್ಲ. ನಾನು ಶೂಟಿಂಗ್‌ಗೆ ಹೋಗುವವರೆಗೆ ಅದನ್ನು ನಂಬಲಿಲ್ಲ. ಶೂಟಿಂಗ್ ದಿನ ಅದನ್ನು ನಾನು ನಂಬಿದೆ. ಥಾಯ್ಲೆಂಡ್‌ಗೆ ಹೋದ ಮೇಲೆ ಹೊಸ ಹೊಸ ಫುಡ್‌ನ ನನಗೆ ಪರಿಚಯ ಮಾಡಿಸಿದ್ದು ದರ್ಶನ್ ಸರ್. ವಿಜಯಲಕ್ಷ್ಮಿ ಅವರು ಕೂಡ ಬಂದಿದ್ರು. ದರ್ಶನ್ ಸರ್ ಮೊದಲೇ ಟೇಸ್ಟ್ ಮಾಡಿದ್ದ ಬೆಸ್ಟ್ ಫುಡ್ ನನಗೆ ಪರಿಚಯಿಸಿದ್ರು' ಎಂದು ನಟಿ ರಚನಾ ರೈ ಶೂಟಿಂಗ್ ಅನುಭವ ಹೇಳಿಕೊಂಡಿದ್ದಾರೆ.

'ದರ್ಶನ್ ಅವರು ಸೆಟ್ ಬಂದಾಗ ಅವರ ಮನಸ್ಸು ಕೂಡ ಅಲ್ಲೇ ಇರುತ್ತಿತ್ತು. ಆ ಸಿನಿಮಾ ಬಗ್ಗೆ ಭಾರ ಹೊತ್ತಿದ್ರು. ಈ ಸಿನಿಮಾ ಬೇಗ ಮುಗಿಸಿಕೊಡಬೇಕು ಅನ್ನೋದು ಅವರಲ್ಲಿತ್ತು. ಅವರು ಶೂಟಿಂಗ್ ಸೆಟ್‌ನಲ್ಲೂ ಒಬ್ಬ ನಟ ಹೇಗಿರಬೇಕೋ ಹಾಗೆ ಇರುತ್ತಿದ್ರು. ಆ ಪಾತ್ರಕ್ಕೆ ಬೇಕಾಗಿದ್ದನ್ನ ಸಂಪೂರ್ಣವಾಗಿ ಕೊಡುತ್ತಿದ್ರು. ಅವರಲ್ಲಿ ಯಾವುದೇ ಅಳುಕು ಕಾಣುತ್ತಿರಲಿಲ್ಲ' ಎಂದಿದ್ದಾರೆ.
ದೇವರಂತ ವ್ಯಕ್ತಿ
'ದರ್ಶನ್ ಅವರ ವೈಯಕ್ತಿಕ ವಿಚಾರಗಳ ಬಗ್ಗೆ ನಾನು ಶೂಟಿಂಗ್ ವೇಳೆಯೂ ಕೇಳಲಿಲ್ಲ. ಆ ವಿಚಾರದಲ್ಲಿ ನಾನು ತಲೆ ಹಾಕಲ್ಲ. ಅದರ ಬಗ್ಗೆ ನನಗೆ ಸಂಪೂರ್ಣವಾಗಿ ಮಾಹಿತಿಯೂ ಇಲ್ಲ. ಆದರೆ ದರ್ಶನ್ ಅವರು ದೇವರಂತಹ ವ್ಯಕ್ತಿ ಎಂದಿದ್ದಾರೆ. ಇನ್ನು ಡೆವಿಲ್ ಸಿನಿಮಾ ಬಗ್ಗೆ, ನನ್ನ ಪಾತ್ರದ ಬಗ್ಗೆ ಜನ ತೋರಿಸುತ್ತಿರುವ ಪ್ರೀತಿ ನೋಡಿ ಖುಷಿಯಾಗುತ್ತೆ. ನಮ್ಮ ಸಿನಿಮಾ ಹಾಡನ್ನ ಮೆಚ್ಚಿಕೊಂಡಿದ್ದಾರೆ' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಡೆವಿಲ್ ಸಿನಿಮಾ ಸೆಟ್ಟೇರಿದಾಗಲೇ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಅರೆಸ್ಟ್ ಆಗಿದ್ದರು. ಹೀಗಾಗಿ ಡೆವಿಲ್ ಸಿನಿಮಾ ಶೂಟಿಂಗ್ ಅರ್ಧಕ್ಕೆ ನಿಂತಿತ್ತು. ಹಲವು ತಿಂಗಳ ಬಳಿಕ ದರ್ಶನ್ ಅವರಿಗೆ ಜಾಮೀನು ಸಿಕ್ಕಿತ್ತು. ಆರೋಗ್ಯ ಸುಧಾರಿಸಿಕೊಂಡು ಡೆವಿಲ್ ಶೂಟಿಂಗ್‌ನಲ್ಲಿ ಭಾಗಿಯಾಗಿ ಮುಗಿಸಿಕೊಟ್ಟಿದ್ದರು. ಇನ್ನೇನು ರಿಲೀಸ್ ದಿನಾಂಕ ಘೋಷಣೆ ಮಾಡಬೇಕು ಎನ್ನುವಷ್ಟರಲ್ಲಿ ಅವರ ಜಾಮೀನು ಸುಪ್ರೀಂಕೋರ್ಟ್ ರದ್ದು ಮಾಡಿತ್ತು. ಹೀಗಾಗಿ ದರ್ಶನ್ ಅವರು ಮತ್ತೆ ಜೈಲಿಗೆ ಹೋಗಬೇಕಾಯಿತು. ಸಿನಿಮಾ ರೆಡಿ ಇರುವ ಕಾರಣ ಅವರಿಲ್ಲದೆಯೇ ರಿಲೀಸ್ ಮಾಡಲು ಚಿತ್ರತಂಡ ಮುಂದಾಗಿದೆ. ಡಿಸೆಂಬರ್‌ನಲ್ಲಿ ಸಿನಿಮಾ ತೆರೆಗೆ ಬರಲಿದೆ.












Click it and Unblock the Notifications