Kamal Haasan: ಕರ್ನಾಟಕ ಬಳಿಕ ತಮಿಳುನಾಡಿನಲ್ಲೂ ಕಮಲ್ ಹಾಸನ್ ಸಿನಿಮಾ ಬ್ಯಾನ್ ಮಾಡುವಂತೆ ಆಗ್ರಹ, ಏಕೆ?
ಕನ್ನಡ ಹುಟ್ಟಿದ್ದು ತಮಿಳಿನಿಂದ ಎನ್ನುವ ಮೂಲಕ ದೊಡ್ಡ ವಿವಾದ ಸೃಷ್ಟಿಸಿದ್ದರು ತಮಿಳು ನಟ ಕಮಲ್ ಹಾಸನ್. ಈ ಒಂದು ಹೇಳಿಕೆಯಿಂದಾಗಿ ಕನ್ನಡಿಗರ ಕಮಲ್ ವಿರುದ್ಧ ತಿರುಗಿಬಿದ್ದಿದ್ದರು. ಕಮಲ್ ಕೂಡಲೇ ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು. ಇದಕ್ಕೆ ಕನ್ನಡದ ಕೆಲವೇ ಕಲಾವಿದರು ಕೂಡ ಧ್ವನಿ ಎತ್ತಿದ್ದರು. ಆದರೆ ಕಮಲ್ ಕ್ಷಮೆ ಕೇಳಲ್ಲ ಎಂದು ಮೊಂಡಾಟ ಮುಂದುವರಿಸಿದ ಕಾರಣ ಥಗ್‌ಲೈಫ್ ಸಿನಿಮಾ ಬ್ಯಾನ್ ಮಾಡುವಂತೆ ಒತ್ತಾಯಿಸಿದ್ದರು. ಕೊನೆಗೆ ಕರ್ನಾಟಕದಲ್ಲಿ ಅವರ ಸಿನಿಮಾ ರಿಲೀಸ್ ಆಗಲಿಲ್ಲ. ಈಗ ಅವರ ತಾಯ್ನಾಡು ತಮಿಳುನಾಡಿನಲ್ಲೇ ಕಮಲ್ ಹಾಸನ್ ಸಿನಿಮಾಗಳನ್ನು ಬ್ಯಾನ್ ಮಾಡಬೇಕು ಎಂಬ ಕೂಗು ಎದ್ದಿದೆ.
ಕಮಲ್ ಹಾಸನ್ ಅವರು ತಮ್ಮ ಹೇಳಿಕೆಗಳಿಂದಲೇ ವಿವಾದಗಳನ್ನು ತಮ್ಮ ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಇದೀಗ ಮತ್ತೊಂದು ವಿವಾದ ಕಮಲ್ ಅವರನ್ನು ಸುತ್ತಿಕೊಂಡಿದೆ. ಇದರಿಂದಾಗಿ ತಮಿಳುನಾಡಿನಲ್ಲಿ ಇನ್ನುಮುಂದೆ ಕಮಲ್ ಸಿನಿಮಾಗಳ ಮೇಲೆ ನಿಷೇಧ ಹೇರಬೇಕು ಎಂಬ ಆಗ್ರಹ ಕೇಳಿದೆ. ಸದ್ಯ ಕಮಲ್ ಅವರು ಇತ್ತೀಚೆಗೆ ಕಾರ್ಯಕ್ರಮದಲ್ಲಿ ಆಡಿದ್ದ ಮಾತುಗಳು ವಿವಾದಕ್ಕೆ ಕಾರಣವಾಗಿದೆ. ಕಮಲ್ ಹಾಸನ್ ತಮಿಳುನಾಡಿನಲ್ಲಿ ನಡೆದ ಕಾರ್ಯಕ್ರಮದಲ್ಲಿ "ಸನಾತನ ಧರ್ಮ"ದ ಕುರಿತು ನೀಡಿದ ಹೇಳಿಕೆಗೆ ವಿರೋಧ ಕೇಳಿಬಂದಿದೆ.

ಏನಿದು ವಿವಾದ?
ತಮಿಳು ನಟ ಸೂರ್ಯ ನಡೆಸುತ್ತಿರುವ ಎನ್‌ಜಿಒ ಸಂಸ್ಥೆ ಅಗರಂ ಫೌಂಡೇಶನ್ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ಭಾಷಣ ಮಾಡಿದ್ದರು. ಇದರಲ್ಲಿ ಅವರು ದೇಶವನ್ನು ಬದಲಾಯಿಸುವ ಶಕ್ತಿ ಶಿಕ್ಷಣಕ್ಕೆ ಮಾತ್ರ ಇದೆ. ಸರ್ವಾಧಿಕಾರ ಮತ್ತು ಸನಾತನದ ಸಂಕೋಲೆಗಳನ್ನು ಮುರಿಯುವ ಏಕೈಕ ಅಸ್ತ್ರ ಶಿಕ್ಷಣ ಮಾತ್ರ ಎಂದು ಹೇಳಿದ್ದರು. ಬೇರೆ ಯಾವುದೇ ಆಯುಧವನ್ನು ಕೈಯಲ್ಲಿ ತೆಗೆದುಕೊಳ್ಳಬೇಡಿ. ಬೇರೆ ಯಾವುದೇ ಆಯುಧದಿಂದ ಗೆಲ್ಲಲು ಸಾಧ್ಯವಿಲ್ಲ. ಏಕೆಂದರೆ ಅಜ್ಞಾನದ ಬಹುಮತೀಯತೆ ನಿಮ್ಮನ್ನು ಸೋಲಿಸುತ್ತದೆ ಎಂದೂ ಕಮಲ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದರು.
ರಾಷ್ಟ್ರವನ್ನು ಬದಲಾಯಿಸಲು ಶಿಕ್ಷಣವೇ ಶಕ್ತಿಯಾಗಿದೆ. ದೌರ್ಜನ್ಯ ಮತ್ತು ಸನಾತನದ ಬಂಧನ ಮುರಿಯಲು ಶಿಕ್ಷಣವೇ ಏಕೈಕ ಆಯುಧ. ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಯ ಬೇಡ ಎಂದು ವಾದಿಸಿರುವ ಅವರು, ನೀಟ್ ಪರೀಕ್ಷೆ ಗ್ರಾಮೀಣ ಮತ್ತು ಹಿಂದುಳಿದ ವಿದ್ಯಾರ್ಥಿಗಳಿಗೆ ಅವಕಾಶ ಕಡಿಮೆ ಮಾಡುತ್ತಿದೆ ಎಂದಿದ್ದರು. ಇತ್ತೀಚೆಗಷ್ಟೇ ರಾಜ್ಯಸಭಾ ಸಂಸದರೂ ಆಗಿರುವ ಕಮಲ್ ಹಾಸನ್ ಅವರ ಈ ಹೇಳಿಕೆಗೆ ರಾಜಕೀಯವಾಗಿ ವಿರೋಧ ವ್ಯಕ್ತವಾಗುತ್ತಿದೆ. ಕಮಲ್ ಹೇಳಿಕೆಯನ್ನು ತಮಿಳುನಾಡು ಬಿಜೆಪಿ ಖಂಡಿಸಿದೆ. ಕಮಲ್ ಅವರ ಸಿನಿಮಾಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದೆ. ಹಿಂದೂಗಳು ಕಮಲ್ ಹಾಸನ್ ಅವರ ಸಿನಿಮಾಗಳನ್ನು ಥಿಯೇಟರ್ ಮತ್ತು ಓಟಿಟಿ ಫ್ಲಾಟ್‌ಫಾರ್ಮ್‌ಗಳಲ್ಲಿ ಬಹಿಷ್ಕರಿಸುವಂತೆ ತಮಿಳುನಾಡು ಬಿಜೆಪಿ ರಾಜ್ಯ ಕಾರ್ಯದರ್ಶಿ ಅಮರ್ ಪ್ರಸಾದ್ ರೆಡ್ಡಿ ಅವರು ಕೂಡ ವಿಡಿಯೋ ಮೂಲಕ ಕರೆ ನೀಡಿದ್ದಾರೆ.

ಬಿಜೆಪಿಯವರು ಕಮಲ್ ಹೇಳಿಕೆಯನ್ನ 2023ರಲ್ಲಿ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ವಿರುದ್ಧ ನೀಡಿದ್ದ ಹೇಳಿಕೆಗೆ ಹೋಲಿಸಿ ಟೀಕಿಸಿದ್ದಾರೆ. ಹಿರಿಯ ಬಿಜೆಪಿ ನಾಯಕರು ಕೂಡ ಕಮಲ್ ಹಾಸನ್ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ತಮಿಳುನಾಡಿನಲ್ಲಿ ಇನ್ಮುಂದೆ ಕಮಲ್ ಸಿನಿಮಾಗಳನ್ನ ಬ್ಯಾನ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಕಮಲ್ ಹಾಸನ್ ಅವರು ಇದುವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಈ ವಿಷಯ ರಾಜ್ಯ ರಾಜಕೀಯ ಮತ್ತು ಧರ್ಮದ ವಿಚಾರಗಳಲ್ಲಿ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ಕರ್ನಾಟಕದ ಬಳಿಕ ಈಗ ಸ್ವಂತ ನೆಲದಲ್ಲೇ ಕಮಲ್ ಸಿನಿಮಾಗಳಿಗೆ ಬ್ಯಾನ್ ಬಿಸಿ ತಟ್ಟಿದೆ.












Click it and Unblock the Notifications