Deepika Padukone: ಕನ್ನಡತಿ ದೀಪಿಕಾ ಪಡುಕೋಣೆ ವಿಶ್ವ ದಾಖಲೆ; ರೊನಾಲ್ಡೋ ರೆಕಾರ್ಡ್ ಕೂಡ ಉಡೀಸ್!
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮೂಲತಃ ಕನ್ನಡಿಗರು, ಬೆಂಗಳೂರಿನವರು. ಅವರು ಕನ್ನಡದಲ್ಲೇ ಚೆನ್ನಾಗಿ ಮಾತನಾಡುತ್ತಾರೆ. ಸದ್ಯ ಬಾಲಿವುಡ್‌ನ ಟಾಪ್ ನಟಿಯರಲ್ಲಿ ಸ್ಥಾನ ಪಡೆದಿರುವ ದೀಪಿಕಾ ಅವರು ಹೊಸ ದಾಖಲೆ ಬರೆದಿದ್ದಾರೆ. ನಟಿ ದೀಪಿಕಾ ಪಡುಕೋಣೆ ಇತ್ತೀಚೆಗೆ ಇನ್‌ಸ್ಟ್ರಾಗ್ರಾಂನಲ್ಲಿ ವಿಶ್ವ ದಾಖಲೆ ಮಾಡಿದ್ದಾರೆ. ಹೀಗಾಗಿ ಇಡೀ ವಿಶ್ವವೇ ಈಗ ಕನ್ನಡತಿ ದೀಪಿಕಾ ಕಡೆಗೆ ನೋಡುತ್ತಿದೆ. ಇತ್ತೀಚಿನ ವರದಿ ಪ್ರಕಾರ ದೀಪಿಕಾ ಪಡುಕೋಣೆ ಅವರ ಒಂದು ಡಿಜಿಟಲ್ ಪ್ರಚಾರದ ರೀಲ್ ಬರೋಬ್ಬರಿ 1.9 ಬಿಲಿಯನ್ ವೀಕ್ಷಣೆ ಪಡೆದಿದೆ. ಇದು ಇನ್ಸ್‌ಟಾಗ್ರಾಮ್‌ನಲ್ಲಿ ಅತ್ಯಧಿಕ ವೀಕ್ಷಣೆ ಪಡೆದ ರೀಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ದೀಪಿಕಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ 80 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಇತ್ತೀಚೆಗೆ ಅವರ ಒಂದು ಇನ್‌ಸ್ಟಾಗ್ರಾಮ್ ರೀಲ್ ಬರೋಬ್ಬರಿ 1.9 ಬಿಲಿಯನ್ ವೀಕ್ಷಣೆಗಳನ್ನು ದಾಟಿದೆ. ವರದಿಯ ಪ್ರಕಾರ ಇದು ಜಾಗತಿಕವಾಗಿ ವೇದಿಕೆಯಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ರೀಲ್ ಎನ್ನಲಾಗಿದೆ. ಈ ಡಿಜಿಟಲ್ ವೇದಿಕೆಯಲ್ಲಿ ಅತ್ಯಂತ ಪ್ರಭಾವಶಾಲಿ ಭಾರತೀಯ ಸೆಲೆಬ್ರಿಟಿಗಳಲ್ಲಿ ದೀಪಿಕಾ ಸ್ಥಾನ ಪಡೆದುಕೊಂಡಿದ್ದಾರೆ.

ಅವರ ಫ್ಯಾನ್ಸ್ ಫಾಲೋಯಿಂಗ್ ಈ ಮೆಗಾ ದಾಖಲೆಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ. ಈ ಸಾಧನೆಯಿಂದಾಗಿ ದೀಪಿಕಾ ಪಡುಕೋಣೆ ಭಾರತೀಯ ಸೆಲೆಬ್ರಿಟಿಗಳಲ್ಲಿ ಡಿಜಿಟಲ್ ಮೂಲಕವೂ ಮುಂಚೂಣಿ ಸ್ಥಾನದಲ್ಲಿದ್ದಾರೆ. ಈ ರೀಲ್‌ನಲ್ಲಿ ಅವರು ಹೋಟೆಲ್‌ಗೆ ಸಂಬಂಧಿಸಿದ ಮಾರಾಟದ ಜಾಹೀರಾತಿನ ಪ್ರಚಾರದಲ್ಲಿ ಭಾಗವಹಿಸಿದ್ದರು. ಈ ವಿಡಿಯೋವನ್ನು 1.9 ಬಿಲಿಯನ್ ಜನರು ವೀಕ್ಷಿಸಿದ್ದರೆ, 1 ಮಿಲಿಯನ್ ಲೈಕ್‌ಗಳು ಹಾಗೂ ಸಾವಿರಾರು ಕಾಮೆಂಟ್‌ಗಳು ಕೂಡ ಬಂದಿವೆ.
ಪಾಂಡ್ಯ, ರೊನಾಲ್ಡೋ ದಾಖಲೆ ಔಟ್
ಈ ಹೊಸ ದಾಖಲೆಯೊಂದಿಗೆ ದೀಪಿಕಾ ಅವರ ರೀಲ್ ಈ ಹಿಂದೆ ಹಾರ್ದಿಕ್ ಪಾಂಡ್ಯ ಅವರ 1.6 ಬಿಲಿಯನ್, ಫ್ಲೆಕ್ಸ್ ಯುವರ್ ನ್ಯೂ ಫೋನ್‌ನ 1.4 ಬಿಲಿಯನ್ ವೀಕ್ಷಣೆಗಳು, ಹಾಗೂ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ 503 ಮಿಲಿಯನ್ ವೀಕ್ಷಣೆಗಳ ದಾಖಲೆಯನ್ನು ಹಿಂದಿಕ್ಕಿದೆ.

ದೀಪಿಕಾ ಅವರು ಕನ್ನಡದಲ್ಲಿ ಉಪೇಂದ್ರ ಜೊತೆ ಐಶ್ವರ್ಯಾ ಸಿನಿಮಾದಲ್ಲಿ ನಟಿಸಿದ್ದರು. ಬಳಿಕ ಬಾಲಿವುಡ್‌ನತ್ತ ಹಾರಿ ಟಾಪ್ ನಟಿಯಾದರು. ನಟ ರಣವೀರ್ ಸಿಂಗ್ ಅವರನ್ನ ಮದುವೆಯಾಗಿರುವ ದೀಪಿಕಾ ಪಡುಕೋಣೆ, ಕಳೆದ ವರ್ಷ ತಮ್ಮ ಮಗಳು ದುವಾ ಜನನದ ಬಳಿಕ ಮಾತೃತ್ವದಲ್ಲಿದ್ದಾರೆ. ಕಳೆದ ತಿಂಗಳು ಹಾಲಿವುಡ್ ವಾಕ್ ಆಫ್ ಫೇಮ್‌ನ ಪ್ರತಿಷ್ಠಿತ ಪ್ರಶಸ್ತಿಗೂ ದೀಪಿಕಾ ಭಾಜನರಾಗಿದ್ದು, 2026ರಲ್ಲಿ ಸ್ಟಾರ್ ಪ್ರಶಸ್ತಿ ನೀಡಲಾಗುವುದು ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಸದ್ಯ ಅವರ ಮುಂದಿನ ಚಲನಚಿತ್ರಗಳಲ್ಲಿ ಅಟ್ಲಿ ನಿರ್ದೇಶನದ, ಅಲ್ಲು ಅರ್ಜುನ್ ನಟನೆಯ ಸಿನಿಮಾದಲ್ಲಿ ಹಾಗೂ ಅಮಿತಾಭ್ ಬಚ್ಚನ್ ಅವರೊಂದಿಗೆ "ದಿ ಇಂಟರ್ನ್" ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.












Click it and Unblock the Notifications