Darshan House: ದರ್ಶನ್ ಮನೆ ತೆರವಿಗೆ ಡಿಕೆ ಶಿವಕುಮಾರ್ ಖಡಕ್ ಸೂಚನೆ: ಘರ್ಜಿಸಲಿವೆ ಬುಲ್ಡೋಜರ್ಸ್
ಬೆಂಗಳೂರು, ಜೂನ್. 18: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲಿನಲ್ಲಿದ್ದಾರೆ. ತಮ್ಮ ಆಪ್ತ ಸ್ನೇಹಿತೆ ಪವಿತ್ರಾ ಗೌಡಗೆ ಮೆಸೇಜ್ ಮಾಡಿದ್ದ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದ್ದು, ಈವರೆಗೆ 19 ಮಂದಿಯನ್ನು ಬಂಧಿಸಲಾಗಿದೆ. ಇದರ ಜೊತೆಯಲ್ಲಿಯೇ ದರ್ಶನ್ ಅವರ ಹಳೆಯ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಈಗಾಗಲೇ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ರಾಜರಾಜೇಶ್ವರಿ ನಗರದಲ್ಲಿರುವ ನಟ ದರ್ಶನ್ ಅವರ ಮನೆಯನ್ನು ರಾಜಕಾಲುವೆ ಮೇಲೆ ಕಟ್ಟಲಾಗಿದೆ ಎಂಬ ಆರೋಪವಿದೆ. ಹೀಗಾಗಿ ಈ ಮನೆಯನ್ನು ತೆರವುಗೊಳಿಸಬೇಕು ಎಂಬ ಒತ್ತಡವಿದೆ. ಆದರೆ, ದರ್ಶನ್ ಸ್ಟೇ ತಂದಿದ್ದು, ಇದನ್ನು ತೆರವು ಮಾಡಲು ಬಿಬಿಎಂಪಿ ಪ್ರಯತ್ನಿಸುತ್ತಿದೆ. ಇದೇ ವೇಳೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಖಡಕ್ ಸೂಚನೆ ನೀಡಿದ್ದಾರೆ.

ದರ್ಶನ್‌ಗೆ ಮತ್ತೆ ಸಂಕಷ್ಟ.. ಮನೆ ಹೋಗುತ್ತಾ?
ರಾಜರಾಜೇಶ್ವರಿ ನಗರದಲ್ಲಿರುವ ನಟ ದರ್ಶನ್ ಅವರ ಮನೆ ರಾಜಕಾಲುವೆ ಮೇಲೆ ಇದೆ. ಸುಮಾರು ಎಂಟು ವರ್ಷಗಳ ನಂತರ ಈ ಪ್ರಕರಣ ಮತ್ತೆ ಹೊಸ ರೂಪ ಪಡೆದುಕೊಂಡಿದೆ. ರಾಜಕಾಲುವೆ ಒತ್ತುವರಿ ಆದರೂ ನಟ ದರ್ಶನ್ ಮನೆಯನ್ನು ಬಿಬಿಎಂಪಿ ಅಧಿಕಾರಿಗಳು ತೆರು ಮಾಡುತ್ತಿಲ್ಲ ಎಂಬ ಆರೋಪವಿದೆ. ಈ ಬಗ್ಗೆ ಬೆಂಗಳೂರು ಉಸ್ತುವಾರಿ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಉತ್ತರ ನೀಡಿದ್ದಾರೆ.
ಮಾಧ್ಯಮಗಳ ಜೊತೆಗೆ ಮಾತನಾಡಿರುವ ಡಿಸಿಎಂ ಡಿ.ಕೆ ಶಿವಕುಮಾರ್, ರಾಜಕಾಲುವೆಯನ್ನು ಯಾರೇ ಒತ್ತುವರಿ ಮಾಡಿ ತಡೆಯಾಜ್ಞೆ ತಂದಿದ್ದರೂ ಸಹ ಕಾನೂನಿನ ಪ್ರಕಾರ ಮನೆ ತೆರವು ಮಾಡಲು ಖಡಕ್ ಸೂಚನೆ ನೀಡಿದ್ದಾರೆ. "ಯಾರೇ ಒತ್ತುವರಿ ಮಾಡಿ ತಡೆಯಾಜ್ಞೆ ತಂದಿರಬಹುದು. ನಾವು ಕಾನೂನಿನ ಪ್ರಕಾರ ಒತ್ತುವರಿ ಜಾಗ ತೆರವು ಮಾಡುತ್ತೇವೆ. ಯಾರೇ ಆದರೂ ಕಾನೂನು ಪ್ರಕಾರ ಏನು ಮಾಡಬೇಕೋ ಅದನ್ನೇ ಮಾಡುತ್ತೇವೆ. ನೀನು, ನಾನು ಯಾರೇ ಸ್ಟೇ ತಂದಿದ್ದರು ತೆರವು ಮಾಡ್ತೇವೆ" ಎಂದು ಖಡಕ್ ಆಗಿ ಸ್ಪಷ್ಟನೆ ನೀಡಿದ್ದಾರೆ.
ತಡೆಯಾಜ್ಞೆ ತೆರವಿಗೆ ಬಿಬಿಎಂಪಿ ಮುಂದು
ಸುಮಾರು ಎಂಟು ವರ್ಷಗಳ ನಂತರ, ಬಫರ್ ಝೋನ್ ಮತ್ತು ರಾಜಕಾಲುವೆಯನ್ನು ಆಕ್ರಮಿಸಿಕೊಂಡಿರುವ ನಟ ದರ್ಶನ್ ಮತ್ತು ಇತರರು ತಂದಿದ್ದ ತಡೆಯಾಜ್ಞೆಯನ್ನು ತೆರವು ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನ್ಯಾಯಾಲಯದ ಮೊರೆ ಹೋಗುತ್ತಿದೆ.

"ದರ್ಶನ್ ಅವರ ನಿವಾಸ ಮತ್ತು ಇತರರು ಬಫರ್ ಝೋನ್ ಅನ್ನು ಅತಿಕ್ರಮಣ ಮಾಡಿರುವುದರ ಬಗ್ಗೆ ಹೈಕೋರ್ಟ್ (ಎಚ್‌ಸಿ) ನಲ್ಲಿ ಇನ್ನೂ ತಡೆಯಾಜ್ಞೆ ಇದೆ ಎಂದು ಕಂಡುಬಂದಿದೆ. ಮುಂದಿನ ಕೆಲಸದ ದಿನದಲ್ಲಿ ಬಿಬಿಎಂಪಿ ತಡೆಯಾಜ್ಞೆ ತೆರವು ಮಾಡುವಂತೆ ನ್ಯಾಯಾಲಯದ ಮೊರೆ ಹೋಗಲಿದೆ" ಎಂದು ಬಿಬಿಎಂಪಿ ಮುಖ್ಯ ಕಮಿಷನರ್ ತುಷಾರ್ ಗಿರಿ ನಾಥ್ ತಿಳಿಸಿದ್ದಾರೆ.
2016ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಿಬಿಎಂಪಿ ಒತ್ತುವರಿ ತಡೆ ಅಭಿಯಾನಕ್ಕೆ ಆದೇಶ ನೀಡಿದ ಬಳಿಕ ಬಿಬಿಎಂಪಿ ಒತ್ತುವರಿ ಗುರುತಿಸಲು ಚರಂಡಿಗಳ ಸಮೀಕ್ಷೆ ನಡೆಸಿತ್ತು. ಆರ್.ಆರ್.ನಗರದಲ್ಲಿರುವ ನಟ ದರ್ಶನ್ ಅವರ ಮನೆಯನ್ನು ಪ್ರಾಥಮಿಕ ಚರಂಡಿಯ ಬಫರ್ ಜೋನ್‌ನಲ್ಲಿ ನಿರ್ಮಿಸಲಾಗಿದೆ ಎಂದು ಜಂಟಿ ನಿರ್ದೇಶಕರು (ಭೂ ದಾಖಲೆಗಳು) ಸಿದ್ಧಪಡಿಸಿದ ವರದಿ ಬಹಿರಂಗಪಡಿಸಿದೆ.
ಸೆಪ್ಟೆಂಬರ್, 2016 ರಲ್ಲಿ ನೋಟಿಸ್ ನೀಡಿದ ನಂತರ, ದರ್ಶನ್ ಮತ್ತು ಇತರರು ಮೊದಲು ನಾಗರಿಕ ನ್ಯಾಯಾಲಯಕ್ಕೆ ಹೋಗಿ ತಡೆ ತಂದರು. ನಂತರ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ 2016 ರ ಅಕ್ಟೋಬರ್‌ನಲ್ಲಿ ಡೆಮಾಲಿಷನ್ ಪ್ರಕ್ರಿಯೆಗೆ ತಡೆ ನೀಡಿದರು. ಬಿಬಿಎಂಪಿ ಕೇವಿಯಟ್ ಸಲ್ಲಿಸಲಿಲ್ಲ. ದರ್ಶನ್ ಅವರ ಮನೆಯನ್ನು ಚರಂಡಿಯಿಂದ ಕೇವಲ 7 ಅಡಿ ದೂರದಲ್ಲಿ ನಿರ್ಮಿಸಲಾಗಿದೆ. ನಿಯಮದ ಪ್ರಕಾರ 150 ಮೀಟರ್ ಒಳಗೆ ಯಾವುದೇ ಕಟ್ಟಡ ನಿರ್ಮಿಸಬಾರದು.












Click it and Unblock the Notifications