Rajath Kishan: ಡಿ-ಬಾಸ್ ಫ್ಯಾನ್ ರಜತ್ ಔಟ್
ಬಿಗ್‌ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್ ಫಿನಾಲೆ ಗ್ರ್ಯಾಂಡ್ ಆಗಿ ಪ್ರಾರಂಭವಾಗಿದೆ. ಝಗಮಗಿಸುವ ವೇದಿಕೆ ಮೇಲೆ ಕಿಚ್ಚ ಸುದೀಪ್ ಸಿಕ್ಕಾಪಟ್ಟೆ ಮಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಮ್ಯಾಕ್ಸ್ ಸಿನಿಮಾ ಹಾಡಿಗೆ ನೃತ್ಯ ಮಾಡುವ ಮೂಲಕ ಕಿಚ್ಚ ಸುದೀಪ್ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. ಈ ನಡುವೆ ಬಿಗ್‌ಬಾಸ್ ಮನೆಯಿಂದ ಡಿ-ಬಾಸ್ ಫ್ಯಾನ್ ರಜತ್ ಕಿಶನ್ ಔಟ್ ಆಗಿದ್ದಾರೆ ಎನ್ನುವ ಸುದ್ದಿ ಬಂದಿದೆ.
ಹೌದು... ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಪ್ಪಟ ಅಭಿಮಾನಿ ರಜತ್ ಕಿಶನ್ ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಆದರೆ ಈ ಸಂಚಿಕೆ ಪ್ರಸಾರವಾಗುವುದು ಇನ್ನೂ ಬಾಕಿ ಇದೆ. ಬಿಗ್‌ಬಾಸ್ ಮನೆಯಲ್ಲಿ ಒಟ್ಟು ಆರು ಜನ ಅಂದರೆ ಹನುಮಂತ, ತ್ರಿವಿಕ್ರಮ್, ಭವ್ಯಾ, ಮೋಕ್ಷಿತಾ, ಮಂಜು ಹಾಗೂ ರಜತ್ ಮಾತ್ರ ಉಳಿದುಕೊಂಡಿದ್ದರು. ಇವರ ಪೈಕಿ ಇಂದು ಗ್ರ್ಯಾಂಡ್ ಫಿನಾಲೆಗೂ ಮುನ್ನ ಭವ್ಯಾ ಗೌಡ ಕಡಿಮೆ ಮತ ಗಳಿಸಿದ್ದರಿಂದ ಎಲಿಮಿನೇಟ್ ಆಗಿ ಹೊರಬಂದರು. ಭವ್ಯಾ ಗೌಡ ಅವರ ನಂತರ ರಜತ್ ಕಿಶನ್ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ.

ರಜತ್ ಕಿಶನ್ ಔಟ್
ಬಿಗ್‌ಬಾಸ್ ಮನೆಗೆ ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟ ರಜತ್ ಕಿಶನ್ ಅತ್ಯಂತ ಕಡಿಮೆ ಅವಧಿಯಲ್ಲಿ ಸಾಕಷ್ಟು ಅಭಿಮಾನಿ ಬಳಗವನ್ನು ಗಳಿಸಿದವರು. ರಜತ್ ಹವಾ ಹೇಗಿತ್ತು ಅಂದರೆ ಅವರು ಬಿಗ್‌ಬಾಸ್ ಮನೆಗೆ ತೆರಳಿದ ನಂತರ ದೊಡ್ಮನೆಯ ವಾತಾವರಣವೇ ಬದಲಾಗಿತ್ತು. ಮನೆಯ ಎಲ್ಲಾ ಸ್ಪರ್ಧಿಗಳನ್ನು ಅಲರ್ಟ್ ಮಾಡಿದ್ದ ರಜತ್ ದಿನ ಕಳೆದಂತೆ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದರು.
ಬಿಗ್‌ಬಾಸ್ ಇತಿಹಾಸದಲ್ಲಿ ಒಬ್ಬ ವೈಲ್ಡ್ ಕಾರ್ಡ್ ಸ್ಪರ್ಧಿ ಟಾಪ್ 5 ಸ್ಫರ್ಧಿಗಳಲ್ಲಿ ನಿಂತಿರುವುದು ಇದೇ ಮೊದಲು. ರಜತ್ ಬುದ್ಧಿವಂತಿಕೆ, ಮಾತು, ಆಟದ ಮೂಲಕ ಬಿರುಗಾಳಿ ಎಬ್ಬಿಸಿದ ಸ್ಪರ್ಧಿ. ಇವರು ಈ ಬಾರಿ ವಿನ್ನರ್ ಎಂದು ಹೇಳಲಾಗಿತ್ತು. ಆದರೆ ಟಾಪ್ 5 ಸ್ಪರ್ಧಿಯಾಗಿ ರಜತ್ ಔಟ್ ಆಗಿದ್ದು ಅವರ ಸಂಬಂಧಿಕರು ಹಾಗೂ ಅಭಿಮಾನಿಗಳಿಗೆ ಬೇಸರ ತಂದಿದೆ.
ಅತ್ಯಂತ ಕಡಿಮೆ ಅವಧಿಯಲ್ಲಿ ರಜತ್ ಈ ಮಟ್ಟಕ್ಕೆ ಬಂದಿದ್ದು ದೊಡ್ಡ ವಿಚಾರ. ಒಂದು ವೇಳೆ ರಜತ್ ಗೆಲುವು ಸಾಧಿಸಿದ್ದರೆ ಬಿಗ್‌ಬಾಸ್‌ನಲ್ಲಿ ಇತಿಹಾಸವನ್ನೇ ಸೃಷ್ಟಿ ಮಾಡುತ್ತಿದ್ದರು. ಆದರೆ ಅವರಿಗೆ ಉಳಿದ ಸ್ಪರ್ಧಿಗಳಿಗಿಂತ ಕಡಿಮೆ ಮತಗಳು ಬಂದ ಕಾರಣ ಅವರು ಎಲಿಮಿನೇಟ್ ಆಗಿದ್ದಾರೆ.
ಡಿ-ಬಾಸ್ ಫ್ಯಾನ್ ರಜತ್
ರಜತ್ ಕಿಶನ್ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರ ಬಿಗ್ ಫ್ಯಾನ್. ದರ್ಶನ್ ಅವರೊಂದಿಗೆ ರಜತ್ ತೆಗೆಸಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿವೆ. ಅಲ್ಲದೆ ಬಿಗ್‌ಬಾಸ್ ಮನೆಯಲ್ಲಿ ದರ್ಶನ್ ಹೆಸರು ಕೇಳಿದರೆ ಸಾಕು ರಜತ್ ಹುಚ್ಚೆದ್ದು ಕುಣಿಯುತ್ತಿದ್ದರು.
ದರ್ಶನ್ ಹಾಡು ಹೇಳಿ ಸ್ಟೆಪ್ಸ್ ಹಾಕುತ್ತಿದ್ದರು. ಆಗಾಗ ಅವರ ಡೈಲಾಗ್ ಕೂಡ ಹೊಡೆದಿರುವುದು ಇದೆ. ರಜತ್ ನಟ ದರ್ಶನ್ ಅವರ ಅಭಿಮಾನಿಯಾಗಿದ್ದರಿಂದ ಅವರಿಗೆ ಮನೆಯಲ್ಲಿ ಉಳಿಯಲು ಸಹಾಯ ಕೂಡ ಆಗಿತ್ತು. ಯಾಕೆಂದರೆ ದರ್ಶನ್ ಅಭಿಮಾನಿಗಳ ಓಟ್ ರಜತ್ ಅವರಿಗೆ ಬಿದ್ದಿದೆ ಅಂದರೆ ತಪ್ಪಾಗುವುದಿಲ್ಲ.
ಆದರೆ ರಜತ್ ಕಡಿಮೆ ಅವಧಿಯಲ್ಲಿ ಹೆಚ್ಚು ಜನರ ಮನ ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ ಅವರು ಇಂದು ಮನೆಯಿಂದ ಹೊರಬಂದಿದ್ದಾರೆ. ಪ್ರಸ್ತುತ ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ ಆರಂಭವಾಗಿದ್ದು ರಜತ್ ಹಾಗೂ ಭವ್ಯಾ ಗೌಡ ಮನೆಯಿಂದ ಹೊರಬಂದ ದೃಶ್ಯ ಪ್ರಸಾರ ಮಾಡುವುದು ಬಾಕಿ ಇದೆ.












Click it and Unblock the Notifications